ಹರಿಕೃಷ್ಣ ಬಂಟ್ವಾಳ್ -ರಜತ ರಶ್ಮಿ -2012

ವರ್ತಮಾನದಲ್ಲಿ ಬಿಲ್ಲವರ ಸಂಘಟನೆ

ಕರ್ನಾಟಕ ರಾಜ್ಯ ಭಾರತದ ಒಂದು ಅಂಗ. ಈ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ’ತುಳುನಾಡೆಂದೇ’ ಪ್ರಖ್ಯಾತಿ. ಅರಬ್ಬೀ ಸಮುದ್ರದ ತಡಿಯಿಂದ ಪಶ್ಚಿಮ ಘಟ್ಟಗಳ ತುದಿಯ ತನಕ ಹಬ್ಬಿಕೊಂಡಿರುವ ಕೃಷಿ ಪ್ರಧಾನವಾದ, ಪ್ರಾಕೃತಿಕ ಚೆಲುವಿನ ಹಸಿರನ್ನು ತುಂಬಿಸಿಕೊಂಡ ಶ್ರೀಮಂತ ಜಿಲ್ಲೆ. ತುಂಬಿ ಹರಿಯುತ್ತಿರುವ ನದಿಗಳು, ಜಗತ್ಪ್ರಸಿದ್ಧ ಪುಣ್ಯ ಕ್ಷೇತ್ರಗಳು, ಇಂತಹ ಸುಂದರ ನಾಡಿನಲ್ಲಿ ಗೇಣಿದಾರನಾಗಿ, ಒಕ್ಕಲಾಗಿ, ಮೂರ್ತೆದಾರನಾಗಿ, ಕಾರ್ಮಿಕನಾಗಿ, ದೈವಗಳ ಪೂಜಾರಿಯಾಗಿ ಬದುಕಿ ಬಾಳಿದ ಬಹು ದೊಡ್ಡ ಜನ ಸಮುದಾಯ ಬಿಲ್ಲವರದ್ದು.

ಶೋಷಣೆ, ದಬ್ಬಾಳಿಕೆ, ಜೀತ ಪದ್ಧತಿಯ ಬಂಧನದ ಅನುಭವಗಳಿಂದ ಹಾದು ಬಂದಿರುವ ಹಿಂದುಳಿದ ಸಮುದಾಯಗಳಲ್ಲಿ ಬಿಲ್ಲವರು ಪ್ರಮುಖರು. ಕರಾವಳಿ ನಾಡಿನ ಅತ್ಯಂತ ಬಲಿಷ್ಠ ಜನ ಶಕ್ತಿಯಿರುವ ಸಮುದಾಯ ಇದು. ಈ ಸಮುದಾಯವಿಂದು ಅಭಿವೃದ್ಧಿ ಮತ್ತು ಪ್ರಗತಿಯ ಎಲ್ಲಾ ಅವಕಾಶಗಳನ್ನು ಕಾಣಬೇಕಾದರೆ ಒಂದು ಬಲಿಷ್ಠ ಸಂಘಟನೆಯಿಂದ ಮೂಡಿಬರುವುದು ಅನಿವಾರ್ಯವಾಗಿದೆ.

ಭಾರತದಲ್ಲಿಂದು ವ್ಯಕ್ತಿಯನ್ನು ಗುರುತಿಸುವುದು ಅವನ ಜಾತಿಯ ಮೂಲಕ. ಜಾತಿ ವಿಭಜಿತ ಸಮಾಜವೊಂದರಲ್ಲಿ ತನ್ನ ಜನಸಂಖ್ಯಾ ಪ್ರಮಾಣಕ್ಕೆ ಅನುಸಾರವಾದ ಪಾಲನ್ನು ಪಡೆದುಕೊಳ್ಳಲಿಕ್ಕಾಗಿ ಬಿಲ್ಲವರು ಸಂಘಟಿತರಾಗುವುದು ಅತ್ಯಂತ ಅವಶ್ಯ. ಕರ್ನಾಟಕದ ಕರಾವಳಿ, ಮಹಾರಾಷ್ಟ್ರದ ಮುಂಬೈ, ಗುಜರಾತಿನ ಅಹಮದಾಬಾದಿನಲ್ಲಿ ಬಿಲ್ಲವ ಸಂಘಟನೆಯ ಧ್ವನಿಗಳು ಕೇಳಿಬರುತ್ತಿರುವುದು ಸಂತಸಕರ. ಆದರೆ ಬಿಲ್ಲವ ಸಮುದಾಯದ ಕಲ್ಪನೆ, ಕನಸುಗಳ ವೇಗಕ್ಕೆ ಸರಿಯಾಗಿ ಸಂಘಟನೆ ಬೆಳೆದು ನಿಂತಿಲ್ಲವೆನ್ನುವುದು ಅಷ್ಟೇ ಸಹಜ ಕೂಡ.

