ಮಂಗಳೂರು:- ಸ್ವಾತಂತ್ರ್ಯ ಅಮೃತ ಮಹೋತ್ಸವ 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮಂಗಳೂರು ಘಟಕವು, ಘಟಕದ ಸದಸ್ಯರಿಗೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ದಿನಾಂಕ 06 ನವೆಂಬರ್ 2022ರ ಭಾನುವಾರದಂದು ಯುವವಾಹಿನಿ ಸಭಾಂಗಣದಲ್ಲಿ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸಂಗೀತ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ಹರೀಶ್ ಕೆ. ಪೂಜಾರಿಯವರು ಮಾತನಾಡುತ್ತಾ ಸದಸ್ಯರಲ್ಲಿರುವ ಸೂಕ್ತ ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ಮಾದರಿ ಎಂದು ಅಭಿಪ್ರಾಯಪಟ್ಟರು.
ಸಂಗೀತ ಸ್ಪರ್ಧೆಯಲ್ಲಿ 9 ಮಕ್ಕಳು, 8 ಮಹಿಳೆಯರು ಮತ್ತು 19 ಘಟಕದ ಸದಸ್ಯರು ಭಾಗವಹಿಸಿದ್ದರು. ಅನುಭವಿ ತೀರ್ಪುಗಾರರಾದ ಚಂದ್ರಶೇಖರ್ ಮತ್ತು ವಿದ್ಯಾಶ್ರೀ ಅವರು ಸ್ಪರ್ಧೆಯ ತೀರ್ಪನ್ನು ನೀಡಿದ್ದು, ಎಲ್ಲಾ ಸ್ಪರ್ಧಿಗಳು ಉತ್ತಮವಾದ ಸ್ವರ ಮಾಧುರ್ಯವನ್ನು ಹೊಂದಿದ್ದು, ಇನ್ನಷ್ಟು ತರಬೇತಿಗಳನ್ನು ಪಡೆದು ಉತ್ತಮ ಗಾಯಕರಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ತೀರ್ಪುಗಾರರನ್ನು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕೇಂದ್ರ ಸಮಿತಿಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಜಗದೀಶ್ ಕುಮಾರ್ ರವರು ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ, ಸದಸ್ಯರೆಲ್ಲರೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಉತ್ತಮ ಗಾಯಕರು, ನಟರು, ಸಾಹಿತಿಗಳಾಗಿ ಒಳ್ಳೆಯ ಭವಿಷ್ಯವನ್ನು ಹೊಂದಲಿ ಎಂದು ಶುಭ ಹಾರೈಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೊತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಕುಮಾರ್ ರವರು ಸದಸ್ಯರು ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ ತಮ್ಮ ಆರೋಗ್ಯ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಅತ್ಯುತ್ತಮ ವೇದಿಕೆಯಾಗಿದೆಯೆಂದರು. ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ.ಕೋಡಿಕಲ್ ರವರು ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ, ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಘಟಕದಲ್ಲಿರುವ ಸದಸ್ಯರ, ಮಕ್ಕಳ ಹಾಗೂ ಮಹಿಳೆಯರ ವ್ಯಕ್ತಿತ್ವ ವಿಕಾಸನಕ್ಕಾಗಿ ಹಾಗೂ ಅವರ ಪ್ರತಿಭೆಗಳನ್ನು ಪ್ರಕಟಪಡಿಸುವುದಕ್ಕಾಗಿ ಕಳೆದ ಮೂರು ವರ್ಷಗಳಿಂದ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಇದರಲ್ಲಿ ಒಳ್ಳೆಯ ಸ್ಪಂದನೆಯನ್ನು ಪಡೆದಿದ್ದು, ಹೆಚ್ಚಿನ ಸದಸ್ಯರು ಉತ್ತಮ ಗಾಯಕರಾಗಿದ್ದಾರೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಘಟಕದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನೀರ್ದೇಶಕರು ಹಾಗೂ ಕಾರ್ಯಕ್ರಮದ ಸಂಚಾಲಕರಾಗಿರುವ ಸತೀಶ್ ಕೆ. ರವರು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸಿ, ಉತ್ತಮ ರೀತಿಯಲ್ಲಿ, ವ್ಯವಸ್ಥಿತವಾಗಿ ಸಮಯಕ್ಕೆ ಸರಿಯಾಗಿ ಎಲ್ಲಾ ಕಾರ್ಯಕ್ರಮಗಳು ನಡೆಯಲು ಸಹಕರಿಸಿದರು. ಸಂಗೀತ ಸ್ಪರ್ಧೆ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬರಲು ಸಹಕಾರವನ್ನು ನೀಡಿರುವ ಹಾಗೂ ತಮ್ಮ ಮದುವೆಯ ರಜತ ಮಹೋತ್ಸವವನ್ನು ಆಚರಿಸುತ್ತಿರುವ ಯೋಗೀಶ್ ಕುಮಾರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಗೇಶ್ ಅಮೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಅಶೋಕ್ ಅಂಜನ್ ಧನ್ಯವಾದ ಸಲ್ಲಿಸಿದರು.