ವಿಶ್ವ ಬಿಲ್ಲವ ಸಮುದಾಯದ ಯುವಶಕ್ತಿಯ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಬೆಳೆದು ನಿಂತಿರುವ ಯುವವಾಹಿನಿ ಸಂಘಟನೆ, ದೇಶದ ಯಾವುದೇ ಸಾಮುದಾಯಿಕ ಚೌಕಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳಲ್ಲೇ ಮುಂಚೂಣಿಯಲ್ಲಿರುವ ಬಲಿಷ್ಠ ಮತ್ತು ಶಿಸ್ತುಬದ್ಧ ಸಂಸ್ಥೆಯೆಂಬ ಕೀರ್ತಿಗೆ ಭಾಜನವಾಗಿದೆ.
ವಿದ್ಯೆ – ಉದ್ಯೋಗ- ಸಂಪರ್ಕ ಎಂಬ ಉದಾತ್ತ ಧ್ಯೇಯವಾಕ್ಯವನ್ನಿಟ್ಟುಕೊಂಡು ನಮ್ಮ ಹಿರಿಯರು 1989 ರಲ್ಲಿ ಸ್ಥಾಪಿಸಿದ ಯುವ ವಾಹಿನಿ ಪ್ರಸ್ತುತ 35 ಶಾಖೆಗಳ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲೂ ಹಬ್ಬಿ ನಿಂತಿದೆ. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕೀರ್ತಿ ಶಿಖರವಾಗಿ ಬೆಳಗುತ್ತಿರುವ ಯುವವಾಹಿನಿ ಪ್ರಸ್ತುತ ಜಗತ್ತಿನ ಮೂಲೆ ಮೂಲೆಯಲ್ಲಿರುವ ಸಮಾಜದ ಯುವಶಕ್ತಿಯನ್ನು ತನ್ನ ವೆಬ್ ಸೈಟ್ ಮೂಲಕ ತಲುಪಲು ಪ್ರಯತ್ನಿಸುತ್ತಿದೆ .
ಸಂಘಟನೆಯ ಪ್ರತೀ ಹೆಜ್ಜೆಗುರುತುಗಳೂ ಈ ವೆಬ್ ಪುಟಗಳಲ್ಲಿ ದಾಖಲಾಗುತ್ತಲೇ ಸಾಗುತ್ತಿದೆ. ಯುವವಾಹಿನಿಯ ಸದಸ್ಯ ಜಾಲ ಮಾತ್ರವಲ್ಲದೆ ಅದರಾಚೆಗೆ ಸಮಸ್ತ ಸಮಾಜಕ್ಕೆ ಸಂಘಟನೆಯ ಮುಖವಾಣಿಯಾಗಿ ನಮ್ಮ ವೆಬ್ ಸೈಟ್ ಕಾರ್ಯ ನಿರ್ವಹಿಸುತ್ತಿದೆ. ಪ್ರತೀ ಘಟಕಗಳಲ್ಲಿ ನಡೆಯುವ ಯುವಸಬಲೀಕರಣ ಕಾರ್ಯಗಳು, ಕೇಂದ್ರ ಸಮಿತಿಯ ಮೂಲಕ ನಡೆಯುವ ಉತ್ಕೃಷ್ಟ ಸೇವೆಗಳು, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ನಡೆಯುವ ಎಲ್ಲ ಮಾನವ ಕಲ್ಯಾಣ ಚಟುವಟಿಕೆಗಳಿಗೆ ಕನ್ನಡಿ ಹಿಡಿಯುವ ಕಾರ್ಯ ವೆಬ್ ಸೈಟ್ ಮೂಲಕ ನಡೆಯುತ್ತಿದೆ… ಮುಂದಕ್ಕೂ ನಡೆಯಲಿದೆ. ಇವತ್ತಿವರೆಗೂ ಈ ವೆಬ್ ಸೈಟನ್ನು ಅನುಸರಿಸಿಕೊಂಡು ಬರುತ್ತಿರುವ ಎಲ್ಲ ಗೌರವಾನ್ವಿತರನ್ನು ಮತ್ತೊಮ್ಮೆ ಈ ಮಾಹಿತಿಕೋಶಕ್ಕೆ ಸ್ವಾಗತಿಸುತ್ತಿದ್ದೇವೆ. ಮುಂದೆಯೂ ತಮ್ಮೆಲ್ಲ ಅಮೂಲ್ಯ ಸಲಹೆ, ಸಹಕಾರ ನಮ್ಮೊಂದಿಗಿರಲಿ. ಹತ್ತು ಸೇರುವಲ್ಲಿ ಮುತ್ತು ಎಂಬ ಮಾತಿನಂತೆ ಎಲ್ಲರೂ ಪರಸ್ಪರ ಕೈಜೋಡಿಸಿ ಸಂಘಟನೆಯಿಂದ ಬಲಯುತರಾಗೋಣ.. ವಿದ್ಯೆ- ಜ್ಞಾನದಿಂದ ಸ್ವತಂತ್ರರಾಗೋಣ.
ಜೈ ಯುವವಾಹಿನಿ
– ಉದಯಕುಮಾರ್ ಕೋಲಾಡಿ, ಜಾಲತಾಣ ಸಂಪಾದಕರು.
– ಯುವವಾಹಿನಿ ( ರಿ.) ಕೇಂದ್ರ ಸಮಿತಿ..ಮಂಗಳೂರು