ಸಾಮಾಜಿಕ ಕ್ಷೇತ್ರದ ಸಾಧಕ ಶ್ರೀ ಧರಣೇಂದ್ರ ಕುಮಾರ್
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಜೆ ಮನೆತನದ ದಿ. ಬಾಬು ಪೂಜಾರಿ ಮತ್ತು ಶ್ರೀಮತಿ ಸಿರಿಯಮ್ಮ ದಂಪತಿಯರ ಸುಪುತ್ರನಾಗಿ ಜನನ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯಲ್ಲಿ ಹಾಗೂ ಪ್ರೌಢಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಕಾಲೇಜು ಸಿದ್ಧಕಟ್ಟೆಯಲ್ಲಿ ಮುಗಿಸಿ ವೃತ್ತಿ ಜೀವನವನ್ನು ಕೃಷಿಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಸೇವೆಯನ್ನು ಮೈಗೂಡಿಸಿಕೊಂಡು ಫ್ರೆಂಡ್ಸ್ ಕ್ಲಬ್ (ರಿ.) ಹೊಸಂಗಡಿ ಇದರ ಸದಸ್ಯರಾಗಿ ಅಧ್ಯಕ್ಷರಾಗಿ ಶೈಕ್ಷಣಿಕ ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಈ ಅವಧಿಯಲ್ಲಿ ಫ್ರೆಂಡ್ಸ್ ಕ್ಲಬ್ ಅನೇಕ ಪ್ರಶಸ್ತಿಯನ್ನು ಪಡೆದು ತಾಲೂಕು ಜಿಲ್ಲೆ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಫ್ರೆಂಡ್ಸ್ ಕ್ಲಬ್ ಎಂಬ ಪ್ರಶಸ್ತಿ ಪಡೆಯಲು ಕಾರಣೀಕರ್ತರಾಗಿದ್ದಾರೆ. ತಾಲೂಕು ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ತಾವು ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿ ತನ್ನ ದಕ್ಷ ನಾಯಕತ್ವದಲ್ಲಿ ತಮ್ಮ ಕ್ಷೇತ್ರವನ್ನು ಬೆಳಗಿಸಿದ್ದಾರೆ. ಸತತ 2 ಅವಧಿಗೆ ನಾರಾವಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿ ಒಂದು ಅವಧಿಗೆ ಉಪಾಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಸದಸ್ಯರಾಗಿ ಅಧ್ಯಕ್ಷರಾಗಿ ತಾಲೂಕಿಗೆ ಅತಿ ಹೆಚ್ಚು ಅನುದಾನ ಒದಗಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಾವು ಅಪರೂಪದ ರಾಜಕಾರಣಿಯಾಗಿ ಎಲ್ಲಾ ಧರ್ಮಗಳ ರಾಯಭಾರಿಯಾಗಿ, ನೊಂದವರ ಪಾಲಿನ ಧ್ವನಿಯಾಗಿ ಹೊಸಂಗಡಿ ಗ್ರಾಮ ಪಂಚಾಯತ್‍ಗೆ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರ, ಶಿವರಾಮ ಕಾರಂತ ಪ್ರಶಸ್ತಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಲು ಕಾರಣೀಕರ್ತರಾಗಿರುವಿರಿ. ಹೊಸಂಗಡಿ ಕಾಶಿಪಟ್ಣ, ಮರೋಡಿ, ಪೆರಾಡಿ ಗ್ರಾಮಗಳ ಅಭಿವೃದ್ದಿಯ ರೂವಾರಿಯಾಗಿ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಪ್ರಸ್ತುತ ಇದರೊಟ್ಟಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ತಮಗೆಲ್ಲರಿಗೂ ಹೆಮ್ಮೆಯ ವಿಚಾರ. ತಮ್ಮ ಈ ಎಲ್ಲಾ ಸಮಾಜ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ 2017ನೇ ವರ್ಷದ ರಾಷ್ಟ್ರೀಯ “ಬಸವ ರತ್ನ ಪ್ರಶಸ್ತಿ” ಪಡೆದು ನಮ್ಮ ಊರಿಗೆ ಕೀರ್ತಿಯನ್ನು ತಂದು ಕೊಟ್ಟು ಮೇಧಾವಿ ಬೆಳ್ತಂಗಡಿ ಯುವವಾಹಿನಿ ಘಟಕದ ಸ್ಥಾಪಕ ಸಲಹೆಗಾರರಾಗಿರುತ್ತಾರೆ. ತಮ್ಮ ಈ ಎಲ್ಲಾ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ತಮ್ಮ ಧರ್ಮಪತ್ನಿ ಶ್ರೀಮತಿ ಶಮಿತರವರು. ತಮಗೆ ಶ್ರದ್ಧಾ ಡಿ.ಎಸ್. ಹಾಗೂ ಸಾತ್ವಿಕ್ ಡಿ.ಎಸ್. ಇಬ್ಬರು ಮಕ್ಕಳಿದ್ದು ಸುಖೀ ಜೀವನ ನಡೆಸುತ್ತಿದ್ದಾರೆ.
ತಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸುತ್ತಾ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ತಮಗೆ ‘ಯುವವಾಹಿನಿ ಯುವ ಸಾಧನಾ’ ಪುರಸ್ಕಾರ ನೀಡಿ ಗೌರವಿಸಲು ಸಂತೋಷವಾಗುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ
, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು