ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಅತಿಥ್ಯದಲ್ಲಿ ಉರ್ವಾಸ್ಟೋರ್ ತುಳು ಭವನದ ‘ಅಮೃತ ಸೋಮೇಶ್ವರ ಸಭಾಂಗಣ’ ದಲ್ಲಿ 10-11-2024 ರಂದು ಭಾನುವಾರ 2024 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು.
ಸಾಹಿತ್ಯ, ನಾಟಕ ಕ್ಷೇತ್ರದ ಧೀಮಂತರಾಗಿ, ಮಿನುಗು ನಕ್ಷತ್ರರಾಗಿ, ದಂತ ಕತೆಯಾಗಿದ್ದ ವಿಶುಕುಮಾರ್ ಅನೇಕ ಪ್ರತಿಭಾವಂತರನ್ನು ಸೃಷ್ಟಿಸಿದ ಮಾನವ ಶಿಲ್ಪಿ. ತಮ್ಮ ಜೀವಿತಾವಧಿಯಲ್ಲಿ ಅವರು ತಮ್ಮ ನಾಟಕಗಳ ಮೂಲಕ ರಾಜಕಾರಣಿಗಳನ್ನೂ ಟೀಕಿಸುತ್ತಿದ್ದರು. ನಾವು ರಾಜಕೀಯಕ್ಕೆ ಬರುವಲ್ಲೂ ವಿಶು ಕುಮಾರ್ ಪ್ರೇರೇಪಣೆ ಇದೆ ಎಂದು ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಾಹಿತಿ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.
ಮಣ್ಣಿನ ಮೃದುತ್ವ ಗುಣವನ್ನು ಹೊಂದಿರುವ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತುಳು ಭಾಷೆಯಲ್ಲಿ ಸಂವಹನ ಕಾರ್ಯ ಆಗಬೇಕು. ವಿಶುಕುಮಾರ್ ತಮ್ಮ ಅವಧಿಯಲ್ಲಿ ಈ ಕಾರ್ಯವನ್ನು ಮಾಡಿದ್ದು, ಎತ್ತಲೋ ಸಾಗುತ್ತಿರುವ ಯುವ ಮನಸ್ಸುಗಳನ್ನು ಒಗ್ಗೂಡಿಸಿ ತುಳು ಸಂಸ್ಕೃತಿಯ ಭಾತೃತ್ವ ಗುಣವನ್ನು ಉಳಿಸಿಕೊಂಡು ಮೂಢನಂಬಿಕೆ, ಜಾತೀಯತೆಯಿಂದ ದೂರವಾಗುವ ನಿಟ್ಟಿನಲ್ಲಿ ಯುವವಾಹಿನಿಯಂತಹ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂದು ಮೊಯಿಲಿ ಹೇಳಿದರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ :
ಪತ್ರಕರ್ತರು, ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿಯವರಿಗೆ, ಪ್ರಶಸ್ತಿ ಪತ್ರ, ಗೌರವ ಧನ, ಸ್ಮರಣಿಕೆಯೊಂದಿಗೆ 2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಬು ಶಿವ ಪೂಜಾರಿಯವರು ಯುವವಾಹಿನಿಗೆ ಕೃತಜ್ಞತೆ ಸಲ್ಲಿಸಿದರು
ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ. ಎಲ್. ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಇಂದು ಕರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿರವ ಮಾದಕ ವ್ಯಸನ, ಸಮಾಜದ್ರೋಹಿ ಚಟುವಟಿಕೆಗಳ ಬಗ್ಗೆ ಮಾತನಾಡುವ, ಬರೆಯುವ ಧೈರ್ಯ ತೋರಿದರೆ ಅದು ವಿಶು ಕುಮಾರ್‌ಗೆ ನಾವು ನೀಡುವ ಗೌರವವಾಗಿರುತ್ತದೆ. ವಿಶುಕುಮಾರ್ ತಮ್ಮ ಪತ್ರಿಕೆಯ ಮೂಲಕ ಕರಾವಳಿಯಲ್ಲಿ ಆ ಕಾಲದಲ್ಲಿ ಅವ್ಯಾಹತವಾಗಿದ್ದ ಕಳ್ಳ ಸಾಗಣೆ ಕುರಿತು ದಿಟ್ಟವಾಗಿ ಬರೆಯುವ ಧೈರ್ಯ ತೋರಿದವರು. ಆದರೆ ಕಳೆದ ಕೊರೋನ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬೆರಳಣಿಕೆಯ ಜನ ಬರೆದಿದ್ದು ಬಿಟ್ಟರೆ, ಯಾವ ಕೃತಿಗಳೂ ಈ ಬಗ್ಗೆ ಪ್ರಕಟವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
