ಪುತ್ತೂರು : ದಿನಾಂಕ 11.08.2019 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ವಿಶಾಲ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶದಲ್ಲಿ ಸಂಪನ್ನಗೋಂಡಿತು.
ಬಿಲ್ಲವರು ಬಹಳ ಧೈರ್ಯವಂತವರು: ಅಣ್ಣಾಮಲೈ
ಬಿಲ್ಲವರು ಬಹಳ ಧೈರ್ಯವಂತವರು. ಯುವಕರ ಶಕ್ತಿ ಎನಿಸಿಕೊಂಡ `ಧೈರ್ಯ’ ದುರ್ಬಳಕೆ ಆಗದಂತೆ ನಮ್ಮ ವ್ಯಕ್ತಿತ್ವವಿರಬೇಕು. ಮತ್ತೊಬ್ಬರಿಗೆ ನಮ್ಮಿಂದ ಉಪದ್ರವವಾಗದು ಎನ್ನುವುದೇ ನಮ್ಮ `ಶಕ್ತಿ’ ಎನಿಸಿದೆ. ನಾವು ವ್ಯವಹರಿಸುವ ಯಾವುದೇ ಕ್ಷೇತ್ರವಿರಲಿ, ನಮ್ಮಲ್ಲಿನ ಒಳ್ಳೆತನವನ್ನು, ಸಾಧನಾಶೀಲ ಪ್ರವೃತ್ತಿಯನ್ನು ಇತರರಿಗೆ ತೋರಿಸುವುದೇ ರೋಲ್ ಮಾಡೆಲ್ ಆಗಿದ್ದು, ಅದೇ ಯೂನಿವರ್ಸಲ್ ಸತ್ಯವಾಗಿದೆ ಎಂದು ಐಪಿಎಸ್ ಅಧಿಕಾರಿ `ಕರ್ನಾಟಕದ ಸಿಂಗಂ’ ಖ್ಯಾತಿಯ ಅಣ್ಣಾಮಲೈರವರು ಹೇಳಿದರು. ಅವರು `ಮೂಲು ಸೇರಿನ ಮಾತೆರೆಗ್ಲಾ ನಮಸ್ಕಾರ’ ಎಂದು ತುಳುವಿನಲ್ಲಿ ಮಾತನ್ನು ಆರಂಭಿಸಿದ ಅವರು, ಹೇಗೆ ನಾರಾಯಣ ಗುರುಗಳು ತಮ್ಮ ಅಂತರಂಗದೊಳಗೆ ಬ್ರಹ್ಮನನ್ನು ಕಂಡರೋ, ಹಾಗೆಯೇ ನಮ್ಮಲ್ಲಿನ ಒಳ್ಳೆಯ ಗುಣಗಳಿಂದ ನಾವೂ ಕೂಡ ನಮ್ಮ ಅಂತರಂಗದಲ್ಲಿ ಬ್ರಹ್ಮನನ್ನು ಕಂಡುಕೊಳ್ಳಬೇಕಾಗಿದೆ. ಶಿಕ್ಷಣವೆಂಬುದು ಕೇವಲ ಡಿಗ್ರಿ ಪಡೆಯುವುದು ಅಲ್ಲ. ಕಾರು, ಫ್ಲ್ಯಾಟ್, ಇನ್ಫೋಸಿಸ್‍ನಲ್ಲಿ ಉದ್ಯೋಗ ಇವುಗಳಿಂದ ಏನು ಪ್ರಯೋಜನ?, ನಾವು ಪಡೆಯುವ ಶಿಕ್ಷಣ ಮತ್ತೊಬ್ಬರಿಗೆ ಪ್ರಯೋಜನವಾಗದಿದ್ದರೆ ಮತ್ತು ಸಮಾಜದ ಆಗುಹೋಗುಗಳಿಗೆ ಸ್ಪಂದಿಸದಿದ್ದರೆ ಅಂತಹ ಸ್ವಾರ್ಥತೆಯ ಐಶಾರಾಮಿ ಬದುಕು ಬೇಕೇ!. ನಾರಾಯಣಗುರುಗಳು ಅಷ್ಟು ಓದದಿದ್ದರೂ ಓರ್ವ ಸಾಮಾನ್ಯ ಮನುಷ್ಯನಾಗಿ ಅವರ ಸಾಧನೆಯನ್ನು ಜಗತ್ತೇ ಕೊಂಡಾಡುತ್ತಿದೆ ಎಂದು ಅಣ್ಣಾಮಲೈ ಹೇಳಿದರು.
ಯುವ ಸಮೂಹ ದೇಶಕ್ಕೆ ಮಾರಕವಾಗದಿರಲಿ-ಕೃಷ್ಣಮೂರ್ತಿ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿರವರು ಮಾತನಾಡಿ, ಯುವಸಮೂಹ ದೇಶದ ಸಂಪತ್ತು ಮಾತ್ರವಲ್ಲದೆ ದೇಶವನ್ನು ಭವ್ಯಭಾರತವನ್ನಾಗಿ ನಿರ್ಮಿಸಲು ಸಾಧ್ಯವಾಗಿಸುವ ಮನಸ್ಸು ಮಾಡುವ ಧೈರ್ಯ ಯುವಸಮೂಹಕ್ಕಿದೆ. ಆದರೆ ಇಂದಿನ ಯುವಸಮೂಹ ಐಎಸ್‍ಎಸ್ ಉಗ್ರ ಸಂಘಟನೆ ಮೂಲಕ ಸಮಾಜವನ್ನು ಹಾಳುಮಾಡುವ ಮನಸ್ಥಿತಿಗೂ ಒಳಗಾಗಿರುವುದು, ನಕಾರಾತ್ಮಕ ಯೋಚನೆಗಳಿಂದ ತಮ್ಮ ಬಾಳನ್ನೇ ಹಾಳುಗೆಡಹುತ್ತಿರುವುದು, ಸಾಮಾಜಿಕ ಜಾಲತಾಣಗಳ ಅತಿಯಾದ ದುರ್ಬಳಕೆ ಮಾಡುವುದು, ದೇಶದ ವಿವಿಧತೆಯಲ್ಲಿ ಏಕತೆಯಲ್ಲಿನ ವಿಷಯ ಮತ್ತು ಇತಿಹಾಸ ತಿಳಿದುಕೊಳ್ಳುವುದರ ಬದಲು ಪರಸ್ಪರ ಭಾವೋದ್ವೇಗವನ್ನು ಸೃಷ್ಟಿಸಿ ಸಮಾಜವನ್ನು ನಾಶ ಮಾಡಿಸಲು ಪ್ರೇರೇಪಿಸುವುದು ಇವೆಲ್ಲ ದೇಶದ ಭವಿಷ್ಯಕ್ಕೆ ಮಾರಕವಾಗಿವೆ ಎಂದರು. ಸಂಘಟನೆಯಿಂದ ಬಲಯುತರಾಗಿರಿ, ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬ ನಾರಾಯಣ ಗುರುಗಳ ಧ್ಯೇಯದಂತೆ ಪ್ರತಿಯೋರ್ವರು ಶಿಕ್ಷಣವನ್ನು ಪಡೆಯಬೇಕಾಗಿದೆ. ಬರಿದಾಗದ ಸಂಪನ್ಮೂಲವೆನಿಸುವ ಶಿಕ್ಷಣ ಮತ್ತು ಜ್ಞಾನವನ್ನು ಯಾರಿಂದಲೂ ಕಸಿದುಕೊಳ್ಳಲು, ನಾಶಗೊಳಿಸಲು ಸಾಧ್ಯವಿಲ್ಲ. ಯಾರು ವಿದ್ಯೆ ಎಂಬ ಶಿಕ್ಷಣವನ್ನು ಪಡೆದುಕೊಳ್ಳಲು ಶಕ್ತನಾಗುತ್ತಾನೋ ಆತ ಸ್ವತಂತ್ರವಾಗಿ ಹಾಗೂ ಪರಿಪೂರ್ಣವಾಗಿ ಬಾಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು
ಮನಸ್ಸು, ಹೃದಯ ತುಂಬಿದ ಜನಸಮೂಹವಾಗಿದೆ-ಡಾ|ಅಂಚನ್:
ಸಾಗರೋತ್ತರ ಉದ್ಯಮಿ ಮಸ್ಕತ್‍ನಲ್ಲಿನ ಡಾ|ಸಿ.ಕೆ ಅಂಚನ್‍ರವರು ಮಾತನಾಡಿ, ಮನಸ್ಸು ಎಂಬುದು ನೀರಿನ ಹಾಗೆ. ಅದನ್ನು ಹಿಡಿಯಲು ಸಾಧ್ಯವಿಲ್ಲ. ಆದರೆ ಈ ನೀರನ್ನು ಪ್ರಜ್ವಲನೆ ಮಾಡಿದ ಸೂರ್ಯದೇವನು ಅದೇ ನೀರನ್ನು ಮಳೆಹನಿಯಾಗಿ ಭೂಮಿಗೆ ನೀಡುತ್ತಾನೆ. ಅದೇ ರೀತಿ ಕಳೆದ ಹತ್ತು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಈ ಯುವವಾಹಿನಿ ಸಮಾವೇಶಕ್ಕೆ ಆಗಮಿಸಿದ ಸುಮಾರು 7 ಸಾವಿರಕ್ಕೂ ಮಿಕ್ಕಿದ ಜನ ಸಮೂಹ ಅದು ಜನ ಸಮೂಹವಲ್ಲ ಅಲ್ಲ, ಬದಲಾಗಿ ಮನಸ್ಸು ಮತ್ತು ಹೃದಯ ತುಂಬಿದ ಸಮೂಹ ಆಗಿದೆ. ನಮ್ಮ ಹೃದಯದಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಎತ್ತಿ ಹಿಡಿದು ಮುಂದೆ ಸಮಾಜದಲ್ಲಿ ಓರ್ವ ಗಣ್ಯ ವ್ಯಕ್ತಿಯಾಗಿ ಬಾಳುವುದನ್ನು ಎದುರು ನೋಡಬೇಕಾಗಿದೆ ಎಂದರು. ಮನುಷ್ಯನಲ್ಲಿ ದೇವರು ನೀಡಿದ ದೇಹವನ್ನು ಜಾಗೃತೆಯಲ್ಲಿ ಕಾಪಾಡಿಕೊಳ್ಳಬೇಕಾದ ಅಗತ್ಯತೆಯಿರುವ ದೇಹಬಲ, ಒಳ್ಳೆಯದನ್ನು ಕೇಳುವುದು, ನೋಡುವುದು, ಮಾತಾಡುವುದನ್ನು ಮತ್ತು ಹೆತ್ತವರ ಮಾತಿಗೆ ತಿರಸ್ಕಾರ ಮಾಡದೆ ಗೌರವಿಸುವ ಗುಣವುಳ್ಳ ಬುದ್ಧಿಬಲ, ನಮ್ಮಲ್ಲಿನ ಆತ್ಮಶಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಬದಲು ಆತ್ಮರಕ್ಷಣೆ ಮಾಡುವ ಆತ್ಮಬಲ ನಮ್ಮಲ್ಲಿರಬೇಕು ಎಂದ ಡಾ| ಅಂಚನ್, ಪಕ್ಷ-ಜಾತಿ ಯಾವುದಾದರೇನು, ಉನ್ನತ ಸ್ತರಕ್ಕೆ ಹೋಗುವ ಮನಸ್ಸು ಮಾತ್ರ ಇಂದು ಬೇಕಾಗಿದೆ ಜೊತೆಗೆ ಸಮಾಜಕ್ಕೂ ಮೊದಲು ಯುವಸಮೂಹ ನಮ್ಮ ಮನೆ ಬೆಳಕಾಗುವುದನ್ನು ಎದುರು ಕಾಣಬೇಕು ಹಾಗೂ ಸಂಸ್ಕಾರ ಮತ್ತು ಸಂಸ್ಕ್ರತಿ ನಮ್ಮ ಜೊತೆಗಿರಬೇಕು ಎಂದು ಹೇಳಿದರು.
ಯುವವಾಹಿನಿ ಬಿಲ್ಲವ ಸಮಾಜದ ಮಿಲಿಟರಿ – ಡಾ| ರಾಜಶೇಖರ ಕೋಟ್ಯಾನ್:
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್‍ರವರು ಮಾತನಾಡಿ, ಯುವವಾಹಿನಿ ಎಂಬುದು ಬಿಲ್ಲವ ಸಮಾಜದ ಮಿಲಿಟರಿ ಇದ್ದಾಗೆ. ಕ್ರೀಡೆ, ಶೈಕ್ಷಣಿಕ, ಧಾರ್ಮಿಕ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯಕ್ಕೆ ಹೆಗಲು ಕೊಡುವ ಸಂಘಟನೆಯಾಗಿ ಯುವವಾಹಿನಿ ಬೆಳೆದಿದೆ. ಕೋಟಿ-ಚೆನ್ನಯರ, ಅಪ್ಪೆ ದೇಯಿ ಬೈದೇತಿ, ಸಾಯನ ಬೈದ್ಯರ ನೆಲೆ ಕಂಡುಕೊಂಡ ಈ ನಮ್ಮ ಪುತ್ತೂರಿಗೆ ಜಯಂತ್ ನಡುಬೈಲು ನೇತೃತ್ವದ ಯುವವಾಹಿನಿ ಸಂಘಟನೆ ಎಷ್ಟು ಕೆಲಸ ಮಾಡಿದೆ ಎಂದು ಇದೇ ಮೊದಲ ಬಾರಿಗೆ ನೆರೆದ ಅದ್ಭುತ ಜನಸ್ತೋಮ ಕಂಡಾಗ ತಿಳಿಯುತ್ತದೆ. ಸಮುದ್ರ ಎಂದರೆ ಸಮಾಜ. ಸಮಾಜದ ಬಳಿಗೆ ಉತ್ತಮ ಕಾರ್ಯಚಟುವಟಿಕೆಗಳ ಮುಖೇನ ನಾವು ಹೋಗಿ ನಮ್ಮ ಇರುವಿಕೆಯನ್ನು ತೋರ್ಪಡಿಸಬೇಕಾಗಿದೆ ಎಂದರು.
ಸಮಾಜದ ಇತರ ಸಂಘಟನೆಗಳಿಗೆ ಯುವವಾಹಿನಿ ಸಂಘಟನೆ ಮಾದರಿ- ಚಿತ್ರನಟಿ ನವ್ಯ:
ತುಳುರಂಗದ ಚಿತ್ರನಟಿ ನವ್ಯಾ ಪೂಜಾರಿರವರು ಮಾತನಾಡಿ, ದಾನದಲ್ಲಿ ದೊಡ್ಡ ದಾನ ವಿದ್ಯಾದಾನ. ವಿದ್ಯೆ, ಉದ್ಯೋಗಕ್ಕೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಸಂಘಟನೆ ಬಿಲ್ಲವ ಸಂಘ ಹಾಗೂ ಯುವವಾಹಿನಿ ಘಟಕ. ಪ್ರಸ್ತುತ ಪೀಳಿಗೆಯ ಯುವಸಮೂಹಕ್ಕೆ ಆಟಿ, ಬಿಸು ಪರ್ಬ ಎಂದರೇನು ಎಂದು ತಿಳಿದಿಲ್ಲ. ಆದರೆ ಬಿಲ್ಲವ ಸಮುದಾಯ ಇವೆರಡನ್ನು ಪರಿಚಯ ಮಾಡುವ ಮೂಲಕ ಅವುಗಳ ಪ್ರಾಮುಖ್ಯತೆ ಏನೆಂಬುದನ್ನು ತಿಳಿಸಿಕೊಟ್ಟಿದೆ. ಸಮಾಜದ ಇತರ ಸಂಘಟನೆಗಳಿಗೆ ಯುವವಾಹಿನಿ ಸಂಘಟನೆ ಮಾದರಿಯಾಗಿದೆ.ತಾನೋರ್ವ ತುಳು ಹಾಗೂ ಕನ್ನಡ ಚಿತ್ರರಂಗದ ನಟಿಯಾಗಿದ್ದು, ಪ್ರತಿಯೋರ್ವರೂ ತುಳು ಹಾಗೂ ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ ಎಂದರು
ಜಯಂತ್ ನಡುಬೈಲ್:
ಕಳೆದ ಒಂದು ವರ್ಷದ ಅವಧಿಯ ನನ್ನ ಅಧ್ಯಕ್ಷತೆಯಲ್ಲಿ ಜರಗಿದ ಪ್ರತಿಯೊಂದು ಕಾರ್ಯಚಟುವಟಿಕೆಗಳು ಯಶಸ್ವಿಯಾಗಿದೆ ಎಂಬುದಾದರೆ ಅದು ನನ್ನೊಬ್ಬನ ಸಾಧನೆಯಲ್ಲ. ಪ್ರತಿಯೋರ್ವ ಬಿಲ್ಲವ ಸಮುದಾಯದ ಪ್ರಜೆಯ ಸಾಧನೆಯಾಗಿದೆ. ಯುವ ಮನಸ್ಸುಗಳನ್ನು ಒಗ್ಗೂಡಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಏಕೈಕ ಸಂಘಟನೆ ಎಂದರೆ ಅದು ಯುವವಾಹಿನಿ ಆಗಿದೆ. ಕ್ರೀಡೆ, ಸಾಮಾಜಿಕ ಅಥವಾ ಯಾವುದೇ ಕ್ಷೇತ್ರದಲ್ಲಾಗಲಿ ಯುವವಾಹಿನಿ ಸಂಘಟನೆ ಮಾಡುವ ಕೆಲಸ ಮಾತ್ರ ಶ್ಲಾಘನೀಯ. ಒಂದು ವರ್ಷ ಅದು ಹೇಗೆ ಕಳೆದು ಹೋಯಿತು ಎಂಬುದು ನನಗೆ ತಿಳಿಯದು. ಆದರೆ ಈ ಒಂದು ವರ್ಷದಲ್ಲಿ ಸಾಕಷ್ಟು ಅನುಭವಗಳನ್ನು ಕಂಡುಕೊಂಡಿದ್ದೇನೆ. ಯುವವಾಹಿನಿಯ 35 ಘಟಕಗಳ ಸದಸ್ಯರು ಒಂದೇ ಕುಟುಂಬದ ಸದಸ್ಯರಾಗಿದ್ದೇವೆ ಎಂಬ ಭಾವನೆಯಂತೆ ಯುವವಾಹಿನಿ ಸಂಸ್ಥೆಯನ್ನು ಬೆಳೆಸಿರುವುದು ಮಾತ್ರವಲ್ಲದೆ ಯುವವಾಹಿನಿ ಸಂಘಟನೆಯಿಂದ ಹಿರಿ-ಕಿರಿಯ ಮನಸ್ಸುಗಳು ಒಂದಾಗಿವೆ ಎಂಬುದು ಮಾತ್ರ ಸತ್ಯ.
