ಒಮ್ಮೆ ಸೂರ್ಯ ಕೇಳಿದನಂತೆ ನಾನು ಮಾಡುವ ಕೆಲಸ ಯಾರು ಮಾಡ ಬಲ್ಲಿರಿ’ ಎಂದು, ಆಗ ಭೂಮಿಯೂ ಸೇರಿ ಎಲ್ಲವೂ ಸ್ತಬ್ದವಾಗಿತ್ತು ಚಿತ್ರಪಟದಂತೆ. ಅಷ್ಟರಲ್ಲಿ ಭೂಮಿಯಲ್ಲಿದ್ದ ಪುಟ್ಟ ಹಣತೆಯೊಂದು ಹೇಳಿತು. ಸೂರ್ಯ ನೀನು ಮಾಡುವ ಕೆಲಸ ನಾನು ಮಾಡಬಲ್ಲೆನು ಎಂದು. ಹೌದು ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಯುಗಯುಗಗಳು ಸೇರಿ ಮಹಾಯುಗವಾಗುವಂತೆ ಶಕ್ತಿಗಳ ಕ್ರೋಡೀಕರಣ ಅಶ್ವಶಕ್ತಿಯ ಹುಟ್ಟಿಗೆ ಕಾರಣವಾಗುತ್ತದೆ. ಇಂದು ಯುವವಾಹಿನಿಯಲ್ಲೂ ಇದೇ ನಡೆದು ಹೋಗಿದೆ. ಸೂರ್ಯನೇ ನಾಚುವಂತಹ ಸೇವಾ ದೀವಿಗೆಯನ್ನು ನಮ್ಮ ಘಟಕಗಳು ಹಚ್ಚಿದೆ. ಯಡ್ತಾಡಿಯಿಂದ ಬೆಂಗಳೂರಿನವರೆಗೆ ಬೆಳಗುತ್ತಿರುವ ನಂದಾದೀಪಗಳು ನಮ್ಮ ಸಮಾಜವನ್ನು ಕತ್ತಲೆಯಿಂದ ಬೆಳಕಿನತ್ತ ನಡೆಸಿದೆ. ಹಾಗಾಗಿ ನನಗಿಂದು ಯುವ ಸಿಂಚನ ಮಹಾ ಗ್ರಂಥದಂತೆ ಕಾಣುತ್ತಿದೆ.
ಇಲ್ಲಿ ನಾವು ಮಾಡಿದ ನೂರಾರು ಕೆಲಸಗಳು ಭದ್ರವಾಗಿದೆ ಮತ್ತು ಮೂರು ಸಾವಿರ ಮನೆಗಳನ್ನು ತಲುಪಲಿವೆ ಹತ್ತು ಸಾವಿರಕ್ಕೂ ಅಧಿಕ ಓದುಗರ ಮನ ಸೇರಲಿದೆ, ಈ ಒಂದು ಸಂತೃಪ್ತಿ ನಮ್ಮದಾಗಿದೆ. ಈ ಸಂಚಿಕೆ ನಿಮ್ಮ ಕೈಗಿಡುವ ವೇಳೆ ಒಂದು ಮಹಾ ಗ್ರಂಥವನ್ನು ಸಿದ್ಧಪಡಿಸಿದ ಅನುಭವವಾಗುತ್ತಿದೆ, ಅಂಕಣ,ಲೇಖನ, ಕಥೆ, ಕವನಗಳಿಗೆ ಜಾಗ ಕಾಯ್ದಿರಿಸಬೇಕು ಎನ್ನುವ ಹಂಬಲ ಇಲ್ಲಿ ದೂರವಾಗಿದೆ, ಏಕೆಂದರೆ ನಮ್ಮ 33 ಕುಟುಂಬಗಳ ನಿರಂತರ ಕಾರ್ಯಕ್ರಮಗಳಿಂದಾಗಿ ಅವುಗಳಿಗಾಗಿ ಜಾಗ ಮೀಸಲಿಡುವುದೇ ಕಷ್ಟವಾಗಿದೆ. ಒಮ್ಮೆಗೆ 60 ಪುಟ ಸಾಕು ಎನ್ನುವ ಚಿಂತನೆ ನಮ್ಮದಾಗಿತ್ತು, ಆದರೆ ಘಟಕಗಳಿಂದ ಬರುತ್ತಿದ್ದ ವರದಿಗಳಲ್ಲಿ ಯಾವುದನ್ನೂ ಬದಿಗೆ ಸರಿಸುವಂತಿಲ್ಲ, ಎಲ್ಲಾ ಕೆಲಸಗಳೂ ಉತ್ತಮವಾದುದೇ ಹಾಗಾಗಿ 60 ರಿಂದ 70 ಪುಟ ಅಲ್ಲಿಯೂ ಜಾಗ ಸಾಲದೆ 88 ಪುಟಗಳಿಗೆ ಏರಿಕೆ ಮಾಡುವ ಅನಿವಾರ್ಯತೆ ಬಂದಿದೆ.
