ಡಾ. ಯೋಗೀಶ್ ಕೈರೋಡಿ - ರಜತ ರಶ್ಮಿ -2012

ಗ್ರಾಮೀಣ ಸಂಸ್ಕೃತಿ ಮತ್ತು ಆಧುನಿಕತೆ

ಆಧುನಿಕತೆಯನ್ನು ನಾವು ಪರಿಭಾವಿಸುವ ಬಗೆಯೇ ಸಂಕೀರ್ಣವಾದುದು. ಆಧುನಿಕತೆ ಎಂದರೇನು ಎಂಬುದನ್ನು ವ್ಯಾಖ್ಯಾನದ ಚೌಕಟ್ಟಿನ ಒಳಗೆ ತರುವ ಪ್ರಯತ್ನ ಚಿಂತಕ ವಲಯದಲ್ಲಿ ಸಾಕಷ್ಟು ನಡೆದಿವೆ. ಸರಳವಾಗಿ ನಾವು ’ಆಧುನಿಕತೆ’ ಎಂಬ ಪರಿಕಲ್ಪನೆಯನ್ನು ಗ್ರಹಿಸುವಾಗ ವರ್ತಮಾನದಲ್ಲಿ ನಡೆಯುತ್ತಿರುವ ಸ್ಥಿತ್ಯಂತರಗಳು, ಪಲ್ಲಟಗಳು ನಮ್ಮ ಅರಿವಿಗೆ ಬರುತ್ತವೆ. ಆದರೆ ವಿಶಾಲವಾದ ಅರ್ಥದಲ್ಲಿ ’ಆಧುನಿಕತೆ’ ಎಂಬುದು ಎಲ್ಲಾ ಕಾಲಕ್ಕೂ ಸಂಬಂಧಿಸಿದ್ದು. ಕಲ್ಲಿನಿಂದ ಬೆಂಕಿಯ ಸೃಷ್ಠಿಯ ಸಾಧ್ಯತೆಯನ್ನು ಗುರುತಿಸಿದ್ದೂ ಒಂದು ಕಾಲದ ಆಧುನಿಕತೆಯಾಗಿದೆ. ಚಕ್ರದ ಸೃಷ್ಟಿಯಂತೂ ಆಧುನಿಕತೆಯ ಮೂಲ ಬೇರು. ಜೈವಿಕ ವಿಕಾಸದ ಜೊತೆಗೆ ಬೌದ್ಧಿಕ ವಿಕಾಸವೂ ಸಂಭವಿಸುತ್ತಾ ಬಂದಿದೆ. ಆದುದರಿಂದ ಆಧುನಿಕತೆ ಎಂಬುದು ನಿಸರ್ಗದಷ್ಟೇ ಸಹಜವಾದುದು.

ಸಾಮಾನ್ಯವಾಗಿ ಆಧುನಿಕತೆಯನ್ನು ಪ್ರತಿ ಕಾಲವೂ ಅಪನಂಬಿಕೆಯಿಂದ, ಆತಂಕದಿಂದ ನೋಡಿರುವುದನ್ನು ಕಾಣಬಹುದು. ಇದು ಮನುಷ್ಯನ ಪ್ರಕೃತಿ. ನಗರ ಬದುಕಿಗೆ ತೆರೆದುಕೊಳ್ಳದ ಬುಡಕಟ್ಟು ಜನವರ್ಗ ಆಧುನಿಕ ಸ್ಪರ್ಶದಲ್ಲಿ ಬೆಳೆದ ಜನಸಮೂಹವನ್ನು ನೋಡುವ ಬಗೆಯೂ ಭಯ, ಗುಮಾನಿಯಿಂದ ಕೂಡಿರುತ್ತದೆ. ಈ ಎರಡು ಜನವರ್ಗದ ಮುಖಾಮುಖಿಯ ಆರಂಭದ ಸಂದರ್ಭದಲ್ಲಿ ಪಲಾಯನ ಅಥವಾ ದಾಳಿಯ ಸ್ವಭಾವ ಈ ಬುಡಕಟ್ಟು ಜನವರ್ಗದಲ್ಲಿ ಮೂಡಬಹುದು. ಎತ್ತಿನ ಗಾಡಿಯ ನಂತರ ಇನ್ನಷ್ಟು ಸುಧಾರಿತ ರೂಪದ ’ಸೈಕಲ್’ ಎಂಬ ವಾಹನ ನಗರದ ಕೇಂದ್ರಕ್ಕೆ ಬಂದಾಗ ಜನ ಯಾವ ರೀತಿ ಸ್ಪಂದಿಸಿದರು ಎಂಬಂಶ ಕನ್ನಡದ ಕಾದಂಬರಿಗಳಲ್ಲಿ ನವೀರಾಗಿ ಮೂಡಿಬಂದಿದೆ. ಇಲ್ಲಿ ಕುತೂಹಲ, ಭಯ, ಸಂಭ್ರಮ ಹಾಗೂ ಇಂತಹ ಹೊಸತನ ಪ್ರಳಯದ ಲಕ್ಷಣ ಎಂಬಂತೆ ಆತಂಕದಿಂದ ನೋಡುವ ವಿವರಗಳು ಹೇರಳವಾಗಿ ಕಂಡುಬಂದಿದೆ. ಇದು ಕಾದಂಬರಿಯ ಕಾಲ್ಪನಿಕ ವಿವರವಾದರೂ ಅನುಭವಗಮ್ಯವಾದುದು. ಸಮಾಜದಿಂದ, ಮನುಷ್ಯಪ್ರವೃತ್ತಿಯಿಂದಲೇ ಹೆಕ್ಕಿಕೊಂಡಿರುವಂತಹುದು.

ಈ ಹಿನ್ನಲೆಯಲ್ಲಿ ’ಗ್ರಾಮೀಣ ಸಂಸ್ಕೃತಿ ಮತ್ತು ಆಧುನಿಕತೆ’ ಎಂಬ ವಿಷಯದ ಸುತ್ತ ಚಿಂತಿಸಬೇಕಾಗಿದೆ. ಇಲ್ಲಿ ಆಧುನಿಕತೆ ಎಂದರೆ ಅದೊಂದು ಮನೋಸ್ಥಿತಿ. ವರ್ತಮಾನದ ಸರಕು ಸಂಸ್ಕೃತಿಯಿಂದಲೇ ಉಂಟಾದ ಮನಸ್ಸು. ತಂತ್ರಜ್ಞಾನದ ಜಗತ್ತು ಸೃಷ್ಟಿಸಿದ ಸೌಲಭ್ಯ, ಮನೋರಂಜನೆಯ ಮಹಾಪೂರ , ಮಿಂಚಿನ ವೇಗಕಾರ್ಯ ಸಾಧ್ಯತೆ, ಇತ್ಯಾದಿ, ಇತ್ಯಾದಿಗಳ ಜಗತ್ತು. ಇದರ ಇನ್ನೊಂದು ಭುಜವಾಗಿರುವ ಮಾರುಕಟ್ಟೆಯ ಸ್ವರೂಪ, ತಂತ್ರಜ್ಞಾನ ಮತ್ತು ಮಾರುಕಟ್ಟೆಯ ವರ್ತುಲದಲ್ಲಿ ಮೂಡಿಬಂದ ’ಆಧುನಿಕ ಮನಸ್ಸು’ ಎಂತಹುದು ಎಂದು ಗ್ರಹಿಸುವ ಪ್ರಯತ್ನವಿದು. ಇಲ್ಲಿಯೂ ’ಆಧುನಿಕತೆ’ಯನ್ನು ನೋಡುವ ಮನೋಧರ್ಮ ಪಾರಂಪರಿಕವಾದುದು ಎಂದು ಭಾವಿಸಬೇಕಾಗಿಲ್ಲ. ವರ್ತಮಾನದ ಆಧುನಿಕತೆ ಒದಗಿಸಿದ ವ್ಯವಹಾರಿಕ ಲಾಭವನ್ನು ಗುರುತಿಸಿ ಅರ್ಥೈಯಿಸಿ ಕಳೆದುಕೊಂಡದ್ದನ್ನು ಹುಡುಕುವ ಭಾವನೆಯಿಂದ ಮೂಡಿರುವಂತಹುದು.

