ಉಪ್ಪಿನಂಗಡಿ : ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 21.12.2024ನೇ ಶನಿವಾರ, ಅಪರಾಹ್ನ ಗಂಟೆ 6.30ಕ್ಕೆ ಉಪ್ಪಿನಂಗಡಿ ಹೆಚ್ ಎಂ ಆಡಿಟೋರಿಯಂ ನಲ್ಲಿ ಘಟಕದ ಅಧ್ಯಕ್ಷರಾದ ಶ್ರೀ ಸೋಮಸುಂದರ್ ಕೊಡಿಪ್ಪಾನ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಘಟಕದ ಮಾಜಿ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೆಡೆಂಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸಾಮಾಜಿಕ ಕಳಕಳಿಯ ಸಂಘಟನೆ ಯೊಂದಿಗೆ ಜನರ ಬೆಂಬಲ, ಭಾಗವಹಿಸುವಿಕೆ ಉತ್ತಮವಾಗಿರುತ್ತದೆ. ಉಪ್ಪಿನಂಗಡಿ ಯುವವಾಹಿನಿ ಘಟಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಬಹಳ ಶ್ರೇಷ್ಠವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
2024ನೇ ಸಾಲಿನ ವಾರ್ಷಿಕ ವರದಿಯನ್ನು ಘಟಕದ ಕಾರ್ಯದರ್ಶಿ ಅನಿತಾ ಸತೀಶ್ ಸಭೆಯ ಮುಂದಿಟ್ಟರು.
ನಿಕಟಪೂರ್ವ ಅಧ್ಯಕ್ಷರು ಹಾಗೂ ಚುನಾವಣಾಧಿಕಾರಿ ಮನೋಹರ್ ಕುಮಾರ್ ಇವರು ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿಯವರು ನೂತನ ಸಮಿತಿಗೆ ಪ್ರಮಾಣ ವಚನ ಬೋಧಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಸುವರ್ಣ ರವರು ಸಂಘಟನೆಗಳು ಯಾವತ್ತೂ ಜನರ ಮನಸ್ಸು ಮತ್ತು ಮನೆಗಳನ್ನು ತಲುಪಬೇಕು, ಇಂದಿನ ಕಾಲಘಟ್ಟದಲ್ಲಿ ನಮ್ಮ ಸಾಮಾಜಿಕ ಅಗತ್ಯತೆಗಳನ್ನು ಬೇಡಿಕೆಗಳಿಗೆ ಒತ್ತಾಯಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಉಪ್ಪಿನಂಗಡಿ ಯುವವಾಹಿನಿ ಘಟಕದ ಮೂಲಕ ಇನ್ನಷ್ಟು ನಾಯಕರು ಮುಂದೆ ಬರುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಳ್ತಂಗಡಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಜಯ ವಿಕ್ರಮ್ ಕಲ್ಲಾಪು ಉಪ್ಪಿನಂಗಡಿ ಯುವವಾಹಿನಿ ಘಟಕದ ಸಾಮಾಜಿಕ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಘಟಕದ ಗೌರವ ಸಲಹೆಗಾರರು ಶ್ರೀ ವರದರಾಜ್ ಎಂ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು ಶ್ರೀ ಅಶೋಕ್ ಕುಮಾರ್ ಪಡ್ಪುರವರು ನೂತನ ತಂಡಕ್ಕೆ ಶುಭ ಹಾರೈಸಿದರು.
ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜಾರಾಮ್ ಕೆ.ಬಿ. ಇವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಯುವವಾಹಿನಿ ಕಡಬ ಘಟಕದ ಮಾಜಿ ಅದ್ಯಕ್ಷರು ಶ್ರೀ ಶಿವಪ್ರಸಾದ ನೂತನ ತಂಡಕ್ಕೆ ಶುಭ ಹಾರೈಸಿದರು.
ಸಭೆಯಲ್ಲಿ ಕಡಬ ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ, ಪುತ್ತೂರು ಘಟಕದ ಅಧ್ಯಕ್ಷರು ಶ್ರೀ ಅಣ್ಣಿ ಪೂಜಾರಿ, ಉಪ್ಪಿನಂಗಡಿ ಘಟಕದ ಎಲ್ಲಾ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾದ ಶ್ರೀ ನಾಣ್ಯಪ್ಪ ಕೋಟ್ಯಾನ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ಅವಧಿಯಲ್ಲಿ ಉಪ್ಪಿನಂಗಡಿ ಯುವವಾಹಿನಿಯನ್ನು ಸಮಾಜಮುಖಿಯಾಗಿ ಬೆಳೆಸುವಲ್ಲಿ ಎಲ್ಲರ ಸಹಕಾರವನ್ನು ಕೇಳಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರಾದ ಶ್ರೀ ಸೋಮಸುಂದರ್ ಕೊಡಿಪ್ಪಾನ ರವರು ಯುವವಾಹಿನಿಗೆ ಪ್ರೋತ್ಸಾಹ ನೀಡಿದ ಮಾಜಿ ಅದ್ಯಕ್ಷರುಗಳು ಹಾಗು ಪದಾಧಿಕಾರಿಗಳನ್ನು ಸ್ಮರಿಸುತ್ತಾ ಮುಂದೆಯು ನಮ್ಮೆಲ್ಲರ ಪ್ರೋತ್ಸಾಹವನ್ನು ಮುಂದಿನ ವರ್ಷಕ್ಕೆ ಆಯ್ಕೆಯಾದ ತಂಡಕ್ಕೆ ನೀಡೋಣ ಎಂದು ನೂತನ ತಂಡಕ್ಕೆ ಶುಭ ಹಾರೈಕೆ ಮಾಡಿದರು.
ಕೊನೆಯಲ್ಲಿ ನೂತನ ಕಾರ್ಯದರ್ಶಿ ಸುರೇಶ್ ವಿ ಧನ್ಯವಾದ ಸಲ್ಲಿಸಿದರು.
ಕು.ರಕ್ಷಾ ಮತ್ತು ಕು.ಹರ್ಷಿತಾ ಪ್ರಾರ್ಥಿಸಿದರು.
ಮಾಜಿ ಅಧ್ಯಕ್ಷರಾದ ಮನೋಹರ್ ಕುಮಾರ್ ಹಾಗೂ ಪದಾಧಿಕಾರಿ ರಮೇಶ್ ಸಾಂತ್ಯ ಕಾರ್ಯಕ್ರಮ ನಿರ್ವಹಿಸಿದರು.