ಸಮಾಜದ ಜನರ ಆರ್ಥಿಕ ವ್ಯವಸ್ಥೆಗೊಂದು ಭದ್ರ ಬುನಾದಿಯನ್ನು ಹಾಕಿಕೊಡಬೇಕು, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಮಾಜದ ಹೆಸರು ಅಗ್ರಸ್ಥಾನದಲ್ಲಿ ಬರಬೇಕು ಎನ್ನುವ ಉದಾತ್ತ ಚಿಂತನೆಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಪ್ರಾಯೋಜಿತವಾಗಿ ಹುಟ್ಟಿ ಕೊಂಡ ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಇಂದು ಮಲ್ಟಿ-ಸ್ಟೇಟ್ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ಭವಿಷ್ಯದ ದೃಷ್ಠಿಯಲ್ಲಿ ಸ್ಪಷ್ಟವಾದ ಗುರಿ ಇದ್ದರೂ ಆ ಗುರಿಯನ್ನು ಮುಟ್ಟುವುದು ಸುಲಭದ ಕೆಲಸ ಅಲ್ಲ ಎನ್ನುವ ಸತ್ಯ ಸ್ಪಷ್ಟವಾಗಿ ತಿಳಿದಿದ್ದರೂ ಕೆಲವೇ ವರುಷದ ಸೀಮಿತ ಅವಧಿಯಲ್ಲಿ ಮುಂಬೈಯ ಗಡಿ ರೇಖೆಯನ್ನು ದಾಟಿ ಬೆಳೆದು ಬಂದಿರುವುದು ಭಾರತ್ ಕೋಆಪರೇಟಿವ್ ಬ್ಯಾಂಕಿನ ಹಿರಿಮೆ. ಮುಂಬೈಯಲ್ಲಿ ಆರಂಭಗೊಂಡ ದಿ ಭಾರತ್ ಕೋಆಪರೇಟಿವ್ ಬ್ಯಾಂಕ್ ತನ್ನ ಎಗ್ಗೆಯನ್ನು ಬೆಂಗಳೂರಿನಲ್ಲಿ ವಿಸ್ತರಿಸಿ ಅಲ್ಲಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ನೆಲ ಕಂಡಿತ್ತು. ನಾಡಿನ ಪ್ರತಿಯೊಂದು ಪಟ್ಟಣವನ್ನು ಮತ್ತು ಹಳ್ಳಿಯನ್ನು ತಲುಪಬೇಕು ಎನ್ನುವ ಸಂಕಲ್ಪದಿಂದ ತನ್ನ ಕಾರ್ಯ ಬಾಹುಲ್ಯವನ್ನು ವಿಸ್ತರಿಸಿಕೊಂಡಿರುವ ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಇಂದು ಮಹಾರಾಷ್ಟ್ರದಲ್ಲಿ 41 ಹಾಗೂ ಕರ್ನಾಟಕದಲ್ಲಿ 14 ಹೀಗೆ ಒಟ್ಟು 55 ಶಾಖೆಗಳನ್ನು ಹೊಂದಿದೆ. ಮಾಯಾನಗರಿ ಮುಂಬೈಯಲ್ಲಿ ಅತ್ಯಂತ ಜನಪ್ರಿಯವಾಗಿ ಸರ್ವರ ಮನೆಮಾತಾದ ದಿ ಭಾರತ್ ಕೋಆಪರೇಟಿವ್ ಬ್ಯಾಂಕ್ ಅಲ್ಪಾವಧಿಯಲ್ಲಿ ತನ್ನ ಲಾಭಾಂಶವನ್ನು ಕೋಟಿ ಮೇಲೆ ಏರಿಸಿತು. ಉಳಿತಾಯಕ್ಕೆ ಅಧಿಕ ಬಡ್ಡಿ, ಸಾಲಕ್ಕೆ ಕಡಿಮೆ ಬಡ್ಡಿ, ಏಕಗವಾಕ್ಷಿ ಸೇವೆ, ಎಟಿಎಂ ವ್ಯವಸ್ಥೆ, ಫಿಕ್ಸೆಡ್ ಡೆಪಾಸಿಟ್‍ಗಳಿಗೆ ಆಕರ್ಷಕ ಬಡ್ಡಿದರ, ತ್ವರಿತ ಸೇವೆ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಜನರ ಪ್ರೀತಿಗಳಿಸಿದ ದಿ ಭಾರತ್ ಕೋಆಪರೇಟಿವ್ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕಿನ ಸಾಲಿಗೆ ತನ್ನನ್ನು ತಾನು ನಿಲ್ಲಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದೇ ಕಾರಣದಿಂದ ಬ್ಯಾಂಕ್ ತನ್ನ ಹೊಸ ಶಾಖೆಯನ್ನು ಆರಂಭಿಸುವ ಸ್ಥಳದಲ್ಲಿ ಉದ್ಘಾಟನೆಯ ಒಂದೇ ದಿನದಲ್ಲಿ ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ ಇತಿಹಾಸವನ್ನು ಹೊಂದಿದೆ.
