ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕದ ನೇತ್ರತ್ವದಲ್ಲಿ ಪುತ್ತೂರಿನ ಆಯ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ “ಯುವವಾಹಿನಿ ಶಿಕ್ಷಣ ಸ್ಪೂರ್ತಿ-2022′ ದಿನಾಂಕ 06.02.2022 ಕಾರ್ಯಕ್ರಮ ನಡೆಯಿತು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ. ಬಹಳ ಮುಖ್ಯವಾದ ಘಟ್ಟ. ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಪುತ್ತೂರು ಯುವವಾಹಿನಿ ಘಟಕ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯುತ್ತಮವಾದುದು. ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಆತಂಕ ಇರಬಹುದು, ಆತಂಕ ಪಟ್ಟರೆ ಉತ್ತಮ ಅಂಕ ಪಡೆಯಲು ಸಾಧ್ಯವಿಲ್ಲ. ಆತ್ಮಸ್ಥೆರ್ಯದಿಂದ ಪರೀಕ್ಷೆಗೆ ತಯಾರಿ ನಡೆಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಮಾತನಾಡಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬುದು ಯುವವಾಹಿನಿಯ ಧೈಯವಾಗಿದೆ, ಇದರ ಅನ್ವಯ ಇವತ್ತು ಯುವವಾಹಿನಿ ಪುತ್ತೂರು ಘಟಕದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪರೀಕ್ಷೆಗೆ ಬೇಕಾಗಿರುವ ತಯಾರಿ ಹಾಗೂ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಕಾರ್ಯಾಗಾರ ನಡೆಸುವುದರ ಮೂಲಕ ಅವರ ಜೀವನದ ಗುರಿಯನ್ನು ಸಾಧಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪಠ್ಯತೇರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸಿ ಬೇರೆ ಬೇರ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ತಂದೆ-ತಾಯಿ ಹಾಗೂ ಬದುಕನ್ನು ರೂಪಿಸುವ ಗುರುಗಳನ್ನು ಜೀವನ ಪೂರ್ತಿ ನೆನಪಿಟ್ಟುಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ದೇಶದ ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದು ಶುಭಹಾರೈಸಿದರು.
15 ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಜೆಸಿಐ ಅಂತರಾಷ್ಟ್ರೀಯ ತರಬೇತುದಾರ ಕಾರ್ಕಳದ ರಾಜೇಂದ್ರ ಭಟ್ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡುವ ಮತ್ತು ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ ಕಾರ್ಯಕ್ರಮ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಎರಡು ವಿಭಾಗದಲ್ಲಿ ಮಾಡಲಾಗಿತ್ತು. ಬೆಳಿಗೆ 10ರಿಂದ 12.30ರವರೆಗೆ ಒಂದು ವಿಭಾಗ ಮತ್ತು ಮಧ್ಯಾಹ್ನ 1.30ರಿಂದ 4 ಗಂಟೆಯವರೆಗೆ ಎರಡನೇ ವಿಭಾಗದವರಿಗೆ ತರಬೇತಿ ನೀಡಲಾಯಿತು. ಯುವವಾಹಿನಿ ಪುತ್ತೂರು ಘಟಕದ ಸದಸ್ಯೆ ಪೂರ್ಣಿಮಾ ಪ್ರಾರ್ಥಿಸಿದರು. ಕೋಶಾಧಿಕಾರಿ ಶಮಿತ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಜಯರಾಮ್ ಬಿ. ಎನ್. ವಂದಿಸಿದರು. ಅವಿನಾಶ್ ಮತ್ತು ಪ್ರಿಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.