ಮಂಗಳೂರು: ಯುವವಾಹಿನಿ(ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ವತಿಯಿಂದ “ಆರೋಗ್ಯ ಮಂತ್ರ ಸೇವಾ ಯೋಜನೆ” ಅಂಗವಾಗಿ ನಗರದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಿನಾಂಕ 11.01.2022 ರಂದು ₹ 6.50 ಲಕ್ಷ ವೆಚ್ಚದ ಅತ್ಯಾಧುನಿಕ ಡಯಾಲಿಸಿಸ್ ಯಂತ್ರ ಹಸ್ತಾಂತರ ಮಾಡಲಾಯಿತು.
ಗರಿಷ್ಟ ಡಯಾಲಿಸಿಸ್ ಯಂತ್ರ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆ : ಶಾಸಕ ವೇದವ್ಯಾಸ ಕಾಮತ್
ಅಸತ್ರೆಯ ಸೆಮಿನಾರ್ ಹಾಲ್ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಗವಹಿಸಿದ್ದ ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ವೆನ್ಲಾಕ್ ಆಸ್ಪತ್ರೆಗೆ ಸೌಲಭ್ಯ ನೀಡುವಲ್ಲಿ ಸರಕಾರದ ಜತೆ ಸಂಘ ಸಂಸ್ಥೆಗಳು ಕೈಜೋಡಿಸುವ ಕೆಲಸ ಮಾಡುತ್ತಿವೆ. ಯುವವಾಹಿನಿ ಕೂಡ ಹಲವಾರು ವರ್ಷಗಳಿಂದ ಸಮಾಜ ಸೇವೆ ಯಲ್ಲಿ ತೊಡಗಿಸಿಕೊಂಡಿದೆ ಎಂದರು.
ವೆಸ್ಲಾಕ್ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆಸ್ಪತ್ರೆಯಲ್ಲಿ ಒಟ್ಟು 19 ಡಯಾಲಿಸಿಸ್ ಯಂತ್ರ ಗಳಿದ್ದು, ಅದರಲ್ಲಿ ಸರಕಾರ 10 ಯಂತ್ರಗಳನ್ನು ನೀಡಿದರೆ, ಸಂಘ ಸಂಸ್ಥೆಗಳು 9 ಡಯಾಲಿಸಿಸ್ ಯಂತ್ರ ಗಳನ್ನು ನೀಡುವ ಮೂಲಕ ಸಮಾಜದ ಒಳಿತಿಗೆ ಕೆಲಸ ಮಾಡುತ್ತಿವೆ.
ಸ್ಪಂದಿಸುವ ಕೆಲಸ ಆಗಲಿ : ಡಾ.ಭರತ್ ಶೆಟ್ಟಿ
ಮುಖ್ಯ ಅತಿಥಿಯಾಗಿದ್ದ ಶಾಸಕ ಡಾ.ವೈ. ಭರತ್ ಶೆಟ್ಟಿ ಮಾತನಾಡಿ, ಯುವವಾಹಿನಿ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ, ಸಮಾಜದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಆಗಲಿ ಎಂದು ಶುಭ ಹಾರೈಸಿದರು.
ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಸಂಘ ಸಂಸ್ಥೆಗಳು ಇಂತಹ ಸೇವೆಯನ್ನು ಮಾಡಿದಾಗ ಆಸ್ಪತ್ರೆಗಳು ಅಭಿವೃದ್ಧಿ ಹೊಂದಲು ಸಾಧ್ಯ, ಕೆಲವೊಂದು ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ದೇಣಿಗೆ ಪಡೆದು, ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡುತ್ತಿವೆ. ಆದರೆ ಯುವವಾಹಿನಿ ಅದಕ್ಕೆ ಭಿನ್ನವಾಗಿ ದುಡಿಮೆಯ ಹಣವನ್ನು ಮೀಸಲಿಟ್ಟು ಇಂತಹ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೆನ್ಲಾಕ್ ಆಸ್ಪತ್ರೆ ಡಿಎಂಒ ಡಾ. ಸದಾಶಿವ, ಮೂತ್ರ ರೋಗ ತಜ್ಞ ಡಾ. ಸದಾನಂದ ಪೂಜಾರಿ, ಎಸ್ತಾಗ್ ಸಂಜೀವಿನಿ ಲಿಮಿಟೆಡ್ ಆಡಳಿತಾಧಿಕಾರಿ ಹೃತಿಕ್, ಇಂಡಸ್ಕೇರ್ ಇಪ್ಮೆಂಟ್ಸ್ನ ಮಾಲಕ ಶ್ರೀನಿವಾಸ್ ಕೂಳೂರು, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಡು ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಕೂಳೂರು ವಂದಿಸಿ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.