ಇಂದು ನಮ್ಮ ರಾಷ್ಟ್ರದಲ್ಲಿ ಅನೇಕ ಜಾತಿಗಳು ತಮ್ಮ ಮೂಲ ಸ್ವರೂಪವನ್ನು ಬದಲಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಈ ಮೊದಲು ಒಂದು ಸಾಂಸ್ಕೃತಿಕ, ಸಾಮಾಜಿಕ ಸಮುದಾಯ ಗಳಾಗಿದ್ದ ಜಾತಿಗಳು, ರಾಷ್ಟ್ರ ರಾಜಕಾರಣದ ಪ್ರಜಾಪ್ರಭುತ್ವದ ಬೆಳವಣಿಗೆಗಳಲ್ಲಿ, ರಾಜಕೀಯ ಸಮುದಾಯಗಳಾಗಿ ಮತ ಬ್ಯಾಂಕುಗಳಾಗಿ ಪರಿವರ್ತನೆಯಾಗುತ್ತಿರುವುದು, ಬಿಲ್ಲವ ಸಮುದಾಯ ಗಮನಿಸುವಂತಹ ವಿಚಾರ. ಇಂದು ಭಾರತದ ಚುನಾವಣೆಗಳ ಹಾಗೂ ದೇಶದ ಹಣೆಬರಹವನ್ನು ಜಾತಿ ನಿರ್ಧರಿಸುತ್ತಿದೆ ಎಂಬುದು ಕಹಿ ಸತ್ಯ. ಈ ವಾಸ್ತವಿಕತೆಯನ್ನು ಗಮನಿಸಿದಾಗ, ಕರ್ನಾಟಕದ ಕರಾವಳಿಯ ಉದ್ದಗಲಕ್ಕೂ ಜನಶಕ್ತಿಯಾಗಿ ಬೆಳೆದು ನಿಂತಿರುವ ಬಿಲ್ಲವರು ಸಂಘಟಿತರಾದರೆ, ಜನಶಕ್ತಿಯ ಸಾಮರ್ಥ್ಯವನ್ನು ರಾಜ್ಯಕ್ಕೆ, ರಾಷ್ಟ್ರಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಲ್ಲಿ ರಾಜ್ಯ ರಾಜಕೀಯದಲ್ಲಿ ಏರು ಪೇರು ಮಾಡುವಷ್ಟು ಶಕ್ತರಾಗುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ. ಆದರೆ ದುರಂತವೆಂದರೆ ಬಲಿಷ್ಠ ಜನಸಂಖ್ಯೆಯಿದ್ದರೂ, ಇರಬೇಕಾದ ಸಂಘಟನಾ ಪ್ರಜ್ಞೆ, ಜಾತಿಪ್ರಜ್ಞೆ ಬೆಳೆದಿಲ್ಲದಿರುವುದು.

ಪ್ರಚಲಿತ ನಾಣ್ಣುಡಿಯೊಂದಿಗೆ ಕಲಿಯದುದು ಕಡಲಗಲ, ಕಲಿತುದು ಕೈಯಗಲ ಅಂತೆಯೇ ಬಿಲ್ಲವರ ’ಸಂಘಟನೆ’ ಆಗಿರುವುದು ಕೈಯಗಲ, ಆಗದಿರುವುದು ’ಕಡಲಗಲ’ ಎಂದರೆ ತಪ್ಪಾಗಲಾರದು. ಅನೇಕ ಬಿಲ್ಲವ ಸಂಘಗಳು, ನಾರಾಯಣ ಗುರು ಮಂದಿರಗಳು ತಲೆ ಎತ್ತಿವೆ ನಿಜ. ಆದರೆ ಈ ಎಲ್ಲಾ ಸಂಘ, ಮಂದಿರಗಳು ಒಂದೇ ಚಿಂತನೆಯಡಿಯಲ್ಲಿ, ಒಂದೇ ಉದ್ದೇಶದಡಿಯಲ್ಲಿ, ಒಂದೇ ಧ್ವನಿಯಲ್ಲಿ ಕೆಲಸ ಮಾಡುವಲ್ಲಿ ವಿಫಲಗೊಂಡಿರುವುದು ವಿಷಾದದ ವಿಚಾರ.

ಯಾವ ಸಂಸ್ಕೃತಿ ಸಂಪ್ರದಾಯಗಳು ಒಂದು ಕಾಲದಲ್ಲಿ ಬಿಲ್ಲವ ಸಮುದಾಯವನ್ನು ಅಸ್ಪೃಶ್ಯರನ್ನಾಗಿ ಕಂಡಿತ್ತೋ, ಯಾವ ನಂಬಿಕೆ ರೂಢಿಗಳು ಹಿಂದುಳಿದವರನ್ನಾಗಿ ತುಳಿದಿತ್ತೋ, ಯಾವ ವಿಶ್ವಾಸಗಳು ಶೋಷಣೆ ದಬ್ಬಾಳಿಕೆಗೆ ಬಳಸಿತ್ತೋ, ನಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ಯಾವ ರಾಜಕಾರಣ ದುರ್ಬಲಗೊಳಿಸಿತ್ತೋ ಇವೆಲ್ಲವುಗಳ ವಿರುದ್ಧ ನಾವಿಂದು ಸಂಘಟನಾತ್ಮಕವಾಗಿ ಹೋರಾಡಬೇಕಾಗಿದೆ.

