ಬೆಳ್ತಂಗಡಿ : ತರಬೇತಿಯಿಂದ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯ, ವಿದ್ಯಾರ್ಥಿಗಳು ಕಠಿಣ ತರಬೇತಿಯಿಂದ ನಿಶ್ಚಿತವಾದ ಗುರಿ ತಲುಪಲು ಸಾಧ್ಯ ಎಂದು ಶಾಸಕ ಕೆ.ವಸಂತ ಬಂಗೇರ ತಿಳಿಸಿದರು.
ಅವರು ದಿನಾಂಕ 08.04.2018 ರಂದು ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ಬೆಳಕು : ಎಸ್.ಎಸ್.ಎಲ್.ಸಿ ನಂತರ ಮುಂದೇನು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಜನೆಗೆ ಯಾವುದನ್ನು ಆಯ್ಕೆ ಮಾಡಿಕೊಂಡಾಗ ಯಾವ ಹಂತಕ್ಕೆ ತಲುಪಲು ಸಾಧ್ಯ ಎಂಬುವುದಕ್ಕೆ ತರಬೇತಿ ಅಗತ್ಯ ಎಂದು ಅವರು ತಿಳಿಸಿದರು.
ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ಸೋಮನಾಥ ಬಂಗೇರ ವಿದ್ಯಾರ್ಥಿ ತರಬೇತಿಯಿಂದ ಬದುಕನ್ನು ಬೆಳೆಸಿಕೊಳ್ಳಬೇಕು, ಸಾಧಿಸುವ ನಿರ್ಧಾರ ತೆಗೆದುಕೊಂಡು ಬದುಕನ್ನು ಉದ್ದೀಪನಗೊಳಿಸಿಕೊಳ್ಳಬೇಕು ಎಂದರು. ಗುರುವಾಯನಕೆರೆ ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಾಧಿಸಲು ನೂರಾರು ಅವಕಾಶಗಳಿವೆ , ಇಂತಹ ತರಬೇತಿಗಳ ಪ್ರಯೋಜನ ಪಡೆದು ಬದುಕು ಬೆಳೆಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳು ಮುಂದಿನ ವಿಷಯ ಆಯ್ಕೆಗೆ ಅಂಕಗಳ ಬದಲು ಮನೋ ಸ್ಥೈರ್ಯ ವನ್ನು ಮಾನದಂಡವಾಗಿಸಿಕೊಳ್ಳಬೇಕು , ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಸಾರ್ಥಕವಾದ ಬದುಕು ಸಾಗಿಸಿ ಸಮಾಜದ ಆಸ್ತಿಯಾಗಿ ಮೂಡಿ ಬಂದ ಉದಾಹರಣೆ ಇದೆ , ಅಂತಹವರನ್ನು ಆದರ್ಶವಾಗಿಟ್ಟುಕೊಂಡು ಬದುಕಿನಲ್ಲಿ ಸಾಧನೆಯ ಕಡೆ ಸಾಗಬೇಕು ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ.ಸುವರ್ಣ ತಿಳಿಸಿದರು.
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಮಾನಂದ ಸಾಲ್ಯಾನ್, ಬಿರುವೆರೆ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಹಾಗೂ ಶೈಕ್ಷಣಿಕ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾದ ಜೇಸೀ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ಸ್ವಾಗತಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.