“ನಾನು ಅದೆಷ್ಟೋ ವರ್ಷಗಳ ಕಾಲ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕೆಲಸ ಮಾಡಿರುತ್ತೇನೆ. ಹಲವಾರು ಕಾನ್ಫೆರನ್ಸಗಳಲ್ಲಿ ಪ್ರಬಂಧ ಮಂಡಿಸಿ, ಹಲವಾರು ಕೃತಿಗಳನ್ನು ಬರೆದು ಸಾಹಿತ್ಯಾತ್ಮಕವಾಗಿ ಒಂದಷ್ಟು ಕೆಲಸ ಮಾಡಿದ್ದೇನೆ. ಆದರೂ…. ದೇಶದಲ್ಲಾಗಲಿ ವಿದೇಶದಲ್ಲಾಗಲೀ ನನ್ನನ್ನು ಕಂಡಾಗ ಗುರುತಿಸುವುದು ಎಕ್ಕಸಕ್ಕ ಬರೆತಿನಾರ್ ಮೇರ್ (ಎಕ್ಕಸಕ್ಕ ಬರೆದವರು ಇವರು) ಎಂದು. “೪೦ ದಶಕಗಳ ಹಿಂದೆ ಬರೆದ ಆ ಹಾಡು ನನ್ನನ್ನು ಇವತ್ತಿಗೂ ಸಾಹಿತ್ಯಲೋಕದಲ್ಲಿ ಜೀವಂತವಾಗಿರಿಸಿದೆ. ಇಂತಹ ಜನಪ್ರಿಯತೆಯನ್ನು ಪಡೆಯಲು ಕಾರಣ ಅಂದು ನನಗೆ ಅವಕಾಶ ನೀಡಿದ ವಿಶುಕುಮಾರ್ರವರು. ಈ ಎಲ್ಲಾ ಕೀರ್ತಿಸಲ್ಲಬೇಕಾದುದು ವಿಶುಕುಮಾರ್ ಎಂಬ ಅದ್ಭುತ ವ್ಯಕ್ತಿಗೆ ಎಂದವರು ವಿದ್ವಾಂಸರು ಮತ್ತು ವಿಶ್ರಾಂತ ಉಪಕುಲಪತಿಯವರಾದ ಡಾ|| ವಿವೇಕ್ ರೈಯವರು. ಈ ಒಂದು ಮಾತು ಸಾಕು ವಿಶುಕುಮಾರ್ ಸಾಹಿತ್ಯ ಸಮ್ಮೇಳನದ ಅಗತ್ಯ ಎಷ್ಟಿತ್ತು ಎಂದು ಅರಿಯಲು.
೧೭.೦೨.೨೦೧೯ ರ ಭಾನುವಾರ ಮಂಗಳೂರಿನ ಪುರಭವನದಲ್ಲಿ ಅಭೂತಪೂರ್ವವಾಗಿ ಮಾನ್ಯ ಸಚಿವರಾದ ಯು.ಟಿ.ಖಾದರ್ರ ವರಿಂದ ಉದ್ಘಾಟನೆಗೊಂಡು, ಪ್ರಶಸ್ತಿ ಪ್ರದಾನ ಸಮಾರಂಭದ ಅನಂತರದಲ್ಲಿ ಮೂಡಿಬಂದ ಹಾಸ್ಯ-ಹರಟೆ ತುಳು ಭಾಷೆಯಲ್ಲಿ ನಡೆದ ಒಂದು ಸುಂದರ ಕಾರ್ಯಕ್ರಮ. ಬಹುಶಃ ಹೆಚ್ಚಿನ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳನ್ನೇ ಆಯೋಜಿಸುವ ಕ್ರಮವಿದ್ದರೂ ಈ ಹಾಸ್ಯ ಹರಟೆ ವಿನೂತನವಾಗಿ ಮೂಡಿಬಂದಿದೆ. ತುಳುವಾಗ್ಮಿ, ನಮ್ಮ ಟಿ.ವಿ ಚಾನಲಲ್ಲಿ ನಿರೂಪಕರಾಗಿರುವ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಕೆ.ಕೆ ಪೇಜಾವರ್ರವರು ಮಲ್ಲಿಗೆಯ ಮೊಗ್ಗನ್ನು ಒಂದೊಂದೇ ಪೋಣಿಸಿಟ್ಟ ಹಾಗೆ ವಿಶುಕುಮಾರವರ ವಿಚಾರಧಾರೆಗಳಿಗೆ ಕೊಂಡಿಬೆಸೆದು ತುಳುಭಾಷೆಯ ಸೊಗಡಿನೊಂದಿಗೆ ಹರಟೆಯನ್ನು ಆರಂಭಿಸಿ ಇಂದಿನ ದಿನಗಳಲ್ಲಿ ಹಾಸ್ಯದ ಅಗತ್ಯವೇನು ಎಂಬುದನ್ನು ತಿಳಿಸಿ ರಂಗನಟ ವಿಶುಕುಮಾರರ ನಾಟಕದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ವಿ.