ಸಿಂಚನ ವಿಶೇಷಾಂಕ : 2017

ಮತ್ತೆ CET…ಯ ಸುತ್ತ

ಶಶಿಲೇಖಾ ಬಿ.

ಮೇ-ಜೂನ್ ತಿಂಗಳುಗಳು ಅಬ್ಬರದ ಮುಂಗಾರು ಮಳೆಯನ್ನು ತರುವುದರ ಜೊತೆ ವಿದ್ಯಾರ್ಥಿ ಸಮುದಾಯದಲ್ಲಿ ಅತ್ಯಂತ ತಳಮಳದ, ಅಲ್ಲೋಲ ಕಲ್ಲೋಲದ ಆತಂಕದ ಕಾಲವನ್ನೂ ತರುತ್ತವೆ. ವಿದ್ಯಾರ್ಥಿಗಡಣ CET ಎಂಬ ಸುನಾಮಿಯ ಸುತ್ತ ದಿಕ್ಕು ತಪ್ಪಿದವರಂತೆ, ಸುತ್ತ ತೊಡಗುತ್ತದೆ. CET ಒಂದೆರಡು ವರ್ಷಗಳ ಮೊದಲೇ ಪ್ರಾರಂಭವಾಗುವ ಈ ಸುನಾಮಿ ಕೇವಲ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಅವರ ಹೆತ್ತವರನ್ನೂ, ಕುಟುಂಬವನ್ನೂ ಒಟ್ಟಿಗೆ ಬಾಧಿಸುತ್ತದೆ. ಈ ಚಂಡಮಾರುತಕ್ಕೆ ಒಂದು ಕರಾಳ ಮುಖವೂ ಇದೆ. ಇದಕ್ಕೆ ಅನೇಕ ವಿದ್ಯಾರ್ಥಿಗಳು ಸುಖಾಸುಮ್ಮನೆ ಬಲಿಯಾಗುತ್ತಿದ್ದಾರೆ. ಇನ್ನೊಂದಷ್ಟು ಜನ ಮಾನಸಿಕ ತುಮುಲಕ್ಕೊಳಗಾಗಿ ಖಿನ್ನತೆಗೆ ಜಾರುತ್ತಾರೆ. ಇಂಥ ಒಂದು ಸ್ವನಿರ್ಮಿತ ಆತಂಕದ ರಕ್ಕಸದಲೆಗಳ ಅಗತ್ಯವಿದೆಯೇ? ಈ ದುಷ್ಕ್ರತಿಯಲ್ಲಿ ವಿದ್ಯಾರ್ಥಿಗಳ ಹೆತ್ತವರ ಪಾತ್ರವೇನು? ಹಾಗೂ ನಮ್ಮ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಷ್ಟರಮಟ್ಟಿಗೆ ಈ ಅನಾಹುತಗಳಿಗೆ ಕಾರಣವಾಗುತ್ತವೆ ಎಂಬುದು ಚಿಂತನಾರ್ಹ ವಿಷಯ. ಇನ್ನು ನಮ್ಮ ವಿದ್ಯಾರ್ಥಿಗಳನ್ನು ಪೂರ್ತಿಯಾಗಿ ಆವರಿಸಿ ಅವರು ಸಮಾಜದಲ್ಲಿ ‘ತನ್ನ ಮತ್ತು ತನಗೆ’ ಎಂಬ ತತ್ವವನ್ನು ಅಪ್ಪಿಕೊಂಡು ಸ್ವಾರ್ಥದ ಮೂಟೆಯಾಗುವಲ್ಲಿ ನಮ್ಮ ಶೈಕ್ಷಣಿಕ ಸಂಸ್ಥೆಗಳ ಕೊಡುಗೆ ಏನು? ಎಂಬುದರ ಮೇಲೆ ಬೆಳಕು ಚೆಲ್ಲಲು ಇಲ್ಲಿ ಪ್ರಯತ್ನಿಸಲಾಗಿದೆ.

ಹೆತ್ತವರು ಎಲ್ಲಿ ತಪ್ಪುತ್ತಾರೆ?
ಇಂದಿನ ಸಮಾಜದಲ್ಲಿ ತಮ್ಮ ಮಕ್ಕಳನ್ನು ಇಂಜಿನಿಯರ್/ಡಾಕ್ಟರ್ ಯಾ ಸಿಎ ಮಾಡಿಸುವುದೇ ತಮ್ಮ ಪರಮ ಕರ್ತವ್ಯ ಹಾಗೂ ತಮ್ಮ ತನು-ಮನ-ಧನಗಳನ್ನು ಅರ್ಪಿಸುವ ಪುಣ್ಯಕಾರ್ಯ ಎಂಬುದನ್ನು ಸಾಧಾರಣವಾಗಿ ಎಲ್ಲ ಹೆತ್ತವರೂ ನಂಬಿರುತ್ತಾರೆ. ಇದಕ್ಕಾಗಿ ಪ್ರಾಥಮಿಕ ಹಂತದಲ್ಲೇ ತಯಾರಿ ಪ್ರಾರಂಭವಾಗುತ್ತದೆ. ಹೈಸ್ಕೂಲು ಮೆಟ್ಟಲೇರಿದ ಮಗು ತನ್ನ ಬಾಲ್ಯದ ನಿರಾಳತೆಯ ದಿವ್ಯಕಾಲವನ್ನು ತೊರೆದು ಅಕಾಲದಲ್ಲಿ ಪ್ರೌಢನಾಗಬೇಕಾಗುತ್ತದೆ. ಆತನಿಗೆ ಈ ಹಂತದಲ್ಲೇ ಅವನ ಹೆತ್ತವರ ನಿರೀಕ್ಷೆಗಳು, ಅದನ್ನು ನನಸಾಗಿಸುವಲ್ಲಿ ಅವನು ಮಾಡಬೇಕಾದ ಕರ್ತವ್ಯಗಳು, ತ್ಯಾಗಗಳೇನು ಎಂಬುದನ್ನು ಮನದಟ್ಟು ಮಾಡುವುದೇ ಪೋಷಕರ ಪ್ರಥಮ ಕರ್ತವ್ಯವಾಗುತ್ತದೆ. ಜೊತೆಯಲ್ಲಿ ಅವನ ಇಷ್ಟಾನಿಷ್ಟಗಳಿಗೆ ಕತ್ತರಿ ಹಾಕಲಾಗುತ್ತದೆ. ಅವನು ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ನೋಡಿಕೊಂಡು, ಅವನ ಪ್ರತಿಭೆಗಳನ್ನು ಎಳವೆಯಲ್ಲೇ ಚಿವುಟಿ ಅವು ತಲೆಯೆತ್ತದಂತೆ ನೋಡಿಕೊಳ್ಳಲಾಗುತ್ತದೆ ಹಾಗಾಗಿ ಕೇವಲ ಪರೀಕ್ಷೆ-ಅಂಕ, ಗ್ರೇಡ್, ರಾಂಕ್ ಇವುಗಳ ಸುತ್ತ ಮಗು ಗಿರಕಿ ಹೊಡೆಯುತ್ತಾ ದೊಡ್ಡವರ ಆಟದಲ್ಲಿ ಒಂದು ಬುಗರಿಯಾಗುತ್ತದೆ. ಸಂಗೀತ, ಭಾಷಣ, ಸಂಸ್ಕ್ರತಿ , ಸಾಹಿತ್ಯ, ಕಲೆ ಇವುಗಳ ಗಾಳಿಯೂ ಬೀಸದಂತೆ ತಂದೆ ತಾಯಿ ನೋಡಿಕೊಳ್ಳುತ್ತಾರೆ.
ಇದಕ್ಕೆ ಉದಾಹರಣೆಯಾಗಿ ಒಂದು ದೃಶ್ಯ ಇಲ್ಲಿದೆ ನೋಡಿ. ಒಂದು ಒಂದನೇ ಕ್ಲಾಸ್‍ನ ಮಗುವಿಗೆ ಆ ದಿನ ಪರೀಕ್ಷೆ. ಮಧ್ಯಾಹ್ನ ಊಟ ಮಾಡಿಸುತ್ತಿದ್ದ ತಾಯಿ ಪ್ರತಿ ತುತ್ತಿನೊಂದಿಗೆ ಒಂದೊಂದು ಪದದ ಸ್ಪೆಲ್ಲಿಂಗ್ ಕೇಳುತ್ತಿದ್ದಳು. ತಾಯಿ ಆ ಕಡೆ ತಂದೆ ನಿಂತಿದ್ದಾರೆ, ಈ ಕಡೆ ಅಜ್ಜ ನಿಂತು ಮಗುವಿಗೆ ಒಂದು, ಕೋಟೆ ಕಟ್ಟಿದ್ದಾರೆ. ಅವರೂ ತಮ್ಮ ಪ್ರಶ್ನೆಗಳನ್ನು ಮಧ್ಯೆ ಮಧ್ಯೆ ತೂರುತ್ತಿದ್ದರು. ಜೊತೆಗೆ ಉತ್ತರ ಕೊಡಲಾಗದ್ದಕ್ಕೆ ಬೈಗಳು ಕೂಡಾ. ದೈನ್ಯತೆಯೇ ಮೈವೆತ್ತಂತಿರುವ ಮಗು ಬಾಯಿಯಲ್ಲಿ ಅನ್ನದ ಅಗುಳನ್ನು ಇಟ್ಟುಕೊಂಡು, ಕಣ್ಣಲ್ಲಿ ನೀರು ತುಂಬಿಕೊಂಡು spelling ಹೇಳುವ ನಾನು ಕಂಡ ಆ ದೃಶ್ಯ ಇನ್ನೂ ನನ್ನ ಕಣ್ಣ ಮುಂದಿದೆ. ಇದು ಮಕ್ಕಳ ಶೋಷಣೆಯಲ್ಲದೆ ಮತ್ತೇನು? ಇಂಥಹಾ ದೌರ್ಜನ್ಯದಲ್ಲಿ ಬೆಳೆದ ಮಗು ಮುಂದೆ ಯಾವ ತೆರನಾದ ವ್ಯಕ್ತಿಯಾದಾನು?
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮಕ್ಕಳು ಹಾಳಾಗುತ್ತಾರೆಂದು ಬಲವಾಗಿ ನಂಬಿದ ಪೋಷಕರೆಷ್ಟು ಮಂದಿ ಬೇಕು? ನಾನು ಶಿಕ್ಷಕಿಯಾಗಿದ್ದ ಸಂದರ್ಭದಲ್ಲಿ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳನ್ನು ಯಾವ ಸ್ಪರ್ಧೆಗೂ ಕಳುಹಿಸಬಾರದೆಂದು ಶಿಕ್ಷಕರನ್ನು ಬೇಡಿಕೊಳ್ಳುವ ಉದಾಹರಣೆಗಳನ್ನು ಅನೇಕ ಕಂಡಿದ್ದೇನೆ. ಇನ್ನು ಸಂಸ್ಕøತಿ, ಸಾಹಿತ್ಯದ ಗಂಧಗಾಳಿ ಹೆತ್ತವರಿಗೆ ಸೋಂಕಿದರೆ ತಾನೆ ಅವರು ಮಕ್ಕಳನ್ನು ಉತ್ತೇಜಿಸುವುದು? ಹೀಗೆ ಬೆಳೆದ ಮಗು ಮಾರ್ಕ್, ಗ್ರೇಡ್ ಬಗ್ಗೆ ಜೀವವನ್ನೇ ಇಟ್ಟಿರುತ್ತಾನೆ. ಆತನೆಣಿಕೆಗಿಂತ ಕಡಿಮೆ ಅಂಕ ಸಿಕ್ಕಾಗ ನಿರಾಸೆಯಿಂದಲೋ, ಹೆತ್ತವರ ಹೆದರಿಕೆಯಿಂದಲೋ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ವಿಪರೀತ ಕ್ರಮಗಳನ್ನು ವಿದ್ಯಾರ್ಥಿಗಳು ಕೈಗೊಂಡುದನ್ನೂ ನಾನು ಕಂಡಿದ್ದೇನೆ. ಇದಕ್ಕೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಬಳಿಕ ಆತ್ಮಹತ್ಯಾ ಪ್ರಕರಣಗಳು ಹೆಚ್ಚುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತೇವೆ.

ಕೋಚಿಂಗ್ ಸೆಂಟರ್‍ಗಳೆಂಬ ಜೈಲುಗಳು:
ಇನ್ನು ಪಿ.ಯು.ಸಿ.ಗೆ ಸೇರ್ಪಡೆಯಾದ ಮೇಲಂತೂ ವಿಜ್ಞಾನ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರ ಪಾಡು ನಾಯಿಪಾಡೇ. ಕಟ್ಟಿ ಸಾಕಿದ ನಾಯಿಗೆ ಬೊಗಳುವ ಸ್ವಾತಂತ್ರ್ಯವಾದರೂ ಇದೆ. ಕೆಲವೊಮ್ಮೆ ಸಾಕಿದವರ ಪ್ರೀತಿ, ಕಾಳಜಿ ಸಿಗುತ್ತದೆ. ಆದರೆ ನಮ್ಮ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇದೂ ದುರ್ಲಭವೇ. ಕಾಲೇಜಿನ ಶಿಕ್ಷಣ ಸಾಲದ್ದಕ್ಕೆ ಲಕ್ಷಗಟ್ಟಲೆ ತೆತ್ತು ಪ್ರತಿಷ್ಠಿತ ಕೋಚಿಂಗ್ ಸೆಂಟರ್‍ಗಳಲ್ಲಿ ನೋಂದಾವಣೆ. ಕೆಲವೊಮ್ಮೆ ಅದಕ್ಕಾಗಿ ಹುಟ್ಟಿದ ಊರು, ಮನೆ, ತನ್ನವರನ್ನು ಬಿಟ್ಟು ಹಾಸ್ಟೆಲ್‍ಗಳಲ್ಲಿ ವಾಸ. ಬೆಳಿಗ್ಗೆ 6-6.30ಕ್ಕೆ ಮನೆ ಬಿಟ್ಟ ವಿದ್ಯಾರ್ಥಿ 8.30-9ರವರೆಗೆ ಕೋಚಿಂಗ್ ಸೆಂಟರ್‍ನಲ್ಲಿರುತ್ತಾನೆ. ಅಲ್ಲಿಂದ ನೇರ ಕಾಲೇಜಿಗೆ. ಈ ಮಧ್ಯೆ ಹೊಟ್ಟೆಗೆ ಹಾಕಲೂ ಪುರುಸೊತ್ತಿಲ್ಲ. ಇನ್ನು ಸಂಜೆ ಕಾಲೇಜು ಮುಗಿಯುತ್ತಲೂ ಪುನಃ ಕೋಚಿಂಗ್. ವಿಜ್ಞಾನ ವಿಭಾಗದ ನಾಲ್ಕು ವಿಷಯಗಳಲ್ಲಿ ಬೇರೆ ಬೇರೆಯಾಗಿ ಕೋಚಿಂಗ್. ಇಲ್ಲಿ ಇನ್ನೊಂದು ಗಮನಾರ್ಹ ವಿಷಯವೆಂದರೆ ಅವನು ಕಾಲೇಜ್‍ನಲ್ಲಿ ಕಲಿಯುವ ಪಠ್ಯಭಾಗ ಒಂದಾದರೆ ಕೋಚಿಂಗ್‍ನ ಪಠ್ಯ ಭಾಗವೇ ಬೇರೆ. ಇದೆಲ್ಲ ಮುಗಿಸಿ ರಾತ್ರಿ 9 ಗಂಟೆ ಹೊತ್ತಿಗೆ ಮನೆಗೆ ಬಂದಾಗ ಅವನು ರಸತೆಗೆದ ಕಬ್ಬಿನ ಜಿಲ್ಲೆಯಂತಾಗುತ್ತಾನೆ. ಆ ಮಗುವಿಗೆ ಅಂದಿನ ಪಾಠಗಳನ್ನು ಮನನ ಮಾಡುವ/ಜೀರ್ಣಿಸುವ ಅವಕಾಶವಿದೆಯೇ? ನಿದ್ರೆಗೆ ಮಾರು ಹೋಗದೆ ಬೇರೆ ವಿಧಿಯಿಲ್ಲ. ಮರುದಿನ ಮತ್ತದೇ ಪುನರಾವರ್ತನೆ. ಹೀಗೆ ಕೋಚಿಂಗ್‍ಗೆ ಹೋಗುವ ಮಕ್ಕಳು ತರಗತಿಯಲ್ಲಿ ಎಲ್ಲೋ ಕಳೆದು ಹೋದವರಂತೆ ಮಂಕಾಗಿರುವುದನ್ನು ಕಂಡ ನಾನು ಮರುಕಪಟ್ಟಿದ್ದೇನೆ. ವಿದ್ಯಾರ್ಥಿಗಳಿಗೆ ಆ ವಿಷಯಗಳ ಬಗ್ಗೆ ಆಸಕ್ತಿ ಇದೆಯೇ? ಅವನು ಒಬ್ಬ ಇಂಜಿನಿಯರ್/ಡಾಕ್ಟರ್ ಆಗಲು ಇಷ್ಟಪಡುತ್ತಾನೆಯೇ ಎಂಬುದನ್ನು ಖಂಡಿತಾ ಅವನಲ್ಲಿ ಕೇಳಲಾಗುವುದಿಲ್ಲ. “ಇದೆಲ್ಲ ಅವರಿಗೆ ಹೇಗೆ ತಿಳಿಯುತ್ತದೆ? ನಾವು ಒಳ್ಳೆಯ (?) ದಾರಿ ತೋರಿಸಬೇಕಲ್ಲವೇ?” ಎಂದು ವಾದಿಸುವ ಹೆತ್ತವರೂ ಇದ್ದಾರೆ. ಅಂತೂ ವಿದ್ಯಾರ್ಥಿಯನ್ನು ಒಬ್ಬ ರೋಬೋಟ್ ತರ ರೂಪಾಂತರ ಮಾಡಲಾಗುತ್ತದೆ.
ಹೀಗಾದಲ್ಲಿ ವಿದ್ಯಾರ್ಥಿ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಕಡೆಗೆ ಗಮನಹರಿಸಲು ಸಾಧ್ಯವೇ? ಸಾಹಿತ್ಯ, ಕಲೆ, ಸಂಸ್ಕøತಿಗಳೆಂಬ ಉತ್ಸಾಹದಾಯಕ ವಾತಾವರಣವನ್ನು ಕಲ್ಪಿಸಲೂ ಸಾಧ್ಯವೇ? ಬೇಡ. ಕ್ರೀಡಾ ಲೋಕದಲ್ಲಾದರೂ ಕಾಲೂರಲು ಸಾಧ್ಯವೇ? ಅವರಲ್ಲಿ ಮಾನವತೆ ಹುಟ್ಟಿ ಬೆಳೆಯಲು ಪೂರಕವಾದ ವಾತಾವರಣವನ್ನು ನಾವು ಹೆತ್ತವರು ಕೊಟ್ಟಿದ್ದೇವೆಯೇ? ಇನ್ನು ಈ ಮಕ್ಕಳಲ್ಲಿ ಉದಾತ್ತ ಗುಣಗಳು, ಮೂಡಿಬರಲು ಸಾಧ್ಯವೇ? ಅವನೊಬ್ಬ ಸತ್ಪ್ರಜೆಯಾಗಿ, ತನ್ನ ಸುತ್ತಲಿನ ಸಮಾಜಕ್ಕೆ ಸಹಾಯಹಸ್ತ ನೀಡುವಂತಹ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವೇ? ಇಲ್ಲ, ಖಂಡಿತಾ ಇಲ್ಲ. ಬದಲಿಗೆ ಹೆಚ್ಚಿನ ಸಂದರ್ಭಗಳಲ್ಲಿ ಆತ ಒಬ್ಬ Self Centre ಸ್ವಾರ್ಥಿ ವ್ಯಕ್ತಿಯಾಗಿ ಬೆಳೆಯುತ್ತಾನೆ. ಇಂಜಿನಿಯರ್/ಡಾಕ್ಟರ್ ಆಗಬಹುದು ಆದರೆ ಹೃದಯವಂತನಾಗಿ ಅಲ್ಲ. ತನ್ನದೇ ಬೊಕ್ಕಸ ತುಂಬಿಸುವ ಖೂಳ ಡಾಕ್ಟರ್‍ಗಳು, ದುರುಳ ಭ್ರಷ್ಟ ಇಂಜಿನಿಯರ್‍ಗಳು ಹುಟ್ಟಿಕೊಳ್ಳುವುದು ಹೀಗೆಯೇ. ತಾನು, ತನ್ನ ಹೆಂಡತಿ ಮಕ್ಕಳು, ಬಂಗಲೆ, ಕಾರು, ಸ್ಥಾನಮಾನ-ಇವುಗಳ ಸುತ್ತಲೇ ಗಿರಕಿ ಹೊಡೆಯುತ್ತಾ ಅತ್ಯಂತ ಸ್ವಾರ್ಥಿಯಾಗಿ ಕೆಲವೊಮ್ಮೆ ವಂಚಕನಾಗಿ, ದುರುಳನಾಗಿ ಸಮಾಜ ಕಂಟಕನಾಗಿ ಬೆಳೆಯುತ್ತಾನೆ.

ಸಾಮಾಜಿಕ ನಡುಗಡ್ಡೆಗಳು
ಹೆಚ್ಚಿಗೆ ಬೇಡ, ಈ ರ್ಯಾಂಕ್ ಬಂದ ವಿದ್ಯಾರ್ಥಿಗಳನ್ನು ಮಾಧ್ಯಮದವರು ಸಂದರ್ಶನ ಮಾಡಿದ ಸಂದರ್ಭಗಳಲ್ಲಿ ಹೆಚ್ಚಿನ ತಥಾಗಥಿತ ಪ್ರತಿಭಾವಂತರು ಅತಿ ಸಾಮಾನ್ಯವಾದ ಪ್ರಶ್ನೆಗಳಿಗೂ ಉತ್ತರಿಸಲಾಗದೆ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದುದನ್ನು ನಾವು ವಾರ್ತಾ ಪತ್ರಗಳಲ್ಲಿ ಓದಿರುತ್ತೇವೆ. ಅಂದರೆ ಅವರಲ್ಲಿ ತುಂಬಿರುವುದು ಪುಸ್ತಕದ ಬದನೆಕಾಯಿ ಮಾತ್ರ. ಇನ್ನು ಮುಂದಿನ ಜೀವನದಲ್ಲಿ ಬರುವ ಸಮಸ್ಯೆಗಳನ್ನು, ಎದುರಾಗುವ ವಿಷಮ ಪರಿಸ್ಥಿತಿಗಳನ್ನು ಎದುರಿಸುವ ಸಾಮಾನ್ಯ ಧೈರ್ಯ ಹಾಗೂ ಎದೆಗುಂದದೆ ಮುನ್ನುಗ್ಗುವ ಛಾತಿಯೂ ಈ ಮಕ್ಕಳಲ್ಲಿರುವುದಿಲ್ಲ. ಪರಸ್ಪರ ಸಹಕಾರ ವರ್ಧನೆ, ಸಂಬಂಧ ಸಾಮರಸ್ಯಗಳ ಬಗ್ಗೆ ಏನೇನೂ ಅರಿವಿರದ ಈ ವಿದ್ಯಾರ್ಥಿಗಳು ಮುಂದೆ ಸಮಾಜದಿಂದ ದೂರವಾಗಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸದೆ, ಜನವಾಹಿನಿ ಮತ್ತದರ ಕಾಳಜಿಗಳ ಸಂಪರ್ಕವೇ ಇಲ್ಲದೆ ಒಂದು ನಡುಗಡ್ಡೆಯ ತರಹ ಜೀವಿಸುತ್ತಾರೆ. ಮಾನವೀಯ ಸಂಬಂಧಗಳ ಬಗ್ಗೆ ಅವರಲ್ಲಿ ಗೌರವವಿಲ್ಲದೆ ಎಲ್ಲವೂ ತಮ್ಮ ಮೂಗಿನ ನೇರಕ್ಕೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಹಾಗಿಲ್ಲದ ಸಂದರ್ಭದಲ್ಲಿ ಸಿಡಿದೇಳುತ್ತಾರೆ ಹಾಗೂ ವಿಪರೀತ ವರ್ತನೆಯನ್ನು ತೋರುತ್ತಾರೆ. ಆದ್ದರಿಂದಲೇ ಟೆಕ್ಕಿಗಳಲ್ಲಿ ಅತ್ಯಧಿಕ ಕೊಲೆ/ಆತ್ಮಹತ್ಯೆಗಳು ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಹಣವೇ ಎಲ್ಲವೂ ಅಲ್ಲವಲ್ಲ?

