ವಿಶುಕುಮಾರ ಎಂಬ ಬರಹಗಾರನ ಕಥೆ-12 : -ರವಿರಾಜ ಅಜ್ರಿ

ಕರಾವಳಿ : ಸತ್ಯ ಘಟನೆಗಳ ಚಿತ್ರಣ

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಶುಕುಮಾರ ಅವರ ಹೆಸರನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಿದ ಕಾದಂಬರಿ ‘ ಕರಾವಳಿ’. ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸಂಚಲನೆ ಮೂಡಿಸಿದ ಕಾದಂಬರಿ. ಕರಾವಳಿ ಬೆಸ್ತರ( ಮೊಗವೀರರ) ಜನಜೀವನವನ್ನು ಅನಾವರಣಗೊಳಿಸಿದ ಕಾದಂಬರಿಯದು. 1966 ರಲ್ಲಿ ವಿಶುಕುಮಾರ ಅವರು ಕಾದಂಬರಿಯನ್ನು ಬರೆದಿದ್ದಾರೆ. ಮೊಗವೀರ ಹೆಣ್ಣು ಮಗಳೊಬ್ಬಳು ಅನ್ಯಕೋಮಿನ ( ಮುಸ್ಲಿಂ) ಯುವಕನನ್ನು ಪ್ರೇಮಿಸಿ, ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವ ಕತಾಹಂದರ. ಈ ಘಟನೆಯನ್ನು ಆಧರಿಸಿ ವಿಶುಕುಮಾರ ಕಾದಂಬರಿ ಹೆಣೆದಿದ್ದಾರೆ.

ವಿಶುಕುಮಾರ ಅವರು ಕಾದಂಬರಿ ಬರೆದ ಹಿನ್ನಲೆ ಬಗ್ಗೆ ಹೇಳುತ್ತಾರೆ: ” ‘ ಸುಧಾ‘ ಕನ್ನಡ ವಾರ ಪತ್ರಿಕೆಯು ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಗೆ ಬರೆಯಲಾಗಿದೆ. ಸ್ಪರ್ಧೆಗೆ ಬಂದ ೧೪೭ ಕಾದಂಬರಿಗಳಲ್ಲಿ ತೀರ್ಪುಗಾರರು ಆರು ಕಾದಂಬರಿಗಳನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ‘ ಕರಾವಳಿ’ ಯೂ ಒಂದು. ಈ ಕಾದಂಬರಿ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಯಿತು. ಮೆಚ್ಚುಗೆ ಬಹುಮಾನ ಕೂಡ ಪಡೆಯಿತು ” ಎನ್ನುತ್ತಾರೆ. ಆ ನಂತರ ಕಾದಂಬರಿ 1969 ರ ಆಗಸ್ಟ್ ನಲ್ಲಿ ‘ ಕನ್ನಡ ಪ್ರಭ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಆಗ ಕರಾವಳಿಯ ಉದ್ದಕ್ಕೂ ‘ ಕರಾವಳಿ’ ಯ ಬಗ್ಗೆ ಕುತೂಹಲ, ಕಾತರ, ಉತ್ಸುಕತೆ ಪ್ರಾರಂಭವಾಯಿತು. ಮೊಗವೀರ ಸಮಾಜದಿಂದ ಪ್ರಮುಖರಿಂದ ಮಂಗಳೂರಿನಲ್ಲಿ ಪ್ರತಿಭಟನೆ ಪ್ರಾರಂಭವಾಯಿತು ” ಎಂದು ಘಟನೆ ಬಗ್ಗೆ ನೆನಪಿಸುತ್ತಾರೆ. ಅದು ಮೊಗವೀರ-ಮುಸ್ಲಿಂ ಗಲಾಟೆಗೆ ಕಾದಂಬರಿ ಕಾರಣವಾಯಿತು. ಆಗ ನಾನು( ಈ ಬರಹಗಾರ) ಹೈಸ್ಕೂಲಿನಲ್ಲಿ ಓದುತ್ತಿದ್ದೆ. ‘ ನವಭಾರತ’ ಪತ್ರಿಕೆಯಲ್ಲಿ ಗಲಾಟೆಯ ವರದಿಗಳು ಧಾರಾವಾಹಿಯಂತೆ, ದಿನಕೊಂದರಂತೆ ಘಟನೆಯ ಸುದ್ದಿ ಸವಿವರವಾಗಿ ಪ್ರಕಟವಾಗುತ್ತಿತ್ತು. ಅಟ್ಟಾಡಿಸಿ ಹೊಡೆದಿರುವ ರಸವತ್ತಾದ ಸುದ್ದಿಗಳು ನಮ್ಮ ಕಿವಿಗಳಿಗೆ ಬಂದು ಅಪ್ಪಳಿಸುತ್ತಿದ್ದವು. ಈ ಘಟನೆ ಕುರಿತು ವಿಶುಕುಮಾರ ಅವರು ಮುಂದುವರಿಸಿ ಹೇಳಿದರು: ” ‘ ಕನ್ನಡ ಪ್ರಭ ‘ ಪತ್ರಿಕೆಯ ಕಚೇರಿಗೆ ಟೆಲಿಗ್ರಾಂಗಳು, ಕಾಗದಗಳು ಅವ್ಯಾಹತವಾಗಿ ಹೋದವು. ಸಮುದ್ರತೀರದ ಜನಜೀವನ ಪ್ರತಿಬಿಂಬಿಸಿದರೆ ಮೊಗವೀರರು ಹಾರ ಹಾಕಿ ಮೆರವಣಿಗೆ ಮಾಡುತ್ತಾರೆಂದು ಕನಸುಕಾಣುತ್ತಿದ್ದರೆ, ಅತ್ಯಂತ ನಿಕಟವರ್ತಿಗಳೂ, ಸ್ನೇಹಿತರೂ ಆದವರೇ ಹಾರದಿಂದ ಉರುಳು ಹಾಕಲು ಪ್ರಯತ್ನಿಸುತ್ತಿದ್ದರು. ಮೊಗವೀರ ಸಮಾಜದ ಪ್ರಮುಖರು ಹದಿನಾಲ್ಕು ಪಟ್ಟಣಗಳ ಪ್ರತಿನಿಧಿ ಸಭೆ ಸೇರಿಸಿ, ಅವಿದ್ಯಾವಂತ ಜನರಲ್ಲಿ ‘ ಕರಾವಳಿ ‘ ಬಗ್ಗೆ ಕೆಟ್ಟ ಕಲ್ಪನೆ ಕೊಟ್ಟಿರುವುದರಿಂದ ಉದ್ರಿಕ್ತ ವಾತಾವರಣ ಉಂಟಾಯಿತು. ಒಬ್ಬ ಲೇಖಕನ ಸ್ವಾತಂತ್ರ್ಯ ಪ್ರಶ್ನೆ ಅಲ್ಲ- ನನ್ನಿಂದಾಗಿ ಮತೀಯ ಗಲಭೆ ಉಂಟಾಗಬಾರದೆಂಬ ಉದ್ದೇಶದಿಂದ ಮತ್ತು ಮೊಗವೀರರು ನಮ್ಮ ಮನೆಗೆ ಬೆಂಕಿ ಹಚ್ಚುವುದಾಗಿ ಹಾರಾಡಿದ್ದರಿಂದ ಬೆಂಗಳೂರಿಗೆ ಹೊರಟೆ- ಸಂಪಾದಕರೊಡನೆ ಸಮಾಲೋಚನೆ ಮಾಡಿ, ಧಾರಾವಾಹಿ ಪ್ರಕಟನೆಯನ್ನು ನಿಲ್ಲಿಸಿದ್ದೇವು. ಧಾರಾವಾಹಿಯನ್ನು ಮರುಪ್ರಕಟಿಸಲು ಕರ್ನಾಟಕದ ಮೂಲೆ ಮೂಲೆಗಳಿಂದ ಪತ್ರಗಳು ಬಂದವು. ‘ ಕರಾವಳಿ ‘ ನಿಲುಗಡೆ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆಯಾಯಿತು ” ಎಂದು ಕಾದಂಬರಿಯ ಅಂತರಂಗ (ಮುನ್ನುಡಿ)ದಲ್ಲಿ ವಿಶುಕುಮಾರ ಬರೆದುಕೊಂಡಿದ್ದಾರೆ.

ವಿಶುಕುಮಾರ ಅವರು ‘ ಕರಾವಳಿ ‘ ಕಾದಂಬರಿ ಮುನ್ನುಡಿಯಲ್ಲಿ ” ಅತ್ಯಂತ ನಿಕಟವರ್ತಿಗಳೂ, ಸ್ನೇಹಿತರೂ ಆದವರೇ ಹಾರದಿಂದ ಉರುಳು ಹಾಕಲು ಪ್ರಯತ್ನಿಸುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ. ಈ ಬರಹ ನಮ್ಮನ್ನು ಯೋಚನೆ ಮಾಡುವಂತೆ ಮಾಡಿದೆ ಹಾಗಿದ್ದರೇ, ಆ ನಿಕಟವರ್ತಿ ಯಾರು? ಸ್ನೇಹಿತ ಯಾರಿರಬಹುದು? ‘ ಕರಾವಳಿ ‘ ಕಾದಂಬರಿ ಬರೆಯಲು ವಿಶುಕುಮಾರ ಅವರಿಗೆ ಪ್ರೇರಣೆ ಏನು? – ಇದನ್ನು ತಿಳಿಯಲು ನಮಗೆ ಕುತೂಹಲ ಮೂಡಿತು. ಈ ಬರಹಗಾರ ವಿಶುಕುಮಾರ ಅವರ ಕುಟುಂಬವರ್ಗ, ನಿಕಟವರ್ತಿಗಳನ್ನು ಹಾಗೂ ಅವರ ಬಾಲ್ಯ, ಬೆಳೆದ ವಾತಾವರಣವನ್ನು ತಿಳಿಯಲು ಪ್ರಯತ್ನಿಸಿತು.