ಯಾವುದೇ ಒಂದು ಸಮಾಜಕ್ಕೆ ರಾಜಕೀಯ ಬೆನ್ನೆಲುಬು, ಸಾಮಾಜಿಕ ಸಂಸ್ಕೃತಿಯ ಬೆನ್ನೆಲುಬು, ಬೌದ್ಧಿಕ ಸಂಸ್ಕೃತಿಯ 1 ಬೆನ್ನೆಲುಬು, ಧಾರ್ಮಿಕ ಶಕ್ತಿಯ ಬೆನ್ನೆಲುಬು ಇದ್ದರೆ ಅಂತಹ ಸಮಾಜಕ್ಕೆ ಯಾವತ್ತೂ ಅವನತಿಯಿಲ್ಲ. ಈ ನಿಟ್ಟಿನಲ್ಲಿ ಗಮನಿಸಿದಾಗ ಬಿಲ್ಲವ ಸಮುದಾಯಕ್ಕೆ ಜನಾರ್ದನ ಪೂಜಾರಿಯವರಂತಹ ರಾಷ್ಟ್ರ ಮನ್ನಣೆಯ ರಾಜಕೀಯ ನಾಯಕತ್ವದ ಬೆನ್ನೆಲುಬು ಇದೆ. ಧಾರ್ಮಿಕ ಶಕ್ತಿಯಾಗಿ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಬಲವಿದೆ. ಆಧ್ಯಾತ್ಮಿಕ ಸ್ಪೂರ್ತಿಯಾಗಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಬದುಕಿನ ಬೆಳಕು ಪ್ರೇರಣೆಯಾಗಿ ನಿಂತಿದೆ. ಆದರೂ ಬಿಲ್ಲವ ಸಮುದಾಯ ರಾಜಕೀಯ ಶಕ್ತಿಯಾಗಿ ನಿಲ್ಲುವುದರಲ್ಲಿ ಸೋತಿದೆ ಯಾಕೆ? ಎಂಬ ಪ್ರಶ್ನೆ ಜೀವಂತವಾಗಿ ಬಿಲ್ಲವ ಸಮುದಾಯವನ್ನು ಕಾಡುತ್ತಿದೆ. ಧಾರ್ಮಿಕ ಕ್ಷೇತ್ರವಿದ್ದರೂ ಪುನಶ್ಚೇತನವಿಲ್ಲದೆ ಕೊರಗುತ್ತಿರುವುದು ಬಿಡಿಸಲಾಗದ ಒಗಟು. ನಾರಾಯಣ ಗುರುಗಳ ಮಂದಿರವಿದ್ದರೂ ಅವರ ಜೀವನ ಸಂದೇಶವನ್ನು ಅರ್ಥ ಮಾಡಿಕೊಳ್ಳಲಾಗದ ದುರ್ಬಲತೆ ಆವರಿಸಿರುವುದು ಬಿಲ್ಲವ ಸಮುದಾಯಕ್ಕೊಂದು ಸವಾಲು.