ಲೇಖನದ ಇನ್ನೊಂದು ಕೊಂಡಿಯಾಗಿರುವ ಗ್ರಾಮೀಣ ಸಂಸ್ಕೃತಿಯನ್ನು ಬಿಡಿಸಿ ಸದ್ಯದಲ್ಲಿ ಗ್ರಹಿಸಿದ ’ಆಧುನಿಕತೆ’ಯೊಂದಿಗೆ ಜೋಡಿಸಬೇಕಾಗಿದೆ. ಇಲ್ಲಿಯೂ ಕೂಡ ವಿವೇಚಿಸಬೇಕಾದ ಪರಿಕಲ್ಪನೆ ’ಸಂಸ್ಕೃತಿ’ ಎಂದರೇನು?. ಸಾಮಾನ್ಯವಾಗಿ ಮನುಷ್ಯನ ಕಲಾತ್ಮಕ ಅಭಿವ್ಯಕ್ತಿಯನ್ನು ’ಸಂಸ್ಕೃತಿ’ ಎಂದು ಗ್ರಹಿಸುವುದು ವಾಡಿP. ಆಚಾರ-ವಿಚಾರಗಳನ್ನು ಒಟ್ಟಾಗಿ ’ಸಂಸ್ಕೃತಿ’ ಎನ್ನುತ್ತೇವೆ. ಆ ಕಾರಣದಿಂದಲೇ ’ಆಹಾರಸಂಸ್ಕೃತಿ’, ’ಆರಾಧನಾ ಸಂಸ್ಕೃತಿ’, ’ಕೃಷಿ ಸಂಸ್ಕೃತಿ’ , ’ಮದುವೆ ಸಂಸ್ಕೃತಿ’, ಮುಂತಾದ ಪದದ ಸುತ್ತ ಸಾಕಷ್ಟು ವ್ಯಾಖ್ಯಾನ ಚಿಂತನೆಗಳು ನಡೆದಿದೆ. ಇವೆಲ್ಲಕ್ಕಿಂತಲೂ ಸೊಗಸಾದ ವ್ಯಾಖ್ಯಾನವೊಂದಿದೆ. ಅದೆಂದರೆ ಒಂದು ಹಣ್ಣನ್ನು ಹಾಗೆಯೇ ತಿಂದರೆ ’ಪ್ರಕೃತಿ’. ಅದನ್ನು ಹಾಲು, ಸಕ್ಕರೆ ಹಾಕಿ ಪಾನೀಯವಾಗಿ ಪರಿವರ್ತಿಸಿ ತಿಂದರೆ ’ಸಂಸ್ಕೃತಿ’. ಅದೇ ಹಣ್ಣನ್ನು ಕೊಳೆಯುವಂತೆ ಮಾಡಿ ಮದ್ಯಪಾನ ತಯಾರಿಸಿದರೆ ’ವಿಕೃತಿ’. ಒಟ್ಟಿನಲ್ಲಿ ಸಂಸ್ಕೃತಿ ಎಂಬುದು ಪ್ರಕೃತಿಗೆ ಪೂರಕವಾದುದು. ಮನುಷ್ಯ ಸೃಷ್ಟಿ ಎಂದು ಗ್ರಹಿಸಬಹುದು . ಮನುಷ್ಯನ ಬದುಕಿಗೆ ಚೈತನ್ಯ ತುಂಬುವಂತಹುದು ಎಂದು ತಿಳಿದುಕೊಳ್ಳಬಹುದು.

ಇಲ್ಲಿ ’ಸಂಸ್ಕೃತಿ’ ಎಂದರೆ ’ಗ್ರಾಮೀಣ ಸಂಸ್ಕೃತಿ’ ಎಂದೇ ಮೂಲತಃ ಗುರುತಿಸಬಹುದು. ಯಾಕೆಂದರೆ ಸಂಸ್ಕೃತಿಯ ಮೂಲ ಬೇರು ಇರುವುದು ಗ್ರಾಮೀಣ ಬದುಕಿನಲ್ಲೇ. ನಗರದಲ್ಲಿ ಹುಟ್ಟಿದ ಜೀವನ ಕ್ರಮವನ್ನು ’ನಗರ ಸಂಸ್ಕೃತಿ’ ಎಂದು ಕರೆಯಬಹುದೋ ಏನೋ? ಗ್ರಾಮೀಣ ಸಂಸ್ಕೃತಿ ಎಂದರೆ ಕೃಷಿ ಪ್ರಣೀತ ಸಂಸ್ಕೃತಿ. ವಾಣಿಜ್ಯದ ಆಶಯವನ್ನು ಮೀರಿದ ಬದುಕು ಕೇಂದ್ರಿತ ಸಂಸ್ಕೃತಿ. ಆದುದರಿಂದ Culture ಎಂಬುದು ಇರುವುದುAgricultureನ ಒಳಗೆ. ಬದುಕು ಕೇಂದ್ರಿತ ಕೃಷಿಯಿಂದ ವಿಮುಖವಾಗಿ ಅರ್ಥ ಕೇಂದ್ರಿತ ಮನೋಭಾವ ಬೆಳೆದು ನಿಂತಿದ್ದು ಇಂದಿನ ಸ್ಥಿತಿ.

