ಸಿಂಚನ ವಿಶೇಷಾಂಕ - 2017: ಸಾಧು ಪೂಜಾರಿ

ಭೂತಾರಾಧನೆ

ತೆಂಕಿನಲ್ಲಿ ಕಾಸರಗೋಡಿನ ಚಂದ್ರಗಿರಿ ನದಿ ತೀರದಿಂದ ಬಡಗಿನಲ್ಲಿ ಬಾರ್ಕೂರು, ಹಾಗೇ ಪಶ್ಚಿಮ ಘಟ್ಟದ ಬುಡದಿಂದ ಪಡುವಣಕಡಲ ತೀರದ ವರೆಗೆ ವ್ಯಾಪಿಸಿರುವ ಪ್ರದೇಶವೇ ಇಂದಿನ ತುಳು ನಾಡು. ಹಿಂದಿನ ಕಾಲದಲ್ಲಿ ತುಳುನಾಡು ವಿಶಾಲವಾಗಿತ್ತು. ತೆಂಕಣದ ರಾಮೇಶ್ವರ, ಬಡಗಣ ಅಂಕೋಲ, ಪಡುವಣ ಅರಬ್ಬೀ ಸಮುದ್ರ, ಮೂಡಣದಲ್ಲಿ ವಿಸ್ತಾರವಾಗಿ ಹಬ್ಬಿರುವ ಪಶ್ಚಿಮ ಘಟ್ಟದತಪ್ಪಲು ಇವು ತುಳುನಾಡಿನ ಗಡಿ ಪ್ರದೇಶಗಳಾಗಿದ್ದವು. ಬಯಲು ಸೀಮೆಯ ಸಮತಟ್ಟು ನೆಲದಂತೆ ತುಳುನಾಡಿನ ಭೂಮಿಯಲ್ಲ. ಕರಾವಳಿ ಪ್ರದೇಶ ಮಾತ್ರ ಸಮತಟ್ಟಾಗಿರುವುದು. ಉಳಿದಂತೆ ಗುಡ್ಡ, ಕಾಡು, ಹಾಡಿ, ಇಳಿಜಾರು ಪ್ರದೇಶದಿಂದ ಆವೃತ್ತವಾಗಿರುವುದು.

ತುಳುವರ ಆಡುಭಾಷೆ ತುಳು. ಈ ಭಾಷೆ ಸುಮಾರು 2500 ವರ್ಷಗಳ ಇತಿಹಾಸವನ್ನು ಹೊಂದಿದೆ. ತುಳು ಸ್ವಂತ ಲಿಪಿಯನ್ನು ಹೊಂದಿರುವ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂಬ ಮನ್ನಣೆಗೆ ಪಾತ್ರವಾಗಿದೆ. ಇತರ ಹಲವು ಭಾಷೆಗಳೂ ಇಲ್ಲಿ ಪ್ರಚಲಿತದಲ್ಲಿದ್ದರೂ ಮೂಲತಃ ತುಳು ಇಲ್ಲಿಯ ಭಾಷೆ ಹಾಗೂ ಬಹು ಸಂಖ್ಯಾತರು ಆಡುವ ಭಾಷೆಯಾಗಿದೆ. ಒಂದುರೀತಿಯಲ್ಲಿ ತುಳು ಇಲ್ಲಿನ ವ್ಯಾವಹಾರಿಕ ಭಾಷೆಯೂ ಹೌದು. ತುಳುನಾಡು ಭಿನ್ನವಾದ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಕರಾವಳಿ ಪ್ರದೇಶವಾಗಿದೆ. ತುಳುನಾಡಿನ ತುಳು ಜನರು ದೈವಗಳನ್ನು ಆರಾಧಿಸುವವರು. ಇದು ತುಳುನಾಡಿಗೆ ಮಾತ್ರ ಸೀಮಿತವಾದ ಒಂದು ವಿಶಿಷ್ಠ ಪ್ರಕ್ರಿಯೆ. ದೈವಗಳು ತುಳುವರ ಆರಾಧನೆಯಲ್ಲಿ ಶ್ರೇಷ್ಠವಾದ ಸ್ಥಾನಮಾನಗಳನ್ನು ಪಡೆದಿರುವ ಶಕ್ತಿಗಳು. ಈ ದೈವಗಳ ಆರಾಧನೆಯೇ ಕರಾವಳಿಯ ಬಹುಮುಖ್ಯಆಚರಣೆ ಮತ್ತು ಪ್ರದರ್ಶನ ಕಲೆಯಾದ ‘ಭೂತಾರಾಧನೆ’. ತುಳುಭಾಷೆ ಮತ್ತು ಸಂಸ್ಕೃತಿಯ ಒಂದಂಶವೇ ಭೂತಾರಾಧನೆ. ತುಳು ಜನಪದ ಜೀವನ ಶೈಲಿಯಲ್ಲಿ ಹಾಸು ಹೊಕ್ಕಾಗಿರುವ ಅನೇಕ ನಂಬಿಕೆ, ಕಟ್ಟು-ಕಟ್ಟಳೆ, ಆಚರಣೆಗಳಲ್ಲಿ ಭೂತಾರಾಧನೆಯೂ ಒಂದು. ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲೊಂದಾದ ನಾಗಾರಾಧನೆಯಂತೆಯೇ ಭೂತಾರಾಧನೆಯೂ ಒಂದು ವಿಶಿಷ್ಟ ಆಚರಣೆಯಾಗಿದೆ. ದೇವರು, ದೇವಸ್ಥಾನಗಳಿಗೆ ಸಂಬಂಧಿಸಿದಂತೆಯೂ, ಸ್ವತಂತ್ರವಾಗಿ ಪ್ರತ್ಯೇಕವಾಗಿಯೂ ಆಚರಣೆ ಪ್ರಚಲಿತದಲ್ಲಿದೆ. ಹಾಗಿದ್ದೂ ದೇವರ ಸ್ಮರಣೆ ಇಲ್ಲದೆ ಭೂತಾರಾಧನೆ ಇಲ್ಲ.