ಜನಶಕ್ತಿಯ ಕೊರತೆ ಬಿಲ್ಲವ ಸಮಾಜಕ್ಕಿಲ್ಲ. ಆದರೆ ಈ ಜನಶಕ್ತಿಯನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಂಘಟನಾ ಶಕ್ತಿಯಾಗಿ ಪರಿವರ್ತಿಸಬಲ್ಲ, ರೂಪಾಂತರಗೊಳಿಸಬಲ್ಲ ಸಾಮರ್ಥ್ಯದ ಕೊರತೆ ನಮ್ಮೆಲ್ಲರನ್ನು ಕಾಡುತ್ತಿರುವುದು ಸ್ಪಷ್ಟ. ಭವಿಷ್ಯದ ಬಿಲ್ಲವರು ಹೇಗಿರಬೇಕು? ಎಂಬುದು ನಾವಿಂದು ಯೋಚಿಸುವ ಸಮಯದ ಮುಂದೆ ನಿಂತಿದ್ದೇವೆ. ಹಳೆ ಮನಸ್ಸಿನಿಂದ ಹೊಸ ಮನಸ್ಸಿನೆಡೆಗೆ, ಹಳೆ ಪದ್ಧತಿಯಿಂದ ಹೊಸ ಪದ್ಧತಿಯೆಡೆಗೆ ನಮ್ಮ ಮನಸ್ಸು ತೆರೆದುಕೊಳ್ಳಬೇಕು. ಅದಕ್ಕೆ ಒಂದೇ ಚಿಂತನೆಯ, ಒಂದೇ ಧ್ವನಿಯ, ಒಂದೇ ನಾಯಕತ್ವದ ಸಂಘಟನೆ ಬೇಕು. ಬಿಲ್ಲವ ಸಮುದಾಯದ ಕನಸುಗಳನ್ನು ನನಸು ಮಾಡುವ ಕಲ್ಪನೆಯಿಂದ ಹುಟ್ಟಿಕೊಂಡ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಜಯ. ಸಿ. ಸುವರ್ಣರ ನೇತೃತ್ವದಲ್ಲಿ ಹೊಸ ಸಮಾಜ, ಹೊಸ ಜನಾಂಗದ ನಿರ್ಮಾಣ ಸಾಧ್ಯವಾಗಬಹುದೆಂಬ ಭರವಸೆ ಜೀವಂತವಾಗಿದೆ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪರಿಣಾಮವಿಂದು ಬಿಲ್ಲವ ಸಮುದಾಯದ ಬದುಕಿನ ಮೇಲೂ ಪರಿಣಾಮ ಬೀರಿದೆ. ವ್ಯವಸ್ಥೆಯ ಮಧ್ಯೆ ಬದುಕಬೇಕಾದ ಅನಿವಾರ್ಯತೆ ಬಿಲ್ಲವ ಸಮುದಾಯದ ಮುಂದೆ ಇದೆ. ಈ ಸಮುದಾಯ ಈವರೆಗೆ ಬದುಕಿನಲ್ಲಿ ಕಂಡದ್ದು ಬೆಳಕಿಗಿಂತ ಹೆಚ್ಚು ಕತ್ತಲು. ಆದುದರಿಂದಲೇ ನಮ್ಮ ಸುತ್ತ ಏನಾಗುತ್ತಿದೆ ಎಂಬುದು ಗೋಚರಿಸುತ್ತಲೇ ಇಲ್ಲ. ರಾಜಕೀಯ ಪೈಪೋಟಿ, ಅಧಿಕಾರದ ಪೈಪೋಟಿ, ನಾಯಕತ್ವದ ಪೈಪೋಟಿಯ ಮುಂದೆ ಬಿಲ್ಲವ ಸಮುದಾಯವನ್ನು ತಂದು ನಿಲ್ಲಿಸಬೇಕಾಗಿದೆ. ಇಚ್ಛಾಶಕ್ತಿಯುಳ್ಳ ನಾಯಕತ್ವ ಮತ್ತು ಸಂಘಟನೆಯ ಜರೂರು ಇದೆ. ಅದಕ್ಕಾಗಿ ಕೆಲಸಕ್ಕೆ ಬಾರದ, ಪ್ರಗತಿಗೆ ಪೂರಕವಲ್ಲದ ಮೂಢನಂಬಿಕೆಗಳನ್ನು ಎದೆಗಪ್ಪಿಕೊಳ್ಳುವುದಕ್ಕಿಂತ, ಅದನ್ನು ಕಿತ್ತು ಆಚೆಗೆ ಎಸೆಯಬೇಕು. ಅಂಧಾನುಕರಣೆ ನಾಗರಿಕತೆಯಲ್ಲ. ರಾಜನ ಉಡುಪುಗಳನ್ನು ತೊಟ್ಟುಕೊಂಡ ಮಾತ್ರಕ್ಕೆ ರಾಜನಾಗುವುದು ಅಸಾಧ್ಯ. ಸಿಂಹದ ಚರ್ಮವನ್ನು ಹೊದ್ದುಕೊಂಡ ಕತ್ತೆ ಎಂದಿಗೂ ಸಿಂಹವಾಗಲಾರದು. ಭಾರತದಲ್ಲಿ ಬ್ರಾಹ್ಮಣರು ಉತ್ತಮ ಸಾಧನೆ ನಡೆಸುವುದಕ್ಕೆ ಅವರು ಬ್ರಾಹ್ಮಣರಾಗಿ ಹುಟ್ಟಿದ್ದೇ ಕಾರಣವಲ್ಲ. ಬದಲು ಅವರ ಮನೆಯಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವ. ರಾಜಕೀಯ ಅಧಿಕಾರಕ್ಕಾಗಿ ನಡೆಸುತ್ತಿದ್ದ ಯೋಜನೆ- ಯೋಚನೆಗಳು. ದುರಭ್ಯಾಸದ ಕೆಡುಕುಗಳು ಸೋಂಕದಂತೆ ಅವರು ನಿರ್ವಹಿಸುತ್ತಿದ್ದ ಜೀವನ ಶೈಲಿ ಎಂಬುದು ಗಮನಿಸಬೇಕಾಗಿದೆ.

