ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು
ವರುಣನ ಅವಕೃಪೆಯಿಂದ ತತ್ತರಿಸಿದ ಕೊಡಗಿನಲ್ಲಿ, ಬಡವ, ಶ್ರೀಮಂತ, ಕೆಳಜಾತಿ ಮೇಲ್ಜಾತಿ ಎಂಬ ಯಾವುದೇ ಭೇದವನ್ನೂ ತೋರದೆ ನೆರೆ ಎಲ್ಲರನ್ನೂ, ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ತಣ್ಣನೇ ಹರಿದುಹೋಗಿದೆ. ಬಡವನ ಸೈಕಲ್‍ನಿಂದ ಹಿಡಿದು ಶ್ರೀಮಂತನ ಬೆಂಝ್ , ಆಡಿ ಕಾರುಗಳು ಕೂಡಾ ಮಣ್ಣೋಳಗೆ ಹೂತುಹೋಗಿ ಈಜಿಪ್ತಿನ ಪಿರಮಿಡ್ಡ್ ಒಳಗೆ ಹುದುಗಿರುವ ಅಸ್ಥಿಯಂತೆ ಕಂಡು ಬರುತ್ತಿದೆ. ಮನುಷ್ಯನ ಸ್ವಾರ್ಥದ ರುದ್ರನರ್ತನಕ್ಕೆ ಮುನಿದ ಪ್ರಕೃತಿ ದಯೆ ದಾಕ್ಷಿಣ್ಯವನ್ನೇ ಮರೆತು ಪಾಠ ಕಲಿಸಿದೆ. ಇಲ್ಲಿ ಎಲ್ಲರೂ ಮತ್ತೆ ಹೊಸ ಬದುಕನ್ನು ಆರಂಭದಿಂದಲೇ ಕಟ್ಟಬೇಕಿದೆ. ಏಕೆಂದರೆ ಅಲ್ಲಿ ಉಳಿದಿರುವುದು ಬಟಾಬಯಲು ಮಾತ್ರ.
ಹೌದು ಸ್ನೇಹಿತರೇ, ಶಿಕ್ಷಕರು ಮೊದಲು ಪಾಠಮಾಡಿ ಮತ್ತೆ ಪರೀಕ್ಷೆ ಮಾಡುತ್ತಾರೆ ಆದರೆ, ಪ್ರಕೃತಿ ಮೊದಲು ಪರೀಕ್ಷೆ ಮಾಡಿ ಮತ್ತೆ ಪಾಠ ಕಲಿಸುತ್ತದೆ. ನಾವು ಪ್ರಕೃತಿಯಿಂದ ಬದುಕಿನ ಪಾಠವನ್ನು ಕಲಿಯಬೇಕಿದೆ, ಹೂ, ಹಣ್ಣು, ನದಿ , ತೊರೆ ನಮಗೆ ಎಲ್ಲವನ್ನೂ ನೀಡುತ್ತದೆ ಅದು ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸುವುದಿಲ್ಲ. ನಮ್ಮ ಜೀವನವೂ ಇದೇ ಆಗಿರಲಿ, ನಮ್ಮ ಯುವವಾಹಿನಿ ಕನಸು ಇದೇ ಆಗಿರಲಿ ಎಂದು ಆಶಿಸುತ್ತೇನೆ ನಾವು ಮಾಡುವ ಕೆಲಸ ಮತ್ತೊಬ್ಬರಿಗೆ ಸಂತೃಪ್ತಿಯನ್ನು ಸಹಾಯವನ್ನು ಉಂಟು ಮಾಡುತ್ತಿರಲಿ, ಅದರ ಪ್ರತಿಫಲವನ್ನು ನೀಡುವವನು ಮತ್ತೊಬ್ಬ ಇದ್ದಾನೆ. ಆತ ಮೇಲಿನಿಂದ ಎಲ್ಲವನ್ನೂ ಅವಲೋಕಿಸುತ್ತಿದ್ದಾನೆ.
365 ದಿನಗಳ ಯಶಪರ್ವ ಮುಕ್ತಾಯಗೊಂಡಿದೆ, ಈ ಅವಧಿಯಲ್ಲಿ ಯುವವಾಹಿನಿಯ ಇತಿಹಾಸದಲ್ಲಿ ನಡೆದಿರುವ ಅವಿಸ್ಮರಣೀಯ ಸಾಧನೆಗಳ ಯಶೋಗಾಥೆ ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಇನ್ನೂ ಸ್ಥಿರಸ್ಥಾಯಿಯಾಗಿ ಉಳಿದಿದೆ. ಒಗ್ಗಟ್ಟಿನ ಮಹಿಮೆ ಏನು ಎನ್ನುವುದನ್ನು ನಾನು ಯುವವಾಹಿನಿಯಿಂದ ಕಲಿತೆ. ಕಳೆದ ಅವಧಿಯಲ್ಲಿ ಯುವವಾಹಿನಿಯ 31 ಘಟಕಗಳೂ ಒಂದೇ ಮನಸ್ಸಿನಿಂದ ದುಡಿದ ಫಲ ಇಂದು ಎಲ್ಲಾ ಜಾತಿ, ಧರ್ಮ, ಮತ ಪಂಥ ಪಂಗಡಗಳ ಜನರೂ ನಮ್ಮತ್ತ ಬೆರಗುಗಣ್ಣಿನಿಂದ ನೋಡುವಂತಾಗಿದೆ.