ಬಾಲ್ಯ ಗೆಳೆತನದ ಗೆಳೆಯ ವಿರೋಧಿ!

ಇಲ್ಲಿ ಓದುಗರು ಮುಖ್ಯವಾಗಿ ಒಂದು ವಿಷಯವನ್ನು ಗಮನಿಸಬೇಕಾಗಿದೆ. ಉಳ್ಳಾಲ, ಸುಲ್ತಾನ್ ಬತ್ತೇರಿ, ಮಂಗಳೂರು ಬಂದರು, ಕುದ್ರೋಳಿ, ಬೋಳೂರು, ಮಂಜೇಶ್ವರ – ಈ ಕಡೆಗಳಲ್ಲಿ ಮುಸ್ಲಿಂರು ಮತ್ತು ಮೊಗವೀರರು ಅನಾದಿಕಾಲದಿಂದಲೂ ಅನೋನ್ಯವಾಗಿ ಬಾಳಿ ಬದುಕಿದವರು. ರಾಣಿ ಅಬ್ಬಕ್ಕದೇವಿ ಕಾಲದಿಂದಲೂ, ಆಕೆಯ ಸೈನ್ಯದಲ್ಲಿ ಈ ಇಬ್ಬರು ಜನಾಂಗದವರೂ ಆತ್ಮೀಯ ದಂಡಾಳು ಆಗಿದ್ದರು. ಪ್ರೇಮ ಪ್ರಕರಣದಲ್ಲಿ ಮಾತ್ರ ಈ ಜನಾಂಗದವರ ನಡುವೆ ಆಗಾಗ ಘರ್ಷಣೆಗಳುಂಟಾಗುತ್ತವೆ. ನಮ್ಮ ಲೇಖಕ ವಿಶುಕುಮಾರ ಅವರು ಹುಟ್ಟಿ ಬೆಳೆದದ್ದೇ ಬೋಳೂರಿನಲ್ಲಿ! ಈ ಇಬ್ಬರು ಜನಾಂಗದವರ ಒಡನಾಟ ಹೆಚ್ಚು. ಅವರಿಗೆ ಎರಡೂ ಜನಾಂಗದವರಲ್ಲಿ ಗೆಳೆಯರೂ ಇದ್ದಾರೆ. ಆ ಎರಡೂ ಜನಾಂಗದ ಆಚಾರ-ವಿಚಾರ, ಸಂಪ್ರದಾಯ, ನಡವಳಿಕೆ – ವಿಶುಕುಮಾರ ಅವರಿಗೆ ಗೊತ್ತು.