ಬಿಲ್ಲವ ಸಮುದಾಯವಿಂದು ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಬೀಗ ಜಡಿದುಕೊಂಡ ಮನಸ್ಸಿನಿಂದ ಏನನ್ನಾದರೂ ಹೊಸತನ್ನು ಕಲಿಯಲು ಅಥವಾ ಹಳೆಯದನ್ನು ಮರೆಯಲು ಸಾಧ್ಯವಿಲ್ಲ. ಇದು ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿಗೆ ತಳ್ಳಬಹುದಷ್ಟೇ. ಕೋಟಿಚೆನ್ನಯರ ಬದುಕನ್ನು ತಿಳಿದವರು ನಾವುಗಳು, ಕಾಂತಾಬಾರೆ- ಬೂದಾಬಾರೆಯರ ಜೀವನವನ್ನು ಅರಿತವರು ನಾವುಗಳು. ಈ ಚರಿತ್ರೆಗಳನ್ನು ಗಮನಿಸಿದಾಗ ಅಂದಿನಿಂದ ಇಂದಿನವರೆಗೂ ನಮ್ಮ ಭುಜಬಲವನ್ನಾಗಲೀ, ಜನಬಲವನ್ನಾಗಲೀ ಪರರ ಸುಖಕ್ಕಾಗಿ, ಅಧಿಕಾರಕ್ಕಾಗಿ, ಪ್ರಗತಿಗಾಗಿ ಸವೆಸಿದ್ದೇ ಹೆಚ್ಚು. ಯಾರಿಗೆ ಚರಿತ್ರೆ ಗೊತ್ತಿಲ್ಲವೋ ಅವರು ಚರಿತ್ರೆಯನ್ನು ನಿರ್ಮಿಸಲಾರರು. ಕುರಿಗಳು ಕೂಡಾ ತಮ್ಮ ಚರಿತ್ರೆಯನ್ನು ಬರೆಯಲು ತೋಳಗಳಿಗೆ ವಹಿಸಿಕೊಡಲಾರವು. ನಾವಿಂದು ಮುಂದಿನ ದಿನಗಳಲ್ಲಿ ನಮ್ಮ ಜನಶಕ್ತಿಯ ಭುಜಬಲದಿಂದ, ಸಂಘಟನಾ ಬಲದಿಂದ ಹೊಸ ಚರಿತ್ರೆ ನಿರ್ಮಾಣ ಮಾಡಬೇಕಾಗಿದೆ, ಇತಿಹಾಸ ಬರೆಯಬೇಕಾಗಿದೆ. ನಾವು ನಮ್ಮ ಜಾತಿಯ ಬಗ್ಗೆ ಪ್ರಜ್ಞಾವಂತಿಕೆ ಹೊಂದಿದಾಗ ಮಾತ್ರ ನಮ್ಮ ಜಾತಿಯನ್ನು ಸಂಘಟನಾತ್ಮಕವಾಗಿ ಬಲಪಡಿಸಬಹುದು. ನಮ್ಮ ದೇಶದಲ್ಲಿಂದು ರಾಜಕೀಯ ಅಧಿಕಾರವನ್ನು ಪಡೆಯಲು ಒಂದು ಜಾತಿಗೆ ಈ ಜಾತಿ ಪ್ರಜ್ಞೆಯೆಂಬುದು ಸಾಮರ್ಥ್ಯ ಒದಗಿಸುತ್ತದೆ. ಇಂದು ದೇಶದಲ್ಲಿ ರಾಜಕೀಯವಾಗಿ ಶಕ್ತಿಶಾಲಿಗಳಾಗಿರುವ ಎಲ್ಲಾ ಜಾತಿಗಳು ತಪ್ಪದೇ ಅತ್ಯಂತ ಬಲಿಷ್ಠ ಜಾತಿ ಪ್ರಜ್ಞೆಯನ್ನು ಹೊಂದಿದವುಗಳಾಗಿದ್ದು, ಯಾವ ಜಾತಿಗಳು ಜಾತಿ ಪ್ರಜ್ಞೆಯನ್ನು ಕಳೆದುಕೊಂಡಿವೆಯೋ ಅವು ರಾಜಕೀಯವಾಗಿ ದುರ್ಬಲವಾಗಿವೆ. ಬಲಿಷ್ಠ ಜಾತಿ ಪ್ರಜ್ಞೆಯನ್ನು ಹೊಂದಿರುವವುಗಳು ಶಕ್ತಿಶಾಲಿ ಸಮುದಾಯ ಗಳಾಗಿವೆ. ತಮ್ಮ ಜಾತಿ ಪ್ರಜ್ಞೆಯನ್ನು ಕಳೆದುಕೊಂಡಿರುವವು ದುರ್ಬಲ ಸಮುದಾಯಗಳಾಗಿವೆ. ಇಂದು ನಿರ್ದಿಷ್ಟ ಜಾತಿಯೊಂದು ಯಾವ ಪ್ರಮಾಣದಲ್ಲಿ ಜಾತಿ ಪ್ರಜ್ಞೆಯನ್ನು ಹೊಂದಿದೆಯೆಂಬ ಅಂಶವೇ ಅದರ ಬಲ ಹಾಗೂ ದೌರ್ಬಲ್ಯವನ್ನು ನಿರ್ಧರಿಸುತ್ತದೆ. ಜಾತಿ ಪ್ರಜ್ಞೆಯ ನಷ್ಟದಿಂದಾಗಿ ಒಂದು ಸಮುದಾಯ ದುರ್ಬಲವಾಗಿದ್ದರೆ, ಆ ಸಮುದಾಯಕ್ಕೆ ಜಾತಿ ಪ್ರಜ್ಞೆಯನ್ನು ತುಂಬುವ ಮೂಲಕ ಅದನ್ನು ಬಲಿಷ್ಠಗೊಳಿಸಬಹುದು ಹಾಗೂ ಅದಕ್ಕೆ ರಾಜಕೀಯಧಿಕಾರ ಗಳಿಸಿಕೊಳ್ಳುವಂತೆ ಅದನ್ನು ಸಮರ್ಥಗೊಳಿಸಬಹುದು. ಕ್ರಾಂತಿಕಾರಿಯ ಉದ್ಘೋಷವೊಂದಿದೆ ಗುಲಾಮನಿಗೆ ನೀನೊಬ್ಬ ಗುಲಾಮ ಎಂಬುದನ್ನು ಸರಿಯಾಗಿ ಮನವರಿಕೆ ಮಾಡಿ ತಿಳಿಸು ಆಗ ಅವನು ದಂಗೆಯೇಳುತ್ತಾನೆ ಈ ಉದ್ಘೋಷದ ಹಿಂದಿರುವ ಸ್ವಾಭಿಮಾನದ ಕಿಡಿಯನ್ನು ಬಿಲ್ಲವ ಸಮುದಾಯ ಗಮನಿಸಿದಲ್ಲಿ ಸಮುದಾಯಕ್ಕೊಂದು ಎಚ್ಚರಿಕೆಯ ಕರೆ ಗೋಚರವಾಗಬಹುದು.

