ಕಟಪಾಡಿ ಶ್ರೀ ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಆರ್. ಕೋಟ್ಯಾನ್ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ರಕ್ಷಿತ್ ಆರ್. ಕೋಟ್ಯಾನ್ ಓರ್ವ ಸತತ ಪರಿಶ್ರಮದ ಮೂಲಕ ದೇಹದಾರ್ಡ್ಯತೆಯ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಯುವಕ.
ಶಿರ್ವದ ಸೈಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜು, ಮೂಡಬಿದ್ರಿಯಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿರುವ ರಕ್ಷಿತ್ ಶಿಕ್ಷಣದೊಂದಿಗೆ ಕ್ರೀಡಾ ಸಾಧನೆಯ ಮೇರು ಶಿಖರದತ್ತ ಧಾವಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ.
ಕಿರಿವಯಸ್ಸಿನಲ್ಲಿ ದೇಹದಾರ್ಡ್ಯತೆಯತ್ತ ಆಕರ್ಷಿತರಾದ ನಂತರ ತನ್ನ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರಲಾರಂಭಿಸಿ ಜಿಲ್ಲಾ ಮಟ್ಟದಲ್ಲಿ 5 ಚಿನ್ನ, 1 ಬೆಳ್ಳಿ ಪದಕ ಗಳಿಸಿ ಮತ್ತೆ ಹಿಂದಿರುಗಿ ನೋಡಲಿಲ್ಲ. ನೋಡ ನೋಡುತ್ತಿರುವಂತೆ ರಾಜ್ಯಮಟ್ಟದಲ್ಲಿ ಅದ್ಭುತ 13 ಚಿನ್ನ, 6 ಬೆಳ್ಳಿ ಪದಕಗಳನ್ನು ಬಾಚಿ ಜನರು ನಿಬ್ಬೆರಗಾಗುವಂತೆ ಮಾಡಿದ್ದಾರೆ ಶ್ರೀ ರಕ್ಷಿತ್ ಕೋಟ್ಯಾನ್.
ಯುನಿವರ್ಸಿಟಿ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಸತತ 3 ಬಾರಿ ಮಿಸ್ಟರ್ ಮಂಗಳೂರು ಯುನಿವರ್ಸಿಟಿ, ರಾಷ್ಟ್ರ ಮಟ್ಟದ ಆಲ್ ಇಂಡಿಯಾ ಯೂನಿವರ್ಸಿಟಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಆಲ್ ಇಂಡಿಯ ಯೂನಿವರ್ಸಿಟಿ ಸ್ಪರ್ಧೆಯಲ್ಲಿ ಮಿಸ್ಟರ್ ಆಲ್ ಇಂಡಿಯಾ ಯೂನಿವರ್ಸಿಟಿ-2016 ಪ್ರಶಸ್ತಿಯನ್ನು ಬಾಚಿಕೊಂಡು ನಮ್ಮ ಸಮುದಾಯವೇ ಮೈನವಿರೇಳಿಸುವಂತೆ ಮಾಡಿದ್ದಾರೆ.
ಶಿಸ್ತು, ಸಂಯಮ ಮತ್ತು ಉತ್ತಮ ನಡತೆಯ ಈ ಯುವಕ ಕಟಪಾಡಿಯ ವಜ್ರ ಜಿಮ್‌ನಲ್ಲಿ ತನ್ನ ಅಭ್ಯಾಸ ಮುಂದುವರೆಸುತ್ತಿದ್ದು ಸಮಾಜದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವುದು ಖಚಿತ. ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪೆ ಹಾಗೂ ಹಿರಿಯರ ಮತ್ತು ಸಮಾಜದ ಎಲ್ಲರ ಆಶೀರ್ವಾದ ಅವರ ಮೇಲಿದೆ. ಯುವ ಸಾಧನಾ ಪುರಸ್ಕಾರವನ್ನು ಅವರಿಗೆ ನೀಡಿ, ಯುವವಾಹಿನಿಯ ಸಮಸ್ತ ಸದಸ್ಯರು ಅತ್ಯಂತ ಹೆಮ್ಮೆ ಪಡುತ್ತೇವೆ.