ಮೊಗವೀರರು ಮೀನು ಹಿಡಿಯುವುದು ಅವರ ಕುಲ ಕಸಬು. ಆ ಮೀನನ್ನು ಏಲಂ ನಲ್ಲಿ ನಿಂತು ವ್ಯಾಪಾರಕ್ಕೆ ಉಪಯೋಗಿಸುವುದು ಮುಸ್ಲಿಂ( ಮಾಪ್ಳೆ) ನವರು . ಆ ಮಾಪ್ಳೆಯವರ ಕೈಯಿಂದ ಬೆಸ್ತರ ಹೆಣ್ಣು ಮಕ್ಕಳು ಕ್ರಯಕ್ಕೆ ಮೀನನ್ನು ಪಡೆದುಕೊಂಡು ವ್ಯಾಪಾರ ಮಾಡುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಬದುಕು, ಬಡತನ- ಈ ಎರಡೂ ಜನಾಂಗದಲ್ಲೂ ಸಮ್ಮೀಳಿತಗೊಂಡಿವೆ. ವಿಶುಕುಮಾರ ಅವರ ಬಾಲ್ಯಗೆಳೆಯ – ಒಟ್ಟಿಗೆ ಆಟ ಆಡಿದವರು. ಈತ ವಿಶುಕುಮಾರ ಬರೆದ ನಾಟಕವನ್ನು ನಿರ್ದೇಶಿಸಿ, ಅಭಿನಯಿಸಿದ್ದರೂ ಕೂಡಾ. ಆ ವ್ಯಕ್ತಿ ಕೆಲವು ಸಿನಿಮಾಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಆತನ ಸಹೋದರಿ ಮುಸ್ಲಿಂ ಹುಡುಗನನ್ನು ಪ್ರೇಮಿಸಿ, ಮತಾಂತರ ಗೊಂಡಳು. ಆಗ ಎರಡೂ ಜನಾಂಗದವರ ನಡುವೆ ಗಲಾಟೆ, ದೊಂಬಿಗಳು ಮಂಗಳೂರಿನಲ್ಲಿ ನಡೆದಿತ್ತು. ಈ ಘಟನೆಯೇ ವಿಶುಕುಮಾರ ಅವರು ‘ ಕರಾವಳಿ ‘ ಕಾದಂಬರಿ ಬರೆಯಲು ಪ್ರೇರಣೆ ನೀಡಿತು. ಆಗ ಕಾದಂಬರಿ ಬರೆಯಲು ಗೆಳೆಯನ ಒಪ್ಪಿಗೆ ಕೂಡ ಇತ್ತು. ಕಾದಂಬರಿಯ ಪ್ರೂಫ್ ( ನಕಲು) ಗೆಳೆಯ ಓದಿದ್ದ ಕೂಡ- ( ಕಾದಂಬರಿ ಬರೆದದ್ದು 1966 ರಲ್ಲಿ)- ಮೂರು ವರ್ಷಗಳ ನಂತರ ಅಂದರೆ-1969 ರಲ್ಲಿ ಯಾವಾಗ ‘ ಕನ್ನಡ ಪ್ರಭ ‘ ದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತೋ- ಮಂಗಳೂರಿನಲ್ಲಿ ಎರಡನೇ ಸಾರಿ ಕೋಮು ಗಲಭೆ ಸುರುವಾಯಿತೋ -ಆ ಗೆಳೆಯ ಮೊಗವೀರ ಸಮಾಜದ ಹದಿನಾಲ್ಕು ಪಟ್ಟಣಗಳ ಮುಖಂಡನೂ ಆಗಿದ್ದನು. ಆಗ ಮೊಗವೀರ ಜನಾಂಗದ ಇತರ ವ್ಯಕ್ತಿಗಳು ಗೆಳೆಯನ ಮೇಲೆ ಒತ್ತಡ ಹೇರಿದರು : ” ನಿನಗೆ ಗೆಳೆತನ ಮುಖ್ಯವೋ ಜನಾಂಗದ ಕಟ್ಟು- ಕಟ್ಟಳೆಯ ಸಂಪ್ರದಾಯ ಮುಖ್ಯವೋ ” ಎಂದು . ಈ ರೀತಿಯ ಒತ್ತಡ ಬಂದಿದ್ದರಿಂದ ಜನಾಂಗದ ಕಡೆ ಗೆಳೆಯ ಒಲವು ತೋರಿದ್ದರಿಂದ ವಿಶುಕುಮಾರ ಅವರಿಗೆ ಸೋಲುಂಟಾಯಿತು! – ಇದನ್ನೇ ವಿಶುಕುಮಾರ ಅವರು ಕಾದಂಬರಿ ‘ ಮುನ್ನುಡಿ’ ಯಲ್ಲಿ ಅರ್ಥ ಬರುವಂತೆ ಬರೆದಿರುವುದು. ವಿಶುಕುಮಾರ ಅವರು ‘ ಕರಾವಳಿ’ ಕಾದಂಬರಿಯಲ್ಲಿ ಮೊಗವೀರ ಜನಾಂಗದಲ್ಲಿ ನಡೆದ ಸತ್ಯ ಘಟನೆಗಳೇ ಕಥೆ ಹೆಣೆದುಬರೆದಿರುವುದು. ಮೂರು ಘಟನೆಗಳು ನಿಜ ಜೀವನದಲ್ಲಿ ಬದುಕಿದವರ ಸತ್ಯ ಕಥೆಗಳಾಗಿವೆ. ಆ ಘಟನೆಯಲ್ಲಿ ನಡೆದ ವ್ಯಕ್ತಿಗಳು ‘ ಕಾದಂಬರಿ’ ಮತ್ತು ‘ ಸಿನಿಮಾ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಸಂದರ್ಭಗಳಲ್ಲಿ ಅವರು ಬದುಕಿದ್ದರೂ ಕೂಡ. ಅವರ ನಿಜ ಹೆಸರುಗಳನ್ನು ಬದಲಾಯಿಸಿ, ಕಾಲ್ಪನಿಕ ಹೆಸರುಗಳನ್ನು ವಿಶುಕುಮಾರ ಕೊಟ್ಟಿದ್ದಾರೆ ಅಷ್ಟೇ – ಕಾದಂಬರಿಯಲ್ಲಿ ಬರುವ ಪದ್ಮ ( ಪಾತೂಮ)- ಹಸನಬ್ಬ, ಸಂಜೀವ ಸುವರ್ಣ- ಹಂಸ, ಪೈಲ್ವಾನ್ ಪುರಂದರ – ಈ ಪಾತ್ರಗಳನ್ನು ನಾವು ಇಲ್ಲಿ ಹೆಸರಿಸಬಹುದು.

ಬೋಳೂರು, ಸುಲ್ತಾನ್ ಬತ್ತೇರಿ, ಕುದ್ರೋಳಿಯಲ್ಲಿ ಈಗ ಬದುಕಿರುವ 60-70 ವರ್ಷ ದಾಟಿದ ಹಿರಿಯ ವ್ಯಕ್ತಿಗಳನ್ನು ಯಾರನ್ನಾದರೂ ಕೇಳಿದರೂ ಈ ವಿಷಯ ನಮಗೆ ತಿಳಿಸುತ್ತಾರೆ. ನಿಜ ಜೀವನದ ಘಟನೆಗಳನ್ನೇ ಬರೆದುದ್ದರಿಂದ ಹಾಗೂ ಕಾದಂಬರಿ ಬರೆಯಲು ಒಪ್ಪಿಗೆ ಕೊಟ್ಟಿದ್ದ ಗೆಳೆಯ ತಿರುಗಿ ಬಿದ್ದಿದರ ಪರಿಣಾಮ – ವಿಶುಕುಮಾರ ಈ ಬಗ್ಗೆ ಹೇಳುತ್ತಾರೆ : ” ಕಾದಂಬರಿ ಬಗ್ಗೆ ಕೆಲವರು ಕೆಟ್ಟ ಕಲ್ಪನೆ ಉಂಟು ಮಾಡಿರುವುದರಿಂದ ನನ್ನಿಂದ ಮತೀಯ ಗಲಭೆ ಉಂಟಾಗಬಾರದು ಹಾಗೂ ಉದ್ರಿಕ್ತ ವಾತಾವರಣವಿರುವುದರಿಂದ ಮತ್ತು ಮೊಗವೀರರು ನಮ್ಮ ಮನೆಗೆ ಬೆಂಕಿ ಹಚ್ಚುವುದಾಗಿ ಹಾರಾಡಿದ್ದರಿಂದ ಬೆಂಗಳೂರಿಗೆ ಹೊರಟು, ಸಂಪಾದಕರೊಡನೆ ಚರ್ಚಿಸಿ,ಧಾರಾವಾಹಿಯ ಪ್ರಕಟಣೆ ನಿಲ್ಲಿಸಿದ್ದೇವು” ಎಂದು ಹೇಳಿದರು . ಆದರೆ ಮೊಗವೀರ ಜನ ಏನು ಹೇಳುತ್ತಾರೆ ಅಂದರೆ :” ವಿಶುಕುಮಾರ ಅವರಿಗೆ ಸಣ್ಣ ವಯಸ್ಸಿನಿಂದಲೇ ನಮ್ಮೊಡನೆ ಒಡನಾಟವಿದ್ದು, ಒಟ್ಟಿಗೆ ಊಟ- ತಿಂಡಿ ಮಾಡಿಕೊಂಡು ನಮ್ಮ ಬಗ್ಗೆ ಅಂದರೆ- ಉಡುಪು, ಮೈ ಬಣ್ಣ, ಕಟ್ಟಳೆ, ಸಂಪ್ರದಾಯದ ಅವಹೇಳನ ರೀತಿಯಲ್ಲಿ ಬರೆದರಲ್ಲಾ ..? ಹಾಗೇ ಅವರು ಕಾದಂಬರಿಯಲ್ಲಿ ಚಿತ್ರಿಸಿದ ಪಾತ್ರದ ವ್ಯಕ್ತಿಗಳು ನಮ್ಮ ಪರಿಸರದಲ್ಲಿ ನಮ್ಮ ಕಣ್ಣಮುಂದೆಯೇ ಇದ್ದಾರೆ. ದೂರದ ಜನಗಳಿಗೆ ಇದು ಗೊತ್ತಾಗುವುದಿಲ್ಲ ” ಎಂಬ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು .

ಕಾದಂಬರಿಯಲ್ಲಿ ಮೊಗವೀರರ ಕಾನೂನು, ಕಟ್ಟು- ಕಟ್ಟಳೆ, ಸಂಪ್ರದಾಯ, ಅಂಧ ಶ್ರದ್ಧೆಗಳ ಕುರಿತು ಕಠಿಣ ವಿಮರ್ಶೆ ಮಾಡುತ್ತಾರೆ. ಅದಕ್ಕೆ ಇಲ್ಲೊಂದು ಉದಾಹರಣೆ ಕೊಡಬಯಸುತ್ತೇವೆ. ಮೊಗವೀರ ವಿದ್ಯಾವಂತ ಯುವಕರು ಹೆಣ್ಣಿನ ಬಹಿಷ್ಕಾರದ ಹಿನ್ನಲೆ ಬಗ್ಗೆ ಸಮಾಜದ ಮುಖಂಡರೊಡನೆ ಚರ್ಚಿಸುವ ಸನ್ನಿವೇಶ ಕಾದಂಬರಿಯಲ್ಲಿದೆ: ” ಈ ಶತಮಾನದಲ್ಲೂ ಒಂದು ಹೆಣ್ಣಿಗಾಗಿ ಜಾತಿ ಜಾತಿಗಳು ಹೊಡೆದಾಡುವುದು ಎಂಥ ಅನಾಗರಿಕ ಲಕ್ಷಣ ” ಎಂದು ಒಂದು ಕಡೆ ಈ ಮಾತು ಬಂದರೆ, ಮತ್ತೊಂದೆಡೆ : ” ಈಗ ಒಂದು ಹೆಣ್ಣು ಜಾತಿ ಬಿಟ್ಟು ಹೋದುದಕ್ಕೆ ಸರಿಯಾದ ಕಾರಣ ಏನೆಂದು ನೀವು ( ಸಮಾಜ) ಯೋಚನೆ ಮಾಡುವುದಿಲ್ಲ. ನೀವೆಲ್ಲ ಸೇರಿ ಹೆದರಿಸಿ ಬಹಿಷ್ಕಾರ ಹಾಕುತ್ತೀರಿ. ಅಂತಲೇ ತಮ್ಮ ಜಾತಿ ಬಿಟ್ಟವಳು- ಇನ್ನು ಮುಂದೆ ಹೆಂಗಸರ ನ್ಯಾಯ, ವಿವಾದಗಳಿದ್ದರೆ ಅವುಗಳನ್ನು ಅವರವರ ಮನೆಗಳಲ್ಲಿಯೇ ಇತ್ಯರ್ಥಗೊಳಿಸಬೇಕು. ವಿನ: ಆ ಹೆಣ್ಣಿನ ದೂರನ್ನು ಗ್ರಾಮಸಭೆಗೊ, ಹದಿನಾಲ್ಕು ಪಟ್ಟಣಗಳವರೆಗೊ ತರುವುದು ಸರಿಯಲ್ಲ – ಅವಮಾನ ಮಾಡುವುದು, ಮುಂದೆ ತಲೆಯೆತ್ತಿ ನಡೆಯುವುದು ಹೇಗೆ? ಅಂಥವರನ್ನು ಮುಂದೆ ಯಾರು ಮದುವೆಯಾಗುತ್ತಾರೆ. ಆಗ ಕ್ರೈಸ್ತ, ಇಸ್ಲಾಂ ಮತಕ್ಕೆ ಹೋಗುವುದರಲ್ಲಿ ತಪ್ಪೇನಿದೆ?”- ಈ ರೀತಿ ಹೆಣ್ಣಿನ ವಿಚಾರದಲ್ಲಿ ಮೊಗವೀರ ಸಮಾಜದ ನಡವಳಿಕೆ ಸಡಿಲಿಸಬೇಕೆನ್ನುವ ವಿಚಾರ ಕಾದಂಬರಿ ತಿಳಿಸುತ್ತದೆ. ಕರಾವಳಿ ಕಾದಂಬರಿಯಲ್ಲಿ ಮೀನುಗಾರರ ಬದುಕಿನ ಬಡತನ, ಅವರ ವೃತ್ತಿ, ಉದ್ಯೋಗ, ವ್ಯಾಪಾರ, ರಾಗ- ದ್ವೇಷ, ಪರಂಪರೆ ಕಟ್ಟುಗಳು – ಇತ್ಯಾದಿ ವಿಶುಕುಮಾರ ಅವರು ನಮಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಮೊಗವೀರ- ಮುಸ್ಲಿಂ ನಡುವಿನ ಪ್ರೀತಿ, ದ್ವೇಷ, ಪ್ರಣಯ ಇವನ್ನು ಬಹಳ ಆಪ್ತವಾಗಿ ವಿವರಿಸಿದ್ದಾರೆ. ಹಾಗೇ ತುಳು, ಕೊಂಕಣಿ, ಬ್ಯಾರಿ, ಹಿಂದಿ ಮುಂತಾದ ಭಾಷೆಯ ಶಬ್ದಗಳ ಪ್ರಯೋಗವನ್ನು ವಿಶುಕುಮಾರ ಹೇರಳವಾಗಿ ಕಾದಂಬರಿಯಲ್ಲಿ ಬಳಸಿದ್ದಾರೆ.

ಕರಾವಳಿ’ ಸಿನಿಮಾ: ಆರ್ಥಿಕದಲ್ಲಿ ನಷ್ಟ; ಊರು ಬಿಡುವಂತೆ ಮಾಡಿತು!

ವಿಶುಕುಮಾರ ಒಂದು ರೀತಿಯಲ್ಲಿ ಛಲದಂಕ ಮಲ್ಲ. ‘ ಕರಾವಳಿ’ ಕಾದಂಬರಿ ಮೊಗವೀರರ ಪ್ರತಿಭಟನೆಯಿಂದ ಎಡರು ತೊಡರು- ಕಷ್ಟಗಳನ್ನು ಎದುರಿಸುವಂತೆ ಮಾಡಿದ್ದರೂ ಪಟ್ಟು ಬಿಡದೆ, 1966 ರಲ್ಲಿ ‘ ಕರಾವಳಿ’ ಸಿನಿಮಾ ನಿರ್ಮಾಣಕ್ಕೆ ತೊಡಗಿದರು. ‘ ಕರಾವಳಿ ಮೂವೀಸ್ ‘ ಲಾಂಛನದಡಿ ವಿಶುಕುಮಾರ ಸಹೋದರ ಬಿ. ದಾಮೋದರ ನಿಸರ್ಗ ಅವರು ಚಿತ್ರದ ನಿರ್ಮಾಪಕರಾದರು. ಈ ಚಿತ್ರದ ನಿರ್ಮಾಣ ಒಂದು ಸಾಹಸ ಕಥೆ. ಚಿತ್ರನಿರ್ಮಾಣದ ಹಣಕಾಸಿನ ಸಾಲಕ್ಕೆ ಮಾಜಿ ಸಚಿವ ಮೊಗವೀರ ನಾಯಕ ಮಲ್ಪೆ ಮಧ್ವರಾಜ್ ಅವರು ಸಾಕ್ಷಿ( ವಿಟ್ ನೆಸ್) ಹಾಕಿದ್ದರು. ಅವರ ಪತ್ನಿ ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರು ಇದನ್ನು ವಿರೋಧಿಸಿದ್ದರು ಕೂಡಾ! ವಿಶುಕುಮಾರ ಚಿತ್ರದ ನಿರ್ದೇಶನ, ಚಿತ್ರಕತೆ, ಸಂಭಾಷಣೆ ಎಲ್ಲವೂ ಅವರದೇ ಆಗಿದ್ದು, ಇದು ಅವರ ಎರಡನೇ ಚಿತ್ರವಾಗಿದೆ. ಮೊದಲು ತುಳು ‘ ಕೋಟಿ- ಚೆನ್ನಯ’ ಅವರ ನಿರ್ದೇಶನ ವಾಗಿತ್ತು. ಅಲ್ಲಿ ಪಡೆದ ಅನುಭವ ಈ ಚಿತ್ರಕ್ಕೆ ಧಾರೆ ಎರೆದರು. ಕಾದಂಬರಿಯಲ್ಲಿರುವ ಕೆಲವು ಸನ್ನಿವೇಶಗಳನ್ನು ವಿಶುಕುಮಾರ ಅವರು ಸಿನಿಮಾಕ್ಕಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಚಿತ್ರದ ಕೊನೆ ಕಾದಂಬರಿಯಲ್ಲಿ ತಿಳಿಸಿದಂತೆ ಆಗದೆ, ಚಿತ್ರದ ನಾಯಕಿ ( ಪಾತೂಮ) ತನ್ನ ತಂದೆ ತಾಯಿಯನ್ನು ಸೇರುವ ಸನ್ನಿವೇಶವಿದೆ. ಇದು ವಿಶುಕುಮಾರ ಅವರು ಮಾಡಿಕೊಂಡ ಬದಲಾವಣೆ. ಹಾಗೇ ಚಿತ್ರದ ಪ್ರಮುಖ ನಾಯಕನ ಪಾತ್ರ ( ಮುಸ್ಲಿಂ ಯುವಕ ಹಸನಬ್ಬ) ವನ್ನು ವಿಶುಕುಮಾರ ಮಾಡಿದ್ದರು. ಚಿತ್ರದ ನಾಯಕಿ ಪೂನಾ ಇನ್ ಸ್ಟಿಟ್ಯೂಟ್ ನ ವಿದ್ಯಾರ್ಥಿನಿ ರೀಟಾ ಅಂಚನ್ ಅವರನ್ನು ಆಯ್ಕೆ ಮಾಡಿದ್ದರು. ಆಕೆ ನೋಡಲು ಖ್ಯಾತ ನಟಿ ಹೇಮಾಮಾಲಿನಿಯಂತೆ ಕಾಣುತ್ತಿದ್ದಳು. ಉಳಿದ ತಾರಾಗಣದಲ್ಲಿ ಶ್ರೀಕಲಾ ಹಟ್ಟಿಯಂಗಡಿ, ಗುರುರಾಜ್ ಇದ್ದರು. ಚಿತ್ರದ ಚಿತ್ರೀಕರಣ ಸಂಪೂರ್ಣ ಹೊರಾಂಗಣದಲ್ಲೇ ನಡೆಸಲಾಗಿತ್ತು. ಮಂಗಳೂರು, ಮಲ್ಪೆ, ಬಾಂಬೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೊಗವೀರರ ಪ್ರತಿಭಟನೆ ‘ ಕರಾವಳಿ’ ಚಿತ್ರದ ಬಿಡುಗಡೆಗೂ ಎದುರಿಸಬೇಕಾಯಿತು. ಅದು ಎಲ್ಲಿತನಕ ಮುಟ್ಟಿತೆಂದರೆ, ಮೊಗವೀರರ ಮಹಾಜನ ಸಭೆಯಲ್ಲಿ ” ಮೊಗವೀರ ಸಮಾಜದವರು ಚಿತ್ರವನ್ನು ನೋಡಬಾರದೆಂದೂ, ನೋಡಿದವರನ್ನು ಸಮಾಜದಿಂದ ಬಹಿಷ್ಕಾರ ಹಾಕಲಾಗುವುದೆಂದು ” ಎಂದು ಕಟ್ಟಳೆ ಮಾಡಲಾಗಿತ್ತು.