ಕೃಷಿಯಿಂದ ದೂರವಾಗುವುದರೊಂದಿಗೆ ಕೃಷಿಯ ಸುತ್ತ ಹೆಣೆದ ಅದೆಷ್ಟು ನಂಬಿಕೆ, ಆಚರಣೆ, ಆರಾಧನೆ, ಕುಟುಂಬ ಬಾಂಧವ್ಯ ಕ್ಷೀಣವಾಯಿತು. ಒಂದು ವೇಳೆ ವಾರ್ಷಿಕ ಆವರ್ತನದ ಆಚರಣೆಗಳು ಇಂದು ಕೂಡ ನಡೆಯತ್ತಿದ್ದರೂ ಅದರ ಮೂಲ ಸತ್ವ ಇಂದು ಇಲ್ಲವಾಗಿದೆ. ದೀಪಾವಳಿ ಹಬ್ಬವನ್ನೇ ಉದಾಹರಣೆಯಾಗಿ ನೋಡೋಣ. ಕರಾವಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಕೃಷಿ ಪರಿಕರಗಳನ್ನೆಲ್ಲ ಜೋಡಿಸಿ ಸಿಂಗರಿಸಿ ಇಡುವ ಪದ್ಧತಿ ಇದೆ. ಕೃಷಿಯೇ ಇಲ್ಲದಿದ್ದಾಗ ಅಥವಾ ಯಾಂತ್ರಿಕವಾದಾಗ ಪರಿಕರಗಳಾದರೂ ಎಲ್ಲಿಂದ? ಒಂದು ವೇಳೆ ಇದ್ದರೂ ಕೂಡ ಆ ಪದ್ಧತಿ ಯಾಂತ್ರಿಕ ಆಚರಣೆಯಾಗಬಹುದೇ ಹೊರತು ಅದರಲ್ಲಿ ಭಾವಸ್ಪಂದನ ಇರುವುದು ಅಸಾಧ್ಯ. ಇನ್ನು ಕೃಷಿಯೊಂದಿಗೆ ಅವಿನಾಭಾವ ಸಂಬಂಧವಿರುವ ದನಕರುಗಳು ಇಲ್ಲದೇ ಇದ್ದಾಗ ’ಗೋಪೂಜೆ’ ಎಲ್ಲಿಂದ? ಗ್ರಾಮೀಣ ಜನ-ಜೀವನ ಈ ಹಿಂದೆಗಿಂತ ಹೆಚ್ಚಿನ ಸೌಲಭ್ಯವನ್ನು ಇಂದು ಅನುಭವಿಸುತ್ತಿರಬಹುದು. ಭೌತಿಕ – ಬೌದ್ಧಿಕ ವಿಕಾಸ ಮನುಷ್ಯನಲ್ಲಿ ಭಾವಶೂನ್ಯತೆ ಉಂಟು ಮಾಡಿರುವುದು ಕರಾಳ ಸಂಗತಿ.

