ಮಂಗಳೂರು : ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮದ ತಾರಿಗುಡ್ಡೆ ನಿವಾಸಿ ಬೇಬಿ ಪೂಜಾರಿ ಕುಟುಂಬಕ್ಕೆ ದಿನಾಂಕ 20-10-2024 ರಂದು ಯುವವಾಹಿನಿ ಸಂಸ್ಥೆಯು ಸುಮಾರು ರೂ 6.40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯ ಹಸ್ತಾಂತರ ಸಮಾರಂಭದಲ್ಲಿ ಉದ್ಯಮಿ ದಯಾನಂದ ಬಂಗೇರ ದೀಪ ಬೆಳಗಿ ಉದ್ಘಾಟಿಸಿದರು.
ಮಾನವತಾವಾದಿ ನಾರಾಯಣ ಗುರುಗಳ ಸಂದೇಶದಂತೆ ಯುವವಾಹಿನಿ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಡಾ.ಎನ್.ಟಿ.ಅಂಚನ್ ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿ ಮಾತನಾಡಿದರು.
ಯುವವಾಹಿನಿಯ ಮನೆ ಹಸ್ತಾಂತರದ ಕನಸು ನನಸಾಗಿರುವುದು ಸಂತಸ ತಂದಿದೆ : ಜಯರಾಮ ಪೂಜಾರಿ ಬಾಳಿಲ
ಹೃದಯ ಸಂಬಧಿ ಕಾಯಿಲೆಯಿಂದ ದುಡಿಯಲಾಗದೆ ಮನೆಯಲ್ಲಿರುವ ಅನಾರೋಗ್ಯ ಪೀಡಿದ ಗಂಡ, ಈಗಲೋ ಆಗಲೋ ಕುಸಿದು ಬೀಳುವಂತಿರುವ ಮನೆ, ಬೀಡಿ ಕಟ್ಟಿ ಬಂದ ಹಣದಿಂದ ಮನೆ ನಿಭಾಯಿಸುವ ಸಂಕಷ್ಟ ಹಾಗೂ ಅಶಕ್ತ ಕುಟುಂಬದ ಜವಾಬ್ದಾರಿ ಹೊತ್ತ ಬೇಬಿ ಪೂಜಾರಿಯವರಿಗೆ ಯುವವಾಹಿನಿ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಸುಮಾರು ರೂ 6.40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ನಿಜಕ್ಕೂ ಯುವವಾಹಿನಿಯ ಸಂತಸದ ಕ್ಷಣ ಎಂದು ಮನೆ ನಿರ್ಮಾಣದ ಸಂಪೂರ್ಣ ಮೇಲುಸ್ತುವಾರಿ ವಹಿಸಿಕೊಂಡ ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ಜಯರಾಮ ಪೂಜಾರಿ ಬಾಳಿಲ ತಿಳಿಸಿದರು.
ನಾರಾಯಣಗುರುಗಳ ಆಶೀರ್ವಾದದಿಂದ ಮನೆಯು ನಂದಾದೀಪವಾಗಿ ಬೆಳಗಲಿ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಟಿ.ಎನ್ ಪೂಜಾರಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಮಾತನಾಡಿ, ಹಗಲು ರಾತ್ರಿಯೆನ್ನದೆ ಸೇವಾ ಮನೋಭಾವದಿಂದ ಮನೆ ನಿರ್ಮಾಣದಲ್ಲಿ ಸಹಕಾರ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಜತೆ ಕಾರ್ಯದರ್ಶಿ ರೇಖಾ ಗೋಪಾಲ್, ಕಾರ್ಯಕಾರಿ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.