ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ 2024-25 ನೇ ಸಾಲಿನ ತಂಡದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 29-12-2024 ರ ಅಪರಾಹ್ನ ಜರಗಿತು.
ಮೂಡುಬಿದಿರೆ ಘಟಕವು ಆರಂಭವಾದಾಗಿನಿಂದ ಇದರ ಪ್ರತಿಯೊಂದು ಕಾರ್ಯಕ್ರಮವನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಇದುವರೆಗೆ ಘಟಕದ ಚುಕ್ಕಾಣಿಯನ್ನು ಎತ್ತಿ ಹಿಡಿದ ಆರು ಅಧ್ಯಕ್ಷರುಗಳು ಕೂಡ ಘಟಕದ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಪದ್ಮನಾಭ ಸಾಲಿಯಾನ್ ವರು ತಿಳಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಹರೀಶ್.ಕೆ. ಪೂಜಾರಿರವರು 2024-25 ನೇ ಸಾಲಿನ ಅಧ್ಯಕ್ಷರಾದ ಶ್ರೀ ಮುರಳೀಧರ್ ಕೋಟ್ಯಾನ್ ರವರ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು ಹಾಗೂ ಮುಂದಿನ ತಂಡಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಸುದರ್ಶನ್.ಎಂ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಅನುಷ್ಠಾನಿಸಿಕೊಂಡು, ಕಾರ್ಯರೂಪಕ್ಕೆ ತರುವುದು ಅತೀ ಶ್ರೇಷ್ಠ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಯುವವಾಹಿನಿ ಸಂಸ್ಥೆಯ ಯೋಜನೆಗಳು ಪ್ರಶಂಸನೀಯ ಎಂದು ನುಡಿದರು.
ಮೂಡುಬಿದಿರೆ ಘಟಕದ 2024-25ನೇ ಸಾಲಿನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಮುರಳೀಧರ್ ಕೋಟ್ಯಾನ್ ಮಾತನಾಡಿ ಘಟಕದ ವತಿಯಿಂದ ಒಳ್ಳೆಯ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಜೊತೆಗೆ ಇನ್ನಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರಲ್ಲದೆ ಎಲ್ಲರ ಸಹಕಾರ ಕೋರಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುರಸಭಾ ಸದಸ್ಯ ಹಾಗೂ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮಾತನಾಡಿ ಮುಂದೆ ಎರಡು-ಮೂರು ತಿಂಗಳಲ್ಲಿ ಮೂಡುಬಿದಿರೆ ಪರಿಸರದಲ್ಲಿ ಪುತ್ತಿಗೆ ದೇವಸ್ಥಾನ ಸಹಿತ ಐದು ಧಾರ್ಮಿಕ ಕ್ಷೇತ್ರಗಳಲ್ಲಿ ಬ್ರಹ್ಮ ಕಲಶೋತ್ಸವ ನೆರವೇರಲಿದ್ದು ಈ ಸಂದರ್ಭದಲ್ಲಿ ಯುವವಾಹಿನಿಯ ಸದಸ್ಯರು ಸಕ್ರಿಯವಾಗಿ ಸ್ವಯಂ ಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಶ್ರೀ ಪಂಚಶಕ್ತಿ ಎಂಟರ್ ಪ್ರೈಸಸ್ ಮಾಲಕ ರಂಜಿತ್ ಪೂಜಾರಿ ಮಾತನಾಡಿ ಯುವವಾಹಿನಿಯ ಸದಸ್ಯರ ಒಗ್ಗಟ್ಟು ಹಾಗೂ ತಂಡವಾಗಿ ಮಾಡುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ಶಂಕರ ಕೋಟ್ಯಾನ್ ರವರು ತಮ್ಮ ಸೇವಾ ಅವಧಿಯಲ್ಲಿ ಮಾಡಿರುವ ಸೇವಾ ಕಾರ್ಯಗಳಿಗೆ ಬೆಂಬಲವಾಗಿ ನಿಂತು ಸಹಕರಿಸಿದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಮತ್ತು ಸದಸ್ಯರನ್ನು ಸ್ಮರಿಸಿ, ಸ್ಮರಣೆಕೆ ನೀಡಿ ಗೌರವಿಸಿದರು ಹಾಗೂ ಮುಂದಿನ ತಂಡಕ್ಕೆ ಸಂಪೂರ್ಣ ಸಹಕಾರದ ಮಾತನ್ನು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಚಂದ್ರ ಸಾಲಿಯಾನ್ ಪಾಣಿಲ, ಕಾರ್ಯಕ್ರಮ ಉದ್ಘಾಟಿಸಿದ ಹಿರಿಯರಾದ ಪದ್ಮನಾಭ ಸಾಲಿಯಾನ್ ಮತ್ತು ಏಷ್ಯನ್ ತ್ರೋಬಾಲ್ ಖ್ಯಾತಿಯ ಅಂತರಾಷ್ಟ್ರೀಯ ಕ್ರೀಡಾಪಟು ಶಮಿತ ಶಿರ್ವ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತಗೊಂಡ ಸತೀಶ್ ಚಂದ್ರ ಸಾಲಿಯಾನ್ ಪಾಣಿಲ ಮಾತನಾಡಿ ನಮ್ಮ ಸಮಾಜದಲ್ಲಿ ಎದ್ದು ಕಾಣುತ್ತಿರುವ ಶಿಕ್ಷಣದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳ ಸ್ಥಾಪನೆಯ ಕಡೆಗೂ ಗಮನಹರಿಸುವಂತೆ ಕರೆ ನೀಡಿದರಲ್ಲದೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
2023-24 ಸಾಲಿನ ಕಾರ್ಯವೈಖರಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಹಾಗೂ ಪ್ರಚಾರ ನಿರ್ದೇಶಕರಾದ ಆದರ್ಶ ಸುವರ್ಣ ಇವರುಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳ ಸಮ್ಮುಖದಲ್ಲಿ ಅಧ್ಯಕ್ಷರು ಸನ್ಮಾನಿಸಿದರು.
10 ಮಂದಿ ಹೊಸ ಸದಸ್ಯರು ಮೂಡುಬಿದಿರೆ ಘಟಕಕ್ಕೆ ಸ್ವಇಚ್ಛೆಯಿಂದ ಸೇರ್ಪಡೆಗೊಂಡರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಲೋಕೇಶ್ ಅಮೀನ್, ಕೇಂದ್ರ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹೊಸ ತಂಡಕ್ಕೆ ಶುಭ ಹಾರೈಸಿದರು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಾರ್ಷಿಕ ವರದಿ ಮಂಡಿಸಿದರು.
ಹನಿ.ಎಂ.ಅಮೀನ್, ಪ್ರಕೃತಿ ಮಾರೂರು ಮತ್ತು ಹರ್ಷ.ಯು ಕೋಟ್ಯಾನ್ ಪ್ರಾರ್ಥನೆ ನೆರವೇರಿಸಿದರು.
ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಘಟಕದ ನೂತನ ಕಾರ್ಯದರ್ಶಿ ವಿನೀತ್ ಸುವರ್ಣ ಧನ್ಯವಾದ ಸಲ್ಲಿಸಿದರು.