’ಸಹಕಾರ’ ಎಂಬುದು ಗ್ರಾಮೀಣರ ಧರ್ಮ, ಮನೋಧರ್ಮ ಎಲ್ಲವೂ. ಇನ್ನೊಬ್ಬರ ನೋವು-ನಲಿವಿನಲ್ಲಿ ಯಾವುದೇ ಔಪಚಾರಿಕತೆ ಇಲ್ಲದೆ ಪಾಲ್ಗೊಳ್ಳುವುದು ಸ್ವಾಭಾವಿಕ ಸಂಗತಿ. ಈ ಬೇರುಗಳ ಮೂಲಕವೇ ನಮ್ಮಲ್ಲಿ ಸಹಕಾರ ಚಳವಳಿ ಬೆಳೆದು ಸಹಕಾರ ಸಂಘಗಳ ಸ್ಥಾಪನೆ ಇತ್ಯಾದಿಗಳು ನಡೆದು ಹೋದವು. ಇವೆಲ್ಲ ಆಶಾದಾಯಕ ಸಂಗತಿಗಳು. ಪ್ರಸ್ತುತ ಸ್ವಸಹಾಯ ಸಂಘಗಳು ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಕ್ರಿಯಾಶೀಲವಾಗಿದೆ. ದೊಡ್ಡ ಓಡಾಟಗಳಿಲ್ಲದೆ, ವಿಶೇಷ ದಾಖಲೆ ಪತ್ರಗಳಿಲ್ಲದೆ ಸಾಲ ಸೌಲಭ್ಯಗಳು ಕೈ ಸೇರುತ್ತಿವೆ. ಇವೆಲ್ಲ ನಿಜವಾಗಿಯೂ ಅತೀವ ಸಂತೋಷದಾಯ ಸಂಗತಿ. ಆದರೆ ವಸ್ತುಸ್ಥಿತಿಯನ್ನು ವ್ಯವಹಾರಿಕತೆಯನ್ನು ಮೀರಿ ಮಾನವೀಯ ಕಾಳಜಿಯಿಂದ ವಿವೇಚಿಸಬೇಕಾಗಿದೆ. ಗ್ರಾಮೀಣ ಬಡ, ಮಧ್ಯಮವರ್ಗದ ಮದುವೆ ಮುಂಜಿ ಯಾವುದೇ ಅಡೆತಡೆಯಿಲ್ಲದೆ ಅದ್ದೂರಿಯಾಗಿ ನಡೆಯುವಲ್ಲಿ ಸಹಾಯಕವಾಗಿದೆ. ತನ್ನ ದುಡಿಮೆಯ ಮಿತಿಯನ್ನು ಮೀರಿ ಭೌತಿಕ ವಸ್ತುಗಳು ಮನೆ ಸೇರಿವೆ. ಆದರೆ ವಾರದ ಒಂದು ದಿನವೂ ರಜೆ ಇಲ್ಲದಂತೆ ನಿರಂತರ ದುಡಿಯುವ ಮಂದಿಗಳನ್ನು ಎಲ್ಲೆಂದರಲ್ಲಿ ಕಾಣುತ್ತೇವೆ. ಇದನ್ನೆಲ್ಲಾ ಪ್ರಗತಿ ಎಂದು ವ್ಯಾಖ್ಯಾನಿಸಬಹುದು. ಆದರೆ ಕೆಲವು ದಶಕಗಳ ಹಿಂದೆ ಊರಿನ ಅಂಗಡಿ ಹೊಟೇಲುಗಳಲ್ಲಿ ಕುಳಿತು ಪಟ್ಟಾಂಗದಲ್ಲಿ ತೊಡಗುತ್ತಿದ್ದ ಜನ ಇಂದು ಮಾಯವಾಗಿದ್ದಾರೆ. ತಮಾಷೆಯ ಮಾತುಕತೆಗೆ ಸಮಯ ಇಲ್ಲವಾಗಿದೆ. ವಾರಪೂರ್ತಿ ದುಡಿದರೂ ಸಾಧ್ಯವಾಗದಿರುವ ಸ್ಥಿತಿಯಲ್ಲಿ ನೆಂಟರಿಷ್ಟರ ಮನೆಗೆ ಹೋಗಿ ಕುಳಿತು ಬರುವ ಪ್ರಸಂಗ ಹೇಗೆ ಸಾಧ್ಯ? ಹಬ್ಬ ಬಂತೆಂದರೆ ಸಂಭ್ರಮಿಸುವ ಬದಲು ಆತಂಕಗೊಳ್ಳುವ ಜನರೇ ಇಂದು ಹೆಚ್ಚಾಗಿದ್ದಾರೆ. ಯಾಕೆಂದರೆ ಹಬ್ಬದ ದಿನ ದುಡಿಯುವುದು ಹೇಗೆ? ದುಡಿಯದಿದ್ದರೆ ವಾರದ ಕೊನೆಗೆ ಸಾಲ ಸಂದಾಯ ಮಾಡುವುದು ಹೇಗೆ? ಈ ಚಿಂತೆಯಲ್ಲಿ ಬದುಕು ಬರಡಾಗುತ್ತಿದೆ. ಮನುಷ್ಯ ಸಂಬಂಧಗಳು ವ್ಯವಹಾರಿಕಗೊಳ್ಳುವ ಆನಾರೋಗ್ಯಕರ ವಾತಾವರಣವೇ ಎಲ್ಲೆಡೆ ವ್ಯಾಪಿಸಿದೆ. ಒಂದು ಸಾಲ ಕೊನೆಗೊಳ್ಳುವ ಮೊದಲೇ ಇನ್ನೊಂದು ಸಾಲದ ಕೊಂಡಿಗೆ ಸಿಲುಕುವವರೇ ಹೆಚ್ಚು. ವ್ಯವಸ್ಥೆಯ ದೋಷ ಎನ್ನಲಾಗದು. ಯಾಕೆಂದರೆ ಇಂದು ಮಾರುಕಟ್ಟೆ ಎಲ್ಲರಿಗೂ ಮiಕ್ತವಾಗಿದೆ. ಆದರೆ ಕಳೆದುಕೊಂಡದ್ದು ಸಾಕಷ್ಟು ಇವೆ. ಅದರ ಮೌಲ್ಯಮಾಪನ ಮಾಡುವುದು ಸುಲಭ ಸಾಧ್ಯವಿಲ್ಲ. ಆದರೆ ಜಾಗೃತಿ, ಪ್ರಜ್ಞೆ, ವಿವೇಚನೆ ಇರಬೇಕಾದುದು ಒಬ್ಬ ಗ್ರಾಹಕನಿಗೆ ಅಲ್ಲವೆ? ಗ್ರಾಮೀಣ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆ ಪಡೆದವರಿಗಿಂತ ಆರ್ಥಿಕ ಗುಲಾಮಗಿರಿಗೆ ತುತ್ತಾದವರೇ ಹೆಚ್ಚು !. ಈ ಮಾತುಗಳು ಕೆಲವೊಮ್ಮೆ ಕಹಿ ಎಂದು ಅನಿಸಬಹುದು. ಆದರೆ ಅಷ್ಟೇ ಸತ್ಯ

ಹೊಸ ಆರ್ಥಿಕ ನೀತಿ, ಉಪಗ್ರಹ ಕ್ಷೇತ್ರದಲ್ಲಿ ಆಗಿರುವ ಪ್ರಗತಿ, ಅತೀ ವಾಣಿಜ್ಯಪರತೆ, ಸದಾ ಕೊಂಡುಕೊಳ್ಳುವಂತೆ ಪ್ರೇರೇಪಿಸುವ ಜಾಹಿರಾತು, ಒಂದರ ಮೇಲೊಂದರಂತೆ ಖಾಸಗಿ ಮನೋರಂಜನಾ ಚಾನೆಲ್‌ಗಳು, ಖಾಸಗಿ ದೂರಸಂಪರ್ಕಗಳು ಇವೆಲ್ಲವೂ ಎಲ್ಲಾ ಕಡೆಗೂ ಪ್ರಭಾವ ಬೀರಿವೆ. ಇವೆಲ್ಲಾ ಒಂದಕ್ಕೊಂದು ಸಂಬಂಧ ಉಳ್ಳದ್ದು. ಇವು ಮನುಷ್ಯನಿಗೆ ಸಾಕಷ್ಟು ಸುಖ – ಸೌಲಭ್ಯವನ್ನು ಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಹಳಷ್ಟನ್ನು ಕಳೆದುಕೊಂಡದ್ದೂ ಇದೆ. ಪ್ರತಿಯೊಬ್ಬನಲ್ಲೂ ಇದ್ದ ಸಮೃದ್ಧವಾದ ಕತೆ, ಜೀವನ ಅನುಭವ, ಹಾಡು, ರಸಪೂರ್ಣ ಮಾತಿನ ಒರತೆ ಇಂದು ಬತ್ತಿಹೋಗಿದೆ. ಟಿ.ವಿ. ಪರದೆಯಲ್ಲಿ ಒಂದರ ಮೇಲೊಂದರಂತೆ ಬರುವ ಮನರಂಜನಾ ಕಾರ್ಯಕ್ರಮಗಳಿಂದ ಸುತ್ತಲಿನ ಬಾಂಧವ್ಯ ಕುಸಿದಿದೆ. ಹಬ್ಬಗಳು ವಿವಿಧ ಬಗೆಯ ಆಚರಣೆಗಳು ಯಾಂತ್ರಿಕಗೊಳ್ಳುತ್ತಿವೆ. ಟಿ.ವಿ., ಮೊಬೈಲ್ ಹಾಗೂ ಇನ್ನಿತರ ಯಂತ್ರಗಳೊಂದಿಗಿನ ಸಂವಹನವೇ ಅಧಿಕವಾಗಿ ಮನುಷ್ಯನೂ ಅರ್ಧ ಯಂತ್ರವೇ ಆಗಿದ್ದಾನೆ ಎಂಬಂತೆ ಭಾಸವಾಗುತ್ತಿದೆ. ಹಿಂದೆ ಸಾಕಷ್ಟು ಸುದ್ದಿ ಮಾಧ್ಯಮಗಳು ಇಲ್ಲದೇ ಇದ್ದರೂ ಊರಿನಲ್ಲಿ ಯಾವುದಾದರೂ ಘಟನೆ, ಅಪಘಾತ, ಸಾವು ಸಂಭವಿಸಿದರೆ ಆ ಸುದ್ದಿ ಅತಿಬೇಗ ಒಬ್ಬರಿಂದ ಇನ್ನೊಬ್ಬರಿಗೆ ತಲುಪುತ್ತಿತ್ತು. ಆದರೆ ಈಗ ಸುತ್ತಲಿನ ಘಟನೆ ತಲುಪುವುದೇ ಕಷ್ಟ. ದೂರ ಹತ್ತಿರವಾಗಿರುವ ಕಾಲದಲ್ಲಿ ಹತ್ತಿರದ್ದು ದೂರವಾಗಿರುವುದು ವಿಪರ್ಯಾಸ. ದುಡಿಮೆ, ಟಿ.ವಿ. ವೀಕ್ಷಣೆ ಹಾಗೂ ಮೊಬೈಲ್‌ನಲ್ಲಿ ಮಾತುಕತೆಯ ಭರಾಟೆಯಲ್ಲಿ ಮನೆಯ ಸದಸ್ಯರೊಂದಿಗೆ ಬೆರೆಯುವ, ಚಿಕ್ಕ ಮಕ್ಕಳೊಂದಿಗೆ ಆಟವಾಡುವ, ಸುತ್ತಮುತ್ತಲಿನ ಆಗು ಹೋಗಿನ ಬಗ್ಗೆ ಮಾತನಾಡುವ ಸುಖದಿಂದ ಮಾನವ ವಂಚಿತನಾಗಿದ್ದಾನೆ. ವರ್ತಮಾನದ ಈ ಆಧುನಿಕ ಕಾಲ ಮನುಷ್ಯನಿಗೆ ಏನೆಲ್ಲ ಕೊಟ್ಟಿದೆ ಎಂಬುದಕ್ಕೆ ಸಾವಿರಾರು ನಿದರ್ಶನಗಳು ಸಿಗುತ್ತದೆ.

ಮುಗ್ಧವೂ, ಸುಂದರವೂ ಆದ ಮನಸ್ಸು ಕೆಡುವುದು ಅಪಾಯ. ಆದುದರಿಂದ ಸಂಸ್ಕೃತಿಯೆಂದರೆ ಭಾಷೆ, ಆಹಾರ, ಜಾನಪದ ಅಭಿವ್ಯಕ್ತಿಯಲ್ಲಿ ಸಂಭವಿಸುವ ಪಲ್ಲಟ ಮಾತ್ರಲ್ಲ ಅದರ ಮೂಲಕ ಮೂಡುವ ಮನಸ್ಸೂ ಹೌದು. ಕಾಲ ಒದಗಿಸುವ ಹೊಸತನಗಳಿಂದ ಬದಲಾವಣೆ ಸ್ವಾಭಾವಿಕ. ಕೆಲವೊಂದನ್ನು ಕಳೆದುಕೊಳ್ಳುವುದೂ ಅಷ್ಟೇ ಸಹಜ. ಆದರೆ ಕಳೆದು ಕೊಳ್ಳುತ್ತಿದ್ದೇವೆ ಎಂಬ ಅರಿವು, ಪ್ರಜ್ಞೆ ನಮ್ಮನ್ನು ಕಾಪಾಡಬಹುದು.

ಡಾ. ಯೋಗಿಶ್ ಕೈರೋಡಿ
ಉಪನ್ಯಾಸಕರು, ಆಳ್ವಾಸ್ ಕಾಲೇಜು ಮೂಡಬಿದಿರೆ
ವಿಳಾಸ: ಆರಂಬೋಡಿ ಅಂಚೆ-574237
ಸಿದ್ಧಕಟ್ಟೆ. ದ.ಕ.

One thought on “ಗ್ರಾಮೀಣ ಸಂಸ್ಕೃತಿ ಮತ್ತು ಆಧುನಿಕತೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!