ಪ್ರೀತಿಯ ಯುವವಾಹಿನಿಯ ಬಂಧುಗಳೇ,
ಪದವಾಗಿ ಬಂದಿತ್ತು ನೂರೊಂದು ಮಾತು ಎದೆಯಲ್ಲಿ ಉಳಿದಿತ್ತು ಮುನ್ನೂರ ಒಂದು ಎಂದು ಕವಿ ಹಾಡಿನಂತೆ ನನ್ನ ಭಾವನೆಯೂ ಮೂಡಿದೆ. ಆಶಯದ ಪುಟ್ಟ ಕೈ ದೀಪವನ್ನು ಹಿಡಿದು ಆಗಸ್ಟ್ನಲ್ಲಿ ಅಧ್ಯಕ್ಷಗಾದಿಯ ನಡಿಗೆಯನ್ನು ಆರಂಭಿಸಿದವ ನಾನು, ಕನಸಿನ ನಡಿಗೆಯಲ್ಲಿ ಎರಡೆಜ್ಜೆಯನ್ನಷ್ಟೇ ಇಟ್ಟಿದ್ದೆ, ಅಷ್ಟರಲ್ಲಿ ಅಷ್ಟದಿಕ್ಕುಗಳಿಂದಲೂ ಪ್ರಖರವಾದ ಬೆಳಕು ಬೀಳುತ್ತಿದ್ದವು, ತಡಕಾಡುತ್ತಿದ್ದ ಹೆಜ್ಜೆ ವೇಗ ಪಡೆದುಕೊಳ್ಳಲು ಆರಂಭಿಸಿದವು.ಈ ಪ್ರಖರ ಬೆಳಕನ್ನು ಬೀರಿದವರು ಯಾರು ಎಂದು ಚಿತ್ತ ಹರಿಸಿದರೆ ಕಂಡಿದ್ದು ನನ್ನ ಯುವವಾಹಿನಿಯ ಕುಟುಂಬ ಪ್ರತಿಯೊಂದು ಘಟಕವೂ ಅತ್ಯದ್ಬುತವಾದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕ್ರಾಂತಿಯ ಜ್ಯೋತಿ ಹಚ್ಚಿದ್ದವು ಪರಿಣಾಮ ಯುವವಾಹಿನಿ ಕಂಗೊಳಿಸತೊಡಗಿತು.ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಗಳು ನಿಮಿತ್ತ ಮಾತ್ರ. ಅದರ ಹಿಂದಿನ ನಿಜವಾದ ಕಾರಣೀಕರ್ತರು ಘಟಕಗಳು, ಈ ಘಟಕಗಳ ಸಾಧನೆ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳ ಪ್ರೇರಣೆ ನಮಗೆ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟಿತು ಎನ್ನುವುದು ಸತ್ಯ.
ನನಗೆ ನನ್ನ ವೈಯಕ್ತಿಕ ಪ್ರಪಂಚವೇ ಮರೆತು ಹೋಗಿದೆ, ಅಂದು ಭಕ್ತನೊಬ್ಬನಿಗೆ ಎಲ್ಲೆಲ್ಲೂ ದೇವರೇ ಕಂಡು ಗುರುಗಳು ನೀಡಿದ ಬಾಳೆ ಹಣ್ಣು ತಿನ್ನಲು ಸಾಧ್ಯವಾಗಿಲ್ಲವಂತೆ, ಇಂದು ನಮಗೂ ಹಾಗೇ ಆಗಿದೆ.ಎಲ್ಲೆಲ್ಲೂ ಯುವವಾಹಿನಿಯೇ ಕಂಡು ಬರುತ್ತಿದೆ ಅದರ ಹೊರತು ಮತ್ತೊಂದರ ಯೋಚನೆಯೂ ಬರುತ್ತಿಲ್ಲ. ಮೊನ್ನೆ ಡಿಸೆಂಬರ್ 17ರ ಒಂದೇ ದಿನ ಐದು ಕಡೆ ಪ್ರಮುಖ ಕಾರ್ಯಕ್ರಮಗಳು ಇದ್ದವು 15 ಮಂದಿ ಮಾಜಿ ಅಧ್ಯಕ್ಷರುಗಳು ಅದರ ನೇತೃತ್ವ ವಹಿಸಿದ್ದರು.ಇನ್ನು ಯುವವಾಹಿನಿಯ ಇತರ ಪದಾಧಿಕಾರಿಗಳು ಸಾಥ್ ನೀಡಿದ್ದರು. ಯುವವಾಹಿನಿಯ ಕಾರ್ಯವೈಖರಿ ತಿಳಿದು ನಾಸಿಕ್ ಬಿಲ್ಲವ ಸಂಘ ಯುವವಾಹಿನಿಯನ್ನು ನಾಸಿಕ್ಗೆ ಆಹ್ವಾನಿಸಿ, ಅವರ ಸಮಾರಂಭದಲ್ಲಿ ಪಾಲು ಪಡೆಯುವ ಅವಕಾಶ ನೀಡಿತ್ತು. ಅಲ್ಲದೆ ಮುಂದಿನ ದಿನದಲ್ಲಿ ಯುವವಾಹಿನಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನೂ ನೀಡಿದ್ದರು. ಇದೆಲ್ಲ ನಮ್ಮ ನಿಜವಾದ ಯಶಸ್ಸು ಎನ್ನುವುದು ಸತ್ಯ.