ದೈವಗಳು ಭೂತಗಳಲ್ಲ, ದೆವ್ವಗಳೂ ಅಲ್ಲ, ಪಿಶಾಚಿಗಳೂ ಅಲ್ಲ, ಪ್ರೇತಗಳೂ ಅಲ್ಲ. ಆದರೆ ಜನಸಾಮಾನ್ಯರ ಬಾಯಲ್ಲಿ ಭೂತಗಳೆಂದೇ ಹೆಚ್ಚು ಪ್ರಚಲಿತದಲ್ಲಿವೆ. ದೈವ ಪೂಜೆಯನ್ನು ಈ ನಾಡಿಗೆ ಆಗಮಿಸಿದ ವಿದೇಶಿ ವಿದ್ವಾಂಸರು ಡೆವಿಲ್ ವರ್ಷಿಪ್ ಎಂದು ತಪ್ಪಾಗಿ ವ್ಯಾಖ್ಯಾನಿಸಿದ್ದರು. ಭೂತಗಳೆಂದರೆ ದುಷ್ಟ ಶಕ್ತಿಗಳು, ಅವು ಕೆಟ್ಟದನ್ನೇ ಮಾಡುತ್ತವೆ ಎಂಬ ತಪ್ಪುಕಲ್ಪನೆಯಿದೆ. ಆದರೆ ಅದು ಸರಿಯಲ್ಲ. ಆರಾಧನೆಯ ಶಕ್ತಿಗಳನ್ನು ಆಡುನುಡಿಗಳಲ್ಲಿ ಭೂತಗಳೆಂದೂ, ದೈವಗಳೆಂದೂ ಇನ್ನೊಂದಿಷ್ಟು ಆಳವಾದ ನೆಲೆಯಲ್ಲಿ ಸತ್ಯಗಳೆಂದೂ ಪರಿಭಾವಿಸಲಾಗುತ್ತದೆ. ತುಳುನಾಡಿಗೆ ವೈಷ್ಣವ ಶಿಷ್ಟ ಸಂಪ್ರದಾಯದ ಆಚರಣೆ, ಆರಾಧನೆಗಳು ಕಾಲಿಡುವ ಎಷ್ಟೋ ಪ್ರಾಚೀನದಲ್ಲೇ ಇದ್ದಂತಹ ಈ ಆರಾಧನೆಗಳು ಶೈವ-ಶಾಕ್ತೇಯ ಸ್ವರೂಪದ್ದಾಗಿವೆ. ನಾಗರಿಕತೆಯು ಆರಂಭವಾಗುವ ಮೊದಲೇ ಆದಿಮಾನವನು ತನ್ನ ಸುತ್ತಮುತ್ತ ಕಾಣುವ ಪ್ರಕೃತಿಯ ನಿಗೂಢತೆಯನ್ನು, ಕತ್ತಲು, ಮರಗಿಡಗಳು, ಗವಿ ಗುಹೆಗಳು, ಪ್ರಕೃತಿ ವಿಕೋಪಗಳು, ಪ್ರಾಣಿ ಪಕ್ಷಿಗಳು, ಸರೀಸೃಪಗಳನ್ನು ಕಂಡು ತನ್ನ ಬುದ್ಧಿಶಕ್ತಿಗೆ ಮೀರಿದ ಆ ವೈಚಿತ್ರ್ಯಗಳಿಗೆ ಮೂರ್ತ ರೂಪಕೊಟ್ಟು ಭಯ ಭಕ್ತಿಯಿಂದ ತಲೆಬಾಗಿ ನಡೆದುಕೊಂಡು, ಆಜ್ಞಾನುವರ್ತಿಯಾಗಿ ನೆಮ್ಮದಿ ಕಲ್ಪಿಸಿಕೊಂಡ ಪರಿಣಾಮವಾಗಿ ಇಂತಹ ಆರಾಧನೆಗಳು ಆರಂಭಗೊಂಡಿರಬೇಕು. ಕಾಲಕ್ರಮೇಣ ಅವುಗಳಿಗೆ ಒಂದು ಶಿಸ್ತು, ಕಲಾತ್ಮಕತೆ, ನಿರ್ಧಿಷ್ಟತೆ ರೂಪುಗೊಂಡಿತು. ಭೂತಾರಾಧನೆ, ನಾಗಾರಾಧನೆ ಮತ್ತು ಅರ್ವಾಚೀನದ ದೇವತಾರಾಧನೆಗಳು ಈ ನಾಡಿನಲ್ಲಿ ಸಮಾನಾಂತರವಾಗಿ ಸಾಗಿವೆ.

ತುಳುನಾಡಿನ ಜನಪದ ಸಾಂಸ್ಕೃತಿಕ ಪರಂಪರೆಯಲ್ಲಿ ಆರಾಧನೆ ಸಂಪ್ರದಾಯಗಳಿಗೆ ಮಹತ್ವದ ಸ್ಥಾನವಿದೆ. ಧಾರ್ಮಿಕ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತವಾಗುವ ಈ ಸಾಂಪ್ರದಾಯಿಕ ಕ್ರಿಯೆ ಭಾವನಾತ್ಮಕ ಜಗತ್ತಿಗೆ ಸಂಬಂಧಪಟ್ಟ ದೈವಿಕ ಮತ್ತು ಅಲೌಕಿಕ ಪರಿಕಲ್ಪನೆಯನ್ನು ಅವಲಂಭಿಸಿದೆ. ದೈನಂದಿನ ಕಾಯಕದಲ್ಲಿ ತೊಡಗಿಸಿಕೊಂಡಿರುವ ತುಳುವರು ತಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಸಂತೃಪ್ತಿಗಾಗಿ ದೈವಗಳನ್ನು ಮಾಯಗಳೆಂದು ಪರಿಕಲ್ಪಿಸಿ ಅವುಗಳೊಂದಿಗೆ ನಿರಂತರವಾದ ಸಂಬಂಧಗಳನ್ನು ಇರಿಸಿಕೊಂಡು ಬಂದಿದ್ದಾರೆ. ಇಂತಹ ಮಾಯೆಗಳ ಜತೆಗೆ ಮಾನಸಿಕವಾಗಿ ಮತ್ತು ಭೌತಿಕವಾಗಿ ಮುಖಾಮುಖಿಯಾಗುವ ಅವಕಾಶಗಳನ್ನು ಅವರು ಕಲ್ಪಿಸಿಕೊಂಡಿದ್ದಾರೆ. ಆ ಉದ್ದೇಶಕ್ಕಾಗಿಯೇ ಆರಾಧನೆ ಮತ್ತು ಆಚರಣೆಗಳನ್ನು ಕಾಲಕಾಲಕ್ಕೆ ನಡೆಸಿಕೊಂಡು ಬಂದಿದ್ದಾರೆ. ಇಂತಹ ಮುಖಾಮುಖಿಯಲ್ಲಿ ಮಾಯಗಳು ಜೋಗದ ರೂಪದಲ್ಲಿ ಕಾಣಿಸಿಕೊಳ್ಳುವುದು (ಲೌಕಿಕವಾಗಿ ಪ್ರಕಟವಾಗುವುದು) ಒಂದು ಅದ್ಭುತ ಪರಿಕಲ್ಪನೆ.


