ಪ್ರತಿಭೆಗೆ ಸರಹದ್ದುಗಳಿಲ್ಲ-ಕಾರ್ಯಕ್ಷೇತ್ರಗಳೆಂಬ ಇತಿಮಿತಿ ಇರುವುದಿಲ್ಲ ಎಂಬ ಮಾತಿಗೆ ಸ್ಪಷ್ಟ ನಿದರ್ಶನ-ಬಜಪೆಯ ಶ್ರೀ ಪಿ.ಮೋಹನ್ ಕುಮಾರ್ ಹಾಗೂ ಕನಕಾ ಎಂ ದಂಪತಿಗಳ ಸುಪುತ್ರಿ ಕು| ಅಕ್ಷತಾ. ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ವಾಣಿಜ್ಯ ಕ್ಷೇತ್ರದತ್ತ ಮುಖ ಮಾಡಿದ ಈಕೆ ಬಿ.ಕಾಂ ಪದವಿಯನ್ನು ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ (ಮಾನವ ಸಂಪನ್ಮೂಲ) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಕಲೆಯಲ್ಲಿ ದಿ| ವಿ.ಪಿ.ಕಾರಂತ, ಶ್ರೀ ಪಿ. ಮೋಹನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕರ್ನಾಟಕ ಸಂಗೀತದತ್ತ ಒಲವು ತೋರಿಸಿ ಶ್ರೀಮತಿ ತುಳಸಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ಧರ್ಮಸ್ಥಳ ಶಾಂತಿವನ ಟ್ರಸ್ಟ್ ನಡೆಸುವ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯಲ್ಲಿ ನಾಲ್ಕು ಬಾರಿ ಪ್ರಥಮ ಪ್ರಶಸ್ತಿ ಗಳಿಸಿದ ಅಕ್ಷತ ಕೊರಿಯಾದಲ್ಲಿ ನಡೆದ 11ನೆಯ ಅಂತಾರಾಷ್ಟ್ರೀಯ ಕಲಾ ವಿನಿಮಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ 2005 ಹಾಗೂ 2008 ರಲ್ಲಿ ಶಂಕರ್‍ಸ್ ಇಂಟರ್‌ನ್ಯಾಷನಲ್ ಮಕ್ಕಳ ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿದ್ದಾರೆ. ನವ ದೆಹಲಿಯ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸ್ ಆಂಡ್ ಟ್ರೈನಿಂಗ್‌ನ ದೃಶ್ಯ ಕಲೆಯಲ್ಲಿ ಫೆಲೋಶಿಪ್ ಪಡೆದು ಹೈದರಾಬಾದ್‌ನಲ್ಲಿ ಅಅಖಖಿ ನಡೆಸಿದ ರಾಷ್ಟ್ರಮಟ್ಟದ ಪ್ರತಿಭಾ ಉತ್ಸವದಲ್ಲಿ ಜನಮನ ಗೆದ್ದಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಚಾರ.
ರಾಜ್ಯ, ರಾಷ್ಟ್ರ ಮಟ್ಟದ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾನಪದ ನೃತ್ಯ, ಸಂಗೀತ ಹಾಗೂ ಕಲೆಯಲ್ಲಿ ಹಲವು ಪ್ರಶಸ್ತಿ ಗಳಿಸುತ್ತಾ ಮುನ್ನಡೆಯುತ್ತಿರುವ ಈ ಯುವ ಶಿಕ್ಷಕಿಯ ಸಾಧನೆಯನ್ನು ಗುರುತಿಸಿ ಯುವ ಸಾಧನಾ ಪುರಸ್ಕಾರವನ್ನು ನೀಡಲು ಯುವವಾಹಿನಿ ಹೆಮ್ಮೆ ಪಡುತ್ತಿದೆ.