ಕೊಲ್ಯ :- ಅಭಯ ಆಶ್ರಯ ಅಸೈಗೋಳಿ ಇದರ ಓಂ ಧ್ಯಾನ ದೇಗುಲದ ದಿವ್ಯ ಸಾನಿಧ್ಯದಲ್ಲಿ ಸಾಕಾರಗೊಂಡ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 168 ನೆಯ ಜನ್ಮ ದಿನಾಚರಣೆಯು ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ತಾರೀಕು 10 ಸೆಪ್ಟೆಂಬರ್ 2022ನೇ ಶನಿವಾರ ಸಂಜೆ ಅಸೈಗೊಳಿ ಅಭಯಾಶ್ರಯದ ಪ್ರಶಾಂತವಾದ ತಾಣದಲ್ಲಿ ಇತ್ತೀಚೆಗೆ ನೂತನವಾಗಿ ಲೋಕಾರ್ಪಣೆಗೊಂಡ ಓಂ ಧ್ಯಾನ ದೇಗುಲದ ದಿವ್ಯ ಸಾನಿಧ್ಯದಲ್ಲಿ ಆಶ್ರಮದ ಹಿರಿಯ ಸದಸ್ಯರ ಸಮಕ್ಷಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 168 ನೆಯ ಜನ್ಮ ದಿನವನ್ನು ಭಕ್ತಿಯಿಂದ ಆಚರಿಸಲಾಯಿತು. ಆಶ್ರಮದ ಅಧ್ಯಕ್ಷರಾದ ಶ್ರೀನಾಥ್ ಹೆಗ್ಡೆ ಉಪಾಧ್ಯಕ್ಷರಾದ ಉದಯ ಶಂಕರ ಶೆಟ್ಟಿ ಹಾಗೂ ಆಶ್ರಮದ ಹಿರಿಯ ನಿವಾಸಿ ಗೋಪಾಲ ಶೆಟ್ಟಿ , ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಸುಂದರ ಸುವರ್ಣ, ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರವಿ ಕೊಂಡಾಣ, ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಮೋಹನ್ ಮಾಡೂರು, ಕೊಲ್ಯ ಘಟಕದ ಕಾರ್ಯದರ್ಶಿ ನಿತಿನ್ ಕರ್ಕೇರ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಕು. ಭಾರತಿ ಸನಿಲ್ ಉಳ್ಳಾಲ, ವಿಶ್ವ ಬಿಲ್ಲವರ ಸೇವಾ ಚಾವಡಿ (ರಿ.) ಇದರ ಪ್ರಮುಖರಾದ ಅಜಿತ್ ಪೂಜಾರಿ ಪಜೀರು, ಸಂಗೀತ ಕಲಾವಿದೆ ಲಾವಣ್ಯ ಸುಧಾಕರ್, ಹಿರಿಯರಾದ ನಾರಾಯಣ ಪೂಜಾರಿ ಚಿಪ್ಲುಕೋಟೆ, ಕೊಲ್ಯ ಬಿಲ್ಲವ ಸಂಘದ ಹಿರಿಯ ಸದಸ್ಯರಾದ ಮುತ್ತಪ್ಪ ಪೂಜಾರಿ, ಯೋಗ ಗುರುಗಳಾದ ಬಾಳಪ್ಪ ಪೂಜಾರಿ, ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ಸ್ಥಾಪಕ ಸದಸ್ಯರಾದ ವೆಂಕಟೇಶ ಬಂಗೇರ, ರೋಟರಿ ಸಮುದಾಯ ದಳ ಕೊಲ್ಯ ಇದರ ಮಾಜಿ ಅಧ್ಯಕ್ಷರಾದ ಹರೀಶ್ ಶೆಟ್ಟಿ ನೀಲಿಪಾಲು ಇವರು ನಾರಾಯಣ ಗುರುವರ್ಯರ ಭಾವ ಚಿತ್ರಕ್ಕೆ ಸಾಮೂಹಿಕವಾಗಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಾಯಕಿ ಲಾವಣ್ಯ ಸುಧಾಕರ್ ಮತ್ತು ತಂಡದವರು ಗುರುಶ್ಲೋಕ, ಗುರುಪ್ರಾರ್ಥನೆ, ಗುರು ಜ್ಞಾನ ಸಂಗೀತವನ್ನು