ಅಡ್ವೆ: ಯುವವಾಹಿನಿ ಸಂಘಟನೆಯು ಊರಿನಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಳೆದ 5 ವರ್ಷಗಳಿಂದ ಸಾಕಷ್ಟು ಬೆಳೆದು ನಿಂತು ಸಮಾಜಕ್ಕೆ ಕೈಲಾದ ಸಹಾಯ ನೀಡುತ್ತಿದೆ. ಇನ್ನು ಮುಂದೆಯೂ ನಿಂತ ನೀರಾಗದೆ ಮುಂದೆ ಸಾಗುತ್ತಿರಲಿ, ಇದಕ್ಕೆ ನಮ್ಮ ಹಿರಿಯರ ಸಲಹೆ ಸಹಕಾರ ಹಾಗೂ ಆಶೀರ್ವಾದ ಸದಾ ಇದೆ ಎಂದು ಅಡ್ವೆ ಗರಡಿಮನೆ ರಾಮ ಪೂಜಾರಿಯವರು ನುಡಿದರು. ಇವರು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜರಗಿದ ಯುವವಾಹಿನಿ(ರಿ.) ಅಡ್ವೆ ಘಟಕದ 2019ನೇ ಸಾಲಿನ ಪದಗ್ರಹಣ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಿಲ್ಲವ ಸಮಾಜದ ಏಳಿಗೆಗಾಗಿ ಯುವವಾಹಿನಿಯ ಸದಸ್ಯರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ, ರಂಗಕರ್ಮಿ ನರೇಂದ್ರ ಕೆರೆಕಾಡು ರವರು ನುಡಿದರು. ಈ ಸಂದರ್ಭದಲ್ಲಿ ಅಡ್ವೆಯ ಮಣ್ಣಿನಲ್ಲಿ ಜನಿಸಿದ 2 ಬಿಲ್ಲವ ರತ್ನಗಳಾದ ಜಯ ಸಿ ಸುವರ್ಣ ಹಾಗೂ ಅಡ್ವೆ ರವೀಂದ್ರ ಪೂಜಾರಿಯವರ ಸೇವೆಯನ್ನು ನೆನೆಸಿಕೊಂಡರು.
ಈ ಸಂದರ್ಭದಲ್ಲಿ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ “ಡೆನ್ನಾನ-ಡೆನ್ನಾನ” ದಲ್ಲಿ ನಟನೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಬಹುಮಾನ ಗಳಿಸಿದ ನಮ್ಮ ಘಟಕದ ಸದಸ್ಯೆ ಉಷಾ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ವೇಟ್ ಲಿಫ್ಟಿಂಗ್ ನಲ್ಲಿ ಅದ್ವಿತೀಯ ಸಾಧನೆಗೈದ ನಮ್ಮ ಘಟಕದ ಸದಸ್ಯೆ ಉಮಾಶ್ರೀ ಹಾಗೂ ಹಾಕಿ ಪಂದ್ಯಾಟದಲ್ಲಿ ಸಾಧನೆಗೈದ ಸುರಕ್ಷಾ ಇವರುಗಳನ್ನು ಸನ್ಮಾನಿಸಲಾಯಿತು.
ಕಳೆದ 32 ವರ್ಷಗಳಿಂದ ಯುವವಾಹಿನಿ ಸಂಸ್ಥೆಯು ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಉತ್ತಮ ನಾಯಕರುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದಿರುತ್ತದೆ ಎಂದು ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಹಾಗೂ ಅಡ್ವೆ ಘಟಕದ ಗೌರವ ಸಲಹೆಗಾರರಾದ ವಿಜಯ್ ಕುಮಾರ್ ಕುಬೆವೂರು ಇವರು 2019-20 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಘಟಕದ ಅಧ್ಯಕ್ಷರಾದ ಜಿತೇಶ್ ಜೆ. ಕರ್ಕೇರ ಇವರು ನಿಯೋಜಿತ ಅಧ್ಯಕ್ಷರಾದ ಶ್ರೀಧರ್ ಟಿ. ಪೂಜಾರಿ ಇವರಿಗೆ ಹಾಗೂ ಕಾರ್ಯದರ್ಶಿ ಪ್ರಸನ್ನ ಕುಮಾರ್ ಇವರು ನಿಯೋಜಿತ ಕಾರ್ಯದರ್ಶಿಯಾದ ಶರತ್ ಕುಮಾರ್ ಇವರಿಗೆ ಅಧಿಕಾರ ಹಸ್ತಾಂತರಿಸಿದರು.
ಪದಗ್ರಹಣದ ನಂತರ ಪ್ರತಿಜ್ಞಾ ವಿಧಿ ಸ್ವೀಕರಿಸಿದ ನೂತನ ಅಧ್ಯಕ್ಷರಾದ ಶ್ರೀಧರ್ ಟಿ.ಪೂಜಾರಿ ಇವರು ತಮ್ಮ ಅವಧಿಯಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಲು ಎಲ್ಲರ ಸಲಹೆ, ಸಹಕಾರವನ್ನು ಯಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿತೇಶ್ ಜೆ. ಕರ್ಕೇರ ಇವರು ಕಳೆದ ಒಂದು ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಘಟಕದ ಎಲ್ಲಾ ಕೆಲಸ ಕಾರ್ಯಗಳಿಗೆ ಸಲಹೆ ಸಹಕಾರ ನೀಡಿದ ಸರ್ವ ಸದಸ್ಯರಿಗೆ ವಂದಿಸಿ ಮುಂದೆಯೂ ತನ್ನಿಂದಾದ ಸಹಕಾರವನ್ನು ನೀಡುತ್ತೇನೆ ಎಂಬ ಭರವಸೆ ನೀಡಿದರು.
2018-19 ನೇ ಸಾಲಿನ ಅವಧಿಯಲ್ಲಿ ಉತ್ತಮ ಸಮಾಜಮುಖಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಜಿತೇಶ್ ಜೆ. ಕರ್ಕೇರ ದಂಪತಿಗಳನ್ನು ಘಟಕದ ಸರ್ವಸದಸ್ಯರ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು 2019-20 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಘಟಕದ ಅಧ್ಯಕ್ಷರಾದ ಜಿತೇಶ್ ಜೆ. ಕರ್ಕೇರ ಇವರು ಎಲ್ಲರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಅಡ್ವೆ ಗರಡಿಮನೆ ಪ್ರಸ್ತಾವಿಸಿದರು. ಕಾರ್ಯದರ್ಶಿ ಪ್ರಸನ್ನ ಕುಮಾರ್ 2018-19ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ನಿಯೋಜಿತ ಕಾರ್ಯದರ್ಶಿ ಶರತ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಸೌಮ್ಯನಿತೇಶ್ ಹಾಗೂ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.