ನವೆಂಬರ್ 29 ಯುವವಾಹಿನಿಗೆ ಅವಿಸ್ಮರಣೀಯ ದಿನ, ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ, ಎಲ್ಲಾ ಸಮಾಜದ ಎಲ್ಲಾ ವರ್ಗದ ಅದರಲ್ಲೂ ಸರಕಾರಿ ಮಟ್ಟದ ಅಧಿಕಾರಿಗಳೂ ಯುವವಾಹಿನಿಯ ಬಗ್ಗೆ ಭೇಷ್ ಭೇಷ್ ಎಂದ ದಿನ. ಅಂದು ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಮಂಗಳೂರು ಪುರಭವನದಲ್ಲಿ ಚತುರ್ಮುಖ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಿತು. ಇದು ನ್ಯಾಯ, ಕಾನೂನು, ಮನಶಾಸ್ತ್ರ ಮತ್ತು ಲೇಖನಿ ಜೊತೆಗೆ ವಿದ್ಯಾರ್ಥಿಗಳ ಮುಖಾಮುಖಿ ಕಾರ್ಯಕ್ರಮ, ನಗರದ 14 ಕಾಲೇಜಿನ 410 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭ ಉದ್ಘಾಟಿಸಿದ ಜಿಲ್ಲಾ ಸೆಷನ್ ಮತ್ತು ಪ್ರಧಾನ ನ್ಯಾಯಾಧೀಶ ಕೆ.ಎಸ್. ಬಿಳಗಿ ಸಹಿತ ಸಂಪನ್ಮೂಲ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಇದು ನಮ್ಮ ಬಲ ಇಮ್ಮಡಿಗೊಳಿಸಿದೆ. ಅದೇ ರೀತಿ ಬಂಟ್ವಾಳ ಘಟಕದ ಅನ್ವೇಷಣಾ ಮತ್ತೊಂದು ಇತಿಹಾಸ ನಿರ್ಮಿಸಿದ್ದರೆ, ಪುತ್ತೂರು ಘಟಕದ ಕೆಸರುಗದ್ದೆ ಕ್ರೀಡಾಕೂಟ ಯುವವಾಹಿನಿಯ ಸಾಮಥ್ರ್ಯವನ್ನು ಸಾರಿ ಹೇಳಿದೆ. ಬಂಟ್ವಾಳ ಮತ್ತು ಪುತ್ತೂರು ಘಟಕಕ್ಕೆ ಅಭಿನಂದನೆಗಳು.
ಜನರ ನೊವಿಗೆ ಸ್ಪಂದಿಸುವ ಕೆಲಸವನ್ನು ಯುವವಾಹಿನಿಯು ಕಳೆದ ಮೂವತ್ತು ವರುಷದಿಂದಲೂ ನಡೆಸುತ್ತಾ ಬಂದಿದೆ. ಈ ಸಾಲಿನಲ್ಲಿ ಯುವವಾಹಿನಿಯ ಅತ್ಯಂತ ಅಭಿನಂದನಾರ್ಹ ಕೆಲಸವೆಂದರೆ ಯುವವಾಹಿನಿ ಮಂಗಳೂರು ಮಹಿಳಾ ಘಟಕ ನಡೆಸಿದ ವಧುವರರ ಅನ್ವೇಷಣಾ ಕಾರ್ಯಕ್ರಮ. ನಮ್ಮ ಸಮಾಜದ ಹೆಣ್ಣು ಮಕ್ಕಳು ವಿವಾಹ ಆಗದೇ ಉಳಿಯಬಾರದು ಎನ್ನುವ ಕಾರಣದಿಂದ ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಮಹಿಳಾ ಘಟಕ ನಡೆಸಿದೆ. ಕಳೆದ ವರುಷ ಆರಂಭಿಸಿದ್ದ ವಧುವರರ ಅನ್ವೇಷಣಾ ಕಾರ್ಯಕ್ರಮವನ್ನು ಈ ಬಾರಿಯು ಮುಂದುವರಿಸಿದೆ. ಕಳೆದ ಬಾರಿ 152 ಜೋಡಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಇದರ ಪ್ರೇರಣೆಯಿಂದ ಈ ಬಾರಿ ಇದೇ ಕಾರ್ಯಕ್ರಮ ಹಮ್ಮಿಕೊಂಡಿದ್ದು ಐನೂರು ಮಂದಿ ಹೆಸರು ನೋಂದಾಯಿಸಿದ್ದು ಈಗಾಗಲೇ 15ಕ್ಕೂ ಅಧಿಕ ಜೋಡಿಗೆ ವಿವಾಹ ಭಾಗ್ಯ ಒದಗಿದೆ ಎನ್ನುವುದು ಹರ್ಷದ ವಿಚಾರ. ಈ ನೆಲೆಯಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕವನ್ನು ಅಭಿನಂದಿಸುತ್ತೇನೆ. ಯುವವಾಹಿನಿಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದ ಅದ್ಭುತ ಕಾರ್ಯಕ್ರಮ ಎಂದರೆ ಯುವವಾಹಿನಿಯ ವರ್ಷದ ಪ್ರತಿಷ್ಠಿತ ಕಾರ್ಯಕ್ರಮ ಸಾಂಸ್ಕøತಿಕ ಕಾರ್ಯಕ್ರಮ. ಇದನ್ನು ನಾ ಭೂತೋ ನಾ ಭವಿಷ್ಯತ್ ಎನ್ನುವಂತೆ ಸಂಘಟಿಸಿದವರು ಯುವವಾಹಿನಿ ಬಂಟ್ವಾಳ ಘಟಕದವರು. ಅಚ್ಚುಕಟ್ಟಾದ ವ್ಯವಸ್ಥೆ, ಅಪೂರ್ವ ಜನ ಸಂಗಮದೊಂದಿಗೆ ‘ಡೆನ್ನಾನ-ಡೆನ್ನನ 2018’ ಸಂಪನ್ನ ಗೊಂಡಿದೆ. ಯುವವಾಹಿನಿಯ 20 ಎಗ್ಗೆಗಳು ಸ್ಪರ್ಧೆಯಲ್ಲಿದ್ದು ಸಾಂಸ್ಕøತಿಕ ಲೋಕವನ್ನೇ ಅನಾವರಣಗೊಳಿಸಿತು. ಶಿಸ್ತುಬದ್ಧ ಸಮಯ ಪಾಲನೆ ಹಾಗೂ ಅದ್ಭುತ ಸಂಘಟನೆಯ ಮೂಲಕ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ನೆಲೆಯಲ್ಲಿ ಬಂಟ್ವಾಳ ಘಟಕವನ್ನು ಅಭಿನಂದಿಸುತ್ತೇನೆ.
ಅದೇ ರೀತಿ ಈ ಸಾಲಿನಲ್ಲಿ ಈಗಾಗಲೇ ಆರು ಘಟಕಗಳು ಉದ್ಘಾಟನೆಗೊಂಡಿದೆ, ಕೆಲ ಘಟಕದ ಪದಗ್ರಹಣ ನಡೆದಿದೆ, ಎಲ್ಲಾ ಘಟಕದ ನೂತನ ತಂಡಕ್ಕೆ ಅಭಿನಂದನೆಗಳು. ಬಂಧುಗಳೇ ಯುವವಾಹಿನಿ ನಮ್ಮ ಸಮಾಜದ ಅಭಿವೃದ್ಧಿಗೆ ನಾವೇ ರೂಪಿಸಿದ ಸಂಸ್ಥೆ ಇದನ್ನು ನಾವೆಲ್ಲ ಜೊತೆಯಾಗಿ ಮುನ್ನಡೆಸೋಣ ಎಂದು ಆಶಿಸುತ್ತೇನೆ.