ಕಂಕನಾಡಿ :- ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ದಿನಾಂಕ 11 ಸೆಪ್ಟೆಂಬರ್ 22ನೇ ರವಿವಾರದಂದು ಗುರುಸ್ಮರಣೆ, ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಉಜ್ಜೋಡಿ ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಆವರಣದಲ್ಲಿ ಜರುಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ ಸರ್ ಹಾಗೂ ಗಣ್ಯರು ಸೇರಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ದಯಾನಂದ ಜಿ ಕತ್ತಲ್ ಸರ್ ಮಾತನಾಡಿ ಅಂದಿನ ಕಾಲದಲ್ಲಿದ್ದ ಅಸ್ಪ್ರಶ್ಯತೆ, ಜಾತಿ ಪದ್ಧತಿಯಂತಹ ಸಮಸ್ಯೆಗಳು, ದೀನ ದಲಿತರ ಮೇಲಾಗುವ ಅನ್ಯಾಯಗಳನ್ನು ವಿವರಿಸಿ ಅವುಗಳನ್ನು ಹೋಗಲಾಡಿಸಲು ಜನಿಸಿದ ಗುರುಗಳು ಹಾಗೂ ಅವರ ತತ್ವಗಳು ಇಂದಿನ ಸಮಾಜದಲ್ಲಿ ಹೇಗೆ ಪ್ರಾಮುಖ್ಯತೆ ಪಡೆದಿದೆ, ಅವುಗಳನ್ನು ಯುವ ಜನತೆ ಯಾವ ರೀತಿ ಬದುಕಿನಲ್ಲಿ ರೂಢಿಗೊಳಿಸಬೇಕು ಎನ್ನುವುದನ್ನು ಎಲ್ಲರ ಮನ ಮುಟ್ಟುವಂತೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪ್ರಥ್ವಿರಾಜ್ ರವರು ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ ತುಳು ಚಿತ್ರರಂಗದ ಯುವ ನಟ, ನಿರ್ದೇಶಕ ರಾಹುಲ್ ಅಮೀನ್ ಮಾತನಾಡಿ ಗುರುಗಳ ಸಂದೇಶದಂತೆ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವ ಯುವವಾಹಿನಿ ಮುಂದಕ್ಕೂ ಒಳ್ಳೆಯ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಗುರುಗಳು ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.
ಯುವ ಉದ್ಯಮಿ ಲೋಹಿತ್ ಆಕಾಶಭವನ ಮಾತನಾಡಿ “ಇಂದಿನ ಯುವಕರು ಗುರು ತತ್ವಗಳನ್ನು ಅನುಸರಿಸಿ ಶಿಕ್ಷಿತರಾಗಿ , ಸಂಘಟಿತರಾಗಿ ಉತ್ತಮ ಸಮಾಜ ನಿರ್ಮಾಣದತ್ತ ಕೈ ಜೋಡಿಸಬೇಕು ಎಂದರು. ಉಜ್ಜೋಡಿ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಶ್ರೀ ಉಮಾನಾಥ ಕೋಟ್ಯಾನ್ ಘಟಕದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಮ್ಮ ಸಮಾಜದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದಿಂದ ಗೌರವಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಪ್ರಯುಕ್ತ ಜಪ್ಪಿನಮೊಗರು ಮತ್ತು ಅತ್ತಾವರ ಸರಕಾರಿ ಶಾಲೆಗಳಲ್ಲಿ ಸಂಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿಜೇತರಿಗೆ ಬಹುಮಾನ, ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ, ನೀಡಿ ಅಭಿನಂದಿಸಲಾಯಿತು. ನಂತರ ಘಟಕದ ನಿಕಟಪೂರ್ವ ಅಧ್ಯಕ್ಷೆ ನಯನ ಸುರೇಶ್ ದಂಪತಿಗಳನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಘಟಕದ ಸದಸ್ಯರ ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಘಟಕದ ಸದಸ್ಯೆ ಪ್ರೇಮಾರವರು ಪ್ರಾರ್ಥಿಸಿ, ಅಧ್ಯಕ್ಷರಾದ ಪ್ರಥ್ವಿರಾಜ್ ಸ್ವಾಗತಿಸಿದರು, ಘಟಕದ ಕಾರ್ಯದರ್ಶಿ ಸುರೇಖಾ ಮೋಹನ್ ಧನ್ಯವಾದ ಅರ್ಪಿಸಿದರು. ಘಟಕದ ಸದಸ್ಯರಾದ ಮೇಘ ಹಾಗೂ ಹಿತೇಶ್ ಕಾರ್ಯಕ್ರಮ ನಿರೂಪಿಸಿದರು.