ಯಾವುದೇ ಒಂದು ಬ್ಯಾಂಕ್ ಆಗಲಿ ಇಲ್ಲವೆ ಇತರ ಆರ್ಥಿಕ ಸಂಸ್ಥೆಯಾಗಲಿ ಕೇವಲ ಒಂದು ರಂಗಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ. ತಾನು ಆರಂಭವಾದ ಉದ್ದೇಶದ ಸುತ್ತಾ ಮಾತ್ರ ಗಿರಕಿ ಹೊಡೆಯುವ ಆರ್ಥಿಕ ಸಂಸ್ಥೆಗಳ ಸಾಲಿಗೆ ಅಪವಾದ ಎನ್ನುವಂತೆ ಬೆಳೆಯುತ್ತಿದೆ ಭಾರತ್ ಬ್ಯಾಂಕ್.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾ ದರ್ಶವನ್ನು ಯಥಾವತ್ತಾಗಿ ಪಾಲಿಸಿಕೊಂಡು ಬರುತ್ತಿರುವ ಬ್ಯಾಂಕ್, ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ, ವಿದ್ಯಾಭ್ಯಾಸ ಸಾಲದ ನೆರವು ಮಾತ್ರವಲ್ಲದೆ ತನ್ನ ಲಾಭದ ಒಂದಂಶವನ್ನು ಬಡವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿಯೂ ಮೀಸಲಿಡುತ್ತಿದೆ. ಆರ್ಥಿಕ ಸಬಲೀಕರಣ ಬಯ ಸುತ್ತಾ ಸ್ವಉದ್ಯೋಗ ಮಾಡುವ ನಿರುದ್ಯೋಗಿ ಯುವಕ ಯುವತಿಯರಿಗೆ ಆರ್ಥಿಕ ನೆರವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದೆ. ಈ ಮೂಲಕ ಇಂದು ಎಷ್ಟೋ ಮಂದಿ ಯುವಕ ಯುವತಿ ಯರು ಸ್ವ ಉದ್ಯೋಗಿಗಳಾಗಿದ್ದಾರೆ. ಇದೇ ರೀತಿ ಗೃಹ ನಿರ್ಮಾಣಕ್ಕೆ ನೆರವು ಪಡೆದವರೂ ಇದ್ದಾರೆ. ಇವೆಲ್ಲ ಬ್ಯಾಂಕ್ ಮಾಡುವ ಸಾಮಾನ್ಯ ಕೆಲಸವಾದರೂ ಇದನ್ನು ಅತ್ಯಂತ ಯಶಸ್ವಿಯಾಗಿ ಜನಪ್ರಿಯ ಗೊಳಿಸಿದ ಕೀರ್ತಿ ಭಾರತ್ ಬ್ಯಾಂಕ್‍ಗೆ ಸಲ್ಲುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಜನರಗೆ ಸಾಲ ನೀಡಲು ಇನ್ನಿಲ್ಲದಂತೆ ಸತಾಯಿಸಿದ ದಿನದಲ್ಲಿ ಜನರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಿರುವುದು ಭಾರತ್ ಬ್ಯಾಂಕ್.
ಇದಲ್ಲದೆ ಸಾಮಾಜಿಕ ಕೆಲಸವನ್ನು ನಿರ್ವಹಿಸುವ ಸಮುದಾಯದ ಸಂಘಟನೆಗಳ ಸಾಮಾಜಿಕ ಕೆಲಸಕ್ಕೂ ಭಾರತ್ ಬ್ಯಾಂಕ್ ನೆರವು ನೀಡಿದೆ. ಸಮುದಾಯದ ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ ಕೀರ್ತಿಯೂ ಭಾರತ್ ಬ್ಯಾಂಕ್‍ಗೆ ಸಂದಿದೆ, ಜೀವನದಲ್ಲಿ ನೊಂದು ಬೆಂದು ಬಂದಿರುವ ಜನರ ಜೀವನ ಮೌಲ್ಯವನ್ನು ಮಾತ್ರ ಪರಿಗಣಿಸಿ ಬೇರಾವ ನಿರೀಕ್ಷೆಯನ್ನೂ ಇರಿಸದೇ ಉದ್ಯೋಗ ನೀಡಿ ಬಡ ಮಹಿಳೆಯರ ಜೀವನ ಮೌಲ್ಯವನ್ನು ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸುಧಾರಿಸಿದೆ.
ಇಂದು ಅದೆಷ್ಟೂ ಪ್ರತಿಭಾನ್ವಿತರು ಭಾರತ್ ಬ್ಯಾಂಕ್ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ, ಸಮಾಜದ ಬಹುತೇಕ ಮಂದಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬ್ಯಾಂಕಿನ ನೆರವನ್ನು ಪಡೆದಿದ್ದಾರೆ.
ಇದೇ ಕಾರಣಕ್ಕೆ ಬ್ಯಾಂಕಿಂಗ್ ಮತ್ತು ಸೇವಾ ಕ್ಷೇತ್ರದಲ್ಲಿ ಬ್ಯಾಂಕಿಗೆ ಪ್ರಶಸ್ತಿ ಸಂದಿದೆ. ಆದರೆ ಆರ್ಥಿಕ ನಿರ್ವಹಣೆಯ ಆವರಣದಿಂದ ಹೊರ ಬಂದು ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ ಸೇವೆ, ಆರ್ಥಿಕ ಸಬಲೀಕರರಣ, ಉದ್ಯೋಗ ಭದ್ರತೆ, ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ನೀಡುತ್ತಾ, ಸಮಾಜದಿಂದ ಪಡೆದ ಬಹುಪಾಲನ್ನು ಮತ್ತೆ ಸಮಾಜಕ್ಕೆ ನೀಡುವ ಭಾರತ್ ಬ್ಯಾಂಕ್‍ನ ಚಿಂತನೆಯ ಸಂಕಲ್ಪವನ್ನು ಅಭಿನಂದಿಸಿ, ಬ್ಯಾಂಕಿನ ಈ ಸೇವೆಯನ್ನು ಗುರುತಿಸಿ ಯುವವಾಹಿನಿಯು ತನ್ನ 27ನೇ ವಾರ್ಷಿಕ ಸಮಾವೇಶದಲ್ಲಿ ‘ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ’ಯನ್ನು ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್‍ಗೆ ನೀಡಿ ಗೌರವಿಸುತ್ತಿದೆ.