ಜಿ. ಪಾಲ್ರವರನ್ನು ಮಾತಿನಕಟ್ಟೆಗೆ ಎಳೆದರು. ವಿ.ಜಿ.ಪಾಲ್ ಸ್ವಲ್ಪ ಭಾವುಕರಾಗಿ ವಿಶುಕುಮಾರೊಂದಿಗಿನ ಅಂದು ಒಡನಾಡಿದ ಕ್ಷಣಗಳನ್ನು ನೆನಪಿಸಿಕೊಂಡರು. ಎಡವುತ್ತಲೇ ವೇದಿಕೆ ಏರಿ ಎಡವಿಗೆ ಕಾರಣವನ್ನು ಹಾಸ್ಯಾತ್ಮಕವಾಗಿ ಪ್ರಶ್ನಿಸಿ ಸಭಿಕರ ಮುಕ್ತನಗುವಿಗೆ ಕಾರಣರಾದರು. ಮುಂದೆ ಮಾತಿನಕೊಂಡಿಗೆ ಬೆಸುಗೆಯಾದವರು ಯಕ್ಷರಂಗದ ಹಾಸ್ಯನಟ ಚಾರ್ಲಿ ಚಾಪ್ಲಿನ್ ಬಿರುದಾಂಕಿತ ಶ್ರೀ ಸೀತಾರಾಮ್ ಕುಮಾರ್ ಕಟೀಲು ಯಕ್ಷರಂಗದ ಹಾಸ್ಯದ ಹರಿವು ಎಷ್ಟು ಸಾಹಿತ್ಯಾತ್ಮಕವಾಗಿ ರಸಗವಳವೆನಿಸುದೆಂಬುದನ್ನು ತಮ್ಮ ಪ್ರಾಸಬದ್ಧವಾದ ಹೆಣ್ಣಿನ ವಿವರಣೆ, ಕೃಷ್ಣಸ್ತೋತ್ರದ ಮೂಲಕ ನಿರಂತರವಾಗಿ ಹೇಳಿ ಸಭಿಕರನ್ನು ಮಂತ್ರಮುಗ್ದಗೊಳಿಸಿದರು. ಕೊನೆಗೆ ಇಡೀ ಸಭಿಕರನ್ನು ಗೋವಿಂದ ಅನ್ನಿಗೋವಿಂದ ಹೇಳಿ ಗೋವಿಂದಾ’ ಅನ್ನಿಸದೆ ಬಿಡಲಿಲ್ಲ.
ಹಾಸ್ಯ ಹರಟೆನ್ನು ಸಮೀಕರಿಸಿದ ಶ್ರೀ ಕೆ.ಕೆ.ಪೇಜಾವರ ಯಕ್ಷಗಾನ ನಾಟಕಗಳು ಜನರಿಗೆ ವಿದ್ಪತ್ಪೂರ್ಣ ಸಾಹಿತ್ಯವನ್ನು, ಮನೋರಂಜನೆಯನ್ನು ಕಟ್ಟಿಕೊಟ್ಟದ್ದು ಎನ್ನುತ್ತಾ ಹರಟೆಯ ಕೊಂಡಿಯನ್ನು ಸಾಹಿತಿ, ನಿವೃತ್ತಿ ಶಿಕ್ಷಕಿ, ಹಿರಿಯ ಸಾಹಿತಿ ಕೆ.ಎ. ರೋಹಿಣಿಯವರ ಕೈಗಿತ್ತರು. ಕೆ.ಎ. ರೋಹಿಣಿಯವರು ಮಹಿಳೆಯರು ಸಂಬಳವಿಲ್ಲದೆ ದುಡಿಯುವವರು, ದಿನನಿತ್ಯ ಕೆಲಸವಿದ್ದರು ’ಕೆಲಸವಿಲ್ಲದವರು’ ಎಂಬ ತಾತ್ಸಾರಕ್ಕೆ ಒಳಗಾದವರೆಂಬ ನೇರ ಕುಟುಕನ್ನು ಸಭಿಕರಿಗೆ ಎಸೆದು ನಗುತ್ತಲೇ ಮಹಿಳೆಯರ ಪರದಾಟಕ್ಕೆ ಅವರಿಗೊಂದಿಷ್ಟು ಸಹಾನುಭೂತಿ ಇರಲಿ ಎಂಬ ಕಳಕಳಿಯನ್ನು ವ್ಯಕ್ತ ಪಡಿಸಿದರು. ಹಾಸ್ಯ- ಹರಟೆಯನ್ನು ಮುಂದೆತನ್ನಕೈಗೆತ್ತಿಕೊಂಡವರು ತುಳುವರ ಮಾಣಿಕ್ಯ, ರಂಗನಟ, ಅದ್ಭುತ ಹಾಸ್ಯಚಿತ್ರನಟ ಶ್ರೀ ಅರವಿಂದ ಬೋಳಾರ್ರವರು.