ಶಿಥಿಲವಾಗುತ್ತಿರುವ ಕೌಟುಂಬಿಕ ಸಂಬಂಧಗಳು
ಹೆತ್ತವರು ಎಲ್ಲಿಯವರೆಗೆ ಮಕ್ಕಳನ್ನು ನಿರ್ಬಂಧಿಸುತ್ತಾರೆಂದರೆ ತಮ್ಮ ಕುಟುಂಬದ ಇತರ ಸದಸ್ಯರ ಬಗ್ಗೆ ಮಕ್ಕಳಿಗೆ ಮಾಹಿತಿಯೇ ಇರುವುದಿಲ್ಲ. ಇದರಿಂದ ಇಂದು ಕೌಟುಂಬಿಕ ಸಂಬಂಧಗಳು ಎಷ್ಟು ಶಿಥಿಲವಾಗಿದೆಯೆಂದರೆ ಅಣ್ಣತಮ್ಮಂದಿರ, ಅಕ್ಕತಂಗಿಯರ ಮಕ್ಕಳಲ್ಲಿ ಪರಸ್ಪರ ಪರಿಚಯವಿಲ್ಲದ ಮಟ್ಟಿಗೆ ಈ ಸಂಬಂಧ ಹದಗೆಟ್ಟಿದೆ. ಅಣ್ಣ, ತಮ್ಮ, ಅಕ್ಕ, ತಂಗಿ ಪರಸ್ಪರರ ಮನೆಗೆ ಹೋಗಬೇಕೆಂದರೆ ಫೋನ್ ಮಾಡಿ, appointment ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಮಗನ ಪರೀಕ್ಷೆ, ಮಗಳ ಕೋಚಿಂಗ್, ಹೆತ್ತವರ ಮೀಟಿಂಗ್ ಈ ತೆರನಾದ ಸಬೂಬುಗಳನ್ನೊಡ್ಡಿ ಕುಟುಂಬಿಕರು ಬರುವುದನ್ನೇ ತಡೆಯಲಾಗುತ್ತದೆ. ಇದು ಯಾವ ಮಟ್ಟಕ್ಕೆಂದರೆ ಹತ್ತಿರದ ಸಂಬಂಧದೊಳಗೆ ನಡೆಯುವ ಮದುವೆ ಮತ್ತಿತರ ಶುಭ ಕಾರ್ಯಕ್ಕೆ ಹೋಗಲೂ ಸಾಧ್ಯವಿಲ್ಲವೆಂಬ ಮನಃಸ್ಥಿತಿ ನಾವಿಂದು ಕಾಣುತ್ತಿದ್ದೇವೆ. ಅಲ್ಲದೆ ಪರೀಕ್ಷೆಯ ದಿನಗಳಲ್ಲಿ ತಂದೆ ತಾಯಿಗಳಿಗೆPhone attendಮಾಡಲೂಸಮಯವಿರುವುದಿಲ್ಲ. ಈ ವರ್ತನೆಗಳಿಂದ ಕೌಟುಂಬಿಕ ಸಂಬಂಧಗಳು ಹೇಗೆ ದಾರಿಗೆಡಬಹುದೆಂದು ಅಥವಾ ಆ ಸಂಬಂಧಿಕರು ಹೇಗೆ ನೊಂದುಕೊಳ್ಳಬಹುದು ಎಂಬುದರ ಪರಿವೆಯೇ ಇರುವುದಿಲ್ಲ. ಇಷ್ಟರಮಟ್ಟಿಗೆ ಸ್ವಾರ್ಥಿಯಾಗುತ್ತಿದ್ದಾರೆ ಇಂದಿನ ರಕ್ಷಕರು. ಕಣ್ಣೆದುರಿಗೆ ಹಣದ ಝಣತ್ಕಾರವೇ ಕಾಣುವುದಲ್ಲದೆ ಸಹೋದರ/ಸಹೋದರಿಯರ ಪ್ರೀತಿ ವಾತ್ಸಲ್ಯ, ಕಕ್ಕುಲತೆಗಳಿಗೆ, ಅವರು ಮಾಡಿದ ತ್ಯಾಗ ಸೇವೆಗಳಿಗೆ ಕಿವುಡು ಬೆಲೆಯೂ ಇಲ್ಲದಾದಾಗ ನಾವು ನಮ್ಮ ಮಕ್ಕಳಿಗೆ ಇದೇ ಮನೋಭಾವನೆಯನ್ನು ತಾನೇ ಬಳುವಳಿಯಾಗಿ ನೀಡುವುದು? ಇದೇ ಮನಸ್ಥಿತಿಯ ‘ವ್ಯಕ್ತಿಗಳನ್ನೇ ತಾನೇ ತಯಾರು ಮಾಡುವುದು? ಸಂಸ್ಕøತಿ, ಸಾಹಿತ್ಯ, ಕಲೆ, ಮಾನವೀಯತೆ, ಸಾಮಾಜಿಕ ಹೊಣೆ, ಕರ್ತವ್ಯಗಳು ಎಂದು ಯಾವತ್ತೂ ತಲೆ ಕೆಡಿಸಿಕೊಳ್ಳದ ಹೆತ್ತವರಿಂದ ಇನ್ನೇನು ತಾನೇ ಅಪೇಕ್ಷಿಸಲು ಸಾಧ್ಯ?

