ಡಾ. ಸದಾನಂದ ಪೆರ್ಲ -ರಜತ ರಶ್ಮಿ -2012

ಅನುಭವ ಮಂಟಪದಲ್ಲೊಬ್ಬ ಕುಲಬಾಂಧವ ಶರಣ

ವಿಶ್ವಗುರು ಬಸವಣ್ಣನವರಿಗೂ ಸೇಂದಿ ಮಾರುವ ಕುಲಕಸುಬಿನವರಿಗೂ ಎತ್ತಣ ಸಂಬಂಧವಯ್ಯಾ? ಸಹಜ ಪ್ರಶ್ನೆಯೇ, ೧೨ನೆಯ ಶತಮಾನದಲ್ಲಿ ಜಗತ್ತೇ ಬೆರಗುಗೊಳ್ಳುವ ರೀತಿಯಲ್ಲಿ ಸಮಾಜೋ ಧಾರ್ಮಿಕ ಕ್ರಾಂತಿಗೆ ರೂವಾರಿಯಾದ ಬಸವಣ್ಣ ಸ್ಥಾಪಿತ ಅನುಭವ ಮಂಟಪದಲ್ಲಿ ಸೇಂದಿ ಮಾರುವ ಶರಣನೊಬ್ಬನಿದ್ದ. ಹೆಸರು ಹೆಂಡದ ಮಾರಯ್ಯ. ಬಸವಣ್ಣನವರ ಸತ್ಸಂಗದ ನಂತರ ಶರಣ ಪಟ್ಟವನ್ನಲಂಕರಿಸಿದ ಮಾರಯ್ಯ ನವರು ’ಶರಣ ಹೆಂಡದ ಮಾರಯ್ಯ’ ಎಂದು ನಾಮಾಂಕಿತರಾದರು.

ಅಸಮಾನತೆ ಸಾರುವ, ಮನುಷ್ಯರನ್ನು ಉಚ್ಛ-ನೀಚ ಎಂಬುದಾಗಿ ವಿಭಜಿಸುವ ಅಂದಿನ ಸಮಾಜದಲ್ಲಿ ದೀನ ದಲಿತರು, ತುಳಿತಕ್ಕೊಳಗಾದವರು. ಶೋಷಣೆಯಲ್ಲಿ ಮುಳುಗಿದ ವರ ಅಂತಃಕರಣದಲ್ಲಿ ಮಾನವೀಕರಣದ ಆತ್ಮಜ್ಯೋತಿಯನ್ನು ಬೆಳಗಿಸಲು ಬಸವಣ್ಣನವರು ಕಟ್ಟಿದ ಶರಣರ ವೇದಿಕೆ ಅನುಭವ ಮಂಟಪವಾಗಿತ್ತು. ಅನುಭವ ಮಂಟಪವು ಪ್ರಜಾಸತ್ತೆಯ ಮೊದಲ ಧ್ವನಿ ಕೂಡಾ ಆಗಿತ್ತು. ಮನುಕುಲದ ಚರಿತ್ರೆಯ ’ಆಧ್ಯಾತ್ಮಿಕ ಸಂಸತ್ತು’ ಎಂದು ಮಾನ್ಯತೆ ಒದಗಿತ್ತು. ಮಾನವ ಹಕ್ಕುಗಳ ಪ್ರತಿಪಾದಕರೆ ಅನುಭವ ಮಂಟಪದ ಸದಸ್ಯರು. ಆತ್ಮಗೌರವ ಗುರುತಿಸುವ, ಬೆಳೆಸುವ ಮೂಲಕ ವ್ಯಕ್ತಿ ಗೌರವ ಕಾಪಾಡುವ, ಆ ಶಕ್ತಿಯನ್ನು ಸಮುದಾಯದ ಉತ್ಕರ್ಷಕ್ಕೆ ವಿನಿಯೋಗಿಸುವ ಎಲ್ಲಾ ದಾರಿಗಳನ್ನು ಮುಕ್ತವಾಗಿಟ್ಟು ಉತ್ತಮಿಕೆಯ ಕಡೆ ನಡೆಯುವ ಒಂದೇ ಮನಸ್ಸಿನ ಶರಣರ ಕೂಟ ಅದಾಗಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರ ಸಹಭಾಗಿತ್ವ ಇರಬೇಕೆನ್ನುವ ತತ್ವ ಮತ್ತು ಎಲ್ಲರ ಪ್ರಾತಿನಿಧ್ಯದ ಸಂಕೇತವೇ ಅನುಭವ ಮಂಟಪ. ಗ್ರೀಸ್ ದೇಶದ ಸಾಕ್ರೆಟಿಸ್, ಪ್ಲೇಟೋ, ಭಾರತದ ಬೌದ್ಧ, ಜೈನರ ಕೂಟಗಳೆಲ್ಲಾ ಸಾರಿದ ಮಾನವೀಯ ಸಂದೇಶಕ್ಕೆ ಜನಸಾಮಾನ್ಯರ ಮಟ್ಟದಲ್ಲಿ ಜನಭಾಷೆಯ ಮೂಲಕ ಹೊಸ ಆಯಾಮ ನೀಡಿದ ಬಸವಣ್ಣನವರ ಚಿಂತನೆಯಡಿ ಸೇಂದಿ ಮಾರುವ ಕುಲಕಸುಬಿನ ವರಿಗೂ ಸ್ಥಾನ ದೊರಕಿದ್ದು ಆ ಸಮುದಾಯಕ್ಕೆ ಸಿಕ್ಕ ಮಾನ್ಯತೆ, ಗೌರವ.

ಸಮಾಜವನ್ನು ಜಂಗಮ ಸ್ವರೂಪಕ್ಕೆ ಅಂದರೆ ಚಲನಶೀಲ ಸಮಾಜವನ್ನಾಗಿ ಕಟ್ಟುವ ಪರಿಕಲ್ಪನೆಯಲ್ಲಿ ಕುಲಬಾಂಧವ (ಈಡಿಗ, ಬಿಲ್ಲವ, ನಾಮಧಾರಿ, ಈಳಿಗೇರ್, ಗೌಂಡರ್, ಗೌಡ, ಭಂಡಾರಿ)ನೊಬ್ಬ ಶರಣಪಟ್ಟ ಪಡೆದಿರುವುದು ಹೆಮ್ಮೆ ಮತ್ತು ವೀರಶೈವ ಪರಂಪರೆಯ ಕೊಂಡಿಯಲ್ಲಿ ಸಮುದಾಯಕ್ಕೆ ಗೌರವ ನೀಡಿರುವುದು ಗಮನೀಯ ಅಂಶ.

ಬಸವಣ್ಣನವರು ಕಟ್ಟಿದ ಅನುಭವ ಮಂಟಪವು ಲಿಂಗ, ವರ್ಣ, ವರ್ಗ, ಜಾತಿ, ಮತಗಳ ಭೇದವನ್ನು ಅಳಿಸಿ ಹಾಕಿ ಮಾನವೀಯ ಸಮಾಜದ ಪರಿಕಲ್ಪನೆಯಿತ್ತು. ಜಾತಿವಿಡಿದು ಸೂತಕವನರಸುವೆ, ಜ್ಯೋತಿವಿಡಿದು ಕತ್ತಲೆಯನರಸುವೆ, ಇದೇಕೋ ಮರುಳು ಮಾನವ ಎಂದು ಶರಣರು ಎಚ್ಚರಿಸಿದರು. ಸಾವಿರಾರು ಜನ ಸದಸ್ಯರನ್ನು ಹೊಂದಿದ ಅನುಭವ ಮಂಟಪಕ್ಕೆ ಶೂನ್ಯ ಸಿಂಹಾಸನದ ಪಟ್ಟ ನೀಡಿದ್ದು ಅಲ್ಲಮಪ್ರಭುವಿಗೆ. ಕುಲಕ್ಕೊಬ್ಬ ಶರಣ ಅನುಭವ ಮಂಟಪದಲ್ಲಿದ್ದುದು ವಿಶೇಷ. ಅಲ್ಲಿ ಬದುಕಿನ ಸತ್ಯವನ್ನು ತಿಳಿಯುವ ಚರ್ಚೆ ನಡೆಯುತ್ತಿತ್ತು. ಅರಿವಿನೆಡೆಗೆ ಸಾಗುವ ಪ್ರಯತ್ನ ಇತ್ತು.

