ಮಂಗಳೂರು: ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ದೈಹಿಕ ಸದೃಢತೆ ಸಾಧಿಸಿಲಾಗುವುದು ಹಾಗೂ ಮಾನಸಿಕ, ದೈಹಿಕ, ಆರೋಗ್ಯವು ಸುಧಾರಿಸುತ್ತದೆ ಎಂದು ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷರಾದ ಲ| ಶೀನಾ ಪೂಜಾರಿ ಇವರು ತಿಳಿಸಿದರು.
ಅವರು ಯುವವಾಹಿನಿ ಮಂಗಳೂರು ಘಟಕದ ಆಶ್ರಯದಲ್ಲಿ 2024 ನೇ ಜನವರಿ 7 ರಂದು ಮಂಗಳೂರಿನ ನಂತೂರಿನ ಪಾದುವ ಕ್ರೀಡಾಂಗಣದಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ
ಮಾತನಾಡಿದರು.
ಯುವವಾಹಿನಿ(ರಿ.) ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ಸುವರ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ ಬಿ ಅತಿಥಿಯಾಗಿ ಭಾಗವಹಿಸಿದ್ದರು.
ದೀಪ ಬೆಳಗಿಸಿ, ಬಲೂನು ಹಾರಿಸಿ ಕ್ರಿಕೆಟ್ ಮತ್ತು ವಾಲಿಬಾಲ್ ಆಟ ಆಡುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕ್ರೀಡಾಕೂಟದಲ್ಲಿ ಕ್ರಮವಾಗಿ ನಾಲ್ಕು ತಂಡಗಳಾದ ನೇತ್ರಾವತಿ, ಶಾಂಭವಿ, ಪಲ್ಗುಣಿ, ನಂದಿನಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, ತ್ರೋಬಾಲ್ ಆಟಗಳಲ್ಲಿ ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದರು.
ಹಿರಿಯ ಸದಸ್ಯರಿಗೆ, ಮಹಿಳಾ ಸದಸ್ಯರಿಗೆ ವೇಗದ ನಡಿಗೆ, ಸಂಗೀತ ಕುರ್ಚಿ, ಗುಂಡು ಎಸೆತ ಆಟಗಳನ್ನು ಆಡಿಸಲಾಯಿತು.
ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಪ್ರೆಸಿಡೆಂಟ್ ರಿಯಲ್ ಎಸ್ಟೇಟ್ ಗ್ರೂಪ್ ಬಿಜೈ ಇದರ ಉಪಾಧ್ಯಕ್ಷ ಕೆ.ಎಸ್ ಚೈತನ್ಯ ಭಟ್ ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಫಲಕ ನೀಡಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಅಂಕಗಳ ಅಧಾರದ ಮೇಲೆ ನೇತ್ರಾವತಿ ಮತ್ತು ಪಲ್ಗುಣಿ ತಂಡಗಳು ಚಾಂಪಿಯನ್ ಷಿಪ್ ಟ್ರೋಫಿ ಮತ್ತು ಪದಕವನ್ನು ಹಂಚಿಕೊಂಡರು.
ಕಾರ್ಯದರ್ಶಿ ಭವಿಷ್ ಧನ್ಯವಾದ ನೀಡಿದರು, ನಾಗೇಶ್ ಅಮೀನ್, ಅಮಿತ್ ತೀರ್ಪುಗಾರರಾಗಿ ಸಹಕರಿಸಿದ್ದರು. ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.