ಮಂಗಳೂರು : ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನಿಸಿ ಮಾತನಾಡಿ, ಬಿ.ತಮ್ಮಯ ಅವರು ಸಾಹಿತಿ, ಸಂಘಟಕರರಾಗಿ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಜತೆಯಲ್ಲಿ ಅವರು ಅಪ್ಪಟ ಮಾನವತಾವಾದಿಯಾಗಿ ಪ್ರೀತಿ, ಭಾಂದವ್ಯದ ಸಮಾಜ ಕಟ್ಟುವಲ್ಲಿಯೂ ಶ್ರಮಿಸಿದವರು. ಈ ಇಳಿವಯಸ್ಸಿನಲ್ಲೂ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸೇವೆ ಅನುಕರಣೀಯವಾದುದು ಎಂದರು.
ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ವತಿಯಿಂದ ತುಳು ವಿದ್ವಾಂಸರು, ಸಂಶೋಧಕರು, ಸಾಹಿತಿಗಳು, ಕಲಾವಿದರು, ಸಂಘಟಕರನ್ನು ಗುರುತಿಸಿ “ಚಾವಡಿ ತಮ್ಮನ” ಮಾಡಿ ಗೌರವಿಸುವ ಕಾರ್‍ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅರ್ಹವಾಗಿಯೇ ಬಿ.ತಮ್ಮಯ ಅವರು ಆಯ್ಕೆಯಾಗಿದ್ದು ಸಾಹಿತ್ಯ ಕ್ಷೇತ್ರದ ಸೇವೆಯ ಜತೆಗೆ ತುಳು ಲಿಪಿಯ ಶಿಕ್ಷಕರಾಗಿಯೂ ತುಳು ಭಾಷಾ ಬೆಳವಣಿಗೆಗೆ ಅವರು ನೀಡಿದ ಸೇವೆ ಮಾದರಿಯಾದುದು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ.ಹೆಬ್ಬಾರ್ ಬಿ.ತಮ್ಮಯರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ತಮ್ಮಯ ಅವರದು ಸದಾ ಕ್ರಿಯಾಶೀಲ ವ್ಯಕ್ತಿತ್ವ. ವೃತ್ತಿ ಬದುಕಿನ ನಡುವೆಯೇ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು ನಿವೃತ್ತಿಯ ನಂತರವೂ ಸೃಜನಾಶೀಲ ಚಟುವಟಿಕೆಯೊಂದಿಗೆ ಜನಮಾನಸದ ಪ್ರೀತಿ ಗೌರವಾದರಗಳಿಗೆ ಪಾತ್ರರಾದವರು ಎಂದರು.
ಕಾರ್‍ಯಕ್ರಮದ ಸದಸ್ಯ ಸಂಚಾಲಕ ಎ.ಗೋಪಾಲ ಅಂಚನ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ತಾರಾನಾಥ ಗಟ್ಟಿ ಕಾಪಿಕಾಡು ನಿರೂಪಿಸಿ ಸುಧಾ ನಾಗೇಶ್ ವಂದಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಡಾ.ವಾಸುದೇವ ಬೆಳ್ಳೆ, ಶಿವಾನಂದ ಕರ್ಕೆರಾ, ಬೆನೆಟ್ ಅಮ್ಮಣ್ಣ, ವಿಜಯಾ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಜೀವನದಲ್ಲೇ ನಾಟಕ, ಯಕ್ಷಗಾನ, ತಾಳಮದ್ದಳೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಬಿ.ತಮ್ಮಯ ಅವರು ನಾನಾ ಕಡೆಗಳಲ್ಲಿ ಸಂಘಟನೆಗಳನ್ನು ಸ್ಥಾಪಿಸಿ ತುಳು ನಾಟಕಗಳನ್ನು ಬರೆದು ನಟಿಸಿ ನಿರ್ದೇಶಿಸಿ ಪ್ರದರ್ಶಿಸಿದವರು. ಕಂದಾಯ ಇಲಾಖೆಯಲ್ಲಿ ವೃತ್ತಿ ಬದುಕಿನ ನಡುವೆಯೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡ ಇವರು ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಕಾರ್‍ಯದರ್ಶಿಯಾಗಿ- ಅಧ್ಯಕ್ಷರಾಗಿ, ಯುವವಾಹಿನಿಯ ಸಲಹೆಗಾರರಾಗಿ, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ “ತುಳುವೆ” ತುಳುಲಿಪಿ ಪತ್ರಿಕೆಯ ಸಂಪಾದಕರಾಗಿ, ಬಂಟ್ವಾಳ ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್‌ನ ಗೌರವ ಕಾರ್‍ಯದರ್ಶಿಯಾಗಿರುವ ಇವರು ಹಣತೆ, ನಾರಾಯಣ ಗುರು ಭಜನೆ, ಚಿಂತನ ಮಂಥನ, ಹಿಂದಿರುಗಿ ನೋಡಿದಾಗ, ಕರಿಕೋಟು, ಕಾಡಿನ ಹಕ್ಕಿ ಹಾಡಿತು, ತಟಪಟ ಹನಿ, ತುಳುವೆರೆ ಪರ್ಬ, ತುಳು ಲಿಪಿ ಕಲ್ಪಿ-ತುಳು ಮೊದಲಾದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಹಲವಾರು ಶಾಲಾ ಕಾಲೇಜು ಮತ್ತು ಸಂಘಟನೆಗಳಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಳು ಲಿಪಿ ಕಲಿಸುವ ಮೂಲಕ “ತುಳು ಮಾಸ್ತರ್” ಎನಿಸಿಕೊಂಡಿದ್ದಾರೆ.