ಸಮಾಜ ಕಾರ್ಯ (Social work) ಕ್ಷೇತ್ರದ ವಿಷಯ ತಜ್ಞೆಯಾಗಿದ್ದು, ಅಧ್ಯಾಪನದೊಂದಿಗೆ ನಿರಂತರ ಅಧ್ಯಯನ, ಕ್ಷೇತ್ರ ಕಾರ್ಯ ಮಾಡುತ್ತಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಡಾ| ಮಧುಮಾಲ ಒರ್ವ ಅಪೂರ್ವ ಸಾಧಕಿ, ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗ (social work Dept.)ದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಜನರನ್ನು ಜಾಗೃತಿಗೊಳಿಸುವ ಲೇಖನಗಳಿಂದ ಪ್ರಸಿದ್ಧಿ ಪಡೆದ ಇವರ ಮಹಿಳಾ ಸಮಾಜ ಸಂಬಂಧಿತ ವಿಚಾರಧಾರೆಗಳು, ಭಾಷಣಗಳು ಚಿಂತನಶೀಲವಾಗಿದೆ. ಸುಮಾರು ೩೦೦ಕ್ಕೂ ಮಿಕ್ಕಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಲ್ಲದೆ ಹತ್ತು ಹಲವು ನಾಯಕತ್ವ ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿರುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕಿಯಾಗಿ, ಪ್ರಾಥಮಿಕ, ಪ್ರೌಢ ಶಾಲೆಗಳ ಪೋಷಕರ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಮೂಡಬಿದ್ರೆ ಬಿಲ್ಲವ ಸಂಘಟನೆಗೆ ಕಾಲ ಕಾಲಕ್ಕೆ ಸಮಯೋಚಿತ ಸಲಹೆಗಾರ್ತಿಯಾಗಿ, ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಭುದ್ಧ ಚಿಂತನೆಗಳ ಪ್ರಬಂಧ ಮಂಡನೆ ಮಾಡಿ ಪ್ರಸಿದ್ಧರಾಗಿದ್ದಾರೆ. ಓರ್ವ ವಿಷಯ ತಜ್ಞೆಯಾಗಿ ಹಲವು ಸರಕಾರೇತರ ಸಂಸ್ಥೆಗಳಲ್ಲಿ ದುಡಿ ದಿರುವ ಇವರು ಓರ್ವ ಸಮಾಜಮುಖಿ ಚಿಂತಕಿ.
ಇವರು ದಕ್ಷಿಣ ಕನ್ನಡದ ಬುಡಕಟ್ಟು ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ಸಬಲೀಕರಣ ಪ್ರಕ್ರಿಯೆ ಎಂಬ ವಿಷಯದಲ್ಲಿ ಬ್ರಹ್ಮಾವರ ಎಸ್.ಎಮ್.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ರವೀಂದ್ರ ನಾಥ್‌ರವರ ಮಾರ್ಗದರ್ಶನದಲ್ಲ ಅಧ್ಯಯನ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾನಿಯಲಯವು ಪಿಎಚ್‌ಡಿ (Ph.D) ಪದವಿ ನೀಡಿದೆ.
ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿ ಶ್ರೀಯುತ ದಾಮೋದರ್ ಹಾಗೂ ದಿ| ಜಲಜರವರ ಸುಪುತ್ರಿಯಾಗಿರುವ ಡಾ| ಮಧುಮಾಲ ಟ್ರಾವೆಲ್ ಏಜೆನ್ಸಿ ಉದ್ಯೋಗಿ ಶ್ರೀ ಗೋಪಾಲ್‌ರವರ ಧರ್ಮಪತ್ನಿ. ಒಬ್ಬಳೇ ಮಗಳು 10ನೇ ತರಗತಿಯಲ್ಲಿ ಕಲಿಯುತ್ತಿರುವ ಭೂಮಿಕಾ. ಇವರ ಶೈಕ್ಷಣಿಕ ಸಾಧನೆ ಮತ್ತು ಸಮಾಜಕಾರ್ಯ ಚಟುವಟಿಕೆಗಳಿಗೆ ಯುವವಾಹಿನಿಯ ಗೌರವ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ಭವಿಷ್ಯದ ಯಶಸ್ಸಿಗೆ ಶುಭ ಹಾರೈಸುತ್ತದೆ.