ಶರಣರು, ವಚನಕಾರರು ಕಾಯಕ ತತ್ವವನ್ನು ಪ್ರತಿಪಾದಿಸಿದು ದರಿಂದಲೇ ಅನುಭವ ಮಂಟಪದಲ್ಲಿ ವಿವಿಧ ಕಾಯಕನಿರತರಿಗೂ ಪ್ರಾತಿನಿಧ್ಯ ಪ್ರಾಪ್ತವಾಗಿತ್ತು. ಸತ್ಯಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚ್ಛಂದವಾಗದಿರಬೇಕು… ಎಂದು ಸಾರುವ ನುಲಿಯ ಚಂದಯ್ಯನ ವಚನದಲ್ಲಿ ಸಮಷ್ಠಿಯ ಕಡೆಗೆ ಸಾಗುವ ಸಂದೇಶವಿದೆ. ಅದಕ್ಕಾಗಿಯೇ ಅನುಭವ ಮಂಟಪದಲ್ಲಿ ವಚನಕಾರರು ಎಲ್ಲರೂ ಉದ್ಯೋಗಿಗಳಾಗಿರಲೇಬೇಕೆಂದು ಒತ್ತಿ ಹೇಳಿದರು. ಅದರೊಂದಿಗೆ ಯಾವುದೇ ಉದ್ಯೋಗದಲ್ಲಿ ಮೇಲು-ಕೀಳೆಂಬ ರೇಖೆ ಸರಿಯಲ್ಲ, ಉದ್ಯೋಗದಲ್ಲಿ ನಿಷ್ಠೆಯುಳ್ಳವರಾಗಬೇಕು. ಪ್ರಾಮಾಣಿಕತೆ ಮತ್ತು ಉತ್ಸಾಹ ಖಂಡಿತಾ ಹೊಂದಿರಲೇಬೇಕು. ಉದ್ಯೋಗದಲ್ಲಿ ಶುದ್ಧಭಾವವನ್ನಿರಿಸಿಕೊಳ್ಳುವು ದಲ್ಲದೇ ಪ್ರತಿಫಲದಲ್ಲಿ ಅತಿಯಾದ ಅಪೇಕ್ಷೆ ಇರಬಾರದು ಎಂಬ ಎಚ್ಚರಿಕೆ ನೀಡಿದರು. ಪ್ರತಿಫಲದ ಸಂಗ್ರಹಣೆಯಾಗಬಾರದು ಮತ್ತು ದಾಸೋಹಭಾವ ಇರಬೇಕು. ಎಂಬ ಅಮೂಲ್ಯ ಅಂಶಗಳನ್ನು ಪ್ರತಿಪಾದಿಸಿದರು. ನುಡಿದಂತೆ ನಡೆದರು, ನುಡಿ-ನಡೆ ಶುದ್ಧವಾಗಿತ್ತು, ಆಚಾರ-ವಿಚಾರ ಒಂದಾಗಿತ್ತು. ಅದನ್ನು ಒಪ್ಪಿಕೊಂಡ ಶರಣರು ವಚನ ಕಟ್ಟಿದರು. ವಚನದಂತೆ ನಡೆದರು. ವಚನ ಚಲನಶೀಲ ಬದುಕಿನ ಮಂತ್ರಗಳಾದವು.