17-18ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ದ.ಕ. ಜಿಲ್ಲೆಯಲ್ಲಿ 16 ಕೃತಿಗಳನ್ನು ರಚಿಸಿದ್ದರು. ಅದರಲ್ಲಿ ಎಂಟು ಉಡುಪಿ ಅಷ್ಟಮಠಗಳ ಬಗ್ಗೆ ಇದ್ದರೆ ಉಳಿದವುಗಳು ಕೂಡಾ ವೈದಿಕ ಕೇಂದ್ರೀಕೃತವಾದವುಗಳು. ಆದರೆ ತುಳುನಾಡಿನ ತಳ ಸಮುದಾಯಗಳ ಇತಿಹಾಸ, ಇಲ್ಲಿನ ಗರಡಿಗಳು, ಬಿಲ್ಲವರ, ಒಕ್ಕಲಿಗರು, ಇಲ್ಲಿನ ಕಂಬಳ, ಭೂತಾರಾಧನೆ, ಯಕ್ಷಗಾನದ ಬಗ್ಗೆ ಕೃತಿಗಳು ರಚನೆಯಾಗಿಲ್ಲ. ಇದಕ್ಕೆ ಕಾರಣ ಅಂದಿನ ಆ ಬ್ರಿಟಿಷ್ ಅಧಿಕಾರಿಗೆ ಸಹಾಯಕರಾಗಿದ್ದವರು ಮೇಲ್ವರ್ಗದ ಸಮುದಾಯ. ಈ ರೀತಿ ಏಕಪಕ್ಷೀಯವಾದ ಚರಿತ್ರೆ ಪರಿಪೂರ್ಣವಾಗದು. ಆದರೆ ವಿಶುಕುಮಾರ್ ಮತ್ತು ಬಾಬು ಶಿವ ಪೂಜಾರಿಯವರು ಇದಕ್ಕಿಂತ ಭಿನ್ನವಾಗಿ ತುಳುನಾಡನ್ನು ಚಿತ್ರಿಸಿದ ರೀತಿ ವಿಶೇಷವಾಗಿದೆ. ಸಾಹಿತಿ ಬರೆಯುವುದು ಇತಿಹಾಸವಲ್ಲ. ಅದು ಕಾದಂಬರಿ ಆದರೆ ಕವಿ ಮತ್ತು ಸಾಹಿತಿಗಳು ತಮ್ಮ ಭಾಷೆಯಲ್ಲಿ ಹೊಸತನವನ್ನು ಕಟ್ಟುತ್ತಾರೆ. ಸಾಂಸ್ಕೃತಿಕ ಅನನ್ಯತೆಯನ್ನು ಪ್ರತಿಬಿಂಬಿಸುತ್ತಾರೆ ಎಂದು ವಿಶುಕುಮಾರ್ ಹಾಗೂ ಬಾಬು ಶಿವ ಪೂಜಾರಿ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಯುವಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ನೀಡುತ್ತಾ ಬರುವ ಡಾ ಪ್ರಭಾಕರ್ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿಯನ್ನು ಉದಯೋನ್ಮುಖ ಬರಹಗಾರ್ತಿ ರಾಜಶ್ರೀ ಜೆ. ಪೂಜಾರಿಗೆ ಪ್ರದಾನ ಮಾಡಲಾಯಿತು.
ಮಂಗಳೂರಿನಲ್ಲಿ ವಿಶುಕುಮಾರ್ ಸ್ಮರಣಾರ್ಥವಾಗಿ ‘ಸ್ಮಾರಕ ಭವನ’ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಯುವವಾಹಿನಿಯಿಂದ ಮನವಿ ಪತ್ರವನ್ನು ವೀರಪ್ಪ ಮೊಯ್ಲಿ ಹಾಗೂ ಡಾ.ಪುರುಷೋತ್ತಮ ಬಿಳಿಮಲೆ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ಬಹುಭಾಷಾ ಸಾಹಿತಿ ಸಾಹಿತಿ ಮುದ್ದು ಮೂಡುಬೆಳ್ಳೆಯವರ ಸಾಹಿತ್ಯದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಪ್ರಕಾಶನದ “ನಿರಂತನ ಚೇತನ ವಿಶುಕುಮಾರ್ ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ವಿಕಲ ಚೇತನ ಮಕ್ಕಳು ತಯಾರಿಸಿದ ಹಾಗೂ ಅವರಿಗೆ ಕಾರ್ಯಕ್ರಮದ ಮೂಲಕ ಸಣ್ಣ ನೆರವಿನ ಯೋಜನೆಯಂತೆ ಹಸಿರು ಕ್ರಾಂತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಮೊಳಕೆ ಬರುವ ಬೀಜವನ್ನು ಹೊಂದಿದ ಹಾಗೂ ಪೇಪರ್‌ನಲ್ಲಿ ತಯಾರಿಸಿದ ಪೆನ್‌ನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಹಂಚಲಾಯಿತು.
ಕುದ್ರೋಳಿ ಗುರು ಬೆಳದಿಂಗಳು ಪೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ವಿಶುಕುಮಾರ್ ದತ್ತಿನಿಧಿ ಕಾರ್ಯದರ್ಶಿ ಸಚ್ಚೇಂದ್ರ ಅಂಬಾಗಿಲು, ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ಅಧ್ಯಕ್ಷೆ ಮನೀಷಾ ರೂಪೇಶ್, ಕಾರ್ಯದರ್ಶಿ ಸಚಿನ್ ಜಿ. ಅಮಿನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಸ್ವಾಗತಿಸಿದರು.
ಮಾಜಿ ಅಧ್ಯಕ್ಷರಾದ ಟಿ. ಶಂಕರ ಸುವರ್ಣರವರು ಪ್ರಾಸ್ತಾವಿಕ ಮಾತನಾಡಿದರು.
ವಿಶುಕುಮಾರ್ ದತ್ತಿನಿಧಿ ಸಂಚಾಲಕ ಸುರೇಶ್ ಪೂಜಾರಿ ಧನ್ಯವಾದ ನೀಡಿದರು.
ಸ್ಥಿತೇಶ್ ಬಾರ್ಯ ಮತ್ತು ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.