ಯುವಸಿಂಚನ ಓದುಗ ಮಿತ್ರರೇ,
ಒಂದು ಪೇಟೆಯಲ್ಲಿ ಚಿನ್ನದ ಅಂಗಡಿ ಮತ್ತು ಕಬ್ಬಿಣದ ಅಂಗಡಿ ಅಕ್ಕಪಕ್ಕದಲ್ಲಿ ಇದ್ದವು. ಒಂದು ದಿನ ಚಿನ್ನದ ತುಂಡೊಂದು ಕಬ್ಬಿಣದ ಅಂಗಡಿಯ ಮುಂದೆ ಬಂದು ಬಿದ್ದವು. ಇದನ್ನು ಕಂಡು ಕಬ್ಬಿಣ ಚಿನ್ನದ ಬಳಿ ಕೇಳತ್ತೆ ಚಿನ್ನಕ್ಕ ಚಿನ್ನಕ್ಕ ನೀನೇಕೆ ಇಲ್ಲಿಗೆ ಬಂದಿದ್ದೀಯಾ ? ಇದಕ್ಕೆ ಚಿನ್ನ ಉತ್ತರಿಸುತ್ತೆ ಕಬ್ಬಿಣ್ಣಕ್ಕ ಅಲ್ಲಿ ನನ್ನನ್ನು ಬಡಿಯುತ್ತಿದ್ದಾರೆ ಅದರ ನೋವು ತಾಳದೇ ಇಲ್ಲಿಗೆ ಬಂದಿದ್ದೇನೆ. ಇದನ್ನು ಕಂಡು ಕಬ್ಬಿಣ ನಗುತ್ತಾ ಹೇಳತ್ತೆ ಅಯ್ಯೋ ಚಿನ್ನಕ್ಕ ಹೊಡೆತ ಯಾರಿಗೇ ತಾನೇ ಇಲ್ಲ ಎಲ್ಲರಿಗೂ ಇದ್ದದ್ದೇ, ಅಲ್ಲಿ ನಿನ್ನನ್ನು ಇನ್ಯಾರೋ ಹೊಡೆಯುತ್ತಿದ್ದಾರೆ (ಚಿನ್ನವನ್ನು ಕಬ್ಬಿಣದ ಸುತ್ತಿಗೆಯಿಂದ ಬಡಿಯುತ್ತಾರೆ) ಆದರೆ ಇಲ್ಲಿ ನೋಡು ನನ್ನನ್ನು ನನ್ನವರೇ ಬಡಿಯುತ್ತಿದ್ದಾರೆ (ಕಬ್ಬಿಣವನ್ನು ಕಬ್ಬಿಣದಿಂದಲೇ ಬಡಿಯುತ್ತಾರೆ) ಅಷ್ಟಕ್ಕೂ ನಿನ್ನನ್ನು ಎಷ್ಟು ಬಡಿಯುತ್ತಾರೋ ನೀನು ಅಷ್ಟು ಮಡಿ ಆಗ್ತಿ, ಆದರೆ ನನ್ನನ್ನು ಎಷ್ಟು ಬಡಿಯುತ್ತಾರೋ ನಾನಷ್ಟು ಪುಡಿಯಾಗುತ್ತೇನೆ. ಹೌದು ಬಂಧುಗಳೇ ಕಲ್ಲಿಗೆ ಏಟು ಬಿದ್ದಾಗ ಮಾತ್ರ ಅದು ಶಿಲೆಯಾಗತ್ತೆ ಎನ್ನುತ್ತಾರೆ ಆದರೆ ಆ ಕಲ್ಲಿಗೆ ಬೀಳುವುದು ಉಳಿ ಏಟೇ ಹೊರತು ಕಲ್ಲಿನ ಏಟಲ್ಲ. ಈ ಜೀವನವೇ ಹಾಗೇ ಬಂಧುಗಳೇ ಮತ್ತೊಬ್ಬರ ಎದಿರೇಟಿಗೆ ನಾವು ಬಲಿಷ್ಠರಾಗುತ್ತೇವೆಯೇ ಹೊರತು ನಮ್ಮವರ ಎದಿರೇಟಿಗೆ ಅಲ್ಲ, ನಮ್ಮವರ ಹೊಡೆತ ನಮ್ಮನ್ನು ಕುಗ್ಗಿಸುತ್ತೆ ನಮ್ಮ ಸಮಾಜ ಇಂದು ಒಗ್ಗಟಾಗಲು ಹೆಣಗಾಡುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣವೂ ಇದಾಗಬಹುದು.
