ಮಂಗಳೂರು : ಹತ್ತೊಂಬತ್ತನೆಯ ಶತಮಾನದ ಕೇರಳದ ಸಂತ ನಾರಾಯಣಗುರು ಮಾನವ ಧರ್ಮಕ್ಕೆ ಮಾದರಿ ಏನೆಂಬುವುದನ್ನು ತೋರಿಸಿ ಕೊಟ್ಟವರು. ಲಕ್ಷಾಂತರ ಮಂದಿ ಶೋಷಿತರ ಬದುಕಿಗೆ ಪರಿವರ್ತನೆಯ ಬೆಳಕು ನೀಡಿದ ಅವರ ತತ್ವ ಸಂದೇಶಗಳನ್ನು ಯುವ ಜನಾಂಗ ಹೆಚ್ಚು ಹೆಚ್ಚು ಅನುಷ್ಠಾನಗೊಳಿಸಬೇಕು, ವಿದ್ಯಾರ್ಥಿ ಸಂವಾದದ ಮೂಲಕ ಯುವ ಜನಾಂಗವನ್ನು ಸೆಳೆಯುವ ಕಾರ್ಯ ಶ್ಲಾಘನೀಯ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ ಎಮ್.ಕೆ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವು ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ 17.02.2018 ರಂದು ಮಂಗಳೂರು ಪುರಭವನದಲ್ಲಿ ಜರುಗಿದ ಶ್ರೀ ಗುರು ಅಂದು ಇಂದು ಮುಂದೆ ವಿದ್ಯಾರ್ಥಿ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ವಿ.ವಿ.ಸಿಂಡಿಕೇಟ್ ಸದಸ್ಯರಾದ ಮೋಹನಚಂದ್ರನ್ ನಂಬಿಯಾರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಮುದ್ದು ಮೂಡು ಬೆಳ್ಳೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ , ನ್ಯಾಯವಾದಿ ಪದ್ಮರಾಜ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾಗದ ಪ್ರೊಫೆಸರ್ ಉದಯ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ರಾಷ್ಟ್ರೀಯ ತರಬೇತುದಾರರಾದ ಜೇಸಿ ರಾಜೇಂದ್ರ ಭಟ್ ಸಮನ್ವಯಕಾರರಾಗಿ ಸಂವಾದ ನಡೆಸಿಕೊಟ್ಟರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಮೇಘನಾ, ತೀಕ್ಷ್ಣ, ನಿಖಿಲ್, ಅನುಷಾ, ಹರಿಣಿ, ವತ್ಸಲಾ, ಆಶಿತಾ, ಸುಶ್ಮಿತಾ, ಉಜ್ವಲ್, ದೀಪಿಕಾ ವಿಷಯ ಮಂಡನೆ ಮಾಡಿದರು. 550 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪ್ರಶ್ನಾವಳಿಯಲ್ಲಿ ಭಾಗವಹಿಸಿದ್ದರು.
ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಾನೀಯ ಸಂಪಾದಕರಾದ ಯು.ಕೆ.ಕುಮಾರನಾಥ್ ಸಮಾರೋಪ ಭಾಷಣ ಮಾಡಿ ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಸ್ವಾಗತಿಸಿದರು, ಯುವವಾಹಿನಿ(ರಿ) ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಶಶಿಧರ ಕಿನ್ನಿಮಜಲು ಧನ್ಯವಾದ ನೀಡಿದರು, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು