ಸ್ವಾಂತಂತ್ರ್ಯ ಪಡೆದು 70 ವರ್ಷಗಳು ಸಂದರೂ ಭಾರತ ಸ್ವಾವಲಂಬಿ ರಾಷ್ಟ್ರವೆಂಬ ಹೆಸರು ಪಡೆದಿಲ್ಲ. ಎಲ್ಲದಕ್ಕೂ ಪರ ರಾಷ್ಟ್ರದ ಮೆಲೆ ನಾವು ಅವಲಂಬಿತರಾಗಿದ್ದೇವೆ. ಭಾರತವನ್ನು ನೂರಾರು ವರ್ಷ ಆಳಿದ ಮೊಗಲರು, ಬ್ರಿಟಿಷರು ಇಲ್ಲಿನ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ಹೋದರೆ, ಈಗಿನ ಕೆಲ ರಾಜಕಾರಣಿಗಳು ಅವನ್ನೇ ಮಾಡುತ್ತಿರುವುದು ವಿಪರ್ಯಾಸ. ಸ್ವಾತಂತ್ರೋತ್ತರ ಭಾರತದ ನಮ್ಮ ಹಲವು ನಾಯಕರು ಭಾರತದ ಪ್ರಗತಿಗಿಂತ ತಮ್ಮ ಕುಟುಂಬಸ್ಥರ ಪ್ರಗತಿಯ ಬಗ್ಗೆ ಚಿಂತಿತರಾಗಿದ್ದಾರೆ. ಇತ್ತೀಚೆಗೆ ಭಾರತ ಎತ್ತ ಸಾಗುತ್ತಿದೆ, ಎಂಬ ಭಯ ನಮ್ಮನ್ನು ಕಾಡುತ್ತಿದೆ. ಕೋಟಿಗಟ್ಟಲೆ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡ ಪುಡಾರಿಗಳು ಸುಲಭದಲ್ಲಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ದಿನಾ ಕಾಣುವ ಕೊಲೆ, ದೊಂಬಿ, ಅತ್ಯಾಚಾರ, ಅವ್ಯವಹಾರ, ಭ್ರಷ್ಟಾಚಾರ ದೇಶದ ಪ್ರಗತಿಗೆ ಮಾರಕವಾಗಿದೆ. ನಮ್ಮ ಪಯಣ ಸ್ವಾವಲಂಬನೆಯತ್ತವೊ? ಅಥವಾ ಪುನಃ ದಾಸ್ಯದತ್ತವೊ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಸಾರ್ವಜನಿಕ ಸೇವೆಗೆ ಮೀಸಲಿರುವ ವಿವಿಧ ಸರಕಾರೀ ಸ್ವಾಮ್ಯದ ಸಂಸ್ಥೆಗಳು ನಿಧಾನವಾಗಿ ಖಾಸಗೀ ಮಾಲಕತ್ವದ ತೆಕ್ಕೆಗೆ ಜಾರುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳ ಹಾಗೂ ಖಾಸಗೀ ಮಾಲಕತ್ವದ ಕಂಪೆನಿಯ ದೊರೆಗಳ ಕಪಿಮುಷ್ಠಿಯಲ್ಲಿ ನಮ್ಮ ಸರಕಾರ ಸಿಕ್ಕಿಹಾಕಿಕೊಂಡಂತೆ ಕಾಣುತ್ತದೆ. ವಿವಿಧ ಅಕ್ರಮ ದಂಧೆಯ ಮೂಲಕ ಕೋಟಿಗಟ್ಟಲೆ ಸಂಪಾದಿಸಿದ ದೊರೆಗಳು ವಿದೇಶಗಳಲ್ಲಿ ತಮ್ಮ ಆರಾಮ ಜೀವನ ನಡೆಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಆಫ್ ಇಂಡಿಯಾ, ಡಿಜಿಟಲ್ ಇಂಡಿಯಾ, ವಿವಿಧ ಭಾಗ್ಯಗಳನ್ನು ನೀಡುವ ನಮ್ಮ ಸರಕಾರಗಳು ದೇಶದ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮೌನವಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ನಾವು ಖಂಡಿತವಾಗಿಯೂ ಬೆಲೆ ತೆರಬೇಕಾಗಿದೆ. ತೀವ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆಯ ಸ್ಫೋಟ, ಅಣು ಬಾಂಬಿಗಿಂತ ಭೀಕರವಾಗಬಲ್ಲದು. ಕಡಿಮೆ ಜನಸಂಖ್ಯೆಯುಳ್ಳ ಕೊಲ್ಲಿ ರಾಷ್ಟ್ರಗಳು ಸಂಪದ್ಭರಿತವಾಗಿ ಜಗತ್ತಿನ ದೊಡ್ಡಣ್ಣ ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಿಗೆ ಸೆಡ್ಡು ಹೊಡೆದಿದೆ. ಆದರೆ ನಾವು?
ಸಮೀಕ್ಷೆ ಪ್ರಕಾರ ಭಾರತದ ಜನಸಂಖ್ಯೆ ಪ್ರತಿ ವರ್ಷ 2% ಪ್ರಮಾಣದಲ್ಲಿ ಬೆಳೆಯುತ್ತಿದೆ, ಸ್ವಾತಂತ್ರ್ಯ ಪೂರ್ವದಲ್ಲಿದ್ದ 35ಕೋಟಿ ಜನಸಂಖ್ಯೆ ಇಂದು 130 ಕೋಟಿಗೂ ಮಿಕ್ಕಿದೆ. ಭಾರತವು ಜನಸಂಖ್ಯೆಯಲ್ಲಿ ಇನ್ನು ಏಳು ವರ್ಷಗಳಲ್ಲಿ ಜಗತ್ತಿನ ಮೊದಲನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇನ್ನು 10ವರ್ಷಗಳಲ್ಲಿ ಜನಸಂಖ್ಯೆ 160ಕೋಟಿಗೂ ಮಿಕ್ಕುತ್ತೆ. “ಭಾರತವು ಬಡಜನರು ವಾಸಿಸುವ ಶ್ರೀಮಂತ ದೇಶ”ಎಂಬ ಆರ್ಥಿಕ ತಜ್ಞರ ಅಭಿಪ್ರಾಯ ಸತ್ಯವಾಗಿದೆ. ಭಾರತದಲ್ಲಿ ಮಕ್ಕಳು ಹುಟ್ಟುತ್ತಿರುವ ಸರಾಸರಿ ಅನುಪಾತ ಜಗತ್ತಿನಲ್ಲೇ ಅತಿ ಹೆಚ್ಚಿನ ಜನಸಂಖ್ಯೆವುಳ್ಳ ಚೀನಾಕ್ಕಿಂತ ಹೆಚ್ಚು. ಆದರೆ ಒಟ್ಟಾರೆ ಜನಸಂಖ್ಯೆಯಲ್ಲಿ ಭಾರತಕ್ಕೆ ಚೀನಾದ ನಂತರದ ಸ್ಥಾನ ಸಿಕ್ಕಿರುವುದು ಸದ್ಯಕ್ಕೆ ಸಮಾಧಾನಕರವಾದ ಅಂಶ. ಮಿತಿ ಮೀರಿ ಬೆಳೆದ ಜನಸಂಖ್ಯೆಯಿಂದ ರಾಷ್ಟ್ರದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. ದೇಶದಲ್ಲಿ 10% ಜನರಿಗೆ ಸರಿಯಾದ ಆಹಾರವಿಲ್ಲ, ವಸತಿ ಇಲ್ಲ, ಮಾನಮುಚ್ಚಲು ಸರಿಯಾದ ಬಟ್ಟೆ ಇಲ್ಲ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪುರುಷರ ಹಾಗೂ ಮಹಿಳೆಯರ ಮಧ್ಯೆ ಲಿಂಗಾನುಪಾತದ ಕೊರತೆ ಕಾಣಬಹುದು. ಒಂದು ಅಂದಾಜಿನ ಪ್ರಕಾರ 2025ರ ವೇಳೆಗೆ ನಾವು ಚೀನವನ್ನು ಹಿಂದಿಕ್ಕುತ್ತೇವೆಂಬುದು ಸಂಶೋಧಕರ ಲೆಕ್ಕಾಚಾರ. ಕೇಂದ್ರ ಹಾಗೂ ರಾಜ್ಯ ಸರಕಾರಗಳ, ಜನಪ್ರಿಯ ಯೋಜನೆಗಳು, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಜುಲೈ 11ರಂದು ಪ್ರತಿ ವರ್ಷ ವಿಶ್ವಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಜನಸಂಖ್ಯೆ ಸ್ಫೋಟ ಎದುರಿಸಲು ಭಾರತ ಸರಕಾರ ಬಹಳ ಶ್ರಮಿಸಬೇಕಾಗಿದೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಜನಸಂಖ್ಯೆ ನಿಯಂತ್ರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಪಶ್ಚಾತ್ತಾಪ ಪಡಬೇಕಾದ ಸನ್ನಿವೇಶ ಸೃಷ್ಠಿಯಾಗಬಹುದು. ನಾವು ಜನರಿಗೆ ಮಿತ ಸಂಸಾರದ ಮಹತ್ವವನ್ನು ಹೆಚ್ಚೆಚ್ಚು ಪ್ರಚುರಪಡಿಸಬೇಕಾಗಿದೆ. ಗಂಡು ಮಕ್ಕಳ ವ್ಯಾಮೋಹದಿಂದ ಗಂಡು ಮಗು ಹೆರುವವರೆಗೆ ಸತತವಾಗಿ ಹೆಣ್ಣು ಮಕ್ಕಳನ್ನು ಹೆರುವ ತಾಯಂದಿರು, ಅನಕ್ಷರಸ್ಥ ಮಹಿಳೆಯರ, ಮಕ್ಕಳ ಬಗೆಗಿನ ಮನೋಭಾವ, ದೇವರು ಕೊಡುವುದನ್ನು ತಡೆಯುವುದು ಸರಿಯಲ್ಲವೆಂಬ ಮೂಢನಂಬಿಕೆಗಳು, ಧರ್ಮದ ಪ್ರಭಾವ ಇತ್ಯಾದಿ ವಿಷಯಗಳ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಶಾಲಾಕಾಲೇಜುಗಳಲ್ಲಿ ಜನಸಂಖ್ಯೆ ನಿಯಂತ್ರಣ ಬಗೆಗಿನ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬೋಧಿಸಿ, ಬಾಲ್ಯದಲ್ಲಿಯೇ ಮಕ್ಕಳಿಗೆ ದೇಶದ ಭವಿಷ್ಯದ ಬಗ್ಗೆ ಚಿಂತನೆಗೆ ಅವಕಾಶ ಕಲ್ಪಿಸಬೇಕು. ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ ದಂಪತಿಗಳಿಗೆ ಸರಕಾರದಿಂದ ಸಿಗುವ ವಿವಿಧ ಸವಲತ್ತುಗಳ ಕಡಿತ, ಹಾಗೆಯೇ ಒಂದು ಅಥವಾ ಎರಡು ಮಕ್ಕಳ ದಂಪತಿಗಳಿಗೆ ವಿಶೇಷ ಸವಲತ್ತು ಕಲ್ಪಿಸಬೇಕು. ವಿವಿಧ ಸೌಲಭ್ಯಗಳನ್ನು ನೀಡುವ ಸರಕಾರಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುವ ಬದಲು ಚಿಕ್ಕ ಸಂಸಾರ ಚೊಕ್ಕ ಸಂಸಾರವೆಂಬ ಸ್ಲೋಗನಿನಂತೆ ಚಿಕ್ಕ ಸಂಸಾರಕ್ಕೆ ಪ್ರೋತ್ಸಾಹ ನೀಡಬೇಕು. ಒಬ್ಬ ಮಹಿಳೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಪ್ರಕ್ರಿಯೆ ಕೇವಲ ದೇಶಕ್ಕಷ್ಟೇ ಹೊರೆಯಲ್ಲ, ಆಕೆಯ ಆರೋಗ್ಯಕ್ಕೂ ಮಾರಕ ಎಂಬ ಸತ್ಯವನ್ನು ಆಕೆಗೆ ತಿಳಿಹೇಳಬೇಕು. ಮುಖ್ಯವಾಗಿ ಹಳ್ಳಿಗಾಡಿನ ಮಹಿಳೆಯರ ಪಾತ್ರ ಇದರಲ್ಲಿ ಮಹತ್ವ ಪಡೆದಿದೆ. ಎಲ್ಲದಕ್ಕೂ ಮುಖ್ಯವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಅತೀ ಅಗತ್ಯ. ಶಿಕ್ಷಣದಿಂದ ಆಕೆ ಈ ಬಗ್ಗೆ ಚಿಂತನೆ ಮಾಡಲು ಜ್ಞಾನ ಸಂಪಾದಿಸಬಲ್ಲಳು. ಇದರಿಂದ ಖಂಡಿತವಾಗಿಯೂ ದೇಶದ ಭವಿಷ್ಯ ಉಜ್ವಲವಾದೀತು.