’ಆಚಾರವಿಲ್ಲದ ನಾಲಿಗೆ, ನೀ ನಿನ ನೀಚ ಬುದ್ಧಿಯ ಬಿಡು ನಾಲಿಗೆ’ ಪುರಂದರದಾಸರ ಆಗಿನ ಕಾಲದ ಚಿಂತನೆ ನಮ್ಮ ಇಂದಿನ ಗಾಯಕಿಯರ ಸುಶ್ರಾವ್ಯ ಕಂಠದಿಂದ ಹೊರ ಹೊಮ್ಮುವಾಗ ನಾವು ಮುಷ್ಠಿ ಬಿಗಿದು, ಹೌದು! ಈ ಮನುಷ್ಯರು ನಾಲಿಗೆಯನ್ನು ತಮ್ಮತಮ್ಮ ಹಿಡಿತದಲ್ಲಿಟ್ಟುಕೊಂಡರೆ ಎಷ್ಟು ಚೆನ್ನ ಎಂದು ಪರರ ಬಗ್ಗೆ ಭಾವಿಸುತ್ತಾ ನಮ್ಮ ನಮ್ಮ ಆತ್ಮವಿಮರ್ಶೆ ಮಾಡಲು ಖಂಡಿತ ತಯಾರಿರುವುದಿಲ್ಲ. ’ಮಾತುಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’. ಆದರೆ ಎಲ್ಲಿಗೆ ಹೋಯಿತು? ಮಾನವತೆಯ ಭದ್ರಕೋಟೆಯನ್ನು ಛಿದ್ರ ಮಾಡುವ, ಸಂಘಟನೆಗಳನ್ನು, ಸಂಘಟಿತ ಮನಸ್ಸುಗಳನ್ನು ಧೂಳಿಪಟಮಾಡುವ, ಪ್ರೀತಿಯ ಬಂಧಗಳನ್ನು, ಮಾನವ ಸಂಬಂಧಗಳನ್ನು ಬೆಸುಗೆ ಹಾಕಲಾರದ ರೀತಿಯಲ್ಲಿ ಪುಡಿಗಟ್ಟುವ ಶಕ್ತಿಯಿರುವ ಒಂದೇ ಒಂದು ಆಯುಧವೆಂದರೆ ನಮ್ಮ ದಂತಪಂಕ್ತಿಗಳ ಹಿಂದೆ ಭದ್ರವಾಗಿ ಅಡಗಿರುವ ಆ ನಾಲಿಗೆ!
ಪ್ರಪಂಚದಲ್ಲಿರುವ ಯಾವುದೇ ಶಸ್ತ್ರಗಳಿಗೆ ಹೋಲಿಸಿದರೂ ನಾಲಿಗೆಯ ಹರಿತಕ್ಕೆ ಅದು ಸಮಾನವೇ? ಕತ್ತಿಯ ಅಲುಗಿನ ಹರಿತವನ್ನು ನಾವು ಅರಿಯಬಹುದು. ಆದರೆ ನಾಲಿಗೆಯ ಅಲುಗಿನ ಹರಿತವನ್ನು ಅರಿಯಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ! ನಾಲಿಗೆಯ ಇರಿತ ಎಷ್ಟೋಂದು ಆಳವೆಂದರೆ ಆ ಗಾಯ ವಾಸಿಯಾಗಲು ಜೀವಿತ ಕಾಲದಲ್ಲಿ ಅಸಾಧ್ಯ! ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವ ಈ ನಾಲಿಗೆ ಎಷ್ಟು ಉದ್ದ ಬೇಕಾದರೂ ಚಾಚಬಹುದು. ಎಕೆಂದರೆ ಪರರನ್ನು ದೂಷಿಸುವಾಗ ನಾಲಿಗೆಗೆ ಸಿಗುವ ರಸಗವಳ ಬೇರೆಯಾವ ಸ್ವಾದಿಷ್ಟ ಖಾದ್ಯಗಳಿಂದಲೂ ಸಿಗದು ಎನ್ನುವುದು ಶತಸಿದ್ಧ. ಆಚಾರವೆಂಬುದು ನಮ್ಮ ಹೃದಯಕ್ಕೆ -ಆತ್ಮಕ್ಕೆ ಸಂಬಂಧಪಟ್ಟ ವಿಚಾರ. ಆತ್ಮಶುದ್ದಿಯಿಲ್ಲದೊಡೆ ಆಡಿದ ಮಾತುಗಳು ಎಬ್ಬಿಸುವ ಸುನಾಮಿ, ಪ್ರಾಕೃತಿಕ ಸುನಾಮಿಗಿಂತ ನೂರು ಪಟ್ಟು ಹೆಚ್ಚು.
ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಕಳೆಯು, ಮಾತಿನಿಂ ಸರ್ವ ಸಂಪದವು ಲೋಕಕ್ಕೆ ಮಾತೆ ಮಾಣಿಕ್ಯ ಸರ್ವಜ್ಞ. ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ, ನಮ್ಮ ತನುವಿಗೆ ಬೇಕಾದ ಆಹಾರವನ್ನು ಸಮತೋಲನದಲ್ಲಿ ಸಮಯಕ್ಕೆ ಸರಿಯಾಗಿ ಜೀರ್ಣಿಸುವಷ್ಟೇ ತೆಗೆದುಕೊಂಡಲ್ಲಿ ನಮ್ಮಆರೋಗ್ಯವು ಸ್ಥಿರವಾಗಿರುವಂತೆ ಮಾತುಗಳು ನಮ್ಮ ನಾಲಿಗೆಯಿಂದ ಹೊರಳಿ ಹೊರಹೊಮ್ಮುವ ಮುನ್ನ ನಮ್ಮ ಮಸ್ತಕಕ್ಕೆ ಮುಖ್ಯವಾಗಿ ಕೆಲಸ ನೀಡಿ, ವಿವೇಚನಾಯುಕ್ತವಾಗಿ ಯೋಚಿಸಿ, ಸವಿಯಾದ ಮಾತುಗಳನ್ನು ಆಡಿದರೆ, ಅದು ಸರಿಯಾಗಿ ಸ್ವೀಕೃತವಾಗಿ ನಮಗೂ ಆನಂದ ಉಂಟುಮಾಡದೇ?
ವಿಚಾರವೆಂಬುದು ನಮ್ಮ ವಿವೇಚನೆಗೆ ಸಂಬಂಧಪಟ್ಟ ವಿಚಾರ. ಹೆಚ್ಚಿನ ವ್ಯಕ್ತಿಗಳು ತಮ್ಮ ನಾಲಿಗೆಯಿಂದ ಮಾತನಾಡುತ್ತಾರೆಯೆ ಹೊರತು ಮನಸ್ಸು ಅಥವಾ ಹೃದಯದಿಂದ ಅಲ್ಲ. ಚಾಡಿ ಹೇಳಲು ಬೇಡ ನಾಲಿಗೆ? ಅರೇ ಇದು ಸಾಧ್ಯವೇ? ನಾಲಿಗೆಯ ಮೂಲಭೂತ ಹಕ್ಕು ಇದಲ್ಲವೆ? ನೀನೆಷ್ಟು ಬೇಡಿಕೊಂಬರೂ ನಾನಿದ ಬಿಡೆನು ಎಂಬ ಛಲ ನಮ್ಮಲ್ಲಿ ಆಳವಾಗಿ ಬೇರೂರಿರುವುದಂತು ದಿಟ!
ಪುಣ್ಯ ಪುರುಷರ ನಾಲಿಗೆಯಿಂದ ಹೊರಡುವ ಸವಿಮಾತುಗಳು ಪ್ರೀತಿ ಸಂಬಂಧಗಳನ್ನು, ಹೃದಯಗಳನ್ನು ಬೆಸೆಯಬಹುದು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು. ಹೌದು ಮಾತೇ ಮುತ್ತು, ಮಾತೇ ಮಾಣಿಕ್ಯ – ಮಾತೇ ಮಣ್ಣು ಮಾತೇರೊಜ್ಜು. ಅಂದಿನ ಸರ್ವಜ್ಞನ ಚಿಂತನೆ. ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ, ಅಂದರೆ ಸಜ್ಜನರ ನಾಲಿಗೆ ತುದಿಯಿಂದ ಬರುವ ನುಡಿಗಳು ಜೇನಿನ ಸವಿಯ ನೀಡುವುದೆಂದಲ್ಲವೇ? ಅಂತೆಯೇ ದುರ್ಜನರ ಸಂಗವದು ಬಚ್ಚಲಿನ ರೊಜ್ಜಿನಂತೆ, ಅಂದರೆ ದುರ್ಜನರ ನಾಲಿಗೆಯ ನುಡಿಗಳು ದುರ್ನಾತ ಬೀರುವ ಕೆಸರಿನಂತೆ ಇರುವುದು ಎಂದು ಸದಾ ಸತ್ಯ!
ನಾಲಿಗೆಯ ಮೇಲೆ ಲಗಾಮಿಲ್ಲದೆ ಆಡಿದ ಮಾತುಗಳು ಪ್ರಸ್ತುತ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅಲ್ಲೋಲ ಕಲ್ಲೋಲ, ಬಿರುಗಾಳಿಯನ್ನು ಎಬ್ಬಿಸಿರುವುದಂತು ನಿಜ! ಲಂಗುಲಗಾಮಿಲ್ಲದೆ, ಅಂಕುಶದ ಭಯವಿಲ್ಲದೆ, ನಾಲಿಗೆಯಿಂದ ಪುಂಖಾನುಪುಂಖವಾಗಿ ಹೊರಡುವ ಶಬ್ದ ತರಂಗಗಳಿಗೆ ಲಗಾಮು ಹಿಡಿಯುವ ಸರದಾರ ನಮ್ಮ ಒಳ ಮನಸ್ಸಲ್ಲವೇ?
ನಮ್ಮ ನಾಲಿಗೆ ’ನಾನು’ ಎಂಬುದನ್ನು ಪ್ರತಿಪಾದಿಸಲು ಮತ್ತಷ್ಟು ಚಾಚಿಕೊಳ್ಳುತ್ತದೆ. ನಮ್ಮಲ್ಲಿರುವ ನಾನು ಎಂಬ ದರ್ಪದ ಹಮ್ಮು ಮುಕ್ತಿ ಮಾರ್ಗದಿಂದ ನಮ್ಮನ್ನು ಮತ್ತಷ್ಟು ದೂರಕ್ಕೆ ದೂರಕ್ಕೆ ಒಯ್ಯುತ್ತದೆ.
ಒಮ್ಮೆ ಕನಕದಾಸರ ಗುರುವಾದ ವ್ಯಾಸ ತೀರ್ಥರು ತಮ್ಮೆಲ್ಲಾ ಶಿಷ್ಶರೊಂದಿಗೆ ಸ್ವರ್ಗಕ್ಕೆ ಯಾರು ಹೋಗಲು ಅರ್ಹರು? ಎಂಬ ಪ್ರಶ್ನೆಯನ್ನು ಕೇಳಿದಾಗ ಒಬ್ಬ ಶಿಷ್ಯನು ವಿಪ್ರಕುಲದಲ್ಲಿ ಜನಿಸಿ ಉತ್ತಮ ಕಾರ್ಯಮಾಡುತ್ತಿರುವ ವ್ಯಕ್ತಿ ಎಂದನು. ಮತ್ತೊಬ್ಬ ಸಮಾಜ ಸೇವೆ ಮಾಡುತ್ತ ಇರುವ ವ್ಯಕ್ತಿ, ಮತ್ತೊಬ್ಬ ತಮ್ಮಂತ ಮಹಾನುಭಾವರು, ಹೀಗೆ ಹೇಳಲಾಗಿ ಅದೇ ಪ್ರಶ್ನೆಯನ್ನು ಕನಕದಾಸರಿಗೆ ಕೇಳಿದಾಗ ಕನಕದಾಸರು, ’ಇಲ್ಲಿ ಇರುವ ಯಾರು ಕೂಡ ಸ್ವರ್ಗಕ್ಕೆ ಹೋಗಲು ಶಕ್ತರಲ್ಲ’ ಎಂದರು. ಹಾಗಾದರೆ ನಮ್ಮ ಗುರುಗಳು ಸ್ವರ್ಗಕ್ಕೆ ಕೂಡಾ ಸ್ವರ್ಗಕ್ಕೆ ಹೋಗಲು ಅರ್ಹರಲ್ಲವೇ? ಎಂದು ಏರುದನಿಯಲ್ಲಿ ಶಿಷ್ಯರು ಕೇಳಿದಾಗ, “ಇಲ್ಲ” ಎಂಬ ಉತ್ತರ ಕನಕದಾಸರಿಂದ. ಹಾಗಾದರೆ, ನೀನು ಸ್ವರ್ಗಕ್ಕೆ ಹೋಗಲು ಅರ್ಹನೆ? ಆಗ ದಾಸರು, ನಾನು ಹೋದರೆ ಹೋದೇನು ಎಂದಾಗ – ಎಲವೋ ದುರಹಂಕಾರಿ! ನಮ್ಮ ಗುರುಗಳಿಗೆ ಸ್ವರ್ಗವು ಪ್ರಾಪ್ತಿಯಾಗದು, ಆದರೇ ನಿನಗೆ ಮಾತ್ರ ಅದು ಸಾಧ್ಯ ಎಂಬ ಅಹಂಕಾರ ನಿನಗೇಕೆ? ಅದಕ್ಕೆ ಕನಕದಾಸರು ನೀಡಿದ ಸ್ಪಷ್ಟಿಕರಣ ನಮ್ಮ ಒಳಗಣ್ಣನ್ನು ತೆರೆಸುವ ಸಾಧನವಾಗಬೇಕಾಗಿದೆ. ನನ್ನಲ್ಲಿರುವ ’ನಾನು’ ಎಂಬ ಅಹಂಭಾವ ಹೋದರೆ ನಾನು ಸ್ವರ್ಗಕ್ಕೆ ಹೋದೇನು. ’ನಾನು’ ಎಂಬ ಭಾವ ನಾಶವಾಗಿ ’ನೀನು’ ಎಂಬ ನೀತಿಯನ್ನು ಪ್ರತಿಪಾದಿಸಿದ ಯಾವುದೇ ವ್ಯಕ್ತಿ ಸ್ವರ್ಗಕ್ಕೆ ಹೋಗಲು ಅರ್ಹ ಎಂಬ ನುಡಿ ಬಹಳ ಅರ್ಥಗರ್ಭಿತ! ನಮ್ಮ ಒಳಗಣ್ಣನ್ನು ತೆರೆದು ನೋಡುವ ಶಕ್ತಿ ನಮಗೆ ಬರಬೇಕು. ಈ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗದ ಒಂದು ಸುಂದರ ಸಾಲುಗಳನ್ನು ನೆನಪಿಸಿಕೊಳ್ಳೋಣ.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನ್ನ – ಮಂಕುತಿಮ್ಮ
ಮಣ್ಣೊಳಗಿಂದ ಚಿಗಿತು ಬರುವ ಮೊಳಕೆಯು ತಮಟೆಯ ದನಿಯೊಂದಿಗೆ ಹೊರಬರುವುದಿಲ್ಲ. ಕಾಯಿ ಮಾಗಿ ಹಣ್ಣಾಗುವಾಗ ತುತ್ತೂರಿಯನ್ನು ಊದುತ್ತಾ ಸಂಭ್ರಮಿಸುವುದಿಲ್ಲ. ಜಗತ್ತಿಗೆ ದಿವ್ಯ ಪ್ರಭೆಯನ್ನು ನೀಡುವ ಸೂರ್ಯಚಂದ್ರರು ತಾವು ಈ ಭುವಿಯನ್ನು ಬೆಳಗುತ್ತಿದ್ದೇವೆ ಎಂದು ಬೀಗಿ ಕೂಗುವುದಿಲ್ಲ. ಎಲೆ ಹುಲು ಮನುಜನೇ ನೀನ್ಯಾವ ಘನ ಕಾರ್ಯ ಮಾಡಿರುವೆಯೆಂದು ನಾನು ಎಂಬ ದರ್ಪದಲಿ ಬೀಗುತ್ತಾ ಸಾರುತ್ತಿರುವೆ? ಮುಚ್ಚು ನಿನ್ನ ಹೊಲಸು ಬಾಯಿಯ ದರ್ಪದ ನುಡಿಗಳನು. ಈ ಸಾಲುಗಳ ನಿಜಾರ್ಥವನ್ನುಅರಿಯುತ್ತಾ ವಿಚಾರಿಗಳಾಗಿ ನಾನು ಎಂಬ ಹಮ್ಮಿಲ್ಲದೆ, ನಮ್ಮ ನಾಲಿಗೆಗೆ ಆಚಾರವೆಂಬ ತೀರ್ಥವನ್ನು ಪ್ರೋಕ್ಷಿಸಿ ಮುಕ್ತಿಮಾರ್ಗದತ್ತ ನಮ್ಮ ಪಯಣ ಬೆಳೆಸೋಣವೇ?
– ರಾಕೇಶ್ ಕುಮಾರ್
ಪ್ರಾಧ್ಯಾಪಕರು, ಸೈಂಟ್‌ಅಲೋಶಿಯಸ್ ಕಾಲೇಜ್