ಮನೆ ಕೀ ಹಸ್ತಾಂತರ: ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲುರವರು ತಮ್ಮ ಅಧ್ಯಕ್ಷಾವಧಿಯನ್ನು ಸ್ಮರಣೀಯವನ್ನಾಗಿಸಲು ಈರ್ವರು ಫಲಾನುಭವಿಗಳಿಗೆ ನೂತನ ಮನೆಗಳನ್ನು ನಿರ್ಮಿಸಿ ಮಾದರಿಯಾದರು. ಸುಂದರಿ ಕೊಡಿಪಾಡಿ ಮತ್ತು ಸುಂದರ ಕೋಡಿಮಠ ಇವರೀರ್ವರಿಗೆ ಜಯಂತ್ ನಡುಬೈಲುರವರ ನೇತೃತ್ವದಲ್ಲಿ ನಿರ್ಮಿಸಿದ ಎರಡು ಮನೆಗಳ ಕೀಯನ್ನು ಅಣ್ಣಾಮಲೈರವರು ಹಸ್ತಾಂತರಿಸಿದರು.
ಜಯಂತ್ ನಡುಬೈಲುರವರಿಗೆ ಸನ್ಮಾನ: 2018-19ರ ಅವಧಿಯಲ್ಲಿ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧ್ಯಕ್ಷ ಜಯಂತ್ ನಡುಬೈಲುರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಯಂತ್ ನಡುಬೈಲುರವರು ತಾನು ಅಧಿಕಾರ ವಹಿಸಿದ ಬಳಿಕ ಒಂದು ವರ್ಷ ತನಗೆ ಸಹಕಾರವಿತ್ತ 115 ಮಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಯುವವಾಹಿನಿ 35 ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಚಿತ್ರಾ ಸುವರ್ಣ ಹಾಗೂ ಸುಗಂಧಿ ಪ್ರಾರ್ಥಿಸಿದರು. ಯುವವಾಹಿನಿ ಸಮಾವೇಶದ ನಿರ್ದೇಶಕ ಶಶಿಧರ್ ಕಿನ್ನಿಮಜಲು ಸ್ವಾಗತಿಸಿ, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ.ಅಂಚನ್‍ರವರು ವರದಿ ಮಂಡಿಸಿದರು.. ಯುವವಾಹಿನಿ ಕೇಂದ್ರ ಸಮಿತಿ ನಡೆದುಬಂದ ಹಾದಿಯನ್ನು ಎಲ್‍ಇಡಿ ಪರದೆಯ ಮೂಲಕ ಪ್ರಸ್ತುತಪಡಿಸಲಾಯಿತು. ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು. ನರೇಶ್ ಸಸಿಹಿತ್ಲು ಹಾಗೂ ದಿನೇಶ್ ರಾಯಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದ ಪ್ರಮುಖ ಆಕರ್ಷಣೆ
• ಸುಮಾರು 4 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಇದರ ಈ ಬಾರಿಯ ವಾರ್ಷಿಕ ಬೃಹತ್ ಸಮಾವೇಶವು ಹೊರಾಂಗಣ ಮೈದಾನದಲ್ಲಿ ನಡೆದ ಮೊದಲ ಸಮಾವೇಶವಾಗಿದೆ.
