ಯುವವಾಹಿನಿ ರಿ.ಮೂಲ್ಕಿ ಘಟಕ

20ನೇ ವರ್ಷದ ಆಟಿಡೊಂಜಿ ದಿನ

ಮೂಲ್ಕಿ :- ನಮ್ಮ ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿಗಳನ್ನು ಕಡೆಗಣಿಸಿದರೆ ಮುಂದಿನ ಜೀವನ ಕಷ್ಟಕರವಾದೀತು ಎಂದು ದೈವ ನರ್ತಕ ಹಾಗೂ ಸಿವಿಲ್ ಇಂಜಿನಿಯರ್ ಡಾ.ರವೀಶ್ ಪರವ ಪಡುಮಲೆ ತಮ್ಮ ಆಟಿದ ಮದಿಪನ್ನು ಪ್ರಧಾನ ಭಾಷಣದಲ್ಲಿ ಮಂಡಿಸಿದರು.ಅಲ್ಲದೆ ಆಟಿ ತಿಂಗಳು ಮತ್ತೆ ಮತ್ತೆ ನೆನಪಿಸಬೇಕಾಗಿದೆ. ಮುಂದಿನ ಜನಾಂಗಕ್ಕೆ ಆಟಿ ಆಚರಣೆಗಳ ಮಹತ್ವವನ್ನು ತಿಳಿಯಪಡಿಸಬೇಕಾಗಿದೆ ಎಂದವರು ಅಭಿಪ್ರಾಯಿಸಿ ಸುಸಂಸ್ಕೃತ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಯುವವಾಹಿನಿಯ ಕಾರ್ಯ ಅನುಕರಣೀಯ ಎಂದರು ಅವರು ಯುವವಾಹಿನಿ ಮೂಲ್ಕಿ ಘಟಕದ ವತಿಯಿಂದ ದಿನಾಂಕ 17ಜುಲೈ 2022ರ ಭಾನುವಾರ ನಡೆದ 20ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಟಿದ ತಮ್ಮನ: ಸಹಕಾರ ಕ್ಷೇತ್ರದ ಅಪ್ರತಿಮ ಸಾಧಕ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರನ್ನು ಆಟಿದ ತಮ್ಮನದೊಂದಿಗೆ ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಭರತೇಶ್ ಅಮೀನ್ ಮಟ್ಟು ಸನ್ಮಾನ ಪತ್ರ ವಾಚಿಸಿದರು.
ಹೆಜಮಾಡಿ ಮಾತೃಶ್ರೀ ಹೈವೇ ಪೆಟ್ರೋಲ್ ಪಂಪ್ ಮಾಲೀಕ ಜನಾರ್ಧನ ಪೂಜಾರಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಲಸಿನ ಮರ ಮತ್ತು ಮಾವಿನ ಮರದ ಹಿನ್ನೆಲೆಯಲ್ಲಿ ಆಷಾಡಾ ಮಾಸವನ್ನು ನೆನಪಿಸುವಂತೆ ರಚಿಸಿದ ಸಭಾವೇದಿಕೆಯಲ್ಲಿ ಹಲಸಿನ ಹಣ್ಣನ್ನು ಕೊಯ್ದು, ಅದನ್ನು ಕೈಯಲ್ಲೇ ಬಿಚ್ಚಿ ಅತಿಥಿಗಳಿಗೆ ತಿನ್ನಿಸುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಭಾರತಿ ಭಾಸ್ಕರ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಎಲ್ಲರನ್ನೂ ಸ್ವಾಗತಸಿದರು. ಯುವವಾಹಿನಿ (ರಿ).ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು, ಕನ್ನಂಗಾರ್ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಶೀನ ಪೂಜಾರಿ ಹೆಜಮಾಡಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿ, ಮಾತನಾಡಿ, ಶುಭ ಹಾರೈಸಿದರು.

ಸಂಘಕ್ಕೆ ದೇಣಿಗೆ: ನಿರ್ಮಾಣ ಹಂತದ ಮೂಲ್ಕಿ ಬಿಲ್ಲವ ಸಂಘದ ಕಟ್ಟಡ ನಿರ್ಮಾಣಕ್ಕೆ ಯುವವಾಹಿನಿ ವತಿಯಿಂದ 20 ಸಾವಿರದ ದೇಣಿಗೆಯನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಸಭಾಸದರಾಗಿ ಭಾಗವಹಿಸಿದ್ದ ಸಮಾಜ ಸೇವಕರಾದ ಅಶೋಕ್‌ಕುಮಾರ್ ಶೆಟ್ಟಿ, ವೆಂಕಟೇಶ್ ಹೆಬ್ಬಾರು, ವಾಮನ ಕೋಟ್ಯಾನ್ ನಡಿಕುದ್ರು, ಪಣಂಬೂರು ಘಟಕದ ಸುರೇಶ್ ಪೂಜಾರಿ, ಕೊಲ್ಯ ಘಟಕದ ಮೋಹನ್ ಮಾಡೂರು, ಆತ್ಮಶಕ್ತಿ ಪತ್ರಿಕೆಯ ಸಂಪಾದಕ ವಾಮನ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಮಧ್ಯೆ ಯುವವಾಹಿನಿ ಕಲಾವಿದರಿಂದ ನೃತ್ಯ, ಹಾಡು, ಯಕ್ಷಗಾನ ಪ್ರಾತ್ಯಕ್ಷಿಕೆ ಸಹಿತ ವಿವಿಧ ವಿನೋದಾವಳಿ ಆಯೋಜಿಸಲಾಗಿತ್ತು. ನಡುನಡುವೆ ಪ್ರೇಕ್ಷಕರಿಗೆ ಆಟಿ ತಿನಿಸುಗಳ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಯುವವಾಹಿನಿ ಸದಸ್ಯರಿಂದ ಸುಮಾರು 20 ಬಗೆಯ ವಿವಿಧ ಆಟಿ ತಿನಿಸುಗಳ ವಣಸು ತಿನಸುದ ಅಟ್ಟಣೆಯಲ್ಲಿ ಸುಮಾರು 1300 ಮಂದಿ ರುಚಿ ಸವಿದರು.

ಆಕರ್ಷಕ ವೇದಿಕೆ : ಹಲಸಿನ ಮರ ಮತ್ತು ಮಾವಿನ ಮರದೊಂದಿಗೆ ವಿವಿಧ ಬಗೆಯ ತರಕಾರಿಗಳ ಬಳ್ಳಿಗಳು, ಸಂಪೂರ್ಣವಾಗಿ ತರಕಾರಿಗಳಿಂದಲೇ ನಿರ್ಮಿಸಿದ ವೇದಿಕೆಯು ಜನರ ಆಕರ್ಷಣೆಗೊಳಗಾಗಿ ಅನೇಕರು ತಮ್ಮ ಮೊಬೈಲಿನಲ್ಲಿ ಸೆಲ್ಪೀಯೊಂದಿಗೆ, ಗ್ರೂಪ್ ಫೋಟೋಗಳನ್ನು ತೆಗೆಯುವ ಟ್ರೆಂಡಿಂಗ್ ನಿರ್ಮಾಣವಾಗಿದ್ದು ವಿಶೇಷವಾಗಿತ್ತು. ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಪ್ರಸ್ತಾವನೆಗೈದರು. ಕಾರ್ಯಕ್ರಮ ನಿರ್ದೇಶಕ ಲತೀಶ್ ಕಾರ್ನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರುಗಳಾದ ನರೇಂದ್ರ ಕೆರೆಕಾಡು ಮತ್ತು ಮೋಹನ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಾಹ್ನವಿ ಮೋಹನ ಸುವರ್ಣ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!