ನಮ್ಮ ಸಮುದಾಯದ ಯುವಕರಿಗೆ ಸಂಘಟನೆಯ ಪ್ರಜ್ಞೆ, ಜಾತಿ ಪ್ರಜ್ಞೆ ಮೂಡಿಸಬೇಕಾಗಿದೆ. ಇಂದು ಕಾದಾಡುವುದಕ್ಕಾಗಿ ಬಿಲ್ಲವ ಯುವಕರನ್ನು ಅಪ್ಪಿಕೊಳ್ಳುವ ಪ್ರವೃತ್ತಿ ರಾಜಕಾರಣದಲ್ಲಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ. ಈ ಅಪ್ಪುಗೆ ಧೃತರಾಷ್ಟ್ರನ ಅಪ್ಪುಗೆಯೆಂಬ ಅರಿವು ನಮ್ಮ ಬಿಲ್ಲವ ಯುವಕರಿಗಿಲ್ಲ. ನಮ್ಮ ಯುವಕರಲ್ಲಿ ಕಾದಾಡುವ ಬೀಜ ಬಿತ್ತಿ, ಅಂದ ನೋಡುವ ಪ್ರವೃತ್ತಿಯ ಒಂದು ವರ್ಗ ನಮ್ಮ ಯುವಕರನ್ನು ಕ್ರಿಮಿನಲ್‌ಗಳನ್ನಾಗಿ ಪರಿವರ್ತಿಸುತ್ತಿರುವುದು ಗಮನಿಸಬೇಕಾದ ವಿಚಾರ.

ನಮ್ಮ ಸಮುದಾಯದ ಮುಂದೆ ಅನೇಕ ಬದುಕಿನ ಸವಾಲುಗಳು ನಿಂತಿವೆ. ಅದಕ್ಕಾಗಿ ನಮ್ಮ ಯುವಕರಲ್ಲಿ ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ಬೆಳೆಸಬೇಕಾಗಿದೆ. ಸವಾಲುಗಳನ್ನು, ಗಂಡಾಂತರಗಳನ್ನು ಎದುರಿಸುವ ವ್ಯಕ್ತಿತ್ವವನ್ನು ರೂಪಿಸಬೇಕಾಗಿದೆ. ರಾಜಕಾರಣದ ಮುಂದೆ, ಧಾರ್ಮಿಕತೆಯ ಮುಂದೆ, ಸಾಮಾಜಿಕ ವ್ಯವಸ್ಥೆಯ ಮುಂದೆ ಬಿಲ್ಲವರನ್ನು ದಿವಾಳಿಗಳಂತೆ ನಿಲ್ಲಿಸುವ ಪ್ರಯತ್ನ ಒಂದು ಕಡೆ ನಡೆಯುತ್ತಲೇ ಇದೆ. ಅದಕ್ಕೋಸ್ಕರ ಬಿಲ್ಲವರೆಂದರೆ ಗುಲಾಮ ಜಾತಿಯಲ್ಲ. ಅದೊಂದು ಕ್ಷಾತ್ರ ತೇಜಸ್ಸಿನ ಗಂಡೆದೆಯ ಜಾತಿಯೆಂದು ತೋರಿಸುವ ಬಲ ಪ್ರದರ್ಶನದ ಅಗತ್ಯವಿದೆ. ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಒಂದು ನಿಜವಾದ ಸಂಘರ್ಷವಿದೆ. ಈ ಸಂಘರ್ಷದ ಅವಶ್ಯಕತೆ ರಾಜಕೀಯ ಅಧಿಕಾರದ ಹಕ್ಕುಗಳನ್ನು ಹೊಂದುವುದಕ್ಕಾಗಿ ಎಂಬುದು ನಿರ್ವಿವಾದ.

