ಸಾಧು ಪೂಜಾರಿ - ಸಿಂಚನ ವಿಶೇಷಾಂಕ - 2016

ಸುಖದ ಪ್ರಸವ – ನಮ್ಮ ಪ್ರವಾಸ

ಪ್ರವಾಸಾನುಭವ

’ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ತತ್ವವನ್ನಿರಿಸಿಕೊಂಡು ಹಲವು ಚಿಕ್ಕ-ದೊಡ್ಡ ಪ್ರವಾಸಗಳನ್ನು ಏರ್ಪಡಿಸುತ್ತ ಬಂದಿರುವ ಯುವವಾಹಿನಿ ಮಂಗಳೂರು ಘಟಕವು ಈ ಬಾರಿ ದಕ್ಷಿಣ ಭಾರತ ಪ್ರವಾಸವನ್ನು ಏರ್ಪಡಿಸಿತ್ತು. 2014 ರಲ್ಲಿ ಉತ್ತರ ಭಾರತ ಮತ್ತು ನೇಪಾಳದ 10 ದಿನಗಳ ಪ್ರವಾಸದಲ್ಲಿ ಭಾಗಿಯಾಗಿದ್ದ ನಾನು 2015 ರ ಉತ್ತರ ಭಾರತ ಪ್ರವಾಸ (ವಾರಣಾಸಿ, ಹೃಷಿಕೇಶ, ಹರಿದ್ವಾರ, ವೈಷ್ಣೋದೇವಿ, ದೆಹಲಿ, ಅಮೃತಸರ್, ವಾಘಾ ಬೋರ್ಡರ್ ಇತ್ಯಾದಿ ಸ್ಥಳಗಳಿಗೆ)ಕ್ಕೆ ಹೋಗಲಾಗಲಿಲ್ಲ. ಈ ಬಾರಿ ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದ ಆಯ್ದ ಸ್ಥಳಗಳಿಗೆ ಸೀಮಿತ ಸಂಖ್ಯೆಯ ಪ್ರವಾಸಿಗಳು (49+4 ಮಕ್ಕಳು) ಹೊರಟು ನಿಂತೆವು. ವಿಕ್ರಮ್ ಟ್ರಾವೆಲ್ಸ್‌ನವರ ವ್ಯವಸ್ಥೆ ಮತ್ತು ಮಾರ್ಗದರ್ಶನ ಜೊತೆಗಿತ್ತು.

ಪಳನಿ ಸುಬ್ರಹ್ಮಣ್ಯ ದೇವಾಲಯ, ಕಾಲಾಡಿ ಶ್ರೀ ಶಂಕರ ಮಠಗಳು ಧಾರ್ಮಿಕ ಸ್ಥಳಗಳಾದರೆ ಕೊಡೈಕೆನಾಲ್, ಮುನ್ನಾರ್‌ಗಳು ನಿಸರ್ಗಧಾಮಗಳು, ಉಳಿದಂತೆ ರಾಜಮಲೈ, ಮಟ್ಟುಪೆಟ್ಟಿ ಡ್ಯಾಂ, ಎಕೋ ಪಾಂಟ್, ಅಧಿರಪಳ್ಳಿ ಜಲಪಾತಗಳು ನಿಸರ್ಗ ರಮಣೀಯ ತಾಣಗಳು, ಕೊಚ್ಚಿ ಮತ್ತು ಅಲೆಪ್ಪಿಯಲ್ಲಿ ಸಮುದ್ರದ ಹಿನ್ನೀರಿನಲ್ಲಿ ದೋಣಿ ವಿಹಾರ, ಬೋಟ್ ಹೌಸ್‌ಗಳ ಸಂದರ್ಶನ, ಪ್ರಸಿದ್ಧ ’ಲುಲು ಮಾಲ್’ನಲ್ಲಿ ಶಾಪಿಂಗ್ ಈ ಬಾರಿಯ ವಿಶೇಷವಾಗಿತ್ತು.