ಮಾನವ ಬದುಕಿಗೊಂದು ಅರ್ಥ ಹಾಗೂ ಸಾರ್ಥಕತೆಯನ್ನಿಡಲು ನಮ್ಮ ಪೂರ್ವಜರು ಸತತ ಪ್ರಯತ್ನ ಮತ್ತು ಅನುಭವದಿಂದ ಅನೇಕ ವಿಧಿ ವಿಧಾನಗಳನ್ನು ಅವಿಷ್ಕರಿಸಿ ನಿಜ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಗೆ ಹೆಚ್ಚಿನ ಒತ್ತುಕೊಟ್ಟು ತಮ್ಮ ಬದುಕಿನುದ್ದಕ್ಕೂ ಸಹಕರಿಸಿದ ಪ್ರಕೃತಿ, ಜೀವಿಗಳಿಗೆ ತಾವು ನೀಡಿದ ಕೃತಜ್ಞತೆಯನ್ನಾಧರಿಸಿ ಅನುಷ್ಠಾನಿಸಿದ ಆಚರಣೆಗಳು ನಾಗರಿಕತೆಯ ಉದ್ದಕ್ಕೂ ಹೊರಹೊಮ್ಮಿವೆ. ಆಯಾಯ ಕಾಲಘಟ್ಟ, ಸನ್ನಿವೇಶಗಳಿಗನುಸಾರವಾಗಿ ತನುಮನ ತಣಿಸಲು ಅನೇಕ ಪ್ರಯೋಗಗಳನ್ನೇ ನಡೆಸಿರಬೇಕು. ಗ್ರಾಮೀಣ ಜನ ಜೀವನದಲ್ಲಿ ಕಂಡು ಬರುವ ಪ್ರಕೃತಿದತ್ತ ಆಹಾರ ಸೇವನೆ, ಮನರಂಜನೆಗಾಗಿ ಆಟಗಳು, ಕೃಷಿ, ಮದುವೆ, ಹುಟ್ಟು, ದೈವರಾಧನೆಯ ಸನ್ನಿವೇಶದಲ್ಲಿ ಹಾಡುವ ಬೀರ, ಪಾಡ್ದನಗಳು ಗ್ರಾಮೀಣ ಬದುಕಿಗೊಂದು ಜೀವಂತಿಕೆಯನ್ನು ನೀಡುತ್ತವೆ. ಪ್ರಕೃತಿ ಪೂಜೆ, ಪಿತೃಆರಾಧನೆ, ವೀರ ಪುರುಷರು ಮತ್ತು ಪೌರಾಣಿಕ ಹಿನ್ನಲೆಯ ಶಕ್ತಿಗಳ ಸಂಕೀರ್ಣ ಉಪಾಸನಯೇ ಭೂತಾರಾಧನೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿ ಆಚರಣೆಯಲ್ಲಿರುವ ಈ ಆರಾಧನೆ ಘಟ್ಟದ ಮೇಲಿನ ಕೆಲಪ್ರದೇಶಗಳಲ್ಲೂ ಇದೆ. ಬಣ್ಣ, ವೇಷಭೂಷಣ ಮತ್ತು ನುಡಿಕಟ್ಟು ಹಾಡು, ಕುಣಿತಗಳನ್ನು ಒಳಗೊಂಡಿರುವ ‘ಭೂತಾರಾಧನೆ’ ಜನಪದ ರಂಗಭೂಮಿಯೂ ಹೌದು.
ನಾಡಿನಾದ್ಯಂತ ಸುಮಾರು 500ಕ್ಕೂ ಮಿಕ್ಕಿ ದೈವಗಳಿದ್ದು ಅವುಗಳಲ್ಲಿ ಹಲವು ದೈವಗಳು ತಮ್ಮ ಸ್ವರೂಪ ಮತ್ತು ಪ್ರಾದೇಶಿಕತೆಗನುಗುಣವಾಗಿ ನಾಮದೇಯಗಳನ್ನು ಹೊಂದಿವೆ. ಈ ದೈವಗಳ ಹಿನ್ನೆಲೆಯನ್ನು ಗಮನಿಸಿ ಅವುಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಬಹುದು.
1. ಪ್ರಾಣಿರೂಪದಲ್ಲಿರುವ ದೈವಗಳು. ಉದಾ; ಹುಲಿದೈವ, ಪಂಜುರ್ಲಿ(ಹಂದಿಭೂತ)
2. ಮನುಷ್ಯರಾಗಿದ್ದು ಅಸಾಮಾನ್ಯ ಶೌರ್ಯ ಸಾಹಸವನ್ನು ಮೆರೆದು ಅಕಾಲಿಕ ಮತ್ತು ಅಸಹಜ ಮರಣ ಹೊಂದಿ ದೈವಗಳಾದವುಗಳು. ಉದಾ: ಕಲ್ಕುಡ, ಕಲ್ಲುರ್ಟಿ, ಕೋಟಿಚೆನ್ನಯ, ಕಾಂತಾಬಾರೆ-ಬುದಾಬಾರೆ.
3. ವೈದಿಕ ಪುರಾಣಗಳ ಸಂಬಂಧವನ್ನು ಹೊಂದಿರುವ (ಈಶ್ವರ ಪಾರ್ವತಿಯರ ಗಣಗಳು) ದೈವಗಳು. ಉದಾ: ಕೊಡಮಣಿತ್ತಾಯ, ವೀರಭದ್ರ, ಭಗವತಿ.
ದೈವಗಳ ವಾಸಸ್ಥಾನಗಳನ್ನು ಭೂತಸ್ಥಾನ, ದೈವಸ್ಥಾನ, ಆಲಡೆ, ಭೂತದ ಕೊಟ್ಟಿಗೆ, ಮಾಡ ಎಂದೆಲ್ಲಾ ಕರೆಯುತ್ತಾರೆ. ಅವುಗಳಲ್ಲಿ ಮಣೆ (ಕುಳಿತು ಕೊಳ್ಳುವ ಪೀಠ), ಮಂಚ (ಎತ್ತರವಾದ ಪೀಠ), ಅವುಗಳ ಮೇಲೆ ದೈವಗಳಿಗೆ ಸಂಬಂಧಪಟ್ಟ ಮೂರ್ತಿಗಳು, ದೈವಗಳ ಪ್ರತಿಕೃತಿಗಳು (ಪಾಪೆ, ಒರು), ಖಡ್ಗ (ಕಡ್ಸಲೆ), ಸುರಿಯ, ಮುಖವಾಡ (ಮೊಗ), ಮಣಿಗಂಟೆ, ಇತ್ಯಾದಿಗಳನ್ನು ಇರಿಸುತ್ತಾರೆ. ಇವುಗಳನ್ನು ದೈವಗಳ ಭಂಡಾರ ಎನ್ನುತ್ತಾರೆ. ದೈವಗಳು ಅದೃಶ್ಯ ರೂಪದಲ್ಲಿ ಈ ಮಣೆ ಮಂಚದಲ್ಲಿ ನೆಲೆಯಾಗಿರುತ್ತಾರೆ ಎಂಬುವುದು ನಂಬಿಕೆ. ಈ ದೈವಸ್ಥಾನಗಳಲ್ಲಿ ಪ್ರತಿನಿತ್ಯ ಹೂ, ಗಿಂಡೆ (ಕಂಚಿನ ಪಾತ್ರೆ)ಯಲ್ಲಿ ನೀರು ಇಟ್ಟು ದೀಪ ಹಚ್ಚುವುದು ಪದ್ಧತಿ. ಹಬ್ಬ ಹರಿದಿನಗಳಲ್ಲಿ (ದೀಪಾವಳಿ, ಯುಗಾದಿ, ಸಂಕ್ರಮಣಗಳಂದು) ವಿಶೇಷ ಪೂಜೆ, ಸೇವೆಗಳು ನಡೆಯುತ್ತವೆ. ವರ್ಷಕ್ಕೊಮ್ಮೆ ಅಥವಾ ವಿಶೇಷ ಸಂದರ್ಭಗಳಲ್ಲಿ ಪರ್ವಸೇವೆ ಅಥವಾ ಕೋಲ-ನೇಮ ನಡೆಯುತ್ತವೆ.
ಭೂತಾರಾಧನೆಯಲ್ಲಿ ದೈವವನ್ನು ಪ್ರತಿನಿಧಿಸುವ (ಆವಾಹಿಸಿಕೊಳ್ಳುವ) ವ್ಯಕ್ತಿಯನ್ನು ದೈವದ ಪಾತ್ರಿ ಅಥವಾ ಮಾನಿ ಎನ್ನುತ್ತಾರೆ. ಭೂತದ ವೇಷ ತೊಟ್ಟು ದೈವವನ್ನು ಪ್ರತ್ಯಕ್ಷೀಕರಿಸುವ ದೈವ ನರ್ತಕ ಅಥವಾ ಭೂತಕಲಾವಿದರನ್ನು ಭೂತಕಟ್ಟುವವರು ಎನ್ನುತ್ತಾರೆ. ಪರಿಶಿಷ್ಟ ವರ್ಗಕ್ಕೆ ಸೇರಿದ ಪರವ, ಪಂಬದ, ನಲಿಕೆ ಜನಾಂಗದವರಷ್ಟೇ ದೈವ ನರ್ತಕರು. ನಿರ್ದಿಷ್ಟ ದೈವಗಳಿಗೆ ನಿರ್ದಿಷ್ಟ ಪಂಗಡಗಳ ಕಲಾವಿದರಿಂದ ದೈವಗಳ ಪಾತ್ರ ನಿರ್ವಹಣೆಯಾಗುತ್ತದೆ. ದೈವಗಳ ಶೃಂಗಾರ (ಅಯ್ತ) ತುಂಬಾ ಕಲಾತ್ಮಕವಾಗಿರುತ್ತದೆ. ದೈವದ ಸ್ವರೂಪ, ಗುಣ ಸ್ವಭಾವ, ಅಂತಸ್ತು ಹಾಗೂ ಕಾರಣಿಕಕ್ಕೆ ಅನುಗುಣವಾಗಿ ಆಯಾ ದೈವದ ವೇಷಭೂಷಣಗಳಿರುತ್ತವೆ. ಸಾಮಾನ್ಯವಾಗಿ ತುಂಬು ತೋಳಿನ ಕೆಂಪು ಅಂಗಿ (ಅದರಲ್ಲಿ ಸೂರ್ಯಚಂದ್ರ ಇತ್ಯಾದಿಗಳ ಚಿತ್ತಾರ), ಪೈಜಾಮ, ತಲೆಗೆ ತಲೆಕಟ್ಟು, ಕಿರೀಟ, ತೋಳ ಪಟ್ಟಿ, ಎದೆಗವಚ, ಕೈಗೆ ಕಡಗ, ಕಿವಿಗೆ ಕೆಬಿನ (ಕಿವಿಯ ಆಭರಣ), ಕಾಲಿಗೆ ಗಗ್ಗರ (ವಿಶಿಷ್ಟವಾದ ಗೆಜ್ಜೆ), ಬೆನ್ನಿಗೆ ಕಟ್ಟುವ ಪ್ರಭಾವಳಿಯಂತಹ ‘ಅಣಿ’, ಸೊಂಟಕ್ಕೆ ತೆಂಗಿನ ಎಳೆಗರಿಯಿಂದ ಮಾಡಿದ ಸಿರಿಲಂಗ, ಒಂದು ಕೈಯಲ್ಲಿ ಆಯುಧ, ಇನ್ನೊಂದರಲ್ಲಿ ಮಣಿಗಂಟೆ ಇತ್ಯಾದಿಗಳು ದೈವದ ಕಾಲ್ಪನಿಕ ಸ್ವರೂಪಕ್ಕೆ ಪೂರಕವಾಗಿರುತ್ತವೆ. ಸ್ತ್ರೀ ದೈವಗಳ ಕಲಾವಿದರು ಸೀರೆ, ಕುಪ್ಪಸತೊಟ್ಟರೆ ನೀಚ, ಗುಳಿಗ, ಕೊರಗಜ್ಜ ದೈವಗಳ ಕಲಾವಿದರು ಪೈಜಾಮ, ಸಿರಿಲಂಗದೊಂದಿಗೆ ಬರಿ ಮೈಯಲ್ಲೇ ಬರುತ್ತಾರೆ. ಕೆಲ ದೈವಗಳ ಮುಖವರ್ಣಿಕೆಯೂ ಬಹಳ ಕಲಾತ್ಮಕವಾಗಿರುತ್ತದೆ. ಮುಖವರ್ಣಿಕೆಗೆ ಹಳದಿ, ಬಿಳಿ, ಕೆಂಪು, ಮತ್ತು ಕಪ್ಪು ಬಣ್ಣಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಕೆಲವೊಂದು ಉಗ್ರ ಸ್ವರೂಪದ ದೈವಗಳ ಕಲಾವಿದರು ಮುಖಕ್ಕೆ ಕೇವಲ ಕಪ್ಪು ಬಣ್ಣ, ಇನ್ನು ಕೆಲ ದೈವಗಳ ಕಲಾವಿದರು ಕಪ್ಪು ಬಣ್ಣದ ಮೇಲೆ ಬಿಳಿ ಚುಕ್ಕಿಗಳ ಚಿತ್ತಾರವನ್ನು ಬಿಡಿಸುತ್ತಾರೆ. ಒಟ್ಟಿನಲ್ಲಿ ದೈವಗಳ ಉಗ್ರ ಸ್ವರೂಪದ ಪ್ರದರ್ಶನವಾಗುತ್ತದೆ. ಭೂತಾರಾಧನೆಯಲ್ಲಿ ನರ್ತನ ಸೇವೆಗೆ ಕೋಲ ಅಥವಾ ನೇಮ ಎಂಬುದಾಗಿ ಹೆಸರು. ದೈವಗಳ ವೇಷಭೂಷಣ, ಮುಖವರ್ಣಿಕೆಗಳೊಂದಿಗೆ ಹೂಗಳಿಂದ ಅಲಂಕರಿಸಿಕೊಂಡು (ಶೃಂಗಾರ)ಗೊಂಡ ದೈವ ನರ್ತಕ ಕೈಗಳಲ್ಲಿ ಆಯುಧ ಮತ್ತು ಮಣಿಗಂಟೆಯೊಂದಿಗೆ ದೈವದ ಆವಾಹನೆಗೆ ಸಿದ್ಧನಾಗುವುದೇ ‘ಸಿರಿಸಿಂಗಾರ’. ಈ ಸ್ವರೂಪದಲ್ಲಿ ದೈವಗಳು ಸೇವೆ ಸ್ವೀಕರಿಸುವುದೇ ‘ಸಿರಿಸಿಂಗಾರದ ಭೋಗ’ ಎಂಬುದಾಗಿ ಕರೆಯಲ್ಪಡುತ್ತದೆ. ಒಟ್ಟಿನಲ್ಲಿ ದೈವ ಕಲಾವಿದನಲ್ಲಿ ದೈವ ಆವಾಹನೆಯಾಗಿ ನರ್ತನ, ಪಾಡ್ದನ (ವಿಶಿಷ್ಟ ಬಗೆಯ ಹಾಡು), ನುಡಿಕಟ್ಟುಗಳೊಂದಿಗೆ ನಡೆಯುವ ಆಚರಣೆಯೇ ಭೂತಾರಾಧನೆ. ಇಲ್ಲಿ ಎಲ್ಲ ಸಮುದಾಯದ ಜನರ ಕೂಡುವಿಕೆಯಿಂದ ವಿವಿಧ ಕೆಲಸ ಕಾರ್ಯಗಳ ನಿರ್ವಹಣೆಯೊಂದಿಗೆ ಆರಾಧನೆಯು ನಡೆಯುತ್ತದೆ. ದೈವಗಳು ಭೂತಗಳೆಂಬ ಶಬ್ದವೂ ಸೇರಿದಂತೆ ತುಳುವರ ಪರಂಪರೆಯಿಂದ, ಹಿರಿಯರಿಂದ ಅಂಗೀಕರಿಸಲ್ಪಟ್ಟ, ಕುಟುಂಬ, ರಾಜ್ಯ ರಕ್ಷಿಸುವ ಶಕ್ತಿಗಳು. ತುಳುವರ ಮಾತಿನಂತೆ’ ದೇವರಿಂದ ಒಂದು ಹೆಜ್ಜೆ ಕಡಿಮೆ ಇರುವ ಶಕ್ತಿಗಳು’ ದೈವಗಳು. ನಂಬಿದವರಿಗೆ ಇಂಬು ಕೊಡುವ, ಸತ್ಯವನ್ನು ಗೆಲ್ಲಿಸಿಕೊಡುವ ಮಾಯಗಳು. ಶರಣೆಂದು ಅಡಿಗೆರಗಿದವರಿಗೆ ಅಭಯ ನೀಡಿ ಪೆÇರೆಯುವ ದೈವಗಳು.
ಈ ಎಲ್ಲಾ ದೈವಗಳು ಅಲೌಖಿಕ ಜಗತ್ತಿನಲ್ಲಿ ವಾಸ ಮಾಡುತ್ತವೆ. ಲೌಕಿಕ ಜಗತ್ತಿಗೆ ಕರೆದರೆ ಬರುತ್ತದೆ. ಅದಕ್ಕಾಗಿ ವಿಶಿಷ್ಟ ಕಾಲ, ಸ್ಥಳ, ಸಂದರ್ಭವನ್ನು ಉಂಟು ಮಾಡಬೇಕು. ಬಹುತೇಕ ದೈವಗಳಿಗೆ ವರ್ಷದ ನಿರ್ಧಿಷ್ಟ ದಿನದಂದು/ದಿನಗಳಂದು ಆರಾಧನೆ ನಡೆಯುವುದೆಂದು ನಿಗದಿಪಡಿಸಲಾಗಿರುತ್ತದೆ. ಇಂತಹ ನಿರ್ಧಿಷ್ಟ ದಿನಗಳಂದು ಸಂಬಂಧಪಟ್ಟವರು ಹಾಗೂ ದೈವ ಭಕ್ತರು ಸಂಬಂಧಪಟ್ಟ ಜಾಗ (ಕೊಡಿಯಡಿ)ದಲ್ಲಿ ಸೇರುತ್ತಾರೆ. ಸಂಬಂಧಪಟ್ಟ ದೈವಸ್ಥಾನ ಹಾಗೂ ಸ್ಥಳದಲ್ಲಿ ಸಂಪ್ರದಾಯ ಬದ್ಧವಾಗಿ ಬಂದ ರೀತಿ ನಿಯಮಗಳಿಗನುಸಾರಾವಾಗಿ ಸಕಲ ಸಿದ್ದತೆಗಳನ್ನು ನಡೆಸುತ್ತಾರೆ. ನಿಗದಿತ ಸಮಯಕ್ಕೆ ಸರಿಯಾಗಿ ನಿಗದಿತ ವ್ಯಕ್ತಿ ಸಂಬಂಧಪಟ್ಟ ದೈವದ /ದೈವಗಳ ವೇಷಭೂಷಣಗಳೊಂದಿಗೆ ಅಣಿಯಾಗುತ್ತಾರೆ. ಅದಕ್ಕಾಗಿ ಅವರಿಗೆ ಸ್ನಾನಕ್ಕೆ ಎಣ್ಣೆ ಮತ್ತು ಭೂತಕಟ್ಟುವ ಸಂಕಲ್ಪವಾಗಿ ವೀಳ್ಯವನ್ನು ನೀಡಲಾಗುತ್ತದೆ. ಸ್ನಾನದ ಬಳಿಕ ಶೃಂಗಾರ ಆರಂಭವಾಗುತ್ತದೆ. ತೆಂಬರೆ (ಸಣ್ಣಚೆಂಡೆ)ಯೊಂದಿಗೆ ಒಸಯೋ ಸಂಧಿ ಹಾಡಲಾಗುತ್ತದೆ. ಸೇರಿದ ಜನಸಮೂಹದ ಪರವಾಗಿ ಮದ್ಯಸ್ಥರು (ದೈವದೊಂದಿಗೆ ಸಂವಾದ ನಡೆಸುವವರು) ದೈವ/ದೈವಗಳನ್ನು ದೈವಪಾತ್ರಿ/ದೈವ ನರ್ತನ ಮೂಲಕ ಲೌಕಿಕ ಜಗತ್ತಿನಲ್ಲಿ ಪ್ರಕಟವಾಗುವಂತೆ ಭಿನ್ನವಿಸಿಕೊಳ್ಳುತ್ತಾರೆ. ಭೂತಾರಾಧನೆಗೆ ಸಂಬಂಧಪಟ್ಟ ವಿಶಿಷ್ಟ ವಾದ್ಯ ವೃಂದ, ಕೊಂಬು ಕಹಳೆ, ಸಿಡಿಮದ್ದು, ಕದನಿಗಳ ಸದ್ದಿನೊಡನೆ ದೈವ ಆವಾಹನೆಯಾಗಿ ಆವೇಶದೊಂದಿಗೆ ದೈವನರ್ತಕ ಕುಣಿಯಲಾರಂಭಿಸುತ್ತಾನೆ. ವಿಶಿಷ್ಟ ಪ್ರಕಾರದ ಕುಣಿತದ ಬಳಿಕ ದೈವವು / ದೈವಗಳು ವ್ಯಕ್ತಿಯ ಮಾಧ್ಯಮದ ಮೂಲಕ ಭಕ್ತರೊಡನೆ ಸಂವಾದ ಮಾಡುತ್ತವೆ. ಭಕ್ತರ ಕಷ್ಟ ಸುಖಗಳನ್ನು ಕೇಳುತ್ತವೆ. ಕಷ್ಟ ನಷ್ಟಗಳಿಗೆ ಪರಿಹಾರವನ್ನು ನೀಡುತ್ತವೆ. ಧೈರ್ಯ, ಸಾಂತ್ವನ ನೀಡಿ ಪೆÇರೆಯುವುದಾಗಿ ಅಭಯ ನೀಡುತ್ತವೆ. ಭಯ ಗೊಂದಲವಿರುವವರಿಗೆ ಮಾರ್ಗದರ್ಶನ ನೀಡುತ್ತವೆ. ಇಂತಹ ಸಂದರ್ಭದಲ್ಲಿ ದೈವಗಳು ಆವಾಹನೆಗೊಂಡು ವ್ಯಕ್ತಿಯ ಮೂಲಕ ಆಡಿದ ಮಾತು, ನೀಡಿದ ಆದೇಶ, ಕೊಟ್ಟ ಭರವಸೆ, ಇತ್ತ ಪ್ರಸಾದವನ್ನು ಎಲ್ಲರೂ ಗೌರವಿಸುತ್ತಾರೆ. ಯಾರೂ ಅದನ್ನು ಮೀರುವುದಿಲ್ಲ.


ದೈವಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದ್ದು ಅವುಗಳು ಹುಟ್ಟಿದ ರೀತಿ, ಕಾಯಕ, ಕಾರಣಿಕತೆಯಲ್ಲಿಯೂ ಭಿನ್ನತೆಯಿವೆ. ದೈವಗಳು ತಾವು ನೆಲೆಸಿದ ಅಥವಾ ಆರಾಧನೆಗೊಂಡ ಸ್ಥಳ, ಪ್ರದೇಶಕ್ಕನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತವೆ. ದೈವಗಳ ಕಾರಣಿಕವೂ ಜನಪದರ ನಂಬಿಕೆಗನುಗುಣವಾಗಿ ವೈವಿಧ್ಯಮಯವಾಗಿರುತ್ತವೆ. ಒಟ್ಟಿನಲ್ಲಿ ತುಳುನಾಡಿನಲ್ಲಿ ದೇವತಾರಾಧನೆ, ನಾಗಾರಾಧನೆಯಂತೆಯೇ ಪ್ರಮುಖವಾದ ಆಚರಣೆ ಭೂತರಾಧನೆ.
ಭೂತಎಂಬುದಕ್ಕೆ ಹಿಂದಿನದು ಎಂಬ ಅರ್ಥಇರುವಂತೆ ಹಿಂದೆ ಆಗಿ ಹೋದ ವ್ಯಕ್ತಿಗಳು ಭೌತಿಕ ಶರೀರದೊಂದಿಗೆ ಲೌಕಿಕ ವ್ಯವಹಾರಗಳನ್ನು ಮುಗಿಸಿ ತಮ್ಮ ಕಾಯವನ್ನು ಬಿಟ್ಟು ಅಲೌಕಿಕ ಜಗತ್ತಿಗೆ ತೆರಳಿ ತಮ್ಮ ಅಲೌಕಿಕ ಶಕ್ತಿ ಸಾಮರ್ಥ್ಯಗಳಿಂದ ಕಾರಣಿಕತೆಯನ್ನು ಮೆರೆದು ಜನರ ಭಯ ಭಕ್ತಿ, ನಂಬಿಕೆಗಳ ಮೂಲಕವಾಗಿ ಆರಾಧನೆಗೊಳ್ಳುತ್ತವೆ. ತಮ್ಮ ಲೌಕಿಕಕಾಯ, ಕರ್ಮಗಳಿಗೆ ಅನುಗುಣವಾಗಿ ವಿವಿಧ ನಾಮಧೇಯಗಳೊಂದಿಗೆ ವೇಷ, ಭೂಷಣ, ನಗ ಆಭರಣ ನುಡಿ, ನಡವಳಿಕೆಗಳು, ಆಹಾರಗಳು ವೈವಿಧ್ಯಮಯ ವಾಗಿರುತ್ತವೆ. ಹಲವು ದೈವಗಳು ತಮ್ಮನ್ನು ನಂಬಿ ನಡೆಯುವ ಜನ ಸಮುದಾಯಕ್ಕೆ ಅನುಗುಣವಾಗಿಯೂ, ಹಿನ್ನಲೆಗನುಗುಣವಾ ಗಿಯೂ ಸಾತ್ವಿಕ, ರಕ್ತಾಹಾರಿ ಹಾಗೂ ಮಾಂಸಾಹಾರಿಗಳಾಗಿರುತ್ತವೆ. ಉದಾ: ದೈವೀ ಶಕ್ತಿಯ ಅವಿರ್ಭಾವದಿಂದ ಹುಟ್ಟಿದ ದೈವಗಳು ಸಾತ್ವಿಕ ಆಹಾರ ಸ್ವೀಕರಿಸುತ್ತವೆ. ಹಾಲು, ಹಣ್ಣು, ಎಳನೀರು, ಪಂಚಕಜ್ಜಾಯ ಇವುಗಳು ಆಹಾರವಾಗಿರುತ್ತವೆ. ಮಾನವ, ಮೃಗ ಮೂಲದಿಂದ ಹುಟ್ಟು ಪಡೆದ ದೈವಗಳು ರಕ್ತಾಹಾರ, ಮಾಂಸಹಾರ ಬೇಡುತ್ತವೆ. ಇದಕ್ಕೆ ಅಪವಾದವೂ ಇದೆ.
ಜನಪದರ ನಂಬಿಕೆಗೆ ಅನುಗುಣವಾಗಿ ದೈವಸ್ಥಾನಗಳಲ್ಲಿ ಮಣೆ, ಮಂಚ, ಉಯ್ಯಾಲೆ, ಗದ್ದಿಗೆಗಳಲ್ಲಿ ನೆಲೆಗೊಳ್ಳುವ ದೈವಗಳು ಕೆಲವಾದರೆ ಕಲ್ಲಿನಲ್ಲಿ ನೆಲೆನಿಲ್ಲುವ ದೈವಗಳೂ ಇವೆ. ಗುಂಡ (ದೈವದ ಕೋಣೆ) ಮನೆಯ ಪಡಸಾಲೆ, ಪ್ರತ್ಯೇಕ ಕೋಣೆಗಳಲ್ಲಿಯೂ ನೆಲೆಸುವ ದೈವಗಳಿವೆ. ಮರದ ಬುಡ, ಬಯಲುಗಳಲ್ಲಿಯೂ ನೆಲೆ ನಿಲ್ಲುವ ದೈವಗಳಿವೆ.
ಈ ಎಲ್ಲಾ ದೈವಗಳಿಗೆ ಜನರ ಭಕ್ತಿ, ನಂಬಿಕೆಗೆ ಅನುಗುಣವಾಗಿ ಹಿರಿಯರು ಮಾಡಿದ ಕಟ್ಟು ಕಟ್ಟಳೆಗನುಸಾರವಾಗಿ ಆರಾಧನೆ ನಡೆಯುತ್ತದೆ. ನರ್ತನ ಸೇವೆ (ಕೋಲ ಅಥವಾ ನೇಮ) ಮಾತ್ರವಲ್ಲದೆ ನಂಬಿಕೊಂಡು ಬಂದ ಜನ ಸಮುದಾಯವಾಗಲಿ, ಕುಟುಂಬಸ್ಥರಾಗಲಿ ಒಟ್ಟಾಗಿ ದೈವಗಳಿಗೆ ಪರ್ವ ಸೇವೆ (ಆಹಾರ ಸಮರ್ಪಣೆ) ಪದ್ಧತಿಯೂ ಬಹು ಪ್ರಚಲಿತದಲ್ಲಿದೆ. ದೂರದೂರದ ಊರುಗಳಲ್ಲಿ ವಿವಿಧ ಕಾರಣಗಳಿಗೆ ನೆಲೆಸಿರುವ ಕುಟುಂಬಸ್ಥರೆಲ್ಲ ವರ್ಷಕೊಮ್ಮೆ ದೈವದ ಮನೆ (ಹಿರಿಯರ ಮನೆ)ಯಲ್ಲಿ ಸೇರಿ ದೈವಗಳಿಗೆ ಹರಕೆ ಅಥವಾ ನಿಗದಿತ ಆಹಾರ ಸಮರ್ಪಣೆಮಾಡುವ ಪದ್ಧತಿಯೂ ಬಹು ಸಾಮಾನ್ಯವಾಗಿದೆ. ನಿರ್ದಿಷ್ಟ ಕುಟುಂಬಗಳಿಗೆ ನಿರ್ದಿಷ್ಟ ದೈವ ಪರಿವಾರವಿರುತ್ತದೆ. ಈ ಎಲ್ಲಾ ದೈವಗಳಿಗೆ ಆ ಕುಟುಂಬದವರ (ಕುಟುಂಬವೆಂದರೆ ಮಾತೃ ಮೂಲದಿಂದ ಬಂದ ಕೂಡುಕುಟುಂಬ – ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ನೂರಾರು ಮಂದಿ ಸೇರುವ ಕುಟುಂಬ) ನಂಬಿಕೆ, ಪೂರ್ವಜರು ಮಾಡಿದ ಕಟ್ಟುಕಟ್ಟಳೆ ಪ್ರಕಾರ ಆರಾಧನೆ ನಡೆಯುತ್ತದೆ. ಕುಟುಂಬದ ಹಿರಿಯರೊಬ್ಬರು ದೈವ ಪೂಜೆಗೆ ನಿಯುಕ್ತರಾಗಿರುತ್ತಾರೆ. ಇತರರು ಅವರಿಗೆ ಸಹಾಯಮಾಡುತ್ತಾರೆ.