ಒಂದು ಸಮುದಾಯಕ್ಕೆ ಧಾರ್ಮಿಕ ಪುನಶ್ಚೇತನ, ರಾಜಕೀಯ ಪ್ರಜ್ಞೆ, ಉತ್ತಮ ನಾಯಕತ್ವ ದೊರಕಿದಾಗ ಹೊಸ ಶಕ್ತಿಯ ಸಂಚಲನವಾಗುವುದರಲ್ಲಿ ಸಂಶಯವಿಲ್ಲ. ಇಂದು ದೇಶದಲ್ಲಿ ಚುನಾವಣೆಗಳನ್ನು ಗಮನಿಸಿದರೆ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಹಿಂದುಳಿದ ವರ್ಗದವರ ಮೇಲೆ, ಕರಾವಳಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯದ ಮೇಲೆ ತಮ್ಮ ರಾಜಕೀಯ ಚಟುವಟಿಕೆಗಳನ್ನು ಕೇಂದ್ರೀಕರಿಸಿದ್ದಾರೆ. ಅಲ್ಲಿಯೇ ತಮ್ಮ ರಾಜಕೀಯ ಶಕ್ತಿ ಅಡಗಿದೆ ಎಂಬುದನ್ನು ಅರಿತಿದ್ದಾರೆ. ಇಂತಹ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಭರವಸೆಯ ಪೆಪ್ಪರು ಮಿಂಟುಗಳಿಗೆ ಬಲಿಯಾಗುವವರು, ನಮ್ಮ ಯುವಕರೆನ್ನುವುದು ವಿಪರ್‍ಯಾಸ. ಅವರ ಭರವಸೆಗಳು ತಾತ್ಕಾಲಿಕ ಎಂಬುದು ನಮ್ಮವರಿಗೆ ಅರ್ಥವಾಗುವುದಿಲ್ಲ. ಅರ್ಥವಾದಾಗ ಅವರುಗಳು ನಮ್ಮ ಬೆನ್ನೇರಿ ಅಧಿಕಾರದ ಪೀಠಗಳತ್ತ ತಲುಪಿರುತ್ತಾರೆ. ನಮ್ಮವರು ಜೈಲಿನ ಬಾಗಿಲಿಗೆ ತಲುಪಿರುತ್ತಾರೆ. ಆದುದರಿಂದ ನಮ್ಮ ಯುವಕರನ್ನು, ಸಂಘಟನೆಯನ್ನು, ನುಂಗುವ ರಾಜಕಾರಣದಿಂದ, ಕಬಳಿಸುವ ಧಾರ್ಮಿಕತೆಯಿಂದ ದೂರ ನಿಲ್ಲಿಸುವ ಮಹತ್ತರ ಜವಾಬ್ದಾರಿ ನಮ್ಮ ಮುಂದೆ ಇದೆ.

ಇಂದು ಭಾರತದಲ್ಲಿ ರಾಜಕೀಯ ಬದಲಾವಣೆಗಳು ಜಾತಿ ಬಲದಿಂದ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಜಾತಿ ಬಲದಿಂದಲೇ ಈ ದೇಶದ ರಾಜಕಾರಣವನ್ನು ಗೆದ್ದವರು ಹಲವರು. ಉದಾಹರಿಸುವುದಾದರೆ ಉತ್ತರ ಭಾರತದ ಹರಿಯಾಣದಲ್ಲಿ ಜಾತಿ ಬಲವನ್ನು ಎಬ್ಬಿಸಿ ಮುಖ್ಯಮಂತ್ರಿಯಾದವರು ದೇವಿಲಾಲ್, ಓಂ ಪ್ರಕಾಶ್ ಚೌಟಾಲ. ಉತ್ತರ ಪ್ರದೇಶದಲ್ಲಿ ಚರಣ್ ಸಿಂಗ್, ಅಜಿತ್ ಸಿಂಗ್, ಮುಲಾಯಂ ಸಿಂಗ್, ಮಾಯಾವತಿ, ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಮಹಾರಾಷ್ಟ್ರದಲ್ಲಿ ವೈ.ಬಿ. ಚವಾಣ್, ಶರದ್ ಪವಾರ್, ಕರ್ನಾಟಕದಲ್ಲಿ ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ದೇವೇಗೌಡ, ಕುಮಾರಸ್ವಾಮಿ, ಆಂದ್ರ ಪ್ರದೇಶದಲ್ಲಿ ಎನ್. ಟಿ. ರಾಮರಾವ್, ಚಂದ್ರಬಾಬು ನಾಯ್ಡು ಮುಂತಾದವರು.