ಮೇ ತಿಂಗಳ 25 ರಂದು ಬೆಳಿಗ್ಗೆ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ನಮ್ಮ ಪ್ರವಾಸ ಆರಂಭಗೊಂಡಿತು. ಘಟಕದ ಅಧ್ಯಕ್ಷ ಸುನಿಲ್ ಹಾಗೂ ಕಾರ್ಯದಶಿ ನವೀನ್‌ಚಂದ್ರ, ಸಲಹೆಗಾರರಾದ ಪರಮೇಶ್ವರ ಪೂಜಾರಿ, ಮಾಜಿ ಅಧ್ಯಕ್ಷ ಮಾಧವ ಕೋಟ್ಯಾನ್, ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ರೇಣುಕಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಸಾದ್ ಚಿಲಿಂಬಿಯವರು ತಂಡದ ನೇತೃತ್ವವನ್ನು ವಹಿಸಿದ್ದರು.

ಬೆಳಿಗ್ಗೆ 6.40 ಕ್ಕೆ ಹೊರಡಬೇಕಾಗಿದ್ದ ರೈಲುಗಾಡಿ 15 ನಿಮಿಷ ತಡವಾಗಿ 6.55 ಕ್ಕೆ ನಿಧಾನವಾಗಿ ಚಲಿಸತೊಡಗಿದಾಗ ಒಂದು ಕ್ಷಣ ಹಿತವಾದ ಸ್ಪಂಧನ ಮನದಲ್ಲಿ ಮೂಡಿತು. ನಾವಿದ್ದ ’ಚೆನ್ನೈ ಎಗ್ಮೋರ್’ ರೈಲು ಬಂಡಿಯ ಎಲ್ಲಾ ಬೋಗಿಗಳು ಆರಂಭದಲ್ಲೇ ತುಂಬಲಾರಂಭಿಸಿದ್ದು ಬರಬರುತ್ತಾ ಬೋಗಿಗಳೆಲ್ಲ ಭರ್ತಿಯಾಗತೊಡಗಿದವು. ಈ ನಡುವೆ ವಿಕ್ರಮ್ ಟ್ರಾವೆಲ್ಸ್‌ರವರ ರುಚಿಕರವಾದ ಬೆಳಗಿನ ಉಪಹಾರ ಎಲ್ಲರಲ್ಲೂ ಉಲ್ಲಾಸ ಮೂಡಿಸಿತು.

ಕಣ್ಣೂರು, ಕೋಯಿಕೋಡ್ ನಿಲ್ದಾಣಗಳ ಮಧ್ಯೆ ಕಿಕ್ಕಿರಿದು ತುಂಬಿದ್ದ ಜನಜಂಗುಳಿಯಿಂದ ಗಾಳಿಯ ಸ್ಪರ್ಶವೇ ಕಷ್ಟವಾಗತೊಡಗಿತ್ತು. ಬಿರು ಬೇಸಿಗೆಯಾಗಿದ್ದರಿಂದ ಸೆಕೆಯ ಬಿಸಿ ತಟ್ಟತೊಡಗಿತ್ತು. ಒಂದೊಮ್ಮೆ ಉತ್ತರ ಭಾರತ ಪ್ರವಾಸದ ರೈಲು ಯಾನವನ್ನು ನೆನಪಿಸಿದ್ದಂತೂ ಸುಳ್ಳಲ್ಲ. ಮುಂದೆ ಜನಜಂಗುಳಿ ಕಡಿಮೆಯಾಗಿ ಸ್ವಲ್ಪ ನಿರಾಳವಾಯಿತಾದರೂ ವಾತಾವರಣದ ಉಷ್ಣತೆ ಎಲ್ಲರನ್ನೂ ಕಂಗೆಡಿಸಿತ್ತು. ರೈಲಿನ ನಿಧಾನಗತಿಯೂ ಸ್ವಲ್ಪ ಅಸಹನೀಯವಾಯಿತು. ಪ್ರವಾಸದ ವ್ಯವಸ್ಥಾಪಕರಿಂದ ತಂಪು ಪಾನೀಯ, ಕುರುಕಲು ತಿಂಡಿ ಸರಬರಾಜು ಕೊಂಚ ಹಾಯೆನಿಸಿತು. ಮಧ್ಯಾಹ್ನ 1.30ರ ವೇಳೆಗೆ ಶೋರ್‍ನೂರ್ ಜಂಕ್ಷನ್ ತಲುಪುವ ವೇಳೆಗೆ ಮಧ್ಯಾಹ್ನದ ಊಟದ ವಿತರಣೆಯೂ ನಡೆಯಿತು. ಶುದ್ಧ ಶಾಖಾಹಾರಿ ಭೋಜನ ಸವಿದು ಮುಂದೆ ಪಾಲ್ಗಾಟ್ ನಿಲ್ದಾಣದಲ್ಲಿ ಇಳಿಯುವ ತಯಾರಿ ಮಾಡತೊಡಗಿದೆವು. ಸುಮಾರು 2.45 ರ ವೇಳೆಗೆ ನಿಲ್ದಾಣ ತಲುಪಿ ಲಘು ಬಗೆಯಿಂದ ರೈಲಿನಿಂದ ಇಳಿದೆವು.