• ನಿರೀಕ್ಷೆಗೂ ಮಿಗಿಲಾಗಿ ಸುಮಾರು ಹತ್ತು ಸಾವಿರಕ್ಕೂ ಮೇಲ್ಪಟ್ಟು ಜನರು ಆಗಮಿಸಿ ಸಭಾಂಗಣ ತುಂಬಿ ತುಳುಕುತ್ತಿತ್ತು.
• 27 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸಭಾ ಕಾರ್ಯಕ್ರಮದ ಚಪ್ಪರವನ್ನು ನಿರ್ಮಿಸಲಾಗಿದ್ದು, ಆಕರ್ಷಕ ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿನ್ಯಾಸದ ವೇದಿಕೆಯ ಬಲಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ, ಎಡಭಾಗದಲ್ಲಿ ಅವಳಿ ವೀರರಾದ ಕೋಟಿ-ಚೆನ್ನಯರ ಆಕರ್ಷಕ ಗರಡಿ ಮಾದರಿಗಳನ್ನು ನಿರ್ಮಿಸಲಾಗಿತ್ತು.
• ಚಂದ್ರಶೇಖರ ಸುವರ್ಣ ಮೂಲ್ಕಿ ಇವರ ಕಲಾತ್ಮಕತೆಯಲ್ಲಿ ಆಕರ್ಷಕ ವೇದಿಕೆ, ಚಂದ್ರಶೇಖರ ಸಾಲ್ಯಾನ್ ಕಲ್ಲಡ್ಕರವರ ನೇತೃತ್ವದಲ್ಲಿ ಬೃಹತ್ ಚಪ್ಪರ ಕೂಡ ಕಣ್ ಸೆಳೆಯುವಂತಿತ್ತು.
• ಬೆಳಗ್ಗೆ ಹಲವು ಖಾದ್ಯಗಳನ್ನು ಒಳಗೊಂಡ ಉಪಾಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು ಹತ್ತು ಸಾವಿರ ಮಂದಿಗೆ ಭೋಜನದ ವ್ಯವಸ್ಥೆಗೆ ದೇವಸ್ಥಾನದ ಎರಡು ಸಭಾಂಗಣ, ಹೊರಭಾಗದಲ್ಲಿ ಚಪ್ಪರ ಸೇರಿ ಭೋಜನದ ವ್ಯವಸ್ಥೆಗೆ ಸುಮಾರು 15 ಸಾವಿರ ಚದರ ಅಡಿ ವಿಸ್ತೀರ್ಣದ ವ್ಯವಸ್ಥೆಯನ್ನು ಮಾಡಲಾಗಿತ್ತು.
• ದೇವಸ್ಥಾನದ ಎದುರಿನ ಗದ್ದೆಯ ಸುತ್ತಲೂ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅತ್ಯಂತ ಅಚ್ಚುಕಟ್ಟಾದ ಮತ್ತು ಮೆಗಾ ಸಮಾವೇಶವಾಗಿ ಸಂಘಟಿಸಲು ಸೂಕ್ತ ಉಪಕ್ರಮವನ್ನು ಸಂಘಟಕರು ಕೈಗೊಂಡಿದ್ದರು.
• ಸಭಾಂಗಣದ ಕೊನೆಯಲ್ಲಿ ಸದಾನಂದ ಪೂಜಾರಿ ನೇತೃತ್ವದಲ್ಲಿ ಉಚಿತ ಬ್ಲಡ್ ಶುಗರ್, ಬಿ.ಪಿ ತಪಾಸಣೆಯನ್ನು ಏರ್ಪಡಿಸಲಾಗಿತ್ತು.
ಯುವ ಜನತೆಯ ಯುವವಾಹಿನಿಯ 32ನೇ ವಾರ್ಷಿಕ ಸಮಾವೇಶ ಬಹಳ ಅರ್ಥಪೂರ್ಣವಾಗಿ ನಡೆದಿದೆ, ಆತಿಥ್ಯ ವಹಿಸಿದ ಪುತ್ತೂರು ಘಟಕದ ಎಲ್ಲರಿಗೂ ಅಭಿನಂದನೆಗಳು.
ಉತ್ತಮ ವರದಿ ಪ್ರಕಟಿಸಿದ ಜಾಲ ತಾಣ ಸಂಪಾದಕರಿಗೂ ಧನ್ಯವಾದಗಳು.
Great Annual conference