ನಮ್ಮ ಸಮುದಾಯವಿಂದು ಸಂಘಟನೆಗೆ ಹೊಸ ರೂಪ ಹೊಸ ದಿಕ್ಕು ತೋರಿಸಬೇಕಾಗಿದೆ. ನಾವು ಶಕ್ತರಾಗಿದ್ದರೆ ಮಾತ್ರ ಯಾವುದೇ ಸಮಾಜ, ಯಾವುದೇ ಪಕ್ಷ, ಯಾವುದೇ ಧರ್ಮ ನಮ್ಮನ್ನು ಗೌರವಿಸಬಲ್ಲದು. ನಾವುಗಳು ಸ್ವಾಭಿಮಾನಕ್ಕಾಗಿ ಬದುಕುವುದನ್ನು ಕಲಿಯಬೇಕಾಗಿದೆ. ಸಂಘಟನೆಯೆಂದರೆ ಒಂದು ಗುಂಪು ಆಗಬಾರದು. ಅದು ಒಂದು ಚಳವಳಿ ಯಾ ಆಂದೋಲನದ ರೂಪದಲ್ಲಿ ಜೀವಂತಿಕೆ ಪಡೆಯಬೇಕು. ಆಗ ಮಾತ್ರ ಒಂದು ಸಮಾಜದ ಸಂಘಟನೆ ಶಕ್ತಿಶಾಲಿಯಾಗಿ ರೂಪಾಂತರಗೊಳ್ಳಬಹುದು. ರಾಜಕೀಯವಾಗಿ, ಧಾರ್ಮಿಕವಾಗಿ ಒಂದು ಸಮಾಜ ಸಮೃದ್ಧವಾದರೆ ಮಾತ್ರ ಅದು ದೇಶಕ್ಕೆ ಆಸ್ತಿಯಾಗುವುದು.

ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿಯನ್ನು ತುಂಬಿ ಕೊಡಬಲ್ಲ ಸಾಮರ್ಥ್ಯ, ನಾಯಕತ್ವ, ರಾಷ್ಟ್ರಮಟ್ಟದ ರಾಜಕಾರಣಿ, ಕ್ಷಾತ್ರ ತೇಜಸ್ಸಿನ ಜನಾರ್ದನ ಪೂಜಾರಿಯವರಿಗಿದೆ ಎಂಬ ಸತ್ಯವನ್ನು ನಮ್ಮ ಸಮಸ್ತ ಸಮುದಾಯ ಮೊದಲಾಗಿ ಕಂಡುಕೊಳ್ಳಬೇಕು. ಧಾರ್ಮಿಕ ಶಕ್ತಿಯನ್ನು ನೀಡಬಲ್ಲ ಸಾಮರ್ಥ್ಯ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಪುಣ್ಯದ ನೆಲದಲ್ಲಿ ಅಡಕವಾಗಿದೆ ಎಂಬುದನ್ನು ಪ್ರಾಮಾಣಿಕವಾಗಿ, ಶ್ರದ್ಧಾ ಪೂರ್ಣವಾಗಿ ಅರಿತುಕೊಳ್ಳಬೇಕು. ಸಾಮಾಜಿಕ ಶಕ್ತಿ ನೀಡಬಲ್ಲ ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಬ್ರಹ್ಮ ತೇಜಸ್ಸಿನಲ್ಲಿದೆ ಎಂಬ ಸತ್ಯವನ್ನು ಮನಗಾಣುವ ಪ್ರಯತ್ನ ಮಾಡಿದ್ದಲ್ಲಿ ಬಿಲ್ಲವ ಸಮುದಾಯಕ್ಕೆ ಸಮೃದ್ಧಿಯ, ಪ್ರಗತಿಯ ಸೂರ್ಯೋದಯವಾಗುವುದರಲ್ಲಿ ಎಳ್ಳಷ್ಟು ಸಂಶಯಬೇಡ. ಬೆಳ್ಳುಳ್ಳಿ ತಿಂದವನ ಬಾಯಲ್ಲಿ ಏಲಕ್ಕಿಯ ಪರಿಮಳ ಹೇಗೆ ಬರುವುದಿಲ್ಲವೋ ಹಾಗೆ ಸ್ವಾಭಿಮಾನದ ಚಿಂತನೆಯಿಲ್ಲದ ಬಿಲ್ಲವನ ಬಾಳಿನಲ್ಲಿ ಯಜಮಾನಿಕೆಯ ಪರಿಮಳ ಬರುವುದು ಅಸಾಧ್ಯದ ಮಾತು.

ಸಂಘಟನೆಯಿಂದ ಬಡತನ, ನಿರುದ್ಯೋಗ, ಶೋಷಣೆ, ದಬ್ಬಾಳಿಕೆಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ರಾಜಕೀಯ ನಾಯಕತ್ವ, ರಾಜ್ಯಾಧಿಕಾರವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಅಂತಹ ಸಾಮರ್ಥ್ಯ ಮತ್ತು ಯೋಗ್ಯತೆಯ ಹುಡುಕಾಟ ಇಂದಿನಿಂದಲೇ ಮತ್ತೊಮ್ಮೆ, ಮಗದೊಮ್ಮೆ ಪ್ರಾರಂಭವಾಗಲಿ.

One thought on “ವರ್ತಮಾನದಲ್ಲಿ ಬಿಲ್ಲವರ ಸಂಘಟನೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!