ಕೊಲ್ಯ: ಈ ಭೂಮಿ ಮೇಲೆ ಪ್ರಕೃತಿ ನಮಗೆ ತಾಯಿ ಇದ್ದಂತೆ, ನಮ್ಮ ಮನೆಯಲ್ಲಿ ನಮ್ಮ ಅಮ್ಮನನ್ನು ಆರೈಕೆ ಮಾಡುವಂತೆ ನಾವು ಗಿಡ ಮರಗಳನ್ನು ಉಳಿಸಿ ಬೆಳೆಸಿ, ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಪರಿಸರವನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೋಡಲು ಸಾಧ್ಯ ಎಂದು ಪರಿಸರ ಪ್ರೇಮಿ, ವೃಕ್ಷ ತಪಸ್ವಿ ಮಾಧವ ಉಳ್ಳಾಲ್ ಅಭಿಪ್ರಾಯಪಟ್ಟರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಯುವವಾಹಿನಿ(ರಿ.) ಕೊಲ್ಯ ಘಟಕದ ಸಾಪ್ತಾಹಿಕ ಸಭೆಯಲ್ಲಿ, ಪರಿಸರ ಸಂರಕ್ಷಣೆಯಲ್ಲಿ ನಾಗರೀಕರ ಕರ್ತವ್ಯದ ಕುರಿತು, ಕಳೆದ 39 ವರುಷಗಳಿಂದ ಯಾವುದೇ ಫಲಾಪೇಕ್ಷೆಯನ್ನು ಬಯಸದೆ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿರುವ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ರವರು ಮಾತನಾಡಿ, ಜಾಗತಿಕವಾಗಿ ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಜೀವಸಂಕುಲಗಳ ರಕ್ಷಣೆಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸಬೇಕು, ಅವುಗಳನ್ನು ಬೆಳೆಸುವುದರ ಜೊತೆಗೆ ಪಾಲನೆ ಪೋಷಣೆಯ ಜವಾಬ್ದಾರಿಯನ್ನೂ ವಹಿಸಬೇಕೆನ್ನುವ ಅಮೂಲ್ಯವಾದ ಸಂದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು, ಹೂವಿನ ಗಿಡಗಳನ್ನು ಉಚಿತವಾಗಿ ಘಟಕದ ಸದಸ್ಯರಿಗೆ ವಿತರಿಸಿದರು.
ಯುವವಾಹಿನಿ(ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಲತೀಶ್ ಎಂ. ಸಂಕೋಳಿಗೆಯವರು ಘಟಕದ ಪರವಾಗಿ ಪರಿಸರವಾದಿ ಮಾಧವ ಉಳ್ಳಾಲ್ ರವರನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು. ಘಟಕದ ಸದಸ್ಯರು ತಾವು ಪಡೆದಿರುವ ಗಿಡಗಳನ್ನು ಜತನದಿಂದ ಪೋಷಣೆ ಮಾಡಿಕೊಂಡು ಉತ್ತಮ ಫಲ ಬೆಳೆಸಿ, ಆ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕಿರು ಕೊಡುಗೆಯನ್ನು ಸಲ್ಲಿಸಬೇಕೆಂದು ವಿನಂತಿಸಿದರು.
ಘಟಕದ ಸ್ಥಾಪಕ ಅಧ್ಯಕ್ಷರು ಶ್ರೀ ಸುರೇಶ್ ಬಿಲ್ಲವ, ಪ್ರಥಮ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಸುರೇಶ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ, ಕೋಶಾಧಿಕಾರಿ ಶ್ರೀಮತಿ ವಿನುತಾ ಪಾಂಡಿಹಿತ್ಲು, ಮಾಜಿ ಅಧ್ಯಕ್ಷರುಗಳಾದ ಶ್ರೀ ಆನಂದ್ ಮಲಯಾಳಕೋಡಿ, ಶ್ರೀ ಮೋಹನ್ ಮಾಡೂರು ಮತ್ತು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಯುವವಾಹಿನಿ(ರಿ.) ಕೊಲ್ಯ ಘಟಕದ ಕಾರ್ಯದರ್ಶಿ ಜೀವನ್ ಕೊಲ್ಯ ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆ ಹಾಗೂ ಪ್ರಸ್ತುತ ದಿನಗಳಲ್ಲಿ ಅದರ ಮಹತ್ವದ ಕುರಿತು ಅರ್ಥಪೂರ್ಣ ಮಾಹಿತಿಯನ್ನು ನೀಡಿ ಪ್ರಸ್ತಾವನೆಗೈದರು. ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಕುಂಪಲ ಧನ್ಯವಾದ ಸಮರ್ಪಿಸಿದರು.