ಯಡ್ತಾಡಿ : ಯುವವಾಹಿನಿ(ರಿ) ಯಡ್ತಾಡಿ ಘಟಕದ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆಸಿದ ಬೇಸಿಗೆ ಶಿಬಿರ, ವಿಕಸನ 2019 (ಅರಿವಿನ ತಂಗಾಳಿ) ರ ಅಂಗವಾಗಿ, ವಿದ್ಯಾರ್ಥಿಗಳಿಗೆ ಸ್ಥಳೀಯ ಸಾಧಕರ ಪರಿಚಯ ಮಾಡಿಸಿ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಫಲತೆಯೊಂದೇ ಸಾಧನೆಯ ಮಾನದಂಡವಾಗಿ ರೂಪುಗೊಳ್ಳುತ್ತಿದ್ದು, ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಳವಳಕಾರಿಯಾದ ಅಂಶವಾಗಿದೆ. ಶೈಕ್ಷಣಿಕ ಸಾಧನೆಗೆ ಹೊರತಾಗಿಯೂ ಶ್ರಮವಹಿಸಿ ದುಡಿದರೆ ಸಮಾಜದಲ್ಲಿ ಶ್ರೇಷ್ಠ ಸಾಧನೆ ಮಾಡಬಹುದೆಂಬ ವಿಷಯ ಮನವರಿಕೆ ಮಾಡಲು ಪ್ರತಿ ದಿನ ಒಬ್ಬೊಬ್ಬ ಸಾಧಕರನ್ನು ಪರಿಚಯಿಸಲಾಯಿತು.
ಕ್ಷಯ ರೋಗದಿಂದ ಊರಿಗೆ ಮರಳಿ ಬಂದು ಮತ್ತೆ ಮುಂಬಯಿಗೆ ಹೋಗಲಾಗದ ಶಿವರಾಮ ಕೊಠಾರಿ ಕಠಿಣ ದುಡಿಮೆಯಿಂದ ತಂಪು ಪಾನೀಯ ಉದ್ಯಮ ಆರಂಭಿಸಿದ ಕಥೆ, ಕೃಷಿ ಕೆಲಸದ ಆಸಕ್ತಿಯಿಂದ ವಿದ್ಯಾಭ್ಯಾಸ ಮೊಟಕು ಗೊಳಿಸಿದ ಸಂಕಯ್ಯ ಶೆಟ್ಟಿ ಜನರೊಡನೆಯ ಉತ್ತಮ ಬಾಂಧವ್ಯದಿಂದ ಉತ್ತಮ ಉದ್ಯಮಿಯಾಗಿ ಬೆಳೆದ ಕಥೆ, ಬಡತನದ ಬೇಗೆಯಿಂದ ಏಳನೇ ತರಗತಿಗೆ ಶಾಲೆ ಬಿಟ್ಟು ಹೋಟೆಲ್ ಕೆಲಸ ಸೇರಿದ ಕೃಷ್ಣ ನಾಯ್ಕ ಸೆಂಟ್ರಿಂಗ್ ಉದ್ಯಮದಲ್ಲಿ ತನ್ನತನವನ್ನು ಕಂಡು ಕೊಂಡ ಕಥೆ, ಊಟಕ್ಕಿಲ್ಲದೆ ನಾಲ್ಕನೇ ತರಗತಿಗೆ ಜಲ್ಲಿ ಕುಟ್ಟಲು ಶುರುಮಾಡಿದ ನಾರಾಯಣ ಪೂಜಾರಿಯವರು, ನಿರ್ಮಾಣ ಉದ್ಯಮದಲ್ಲಿ ಹಲವಾರು ಜನರಿಗೆ ಕೆಲಸ ಕೊಡಿಸಿ, ಇನ್ನು ಹಲವರನ್ನು ತಮ್ಮಂತೆಯೇ ಸ್ವಂತ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿದ ಕಥೆ. ಹೀಗೆ ಒಂದೊಂದು ದಿನ ಒಂದೊಂದು ಕಥೆ ವಿದ್ಯಾರ್ಥಿಗಳಲ್ಲಿ ಸಾಧನೆಯ ಹಿಂದಿರುವ ಕಠಿಣ ಶ್ರಮದ ಮಹತ್ವ ಮರೆಯದ ಹಾಗೆ ಉಳಿಯುವಂತೆ ಮಾಡಿತು. ಕೊನೆಯ ದಿನದ ಅತಿಥಿಯಾದ ಕೇಂದ್ರ ಸಮಿತಿಯ ಅಧ್ಯಕ್ಷ, ಜಯಂತ್ ನಡುಬೈಲು ಅವರ ರಾತ್ರಿ ಪಾಳಿಯ ಕಾವಲುಗಾರನಾಗಿ ವಿದ್ಯಾಭ್ಯಾಸ ಮುಗಿಸಿದ ಬಗೆ, ನೂರು ಕೋಳಿಗಳಿಂದ ಆರಂಭಿಸಿದ ಕೋಳಿ ಸಾಕಾಣಿಕಾ ಉದ್ಯಮವನ್ನು ತಿಂಗಳಿಗೆ ಎರಡು ಲಕ್ಷದವರೆಗೆ ದಾಟಿಸಿದ ರೋಚಕ ಕಥೆ ವಿದ್ಯಾರ್ಥಿಗಳನ್ನು ಮಂತ್ರ ಮುಗ್ದವಾಗಿಸಿ ಸಾಧನೆಯ ಛಲವನ್ನು ಮೂಡಿಸಿತು. ಕಠಿಣ ಶ್ರಮವಹಿಸಿ ದುಡಿಯುವ ಮನಸ್ಸಿರುವವರಿಗೆ ಸಾಧನೆಗೆ ಅಸ್ಸಾಧ್ಯವಾದುದು ಯಾವುದೂ ಇಲ್ಲವೆಂಬ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ನಿರೂಪಿಸುವ ಪ್ರಯತ್ನದಲ್ಲಿ ಯುವವಾಹಿನಿ(ರಿ) ಯಡ್ತಾಡಿ ಸಣ್ಣ ಹೆಜ್ಜೆಯೊಂದನ್ನು ಇಟ್ಟಿತು.
ಇದೊಂದು ಮಾದರಿ ಕಾರ್ಯಕ್ರಮ, ಅಭಿನಂದನೆಗಳು ಯಡ್ತಾಡಿ ಘಟಕ.