ಇಂತಹ ಜಂಗಮ ಸ್ವರೂಪಿ ಜೀವನ ಸಂಸ್ಕೃತಿ ಬೋಧಿಸುವ ಮಹಾನ್ ಕಾರ್ಯದ ಅನುಭವ ಮಂಟಪದಲ್ಲಿ ಮಾರಯ್ಯನೆಂಬ ಸೇಂದಿ ತೆಗೆಯುವ ವೃತ್ತಿಯ ಕುಲದವನಿದ್ದ ಎನ್ನುವುದೇ ಒಂದು ಅಚ್ಚರಿ. 12ನೇ ಶತಮಾನದಲ್ಲಿ ಸೇಂದಿ ಇಳಿಸುವ ವೃತ್ತಿಯನ್ನಾಗಿಸಿ ಮಾರಯ್ಯ ಜೀವನ ಮಾಡುತ್ತಿದ್ದರೂ ಅನುಭವ ಮಂಟಪದಲ್ಲಿ ಸ್ಥಾನ ಗಿಟ್ಟಿಸಿರುವುದು ಬಸವಣ್ಣನವರ ಸಮಾಜ ಕ್ರಾಂತಿಯ ಆಶಯದ ಬೆಳಕಿನಿಂದಾಗಿ ಎಂಬುವುದರಲ್ಲಿ ಎರಡು ಮಾತಿಲ್ಲ. ವೃತ್ತಿಯಿಂದ ಮಾನ್ಯತೆ ಗುರುತಿಸಬಾರದು. ಯಾವುದೇ ಕಾಯಕವಾದರೂ ಶ್ರೇಷ್ಠವೇ, ಹಾಗೆಂದುಕೊಂಡೇ ನೂಲುವ ವೃತ್ತಿಯ ಚಂದಯ್ಯ (ನುಲಿಯ ಚಂದಯ್ಯ) ಕಟ್ಟಿಗೆ ಮಾರುವ ಮಾರಯ್ಯ, (ಮೋಳಿಗೆ ಮಾರಯ್ಯ), ಸಮಗಾರ ವೃತ್ತಿಯ ಹರಳಯ್ಯ (ಸಮಗಾರ ಹರಳಯ್ಯ) ಸುಂಕ ವಸೂಲಿ ಮಾಡುವ ಬಂಕಣ್ಣ (ಸುಂಕದ ಬಂಕಣ್ಣ), ಬಟ್ಟೆ ಮಡಿ ಮಾಡುವ ಮಾಚಿತಂದೆ (ಮಡಿವಾಳ ಮಾಚಿತಂದೆ), ದೋಣಿ ಸಾಗಿಸುವ ಚೌಡಯ್ಯ (ಅಂಬಿಗರ ಚೌಡಯ್ಯ)ರಂತೆ ಸೇಂದಿ (ಹೆಂಡ) ವೃತ್ತಿಯ ಮಾರಯ್ಯ ಕೂಡಾ ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನ ಪಡೆದರು. ಶರಣ ಹೆಂಡದ ಮಾರಯ್ಯ ಎಂದು ಶರಣರ ಸಮೂಹದಲ್ಲಿ ಓರ್ವ ಶ್ರೇಷ್ಠ ಅನುಭಾವಿಯಾದರು.