ಇಲ್ಲಿಂದ ಮುಂದೆ ನಮ್ಮ ಪಯಣ ತಮಿಳುನಾಡಿನತ್ತ ರಸ್ತೆಯ ಮೂಲಕ. ಹಾಗಾಗಿ ಅದಾಗಲೇ ವಿಕ್ರಮ್ ಟ್ರಾವೆಲ್ಸ್‌ನ ವತಿಯಿಂದ ಗೊತ್ತುಪಡಿಸಿದ್ದ ತ್ರಿಶೂರ್‌ನಿಂದ ಆಗಮಿಸಿ ನಮಗಾಗಿ ಕಾಯುತ್ತಿದ್ದ ’ನರಸಿಂಹ’ ಸೆಮಿ ಡಿಲಕ್ಸ್ ಬಸ್ಸು ಹತ್ತಿದೆವು. ಇಲ್ಲಿ ನಮಗೊಂದು ಆಶ್ಚರ್ಯ ಕಾದಿತ್ತು. ನಮ್ಮೊಡನೆ ಹೊಸದಾಗಿ ಮದುವೆಯಾಗಿ ಮಧುಚಂದ್ರಕ್ಕೆ ಬಂದವರು, ಮದುವೆಯಾಗಿ ಕೆಲ ಕಾಲವಾಗಿ ಇದೀಗ ಮಧುಚಂದ್ರಕ್ಕೆ ಬಂದವರು, ಒಟ್ಟಿನಲ್ಲಿ ಹೊಸ ಹಳೆಯ ದಂಪತಿಗಳಿಗೆ ಬಸ್ಸಿನ ಮುಂದುಗಡೆ ಸೀಟು ವಿತರಣೆಯಾಯಿತು. ಮದುವೆಯಾಗಿಯೂ ಹೆಂಡತಿ ಬಿಟ್ಟು ಬಂದವರನ್ನು ಬಸ್ಸಿನ ಕೊನೆಗೆ ದಬ್ಬಲಾಯಿತು!

ಸುಮಾರು 3.15 ರ ಸುಮಾರಿಗೆ ಪಳನಿಯತ್ತ ಪ್ರಯಾಣ ಬೆಳೆಸಿದೆವು. ಪ್ರಯಾಣದ ನಡುವೆ ಬಸ್ಸಿನಲ್ಲೇ ಎಲ್ಲರ ಸ್ವಪರಿಚಯ ಮಾಡಿಕೊಂಡೆವು. ಬಸ್ಸಿನಲ್ಲಿ ಮೈಕ್ರೋಫೋನ್ ವ್ಯವಸ್ಥೆಯಿದ್ದು ವಿಪುಲವಾದ ಸೌಂಡ್‌ಬಾಕ್ಸ್‌ಗಳಿಂದ ಸುಸಜ್ಜಿತವಾಗಿತ್ತು. ದಾರಿಯ ನಡುವೆ ಒಂದೆಡೆ ಬಸ್ಸು ನಿಲ್ಲಿಸಿ ಚಹಾ ವಿರಾಮ ನೀಡಲಾಯಿತು. ಬಳಿಕ ನಡೆದದ್ದು ಒಂದು ಚೇತೋಹಾರಿ ಪ್ರಯಾಣ. ಹಾಡುವವರಿಗೆ, ನಗಿಸುವವರಿಗೆ ಅವಕಾಶ ಕೊಡಲಾಯಿತು. ಬಳಿಕ ಪ್ರವಾಸದಲ್ಲಿದ್ದ ಪ್ರತಿಯೊಂದು ಜೋಡಿ ದಂಪತಿಗಳಿಂದ ಒಂದು ಜನಪ್ರಿಯ ಹಾಡಿಗೆ ಹೆಜ್ಜೆ ಹಾಕುವ ಕಾರ್ಯಕ್ರಮ, ಮೊದಮೊದಲು ಕೆಲಜೋಡಿಗಳು ಹಿಂಜರಿದರೂ ಬಳಿಕ ಎಲ್ಲರ ಅಪೇಕ್ಷೆ ಮೇರೆಗೆ ಎಲ್ಲರೂ ಭಾಗವಹಿಸಿದ್ದು ವಿಶೇಷ. ಮುಂದಿನ ಒಂದು ವಾರ ಕಾಲ ಬಸ್ಸಿನ ಒಳಗೆಲ್ಲಾ ಇದೇ ಗೌಜಿಗದ್ದಲ.