ಈ ದುಃಸ್ಥಿತಿಯಲ್ಲಿ ವಿದ್ಯಾಸಂಸ್ಥೆಗಳ ಪಾತ್ರ
ಇನ್ನು ಈ ಸಾಮಾಜಿಕ ದುಸ್ಥಿತಿಗೆ ನಮ್ಮ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಕೊಡುಗೆ ಏನೆಂಬುದು ಕೂಡಾ ಚಿಂತನಾಯೋಗ್ಯ ವಿಷಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಸಿಕ್ಕಾಪಟ್ಟೆ ವಿದ್ಯಾ ಸಂಸ್ಥೆಗಳೂ, ನಾಯಿಕೊಡೆಗಳಂತೆ ಕೋಚಿಂಗ್ ಸೆಂಟರ್‍ಗಳೂ ಹುಟ್ಟಿಕೊಳ್ಳುವುದು, ಭವ್ಯವಾಗಿ ಬೆಳೆದು ಬರುತ್ತಿರುವುದು, ಉನ್ನತ ಗುರಿಗಳ ಆಕರ್ಷಣೆಯನ್ನು ಕೊಡುತ್ತಿರುವುದು ಆ ಮೂಲಕ ಕೋಟಿಕೋಟಿ ಬಾಚಿಕೊಳ್ಳುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಈ ಪಿಡುಗಿನಿಂದ ಹೊರಬರಲು ಸರಕಾರ ವರ್ಷ ವರ್ಷವೂ ಹೊಸ ಹೊಸದಾದ ನಿಯಮಾವಳಿಗಳನ್ನೂ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿದರೂ ಸರಕಾರ ಚಾಪೆಯಡಿ ತೂರಿದರೆ ವಿದ್ಯಾಸಂಸ್ಥೆಗಳು ರಂಗೋಲಿಯಡಿ ತೂರುತ್ತಿವೆ. ಈ ನಿಯಮಾವಳಿಗಳಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ತರದ ಗಿಮಿಕ್ಸ್‍ಗಳನ್ನು ಆವಿಷ್ಕರಿಸುತ್ತವೆ. ನಗರದ ಪ್ರತಿಷ್ಠಿತ ಪಿ.ಯು.ಸಿ. ಕಾಲೇಜುಗಳಲ್ಲಿ ವಾರ್ಷಿಕ ಟ್ಯೂಶನ್‍ಫೀಸ್ ಲಕ್ಷದಂಚಿಗೆ ಸರಿದಿರುವುದು ತಿಳಿದ ವಿಷಯವೇ. ಕೋಚಿಂಗ್ ಕ್ಲಾಸ್‍ಗಳಂತೂ ವರ್ಷ ವರ್ಷ ವಾರ್ತಾ ಪತ್ರಿಕೆಗಳಲ್ಲಿ ತಮ್ಮಲ್ಲಿ ಕಲಿತು CET Rank/PUC Rank   ಪಡೆದ ಮತ್ತು ವೃತ್ತಿಪರ ಕಾಲೇಜುಗಳಲ್ಲಿ ಸೀಟುಗಿಟ್ಟಿಸಿದ ಪ್ರತಿಭಾನ್ವಿತರ ಪಟ್ಟಿ, ಫೋಟೊ ಪ್ರಕಟಿಸಿ ಜನರನ್ನು ಮರುಳು ಮಾಡಿ ಲಕ್ಷಲಕ್ಷ ಬಾಚುತ್ತಿವೆ. ಇದು ಕೋಚಿಂಗ್ ಕ್ಲಾಸ್‍ಗಳ ಸಂಗತಿಯಾದರೆ ನಮ್ಮ ವಿದ್ಯಾಸಂಸ್ಥೆಗಳ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇಲ್ಲೂ ಪಿ.ಯು.ಸಿ. ವಿಭಾಗದಲ್ಲಿ ಬೇರೆ ಬೇರೆ ರಶೀದಿಯಡಿಯಲ್ಲಿ ಹಣ ಕಸಿದು ಸರಕಾರಕ್ಕೆ ಮಂಕುಬೂದಿ ಎರಚಲಾಗುತ್ತದೆ.

CET ಕ್ರೇಝ್:
ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಂತೂ ವಿದ್ಯಾರ್ಥಿಗಳ ಸಹಜ ಪ್ರತಿಭೆಗಳನ್ನು ಹತ್ತಿಕ್ಕಿ ತಾವು ಹುಟ್ಟಿದ್ದೇ ಎಂಜಿನಿಯರ್ / ಡಾಕ್ಟರ್ ಆಗಿ ಹಣ ಮಾಡಲಿಕ್ಕೆ ಮತ್ತು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಬೇಕಾದರೆ ಇದೇ ಮಾರ್ಗ ಎಂದು ವಿದ್ಯಾರ್ಥಿಗಳಲ್ಲಿ ಬಿಂಬಿಸಲಾಗುತ್ತದೆ. ಪಠ್ಯೇತರ ವಿಚಾರಗಳಾದ ಸಾಹಿತ್ಯ/ಸಂಸ್ಕøತಿ/ಕಲೆ/ಕ್ರೀಡೆಗಳತ್ತ ಗಮನ ಹರಿಸುವುದು ಅಪಾಯ ಮತ್ತು ಅಪರಾಧ ಎನ್ನುವಷ್ಟರ ಮಟ್ಟಿಗೆ ನಮ್ಮ ವಿದ್ಯಾಸಂಸ್ಥೆಗಳು/ಶಿಕ್ಷಕರು ಮಕ್ಕಳ ಬ್ರೈನ್‍ವಾಶ್ ಮಾಡುತ್ತಾರೆ. ಸಾಮಾನ್ಯ ಜ್ಞಾನದ ಕನಿಷ್ಠ ಸೂಚ್ಯಂಕವುಳ್ಳ ವಿಜ್ಞಾನ ಶಿಕ್ಷಕರು ನಮ್ಮಲ್ಲಿ ಎಷ್ಟಿಲ್ಲ? ವಿದ್ಯಾರ್ಥಿ ಯಾವುದಾದರೂ ಪಠ್ಯೇತರ ವಿಷಯದಲ್ಲಿ ಆಸಕ್ತಿ ತೋರಿಸಿದಲ್ಲಿ ಆತ ಹಾದಿ ತಪ್ಪಿದ್ದಾನೆಂದೇ ಹೆತ್ತವರಿಗೆ ಹೇಳಲಾಗುತ್ತದೆ. ಇನ್ನು ಪಿಯುಸಿ ವಿಜ್ಞಾನ ವಿಭಾಗಕ್ಕೆ ವಿದ್ಯಾಸಂಸ್ಥೆಗಳು ಒರಿಯಂಟೇಶನ್, CET ಬಗ್ಗೆತಿಳುವಳಿಕೆ, Career guidance ಎಂದೆಲ್ಲಾ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತವೆ. ಇಲ್ಲೂ ಒತ್ತಿ ಹೇಳಲಾಗುವ ವಿಷಯ ಒಂದೆ. “ಈ PUC/CET   ನಿಮ್ಮ ಜೀವನದ ಗುರಿ ತಲುಪುವಲ್ಲಿ ನಿರ್ಣಾಯಕವಾಗುತ್ತದೆ. ಆದ್ದರಿಂದ ಇದಕ್ಕಾಗಿ ಒಂದು ತಪಸ್ಸನ್ನೇ ನೀವು ಮಾಡಬೇಕಾಗುತ್ತದೆ. ಪರೀಕ್ಷೆಯಲ್ಲಿನ ಒಂದು ಅಂಕ CET Ranking ನಲ್ಲಿ ನೂರರಷ್ಟು ವ್ಯತ್ಯಾಸ ತರುತ್ತದೆ. ಇದಕ್ಕಾಗಿ ಕಷ್ಟಪಡಿ”.
ಇಂತಹ ಮಾತುಗಳಿಂದ ಮಕ್ಕಳ ಮನಸ್ಸಿನಲ್ಲಿ ಭೀತಿ ಆತಂಕಗಳನ್ನು ತುಂಬಲಾಗುತ್ತದೆ. ಇದನ್ನು ಹೇಳುವವರು ಯಾರು ಗೊತ್ತೇ? ಸಮಾಜದಲ್ಲಿ ಸಮರ್ಥ/ನುರಿತ ಆದರ್ಶ ಪ್ರಾಯರೆಂದು ಹೆಸರೆತ್ತಿದ ಉಪನ್ಯಾಸಕರು ಮತ್ತು ಕಾಲೇಜುಗಳಲ್ಲಿ ಆಡಳಿತ ವರ್ಗ. ಪಾಠದ ವಿಷಯ ಬಿಟ್ಟು ಬೇರೆ ಮಾತನಾಡುವುದೇ ವ್ಯರ್ಥ ಎಂದೇ ಭಾವಿಸುವ ಆಡಳಿತ ಮಂಡಳಿ/ಶಿಕ್ಷಕರು ಯಾಕೆ ಮಕ್ಕಳ ಆತಂಕದ ಬಗ್ಗೆ ಅವರ ಮನಃಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ? ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮತ್ತು ವ್ಯಕ್ತಿತ್ವ ಸಂವರ್ಧನೆಯಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸುತ್ತಿದ್ದೇವೆ. ಆದ್ದರಿಂದ ತಮ್ಮ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿ ತುಂಬಾ ದೊಡ್ಡದು ಎಂಬುದರ ಅರಿವೇ ಇಲ್ಲದಂತೆ ಹಾಗೂ ಈ ಬಗ್ಗೆ ಒಂದು ಕಾರ್ಯಸೂಚಿಯನ್ನೂ ಇಟ್ಟುಕೊಳ್ಳದ ಆಡಳಿತ ಸಂಸ್ಥೆಗಳು/ಶಿಕ್ಷಕರು ಕೇವಲ ಮಾರ್ಕು, ಗ್ರೇಡ್,CET ಉತ್ತಮ ರಾಂಕಿಂಗ್ ಹಾಗೂ ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ-ಇವಿಷ್ಟಕ್ಕೇ ಮಕ್ಕಳನ್ನು ತಯಾರುಮಾಡುವುದಷ್ಟೇ ತಮ್ಮ ಧ್ಯೇಯ ಎಂದು ಭಾವಿಸಿದ್ದಾರೆ. ಈ ತೆರನಾದ ವ್ಯವಸ್ಥೆಗೆ ವಿದ್ಯಾರ್ಥಿ ತೆರುವ ಬೆಲೆ ಏನು? ಒಂದೋ ಯಾವುದೋ ವಿದೇಶಿ ಕಂಪೆನಿಯ ವ್ಯವಹಾರ ನಿರ್ವಹಿಸುವ Software ನೋಡುವ ಸ್ವಾರ್ಥವೇ ಮೈಗೂಡಿದಂತಹ ಒಂದು ಹಣ ಸಂಪಾದಿಸುವ ಮೆಶಿನ್. ಇನ್ನು ಕೆಲವೊಮ್ಮೆ ಒಂದು ಮೆಂಟಲ್‍ಕೇಸ್. ಮಂಗಳೂರಿನ ಒಬ್ಬ ಪ್ರಸಿದ್ಧ ಮನೋತಜ್ಞರು, ತಮ್ಮ ಬಳಿಗೆ ಬರುವ ವಿದ್ಯಾರ್ಥಿರೋಗಿಗಳಲ್ಲಿ ಶೇಕಡಾ 20 ಭಾಗ ಈ ತೆರನಾದ ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳೆಂದು ಒಪ್ಪಿಕೊಳ್ಳುತ್ತಾರೆ.
ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸಬೇಕಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ರೀತಿಯ ರಾಂಕ್ , CET ಯಲ್ಲಿ ಒಳ್ಳೆ Ranking ಇದಕ್ಕೆಲ್ಲ ಆದ್ಯತೆ ಕೊಡಬೇಕಾದ್ದು ಖಂಡಿತಾ ಸರಿ. ಆದರೆ ನನ್ನ ಹಳಹಳಿ ಏನೆಂದರೆ ಈ ಸಾಧನೆಯ ಅಬ್ಬರದಲ್ಲಿ ಇತರ ಮಾನವೀಯ ಮೌಲ್ಯಗಳು ತಳಹಿಡಿಯುವಂತಾಗಬಾರದು ಅಥವಾ ಈ ವೃತ್ತಿಗಳಲ್ಲಿ ಆಸಕ್ತಿಯೇ ಇಲ್ಲದ ವಿದ್ಯಾರ್ಥಿಗಳಿಗೆ ಹೆತ್ತವರು/ಶಿಕ್ಷಕರು ಬಲವಂತದ ಮಾಘಸ್ನಾನ ಮಾಡಿಸಬಾರದು. ಇವರ ಇಷ್ಟಾನಿಷ್ಟಗಳನ್ನರಿತು ಅವರನ್ನು ಪ್ರೋತ್ಸಾಹಿಸಬೇಕೇ ವಿನಃ ಹೆತ್ತವರ ಕನಸನ್ನು ಅವರ ಮೇಲೆ ಹೇರಿ ಅಲ್ಲ. ಮಕ್ಕಳಲ್ಲಿ ನೈತಿಕ ಪ್ರಜ್ಞೆ ಬೆಳೆದುಬರುವಂತೆ ಸೂಕ್ತ ಅವಕಾಶ ಕಲ್ಪಿಸಿದಲ್ಲಿ ವಿದ್ಯಾರ್ಥಿ ಒಬ್ಬ ಉತ್ತಮ ಇಂಜಿನಿಯರ್ ಅಥವಾ ದಕ್ಷ ವೈದ್ಯ ಅಥವಾ ಸಮಾಜ ಸ್ನೇಹಿ ಚಾರ್ಟರ್ಡ್ ಅಕೌಂಟೆಂಟ್ ಆಗಬಹುದು. ಹೂವಿಗೆ ಚೆಂದದ ಜೊತೆಗೆ ಪರಿಮಳವೂ ಇದ್ದರೆ ಮಾತ್ರ ಚೆನ್ನಲ್ಲವೇ?
ಆದರೆ ಈ ಸತ್ಯ ನಮ್ಮ ಶಿಕ್ಷಕರು/ವಿದ್ಯಾಸಂಸ್ಥೆಗಳು ಅರಿಯುತ್ತಿಲ್ಲ. ಇತ್ತೀಚೆಗೆ ಸಮಾಜದ ಒಬ್ಬ ಮಾನವತಾವಾದಿ ಸಂತರ ಜೀವನದ ಬಗೆಗಿನ ಅನುವಾದಿತ ಪುಸ್ತಕಗಳ ಪ್ರತಿಗಳನ್ನು ಕೆಲವು ಕಾಲೇಜುಗಳ ಗ್ರಂಥಾಲಯಗಳಿಗೆ ಉಚಿತವಾಗಿ ಕೊಡುವ ಯೋಚನೆ ಮಾಡಿ ಜೊತೆಯಲ್ಲಿ ನನ್ನ ಕವನ ಸಂಕಲನವೊಂದರ ಕೇವಲ ರೂ. 70/- ಮುಖ ಬೆಲೆಯ ಪ್ರತಿಯೊಂದನ್ನು ತೆಗೆದುಕೊಳ್ಳಬಹುದೇ ಎಂಬ ನನ್ನ ಪ್ರಶ್ನೆಗೆ ಕಾಲೇಜಿನ ಹಿರಿಯರಿಂದ ಬಂದ ಉತ್ತರ – “ಇದನ್ನೆಲ್ಲ ಈಗ ಯಾರು ಓದುತ್ತಾರೆ ಬಿಡಿ” ಎಂದು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕಾದ ಹಿರಿಯರಿಂದ ಈ ಮಾತು. ಅದಷ್ಟೆ ಅಲ್ಲ. ಆಡಳಿತ ಮಂಡಳಿಯ ಸದಸ್ಯರೊಬ್ಬರು “ಈಗ ಮಹಾತ್ಮಗಾಂಧಿ ಬಗ್ಗೆಯೇ ಮಕ್ಕಳಿಗೆ ತಿಳಿದಿಲ್ಲ. ಆದರೂ ನೀವು ಉಚಿತವಾಗಿ ಕೊಡುತ್ತಿರುವುದರಿಂದ ಮಕ್ಕಳಿಗೆ ಕಾಂಪಿಟೇಶನ್‍ಗಳಿಗೆ ಹೋಗುವಾಗ points ತೆಗೆಯಲಿಕ್ಕಾಗುತ್ತದೆ ಇರಲಿ” ಎಂದು ಬಿಟ್ಟರು. ಮುಖಭಂಗವಾದಂತೆನಿಸಿ ನಾನು ಹೇಳಿಯೇ ಬಿಟ್ಟೆ. “ಭಾಷಣಕ್ಕೆ points ಹುಡುಕಲು ನಾನು ಈ 300 ರೂ. ಮುಖಬೆಲೆಯ ಪುಸ್ತಕವನ್ನು ಉಚಿತವಾಗಿ ಕೊಡುತ್ತಿಲ್ಲ. ಆ ಸಂತರ ಬಗ್ಗೆ ಮಕ್ಕಳು ಓದಲಿ, ಅರಿಯಲಿ ಎಂದು ಕೊಡುತ್ತಿದ್ದೇನೆ”
ನಮ್ಮ ಇಂದಿನ ಶಿಕ್ಷಣ ಸಂಸ್ಥೆಗಳ/ಶಿಕ್ಷಕರ ಮನಃಸ್ಥಿತಿಯನ್ನು ಇದು ಚೆನ್ನಾಗಿ ಬಿಂಬಿಸುತ್ತಿದೆಯಲ್ಲವೇ?
ಶಶಿಲೇಖಾ ಬಿ.
ನಿವೃತ್ತ ಪ್ರಾಚಾರ್ಯರು
ಶ್ರೀ ನಾರಾಯಣಗುರು ಪ.ಪೂ.ಕಾಲೇಜು
ಮುಲ್ಕಿ, ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!