ಲೆಕ್ಕಕ್ಕೆ ನಿಲುಕದಷ್ಟಿರುವ ಸಂಘಟನೆಗಳು, ತಾವೂ ಏರದೆ ಮತ್ತೊಬ್ಬರನ್ನೂ ಏರಲು ಬಿಡದೇ ಎಳೆದಾಟದ ನಡುವೆ ಕಾಲ ಕಳೆಯುತ್ತಿದ್ದೇವೆ. ನಮಗಿಂದು ಬಲಿಷ್ಠ ಯುವ ಸಂಘಟನೆಯ ಅಗತ್ಯತೆ ಇದೆ. ಅಂತಹ ಒಂದು ಸಂಘಟನೆ ಹುಟ್ಟಿ 31 ವರುಷ ಕಳೆದಿದೆ. ಇಂದು ಅದರ ಅಗತ್ಯತೆ ಮನೆ ಮಾತಾಗಿದೆ. ಯುವ ಮನಸು ವಾಹಿನಿಯಂತೆ ಹರಿಯಬೇಕು ಅನ್ನುವ ಅಂದಿನ ಸಂಕಲ್ಪ ಮತ್ತು ಆಶಯ ಇಂದು ಕೈಗೂಡುತ್ತಿದೆ. ಊರು ಊರು ಗ್ರಾಮ ಗ್ರಾಮದಿಂದ ಯುವವಾಹಿನಿಗೆ ಆಮಂತ್ರಣ ಬರುತ್ತಿದೆ. ಸಮಾಜ ಬಲಿಷ್ಠವಾಗುವ ಕಾಲ ಸನ್ನಿಹಿತವಾಗಿದೆ. ಇಂತಹ ದಿನದಲ್ಲಿ ನಮ್ಮ ಸಂವಹನ ಮಾಧ್ಯವ ಯುವಸಿಂಚನ ಮನೆ ಮನೆ ತಲುಪಬೇಕಿದೆ. ಯುವವಾಹಿನಿಯ ಪ್ರತಿಯೊಂದು ಕೆಲಸ ಕಾರ್ಯವು ದಾಖಲೀಕರಣಗೊಳ್ಳಬೇಕಿದೆ ದಾಖಲೀಕರಣದ ಒಮ್ಮೊಮ್ಮೆ “ನಾನು” ಕಳೆದುಹೋಗಬಹುದು, ಕಳೆದುಹೋಗದಂತೆ “ನಾವು” ಎಚ್ಚರವಹಿಸೋಣ, ಏಕೆಂದರೆ ಕೊಂಡಿ ಕಳಚುವುದು ಸುಲಭ ಬೆಸೆಯುವುದು ಕಷ್ಟ. ನಮ್ಮಲ್ಲಿ ಕತ್ತರಿಗಳಿಗೆ ಬರವಿಲ್ಲ, ಬರ ಇರುವುದು ಸೂಜಿಗೆ ಮಾತ್ರ. ಯುವಸಿಂಚನ ಒಂದು ಸೂಜಿಯಂತೆ ಅದು ಎಲ್ಲರನ್ನೂ ಎಲ್ಲವನ್ನೂ ಬೆಸೆಯುತ್ತದೆ. ಶ್ರೀರಾಮನಿಂದಲೂ ತಪ್ಪಾಗಿದೆ, ಶ್ರಿಕೃಷ್ಣನಿಂದಲೂ ತಪ್ಪಾಗಿದೆ. ತಪ್ಪನ್ನು ಸೂಚಿಸುವ ಪರಿ ಒಪ್ಪುವಂತಿರಬೇಕು. ಹಾಗಾದಾಗ ಎಲ್ಲರೂ ಎಲ್ಲವೂ ಬದಲಾಗುತ್ತದೆ. ಯುವವಾಹಿನಿ ಮಂಥನದಿಂದ ಹುಟ್ಟಿಕೊಂಡ ಸಂಸ್ಥೆ. ಇಲ್ಲಿನ ಎಲ್ಲಾ ನಿರ್ಧಾರಗಳೂ ಮಥಿಸಿದಾಗ ಹೊರ ಬರುವ ಅಮೃತದಂತೆ, ಹಾಗಾಗಿ ಅದು ಇಂದಿಗೂ ಶಾಶ್ವತವಾಗಿದೆ. ನಾವೆಲ್ಲ ಮುಂದೆಯು ಇದೇ ನಿರ್ಧಾರ ತಳೆಯೋಣ. ಯುವಸಿಂಚನ ಈ ಬಾರಿಯೂ ಪರಿಪಕ್ವವಾಗಿ ಮೂಡಿ ಬಂದಿದೆ. ಕಾರಣ 33 ಘಟಕಗಳೂ ತ್ರಾಸ ನೀಡದೆ ಸಹಕಾರ ನೀಡಿದ್ದಾರೆ. ಅವರವರ ಕಾರ್ಯಕ್ರಮದ ವರದಿಗಳು ಸಕಾಲದಲ್ಲಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪ್ರಚಾರ ನಿರ್ದೇಶಕರನ್ನು ಅಭಿನಂದಿಸುತ್ತೇನೆ. ಅಂತೆಯೇ ನನ್ನ ಕೆಲಸ ಕಾರ್ಯದಲ್ಲಿ ನಾವು ನಿಮ್ಮ ಜತೆ ಯಾವಾಗಲೂ ಇದ್ದೇವೆ ಎಂದು ಬೆನ್ನೆಲುಬಾಗಿ ನಿಂತ ಸಂಪಾದಕೀಯ ಮಂಡಳಿ, ನನ್ನ ಜತೆ ಕೈಜೋಡಿಸಿದ ಕೇಂದ್ರ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಪುಟ ವಿನ್ಯಾಸಗೊಳಿಸಿದ ದಿನಕರ್ ಡಿ.ಬಂಗೇರಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯುವವಾಹಿನಿಯಲ್ಲಿ ಎಂದೆಂದಿಗೂ ಜೊತೆಗಾರರಾಗಿರೋಣ ಎಂದು ಆಶೀಸುತ್ತೇನೆ. ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.
– ಸಂಪಾದಕ