ನಾನೆಂದೂ ಬರವಣಿಗೆಯ ಕೆಲಸವನ್ನು ಮಾಡಿದವನಲ್ಲ, ದುಡಿಯುವ ನನಗೆ ಬರೆಯುವುದು ಒಗ್ಗುವಂತಹುದಲ್ಲ, ಆದರೆ ನನ್ನ ಯುವವಾಹಿನಿ ಕುಟುಂಬವನ್ನು ನೋಡಿದಾಗ ನನಗಾಗುವ ಸಂತೋಷವನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ಅನಿಸುತ್ತಿದೆ ಅದಕ್ಕೆ ಯುವ ಸಿಂಚನಕ್ಕಿಂತ ಉತ್ತಮವಾದ ಮತ್ತೊಂದು ಮಾಧ್ಯಮವಿಲ್ಲ. ಹೀಗಾಗಿ ಗೌರವ ಸಂಪಾದಕರ ಮಾತಿನ ಮೂಲಕ ನನ್ನ ಮನದ ಭಾವನೆಯನ್ನು ಹಂಚಿಕೊಳ್ಳುತ್ತಿದ್ದೇನೆ.
ಆಗಸ್ಟ್ 5, ಯುವವಾಹಿನಿಯ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಅಷ್ಟ ದಿಕ್ಕುಗಳಿಂದ ಹರಿದು ಬಂದ ಜನಸಾಗರ, ಸಾಸಿವೆ ಬಿದ್ದರೂ ಕೇಳುವಷ್ಟು ನಿಶಬ್ದತೆಯ ಶಿಸ್ತು, ಅಚ್ಚಕಟ್ಟಾದ ಸಭಾ ವ್ಯವಸ್ಥೆ, ಕರಾರುವಕ್ಕಾದ ಸಮಯ ಪಾಲನೆ, ಸಂತೃಪ್ತಿಯ ಭೋಜನ, ನಿರಾಳತೆ ನೀಡಿದ ಸಂಗೀತ, ಮೈ ನೆವರೇಳಿಸಿದ ನಿರೂಪಣೆ ಇವೆಲ್ಲ ಕಾರಣದಿಂದ ಯುವವಾಹಿನಿಯ 31 ನೇ ಸಮಾವೇಶ ಸಾರ್ಥಕ್ಯ ಕಂಡಿದೆ. ಪ್ರತಿಯೊಂದು ಘಟಕದ ಬದ್ಧತೆಯ ದುಡಿಮೆ ಇಂದಿನ ಯಶಸ್ಸಿನ ಪಾತ್ರ. ಇಂದು ಯುವವಾಹಿನಿಗೆ ಮತ್ತೊಂದು ಹೊಸ ಆರಂಭ ನೀಡಿದೆ. ಮತ್ತೆ ನಮ್ಮ ನಡಿಗೆ ನಿಲ್ಲದಿರಲಿ ಮುಂದಿನ ಜಯದತ್ತ ನಾವು ಸಾಗೋಣ, ಜೊತೆಯಾಗಿ ದುಡಿಯೋಣ, ಜೊತೆಯಾಗಿ ಸಾಗೋಣ, ಜೊತೆಜೊತೆಗೆ ಇರೋಣ ಎಂದು ಆಶಿಸುತ್ತಾ, ಕಳೆದೊಂದು ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದ ಎಲ್ಲಾ ಘಟಕಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ಯುವವಾಹಿನಿ ಘಟಕವನ್ನು ಅಸ್ತಿತ್ವಕ್ಕೆ ತರವ ಕನಸು ಈ ಸಾಲಿನಲ್ಲಿ ನನಸಾಗಿದೆ.
ಯುವವಾಹಿನಿಯ ಹೆಚ್ಚಿನ ಘಟಕಗಳ ಸದಸ್ಯರು ಬೆಂಗಳೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನೂತನ ತಂಡಕ್ಕೆ ನೈತಿಕ ಬಲ ನೀಡಿದ್ದಾರೆ, ಸಮಾಜಮುಖಿ ಚಿಂತನೆಯ ತುಡಿತದಲ್ಲಿ 70 ಕ್ಕೂ ಹೆಚ್ಚಿನ ವಿದ್ಯಾವಂತ ಯುವಕರ ಬಲಿಷ್ಠ ತಂಡವು ಯುವವಾಹಿನಿ ಬೆಂಗಳೂರು ಘಟಕವನ್ನು ಸಮರ್ಥವಾಗಿ ಮುನ್ನಸಲಿದೆ ಎನ್ನುವುದು ಇತ್ತೀಚೆಗೆ ನಡೆದ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭದಲ್ಲಿ ಸಾಬೀತಾಗಿದೆ.
ಯುವವಾಹಿನಿಯಲ್ಲಿ ನಿಮ್ಮವ
ಜಯಂತ ನಡುಬೈಲ್