ಕೆಂಜಾರು-ಕರಂಬಾರು: ಧಾರ್ಮಿಕತೆ ಎಂಬುವುದು ಜನಜೀವನದ ಭಾಗ. ವಸ್ತುವಿನಲ್ಲಿ ವಿವಿಧ ನೆಲೆಯ ಗುಣಮಟ್ಟ ಇರುವಂತೆ ಧಾರ್ಮಿಕತೆಯಲ್ಲಿಯೂ ಉತ್ತಮ,ಉನ್ನತ ಹಾಗೂ ದುರ್ಬಲ ಎಂಬ ಮೂರು ಗುಣಮಟ್ಟವಿದೆ. ಉತ್ತಮ ಹಾಗೂ ಉನ್ನತ ಧಾರ್ಮಿಕತೆಯ ಪಾಲಕರು ಫಲಾನುಭವಿಗಳಾಗಬೇಕು. ದುರ್ಬಲ ಧಾರ್ಮಿಕತೆಯಿಂದ ಯುವಜನತೆಯನ್ನು ಪಾರುಗೊಳಿಸುವ ಹೊಣೆ ಯುವವಾಹಿನಿಗಿರಲಿ. ಒಂದು ವರ್ಷದ ಅವಧಿಯಲ್ಲಿ ಅಲ್ಪಾವಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಚಿಂತನೆ ಸಹಜವಾಗಿ ನೂತನ ಪದಾಧಿಕಾರಿಗಳಿಗಿರುತ್ತದೆ. ಅಲ್ಪಾವಧಿಯೊಂದಿಗೆ ದೂರದೃಷ್ಟಿಯ ಕಾರ್ಯಕ್ರಮಗಳಿಗೂ ಆದ್ಯತೆ ಇರಲಿ. ಸಂಘಟನೆ ಸ್ವರೂಪ ಮತ್ತು ಕಾರ್ಯಕ್ರಮದ ವೈವಿಧ್ಯಕ್ಕೆ ಯುವವಾಹಿನಿ ನಾಡಿಗೆ ಮಾದರಿ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕ ಯೋಗೀಶ್ ಕೈರೋಡಿರವರು ತಿಳಿಸಿದರು.
ಅವರು ದಿನಾಂಕ 18.02.2024 ರಂದು ಕೆಂಜಾರು ಕರಂಬಾರು ಶ್ರೀ ದೇವಿ ಭಜನಾ ಮಂದಿರದಲ್ಲಿ ಯುವವಾಹಿನಿ ಕೆಂಜಾರು ಕರಂಬಾರು ಘಟಕದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕೆಂಜಾರು ಕರಂಬಾರು ಘಟಕದ ಅಧ್ಯಕ್ಷರಾದ ಭರತೇಶ್ ಪೂಜಾರಿಯವರು ವಹಿಸಿದ್ದರು.
ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ಬಿಲ್ಲವ ಸಂಘ ಬಜಪೆ-ಕರಂಬಾರು ಅಧ್ಯಕ್ಷರು ಶಿವರಾಮ್ ಪೂಜಾರಿಯವರು ನೆರವೇರಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್.ಕೆ .ಪೂಜಾರಿ ನೂತನ ಕಾರ್ಯಕಾರಿ ಸಮಿತಿಗೆ ಪದಪ್ರದಾನ ಮಾಡಿದರು.
ಬಿಲ್ಲವ ಸಂಘ ತೋಕೂರು-ಕೆಂಜಾರು ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ, ಶೇಖರ್ ಬಂಗೇರ ಅಧ್ಯಕ್ಷರು ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು, ನೂತನ ಅಧ್ಯಕ್ಷರಾದ ವಿನೋದ್ ಅರ್ಬಿ ಹಾಗೂ ಪ್ರಧಾನ ಕಾರ್ಯದರ್ಶಿ ರೂಪೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ,ವಿದ್ಯಾನಿಧಿ ವಿತರಣೆ
ರಾಷ್ಟ್ರಪತಿ ಸೇವಾ ಪದಕ ಪಡೆದ ಬಜಪೆ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ರಾಮ ಪೂಜಾರಿ ಮೇರಮಜಲು ಹಾಗೂ ಉದ್ಯಮಿ ನಾರಾಯಣ ಪೂಜಾರಿ ಬೊಗೋರಿದಡಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.
ಘಟಕದ ಮಾಜಿ ಅಧ್ಯಕ್ಷರಾದ ಜಿತೇಶ್ ಸಾಲ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೂಪೇಶ್ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಶ್ರೀ ದೇವಿ ಭಜನಾ ಮಂದಿರದ ಅರ್ಚಕರು ಲೋಕೇಶ್ ಪೂಜಾರಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು
ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಸ್ಥಾಪಕ ಅಧ್ಯಕ್ಷರು ನಿರೂಪಿಸಿದರು. ನೂತನ ಕಾರ್ಯದರ್ಶಿ ಧನ್ಯವಾದಗೈದರು.