ಅನುಭವ ಮಂಟಪದಲ್ಲಿ ಶರಣನಾಗಿ ಮಾರಯ್ಯ ಇದ್ದರು, ಮತ್ತು ಅವರಿಂದ ರಚಿತ 12 ಉಪಲಬ್ಧ ವಚನಗಳನ್ನು ಬಿಟ್ಟರೆ ಈ ಮಾರಯ್ಯನ ಪೂರ್ವಾಪರ ತಿಳಿಯದೆ ಹೋಗಿದೆ. ಅವರ ಅಂತ್ಯದ ಬಗ್ಗೆಯೂ ಸುಳಿವಿಲ್ಲ. ಇತರ ಹಲವಾರು ಶರಣರು ಬಂದ ವಿಚಾರಗಳಿದ್ದರೂ ಮಾರಯ್ಯ ಎಂಬ ಶರಣನ ವಿಚಾರಗಳು ಬೆಳಕಿಗೆ ಬರದಿರುವುದು ದುರದೃಷ್ಟಕರ. ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವವಿದ್ದ ಕಾರಣದಿಂದಲೇ ಹೆಸರಿನ ಮುಂದೆ ಹೆಂಡ (ಸೇಂದಿ) ಸೇರಿಸಿಕೊಂಡೇ ಸಂಬೋಧಿಸುವ ಛಾತಿ ಅವರಲ್ಲಿತ್ತು. ಹೆಂಡದ ಮಾರಯ್ಯ ಅಪಾರ ಜ್ಞಾನಿ. ಪರಮಜ್ಞಾನಿ. ಎಂಬ ಬಗ್ಗೆ ಎರಡು ಮಾತಿಲ್ಲ. ’ಧರ್ಮೇಶ್ವರ ಲಿಂಗಾ’ ಎಂಬ ಅಂಕಿತದ ತಮ್ಮ ವಚನಗಳಲ್ಲಿ ಅನುಭಾವದ ವಿಶಾಲತೆ ಇದೆ. ಆ ವಚನಗಳೆಲ್ಲ ಸುಲಭ ಗ್ರಾಹ್ಯವಲ್ಲ, ವಚನದ ಒಳಹೊಕ್ಕರೆ ಅರ್ಥ ಗಾಂಭೀರ್ಯ ತೆರೆದುಕೊಳ್ಳುತ್ತದೆ. ನಿಗೂಢತೆ ಬಯಲುಗೊಳ್ಳುತ್ತದೆ. ಬದುಕಿನ ಮೌಲ್ಯಗಳನ್ನು, ಆಧ್ಯಾತ್ಮದ ಸಂಸ್ಪರ್ಶವನ್ನು ನೀಡುತ್ತದೆ. ಸುರಪಾನಿ ಭವಿಗಳು ಐಹಿಕ ಸುಖಭೋಗಗಳನ್ನು ತ್ಯಜಿಸಿ ಶಿವಾನುಭವದ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿದ್ದಾರೆ. ಶೈವ ಪರಂಪರೆಯನ್ನು ಒಪ್ಪಿಕೊಂಡ ಶರಣರ ಸಂಕುಲದಲ್ಲಿದ್ದ ಮಾರಯ್ಯ ಶಿವನ ಮೆಚ್ಚುಗೆಯ ಬದುಕು ಮತ್ತು ಸಾರ್ಥಕ್ಯವನ್ನು ಪ್ರತಿಪಾದಿಸಿರುವುದು ವಿಶೇಷವಾಗಿದೆ.

ಅನುಭವ ಮಂಟಪವು ವೈಚಾರಿಕ ವಿಚಾರ ಪ್ರಸ್ತಾಪದ ವೇದಿಕೆಯಾಗಿದ್ದರೂ ಮಾರಯ್ಯ ಹೆಂಡ (ಸೇಂದಿ) ಮಾರುವ ಕೆಲಸಕ್ಕೆ ಅರವಟ್ಟಿಗೆಯಲ್ಲಿ ಸೇಂದಿ ಇಟ್ಟರೂ ಇನ್ನೆರಡು ಘಟಗಳಲ್ಲಿ ಮಜ್ಜಿಗೆ ಮತ್ತು ಪಾನಕ ಇಟ್ಟುಕೊಂಡ ಪುರಾವೆ ಇದೆ. ತನ್ನ ಕಾಯಕದ ಜೊತೆ ಹೆಂಡವನ್ನು ಕುಡಿಯಬಹುದು, ಬೇಡವಾದರೆ ಮಜ್ಜಿಗೆ ಅಥವಾ ಪಾನಕ ಕುಡಿಯಿರಿ, ಹೆಂಡದ ಕೆಡುಕನ್ನು ಅರುಹುತ್ತಲೇ ಕಾಯಕವನ್ನು ಮಾಡಿ ಅರಿವಿನಿಂದ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದರು. ’ಅರಿತುಕೊಂಡಲ್ಲಿ ಸುಧೆ ಮರೆತು ಕೊಂಡಲ್ಲಿ ಸುರೆ’ ಎಂಬುದಾಗಿ ವಚನದ ಸಾಲುಗಳಲ್ಲಿ ಪ್ರತಿಪಾದಿತ ತೀಕ್ಷ್ಣತೆ ಮನದಟ್ಟು ಮಾಡುವಂಥವುಗಳು. ’ನಾ ಮಾರಬಂದ ಸುಧೆಯ ಕೊಂಬವರಾರು ಇಲ್ಲ’ ಎಂಬ ಮಾರಯ್ಯನ ವಚನದ ಸಾಲಿನಲ್ಲಿ ಜನರನ್ನು ಸನ್ಮಾರ್ಗದೆಡೆಗೆ ತಂದ ತೃಪ್ತಿ ಇದೆ. ತನ್ನಿಚ್ಛೆ ಸಾಕಾರಗೊಂಡ ಕೃತಾರ್ಥತೆಯಿದೆ. ಭಕ್ತಿ- ವಿರಕ್ತಿಯ ಪ್ರತಿಪಾದಿಸುತ್ತಲೆ ಆತ್ಮ- ಪರಮಾತ್ಮನ ಸಂಗವಿರಿಸುವ ಧರ್ಮೇಶ್ವರ ಲಿಂಗದತ್ತ ಹೊರಳಿಸುವ ಯತ್ನ ಗಮನಾರ್ಹ. 12 ವಚನಗಳಿದ್ದರೂ ಅದರ ಗಂಭೀರ ಚರ್ಚೆಯಾದರೆ ತಿರುಳನ್ನು ಪತ್ತೆ ಮಾಡಬಹುದು. ಧರ್ಮೇಶ್ವರ ಲಿಂಗ ಅಂಕಿತ ಹಾಕಬೇಕಾದರೆ ಆ ದೇಗುಲದ ಪರಿಸರವೆಲ್ಲಿ ಎಂಬ ಪ್ರಶ್ನೆ ಕೂಡಾ ಸಹಜವೇ? ಆ ದೇಗುಲ ಪತ್ತೆಯಾಗುವ ಮತ್ತು ಪರಿಸರ ಖಾತ್ರಿಯಾಗುವ ಅಧ್ಯಯನ ನಡೆಯುವುದು ಇಂದಿನ ಅವಶ್ಯಕವಾಗಿದೆ. ಶರಣ ಸಂಕುಲದಲ್ಲಿ ಕುಲಬಾಂಧವ ಶರಣನಾದ ಹೆಮ್ಮೆ ಬಿಲ್ಲವ, ಈಳಿಗ, ಈಡಿಗ, ನಾಮಧಾರಿ ಹೀಗೆ ವಿಭಿನ್ನತೆಯಿರುವ ಸಮಾಜಕ್ಕೆ ಒಂದು ಹೆಮ್ಮೆಯಾದರೂ ಇಂತಹ ಶರಣನೊಬ್ಬನು ಪರಿಚಯವಾಗದೆ ಉಳಿದಿರುವುದು