ನೆರವೇರಿಸಿಕೊಟ್ಟರು. ಶಾಸ್ತ್ರೀಯ ಸ್ವರ ತರಂಗ , ಸಂಗೀತದ ನಾದ ಮಿನದನದೊಂದಿಗೆ ಓಂ ಧ್ಯಾನದೇಗುಲದೊಳಗಿನ ದೈವೀ ಶಕ್ತಿ ಯ ಕಂಪನದ ಅನುಭೂತಿಯಲೆಯಲ್ಲಿ ಪಾಲ್ಗೊಂಡ ಸರ್ವರೂ, ಶಾಂತ ಚಿತ್ತ ಮಗ್ನರಾಗಿ ಆಲಿಸಿದ ಗುರು ಭಕ್ತಿ ಸಂಗೀತವು ಗುರುಗಳ ಪಾದಕ್ಕರ್ಪಿತವಾಯಿತು. ಓಂ ಧ್ಯಾನ ದೇಗುಲವು ಬ್ರಹ್ಮ ಶ್ರೀ ನಾರಾಯಣ ಗುರುವರ್ಯ ಆಲಯದಂತಾಯಿತು. ಕಾರ್ಯಕ್ರಮದಲ್ಲಿ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಕು.ಭಾರತಿ ಸನಿಲ್ ಉಳ್ಳಾಲ ಇವರು ಗುರು ಸಂದೇಶ ಸಾರಿದರು. ಅಭಯಾಶ್ರಯ ಸಂಸ್ಥೆಯ ಅಧ್ಯಕ್ಷರಾದ ಶ್ರೀನಾಥ್ ಹೆಗ್ಡೆ ಇವರು ನಾರಾಯಣ ಗುರುವರ್ಯರ ತತ್ವ ಸಂದೇಶಗಳ ಪಾವಿತ್ರ್ಯತೆಯನ್ನು ಮನನ ಮಾಡಿದರು. ಮಂಗಳ ಭಜನೆಯೊಂದಿಗೆ ಗುರುಗಳ ಭಾವಚಿತ್ರಕ್ಕೆ ಕೊಲ್ಯ ಘಟಕದ ಶುಭ್ರ ವಸ್ತ್ರಧಾರಿ ಮಹಿಳಾ ಸದಸ್ಯೆಯರು ಮಹಾ ಮಂಗಳಾರತಿಗೈದರು, ಬಳಿಕ ಸರ್ವರೂ ಗುರುಗಳಿಗೆ ಸಾಮೂಹಿಕ ಮಂಗಳಾರತಿ ನರವೇರಿಸಿ ಭಕ್ತಿಯ ಪುಷ್ಪಾರ್ಚನೆಗೈದು ಗುರುವರ್ಯರ ಅನುಗ್ರಹ ಪಡೆದು, ಗುರು ಪ್ರಸಾದ ಸ್ವೀಕರಿಸಿ ಪುಣೀತರಾದರು. ಘಟಕದ ಮಾಜಿ ಅಧ್ಯಕ್ಷರಾದ ಕುಸುಮಾಕರ ಕುಂಪಲ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಆಗಮಿಸಿದ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಘಟಕದ ಅಧ್ಯಕ್ಷರಾದ ಸುಂದರ ಸುವರ್ಣ ಇವರು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಹಾಗೂ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶವಿತ್ತ ಅಸೈಗೋಳಿ ಅಭಯಾಶ್ರಯದ ಅಧ್ಯಕ್ಷರು ,ಪದಾಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಧನ್ಯವಾದಗೈಯ್ಯುವ ಮೂಲಕ ಸುಶ್ರಾವ್ಯ ಗುರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟ ಲಾವಣ್ಯ ಸುಧಾಕರ್ ಮತ್ತು ತಂಡದರವನ್ನು ಗೌರವಿಸಿ ಘಟಕದ ಪರವಾಗಿ ಸ್ಮರಣಿಕೆ ನೀಡಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಅಭಯಾಶ್ರಯದ ಆಡಳಿತ ಮಂಡಳಿಯು ಉಪಾಹಾರದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಅತಿಥಿ ಸತ್ಕಾರವನ್ನು ನೆರವೇರಿಸಿದರು.