ಧ್ವನಿವರ್ಧಕ ಹಿಡಿದ ಕೂಡಲೇ ಏನೋ ಅಪಸ್ವರ ಬಂದು ಸಭಿಕರಿಗೆ ನೇರವಾಗಿ ’ಎನಡ ಕೋಪ ಇತ್ತಿಂಡ ಎದುರು ಬತ್ದ್ ಹಾಕ್ಲೆ ಪಿರವುಡು ಗೊಬ್ಬಡೆ’ (ನನ್ನಲ್ಲಿ ಕೋಪ ಇದ್ದರೆ ಎದುರು ಬಂದು ಹೊಡೆಯಿರಿ ಹಿಂದಿನಿಂದ ಆಟವಾಡಬೇಡಿ)ಎಂದು ಅವರ ಎಂದಿನ ಶೈಲಿಯ ಹಾಸ್ಯ ಮುಖಭಾವದಿ ಪ್ರಶ್ನಿಸಲು ಸಭಿಕರು ಘೋಳ್ ಎಂದು ನಕ್ಕುಬಿಟ್ಟರು. ನಾಟಕದ ಹಾಸ್ಯ ಇನ್ನೊಬ್ಬರ ಮನ ನೋಯಿಸಬಾರದು, ನಮ್ಮ ನಾಟಕ ಆರೋಗ್ಯಕರ ನಗು ತರಿಸುವಂತಹುದು, ದ್ವಂದಾರ್ಥದ ಆಶಿಸ್ತಿನ ನಾಟಕಕ್ಕೆ ನಮ್ಮತಂಡದಲ್ಲಿ ಮಾನ್ಯವಿಲ್ಲ ಎಂಬ ಸಂದೇಶದೊಂದಿಗೆ ಅರವಿಂದರು ತಮ್ಮ ಮಾತುಗಳನ್ನು ಕೊನೆಗೊಳಿಸಿದರು. ಹೀಗೆ ನಾಲ್ವರು ಹರಟೆಗಾರರು ಒಬ್ಬರನ್ನೊಬ್ಬರು ಮಾತಾಡಿಸಿಕೊಂಡು ನಗುನಗುತ ಸಮಯಕಳೆದದ್ದೇ ಅರಿವಾಗಲಿಲ್ಲ. ಸಭಿಕರಂತೂ ಮಂತ್ರ ಮುಗ್ದರಾಗಿ ಈ ಹರಟೆಯನ್ನು ಆನಂದಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಎಲ್ಲರ ಹರಟೆಯ ಒಟ್ಟು ಸಾರಾಂಶದೊಂದಿಗೆ ಮುಕ್ತಾಯಗೊಳಿಸಿದ ಶ್ರೀ. ಕೆ.ಕೆ. ಪೇಜಾರ್ವರು ಹಾಸ್ಯ ಹರಟೆ ನಮಗೆ ಮುದನೀಡಲಿ ಎಂಬ ಸದಾಶಯವನ್ನು ಸಾರಿದರು. ಶೀಮತಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಮಾಡಿದರು.
ವರದಿ : ವಿಜಯಲಕ್ಷ್ಮೀ ಕಟೀಲು
ಅರ್ಥಪೂರ್ಣ ಕಾರ್ಯಕ್ರಮ, ಸುಂದರವಾಗಿ ಮೂಡಿಬಂದಿದೆ…..
Bahala utthama karyakrama Smt. Vijaya Laxmi madam ravara varadhi prathyaksavagi karyakramavannu veekshishidasthu kushi kottithu thuluvina enthaha karyakramagalu ennasthu moodibaralebdu haraisuthene
ವಿ ಜ ಯ ಲಕ್ಷ್ಮೀ ಕ ಟೀ ಲು ಇ ವ ರ ನಿರೂಪಣೆ ಹಾಗೂ ನಿರ್ವಹಣೆ ತುಂಬಾ ಒಳ್ಳೆಯದಾಗಿ ಮೂಡಿ ಬಂದಿದೆ.