ಖೇದಕರವೇ ಸರಿ. ಉತ್ತರ ಕರ್ನಾಟಕದಲ್ಲಿ ಬಸವ ಜಯಂತಿ ಸಂದರ್ಭದಲ್ಲಿ ಮೆರವಣಿಗೆ ವೇಳೆ ಕುಲಕ್ಕೊಬ್ಬ ಶರಣನ ಭಾವಚಿತ್ರಗಳ ನಡುವೆ ಮೂರು ಘಟಗಳನ್ನು (ತುಳುವಿನಲ್ಲಿ ಕುಜಿಲ್ ಎನ್ನುವ ಮಣ್ಣಿನ ಪಾತ್ರೆ) ಎದುರಿಗಿಟ್ಟ ಶರಣನ ವಿಶಾಲ ಹಣೆಗೆ ಮೂರು ನಾಮ ಎಳೆದು ಸ್ಫುರದ್ರೂಪಿಯಾಗಿ ಕಾಣುವ ಮಾರಯ್ಯನ ಚಿತ್ರಣವಿದೆ. ರಾಜ್ಯದಲ್ಲಿ ಸುಮಾರು 58 ಲಕ್ಷದಷ್ಟು ಸಮುದಾಯದ ಜನರು ಅನುಭವ ಮಂಟಪ, ಬಸವಣ್ಣ, ಶೂನ್ಯಸಿಂಹಾಸನದ ಅಧ್ಯಕ್ಷ ಅಲ್ಲಮ ಪ್ರಭು ದೇವರ ಬಗ್ಗೆ ಮಾತನಾಡುವ ವೇಳೆ ಶರಣ ಹೆಂಡದ ಮಾರಯ್ಯನೆಂಬ ಕುಲಬಾಂಧವನಿದ್ದ ಎಂಬುದಾಗಿ ಹೆಮ್ಮೆಯಿಂದ ಬೀಗಬಹುದು. ವೀರಶೈವ ಪರಂಪರೆಯೊಂದಿಗೆ ತಳಕು ಹಾಕಿಕೊಂಡ ಕುಲಬಾಂಧವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ವೈಚಾರಿಕ ಕ್ರಾಂತಿಯ ಬೆಳಕಾಗಿ ’ಶಿವ’ ನೆಂಬ ’ಲಿಂಗ’ ವನ್ನು ಕೊಟ್ಟರು. ಶರಣ ಹೆಂಡದ ಮಾರಯ್ಯನು ಆರಾಧಿಸಿದ ದ್ಯೋತಕವೇ ಧರ್ಮೇಶ್ವರ ಲಿಂಗಾ. ೧೨ನೇ ಶತಮಾನದ ವೈಚಾರಿಕ ಚಿಂತನೆಗೂ ಮತ್ತು ೧೯ನೇ ಶತಮಾನದ ಕ್ರಾಂತಿಕಾರಿ ಚಿಂತನೆಗೂ ’ಲಿಂಗ’ ಕಾರಣವಾಯಿತೆನ್ನುವುದು ಪರಮಾಶ್ಚರ್ಯ ವಾದರೂ ಅಷ್ಟೇ ಸತ್ಯ. ಕುಲಬಾಂಧವ ಶರಣನೊಬ್ಬ ಅನುಭವ ಮಂಟಪದಲ್ಲಿ ಅಣ್ಣ ಬಸವಣ್ಣನ ಸಂಕುಲದಲ್ಲಿದ್ದು ಭಿತ್ತಿದ ಸಂದೇಶ ಅಮರವಾದವುಗಳು. ಸಮುದಾಯದ ಕೊಂಡಿ 12ನೇ ಶತಮಾನಕ್ಕೆ ವಿಸ್ತರಿಸಿದೆ, ಅದರ ಮೂಲಬೇರು ಈ ಶರಣ ಪರಂಪರೆಯ ಶೋಧನೆಯಲ್ಲಿ ಬೆಳಕಿಗೆ ಬರಬಹುದೇನೋ!

ವಿಳಾಸ : ಪ್ರಸಾರ ನಿರ್ವಹಣಾಧಿಕಾರಿ
ಆಕಾಶವಾಣಿ, ಮಂಗಳೂರು
ಮೊ: 9448127672

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!