ಪುತ್ತೂರು : ದಿನಾಂಕ 11.08.2019 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ವಿಶಾಲ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶದಲ್ಲಿ ಯುವವಾಹಿನಿ ಸಾಧನಾಶ್ರೀ ಪ್ರಶಸ್ತಿ, ಸಾಧನಾ ಶ್ರೇಷ್ಟ ಪ್ರಶಸ್ತಿ, ಜೀವಮಾನ ಸಾಧಕ ಪುರಸ್ಕಾರ, ಯುವ ಸಾಧನಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಔದ್ಯೋಗಿಕ ಸಾಧಕರಾದ ಮಣಿಪಾಲ ಉದಯ ಸಮೂಹ ಸಂಸ್ಥೆಗಳ ರಮೇಶ್ ಎ.ಬಂಗೇರರವರಿಗೆ ಯುವವಾಹಿನಿ ಸಾಧನಾಶ್ರೀ ಪ್ರಶಸ್ತಿಯನ್ನು, ಬೆಳ್ತಂಗಡಿ ಶ್ರೀ ಗುರುದೇವಾ ವಿವಿಧೋದ್ಧೇಶ ಸಹಕಾರಿ ಸಂಘಕ್ಕೆ ಯುವವಾಹಿನಿ ಸಾಧನಾ ಶ್ರೇಷ್ಟ ಪ್ರಶಸ್ತಿಯನ್ನು,ಶೂನ್ಯದಿಂದ ಉತ್ತುಂಗಕ್ಕೇರಿದ ಸಾಮಾಜಿಕ ಕ್ಷೇತ್ರದ ಸಾಧಕರಾದ ಗೋವಿಂದ ಬಾಬು ಪೂಜಾರಿ ಹಾಗೂ ಅಕ್ಷರ ಕ್ರಾಂತಿಯ ಹರಿಕಾರ ಪ್ರಕಾಶ್ ಅಂಚನ್‍ರವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರವನ್ನು ಹಾಗೂ ಯುವವಾಹಿನಿ ಸಲಹೆಗಾರರಾದ ಬಿ.ತಮ್ಮಯರಿಗೆ ಯುವವಾಹಿನಿ ಜೀವಮಾನ ಸಾಧಕ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಸಾಧಕರ ವೃತ್ತಿ ಜೀವನದ ಸಾಧನೆಯನ್ನು ಎಲ್‍ಇಡಿ ಪರದೆಯ ಮೂಲಕ ಅನಾವರಣಗೊಳಿಸಲಾಗಿತ್ತು.
ಈ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ `ಕರ್ನಾಟಕದ ಸಿಂಗಂ’ ಖ್ಯಾತಿಯ ಅಣ್ಣಾಮಲೈ, ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ, ಸಾಗರೋತ್ತರ ಉದ್ಯಮಿ ಮಸ್ಕತ್‍ನಲ್ಲಿನ ಡಾ|ಸಿ.ಕೆ ಅಂಚನ್, ತುಳುರಂಗದ ಚಿತ್ರನಟಿ ನವ್ಯಾ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್, ಯುವವಾಹಿನಿ ಕೇಂದ್ರ ಸಮಿತಿ ಸಮಾವೇಶದ ನಿರ್ದೇಶಕ ಶಶಿಧರ್ ಕಿನ್ನಿಮಜಲು, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ.ಅಂಚನ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಹಾಗೂ ಯುವವಾಹಿನಿ ಸಂಸ್ಥೆಯ 35 ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಸಾಧಕರ ಸಾಧನೆಗಳು ನಮ್ಮ ಸಮಾಜದ ಯುವಕರಿಗೆ ಪ್ರೇರಣೆಯಾಗಲಿ…