ಮಾಡಿದ ಕೆಲಸ ಮರೆಯುತೇವೆ, ಹೇಳಿದ ಮಾತೂ ನೆನಪಲ್ಲಿ ಉಳಿಯದೇ ಹೋಗಬಹುದು, ಆದರೆ ಅಳಿವಿಲ್ಲದೆ ಉಳಿದು ನಮ್ಮ ಕೆಲಸ ಕಾರ್ಯಗಳನ್ನು ಸದಾ ಹಸಿರಾಗಿಸುವ ಶಕ್ತಿ ಇರುವುದು ಅದು ಬರಹಕ್ಕೆ ಮಾತ್ರ. ಹಾಗಾಗಿ ವಿಜ್ಞಾನ ಯುಗವಾದ ಇಂದಿನ ದಿನದಲ್ಲೂ ಅಕ್ಷರ, ಎಲ್ಲರ ಐಶ್ವರ್ಯವಾಗಿದೆ. ಸಾಧನೆಗಳ ದಾಖಲೀಕರಣ ಎನ್ನುವುದು ಸಾಧನೆಯಾಗಿದೆ.
ದಾಸರ ನಡುವೆ ಒಮ್ಮೆ ಚರ್ಚೆ ನಡೆಯಿತಂತೆ ನಮ್ಮಲ್ಲಿ ಯಾರು ದೇವರ ಬಳಿಗೆ ಹೋಗ ಬಹುದು ಎಂದು ಆಗ ಅಲ್ಲಿದ್ದ ಕನಕದಾಸರು ಹೇಳಿದರಂತೆ `ನಮ್ಮೊಳಗೆ ನಾನು ಹೋದರೆ ಹೋದೇನು’ ಎಂದು, ಅಷ್ಟರಲ್ಲಿ ಎಲ್ಲರೂ ಅವರನ್ನು ದುರುಗುಟ್ಟಿ ನೋಡಿದರು, ಆದರೆ ವಾಸ್ತವವಾಗಿ ದಾಸರು ಹೇಳಿದ್ದು ನಮ್ಮೊಳಗೆ ಇರುವ ನಾನು ಎಂಬುವುದು ಹೋದರೆ ನಾವು ಹೋಗ ಬಹುದು ಎಂದು, ನಮ್ಮೊಳಗೆ ನಾನು ಎನ್ನುವ ಅಹಂ ಸೇರಿ, ನಮ್ಮತನವನ್ನು ಬಲಿ ಪಡೆಯುತ್ತಿದೆ, ಅಹಂ ಅತ್ತಗಿರಲಿ ಇಹಂ ಇತ್ತಗಿರಲಿ ಆಗ ಸರ್ವಂ ಸುಖಮಯವಾಗುವುದು ಎನ್ನುವುದನ್ನು ಉಚ್ಚರಿಸುತ್ತಾ. ಎಂದಿನಂತೆ ಈ ಬಾರಿಯೂ ಸಕಾಲದಲ್ಲಿ ವರದಿಗಳನ್ನು ನೀಡಿದ ಎಲ್ಲಾ ಘಟಕಗಳನ್ನೂ ಅಭಿನಂದಿಸುತ್ತೇನೆ,ಸಹಕಾರ ನೀಡಿದ ನರೇಶ್ ಕುಮಾರ್ ಸಸಿಹಿತ್ಲು, ಸಾಧು ಪೂಜಾರಿ ಹಾಗೂ ಅಕ್ಷರ ಅಚ್ಚುಕಟ್ಟಾಗಿ ಮುದ್ರಿಸಿ ವಿನ್ಯಾಸಗೊಳಿಸಿದ ದಿನಕರ್ ಬಂಗೇರಾ ಅವರಿಗೂ ಪೋಸ್ಟಿಂಗ್ ನಲ್ಲಿ ಸಹಕಾರ ನೀಡಿದ ಸಂಪಾದಕೀಯ ಮಂಡಳಿಯ ಸದಸ್ಯರು, ಯುವವಾಹಿನಿ ಬಂಧುಗಳಿಗೆ ವಂದಿಸುತ್ತಾ, ಮುಂದಿನ ಸಂಚಿಕೆಯಲ್ಲಿ ಜೊತೆಯಾಗೋಣ ಎಂದು ಆಶಿಸಿ ಮಾತು ಮುಗಿಸುತ್ತೇನೆ
ನಿಮ್ಮ ಮನದಾಳದ ಮಾತು ಸುಂದರ ವಾಗಿ ಮೂಡಿ ಬಂದಿದೆ ರಾಜೇಶ್ ಸರ್…ಜೈ ಯುವವಾಹಿನಿ