ನಿಗದಿತ ದಿನದಂದು ಸ್ಥಳ ಶುದ್ಧಿಯ ಬಳಿಕ ಬೇಕಾದ ಪರಿಕರಗಳನ್ನು ಜೋಡಿಸಿಕೊಳ್ಳಲಾಗುತ್ತದೆ. ದೈವ ಪೂಜೆಯ ಪೂಜಾರಿ(ಮುಕ್ಕಾಲ್ದಿ) ಶುದ್ಧಾಚಾರದಿಂದ ಶುಚಿರ್ಭೂತರಾಗಿ ಅಣಿಯಾಗುತ್ತಾರೆ. ಸಾತ್ವಿಕ ಆಹಾರವನ್ನಷ್ಟೆ ಸೇವಿಸುತ್ತಾರೆ ಅಥವಾ ಉಪವಾಸದಿಂದಿರುತ್ತಾರೆ. ದೈವಗಳ ಮಣೆ, ಮಂಚ, ಮೊಗ(ಮುಖವಾಡ), ಮೂರ್ತಿಗಳನ್ನು ಹೂಗಳಿಂದ ಸಿಂಗರಿಸುತ್ತಾರೆ. ಕಾಲುದೀಪ, ಹಣತೆಗಳಲ್ಲಿ ದೀಪಗಳನ್ನು ಉರಿಸಿಡುತ್ತಾರೆ. ಹೊದ್ಲು ಸೇರಿಸಿದ ಪಂಚಕಜ್ಜಾಯವನ್ನು ತಯಾರಿಸಿ ಕುಟುಂಬಸ್ಥರ ಸಮಕ್ಷದಲ್ಲಿ, ಕುಟುಂಬಸ್ಥರ ಅನುಮತಿ ಪಡೆದು ಹಾಸಿದ ಬಾಳೆಲೆಗಳಲ್ಲಿ ಬಡಿಸುತ್ತಾರೆ. ಹಾಲು ಸೀಯಾಳ, ಬಾಳೆಹಣ್ಣುಗಳನ್ನು ಜೊತೆಗಿಡುತ್ತಾರೆ. ದೀಪ ಧೂಪಗಳಿಂದ ಆರತಿಯನ್ನು ಎತ್ತುತ್ತಾರೆ. ಆ ಬಳಿಕ ಕುಟುಂಬದ ಹಿರಿಯರೊಬ್ಬರು ಕುಟುಂಬಸ್ಥರ ಪರವಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಮಾಡಿದ ಸೇವೆಯಲ್ಲಿ ಕುಂದು-ಕೊರತೆ, ಲೋಪ-ದೋಷಗಳಿದ್ದರೆ ಮನ್ನಿಸಿ ನೀಡಿದ ಸೇವೆಯನ್ನು ಸಂತೋಷದಿಂದ ಸ್ವೀಕರಿಸಿ ನಂಬಿದ ಕುಟುಂಬಸ್ಥರಿಗೆ ಹೋದಲ್ಲಿ, ಬಂದಲ್ಲಿ ಬೆಂಗಾವಲಾಗಿ ನಿಂತು ಕಾಯಬೇಕು(ರಕ್ಷಿಸಬೇಕು) ಎಂಬುದಾಗಿ ನಿವೇದಿಸಿ ಕೊಂಡು ಎಲ್ಲರೂ ಕೈಯಲ್ಲಿ ಹೂ ಮತ್ತು ಅಕ್ಕಿ (ಪುವರಿ)ಯನ್ನು ಮಣೆ, ಮಂಚಕ್ಕೆ ಹಾರಿಸಿ ಕೈ ಮುಗಿದು ಅಡ್ಡ ಬಿದ್ದು ನಮಸ್ಕರಿಸುತ್ತಾರೆ. ರಕ್ತಾಹಾರದ ದೈವಗಳಿಗೆ ಕೋಳಿಗಳನ್ನು ಕೊಯ್ಯುತ್ತಾರೆ. ಮಾಂಸಹಾರದ ದೈವಗಳಿಗೆ ಕೋಳಿ ಮಾಂಸದ ಅಡುಗೆ ಮಾಡಿ ಎಡೆಹಾಕಿ ಬಡಿಸುತ್ತಾರೆ. ಇದನ್ನು’ಅಗೆಲ್’ಎಂಬುದಾಗಿ ಕರೆಯುತ್ತಾರೆ. ಪರ್ವ ಅಥವಾ ಅಗೆಲ್ ಸ್ವಿಕರಿಸಿದ ದೈವಗಳು ಸಂತೃಪ್ತಿಗೊಂಡು ನಂಬಿದ ಕುಟುಂಬಸ್ಥರನ್ನು ಬೆಂಗಾವಲಿದ್ದು ಕಾಯುತ್ತವೆ ಎಂಬುದು ನಂಬಿಕೆ

.ಮಾಹಿತಿ:
ವಿವಿಧ ಮೂಲಗಳಿಂದ

               ಸಾಧು ಪೂಜಾರಿ

2 thoughts on “ಭೂತಾರಾಧನೆ

  1. Very informative article compiled & published in Sinchana

    BY Past President Sadhu Poojary

    Old traditional & rich cultural devotional belief in coastal Tulunadu
    People still follow the right concepts about
    BHOOTHARADANE.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!