ಚಿತ್ರ 1977 ರಲ್ಲಿ ದಕ್ಷಿಣ ಕನ್ನಡದಲ್ಲಿ ( ಈಗಿನ ಉಡುಪಿ ಜಿಲ್ಲೆ ಸೇರಿ) ಬಿಡುಗಡೆಯಾಗಿಲ್ಲ. ಕರ್ನಾಟಕದ ಬೇರೆ ಕಡೆ ಪ್ರದರ್ಶನ ಕಂಡಿತು. ದಕ್ಷಿಣ ಕನ್ನಡದ ಗಡಿಪ್ರದೇಶ ಕೇರಳ ರಾಜ್ಯದ ಉಪ್ಪಳದಲ್ಲಿ ಚಿತ್ರಬಿಡುಗಡೆಯಾಯಿತು. ಮಂಗಳೂರಿನ ಜನ ಅಲ್ಲಿ ಹೋಗಿ ಚಿತ್ರ ನೋಡಿಕೊಂಡು ಬಂದಿದ್ದರು. ಈ ಚಿತ್ರದಿಂದ ನಮಗೆ ಸುಮಾರು ರೂ.೬೦ ಸಾವಿರ ನಷ್ಟವಾಯಿತೆಂದು ಚಿತ್ರನಿರ್ಮಾಪಕ ಬಿ.ದಾಮೋದರ ನಿಸರ್ಗ ನಮ್ಮೊಡನೆ ಮಾತಾಡುತ್ತ ಹೇಳಿದರು. ಚಿತ್ರದ ಬಿಡುಗಡೆ ಸಮಯದಲ್ಲಿ ಮನೋರಮಾ ಮಧ್ವರಾಜ್ ‘ ಮಹಿಳಾ ಕಲ್ಯಾಣ ಸಮಾಜ ಸಚಿವೆಯಾಗಿದ್ದರು. ಆಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಮನೋರಮಾ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆಯಾಗುವ ಸಾಧ್ಯತೆ ಇದೆಂದು ಚಿತ್ರ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದ್ದರು. ಆ ಸಮಯದಲ್ಲಿ ವಾರ್ತಾಸಚಿವರಾಗಿ ಗುಂಡೂರಾವ್ ಆಗಿದ್ದರು. ಸರಕಾರದಿಂದ ಸಿಗುವ ಸಬ್ಸಿಡಿ ಕೂಡ ಚಿತ್ರಕ್ಕೆ ಸಿಗದಂತೆ ತಡೆ ಹಿಡಿಯಲಾಯಿತು ‘ ಕರಾವಳಿ’ ಚಿತ್ರ ಮಲೆಯಾಳಂನ ‘ ಚಿಮ್ಮೀನ್ ‘ ನಂತೆ ಭಾರೀ ಸದ್ದು ಮಾಡಿತು. ‘ ಕಲಾತ್ಮಕ’ ದೃಷ್ಟಿಯಲ್ಲಿ ಚಿತ್ರ ಯಶಸ್ಸು ಪಡೆಯದೆ ಇದ್ದರೂ, ವಿವಾದಾತ್ಮಕ ದೃಷ್ಟಿಯಿಂದ ಜನಪ್ರಿಯವಾಯಿತು. ಆದರೆ ಇಲ್ಲೊಂದು ವಿಪರ್ಯಾಸವನ್ನು ನಾವು ನಿಮಗೆ ಹೇಳಲೇ ಬೇಕಾಗಿದೆ. ಈ ‘ ಕರಾವಳಿ’ ಕಾದಂಬರಿ ಸಾಹಿತ್ಯರಂಗದಲ್ಲೂ ಹಾಗೂ ಸಿನಿಮಾ ಕನ್ನಡ ಚಿತ್ರರಂಗದಲ್ಲೂ ವಿಶುಕುಮಾರ ಅವರನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಿದರೂ, ತನ್ನ ಹುಟ್ಟೂರನ್ನು ಬಿಡುವಂತೆ ಮಾಡಿ, ಬೆಂಗಳೂರಿನಲ್ಲಿ ನೆಲೆಸುವಂತೆ ಮಾಡಿದ್ದು ಮಾತ್ರ ಕಪ್ಪು ಚುಕ್ಕೆಯಂತೆ ಉಳಿಯಿತು. ” ಈ ‘ ಕರಾವಳಿ’ ವಿವಾದಿಂದ ವಿಶುಕುಮಾರ ಅವರು,ತಾನು ಅಪಾರ ಪ್ರೀತಿಸುತ್ತಿದ್ದ ಬೋಳೂರು ಹಾಗೂ ಸುಲ್ತಾನ್ ಬತ್ತೇರಿ ಕಡೆ ಅವರು ಸಾಯುವ ತನಕ ಬರಲೇ ಇಲ್ಲ. ನಾವು ನೋಡಲೇ ಇಲ್ಲ” ಎಂದು ಅವರ ಅಭಿಮಾನಿಯೊಬ್ಬರು ನಮ್ಮಲ್ಲಿ ಮಾತಾಡುತ್ತ ಬೇಸರದಿಂದ ನುಡಿದರು.

-ರವಿರಾಜ ಅಜ್ರಿ

  17.10.2016

            ರವಿರಾಜ ಅಜ್ರಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!