ಸಾಯಂಕಾಲ 6.45 ಕ್ಕೆ ಪಳನಿ ತಲುಪಿದೆವು. ಪ್ರಸಿದ್ಧ ದೇವಾಲಯ ನಗರಿ ಪಳನಿಯ ’ಗಣ್‌ಪತ್’ ವಸತಿ ಗೃಹದಲ್ಲಿ ಕೊಠಡಿಗಳನ್ನು ವಿತರಿಸಲಾಯಿತು. ಕೊಂಚ ದಣಿವಾರಿಸಿ ತಮಿಳುನಾಡಿನ ಬಿಸಿಲಿನ ಬೇಗೆಯಿಂದ ತಂಪಾಗಿಸಲು ಸ್ನಾನಾದಿಗಳನ್ನು ಪೂರೈಸಿದೆವು. ಕೆಲವರು ನಗರ ಪ್ರದಕ್ಷಿಣೆಗೆ ತೆರಳಿದರು. ರಾತ್ರಿ ೯ರ ವೇಳೆಗೆ ನಮ್ಮ ಜೊತೆಗೇ ಬಂದಿದ್ದ ಅಡುಗೆ ಸಿಬ್ಬಂದಿಯಿಂದ (ವಿಕ್ರಮ್ ಟ್ರಾವೆಲ್ಸ್) ಬಿಸಿ ಬಿಸಿ ಊಟ ಸಿದ್ಧಗೊಂಡು ಊಟ ಮಾಡಿದ ಎಲ್ಲರೂ ಆಯಾಸದ ಕಾರಣ ಬೇಗನೆ ನಿದ್ದೆ ಮಾಡಲು ತೆರಳಿದರು. ಬೆಟ್ಟ ಹತ್ತುವರೇ ಬೇಗನೆ ಏಳಲು ಸೂಚನೆಯನ್ನೂ ನೀಡಲಾಗಿತ್ತು.

ಮೇ 26 ರಂದು ಬೆಳಿಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನು ತೀರಿಸಿ ಶುಚಿರ್ಭೂತರಾಗಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನಕ್ಕೆ ಅಣಿಯಾದೆವು. ಬೆಳಿಗ್ಗೆ 5.30 ಕ್ಕೆ ಒದಗಿಸಲಾದ ಬಿಸಿಬಿಸಿ ಕಾಫಿ/ಚಹಾ ಸವಿದು ಬೆಟ್ಟವನ್ನು ಏರುವರೇ ಬೆಟ್ಟದ ಬುಡಕ್ಕೆ ತಲುಪಿದೆವು. ಆದರೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಸಾಹಸಕ್ಕೆ ಇಳಿಯದೇ ಎಲ್ಲರೂ (ಚಂದ್ರಶೇಖರರೊಬ್ಬರನ್ನು ಬಿಟ್ಟು) ’Winch’ (ಟ್ರ್ಯಾಕ್ ಮೇಲೆ ಚಲಿಸುವ ರೈಲು ಬೋಗಿಯಂತಹ ಬಂಡಿ-ರೋಪ್ ಮೂಲಕ ಚಲಿಸುತ್ತದೆ) ಮೂಲಕ ಹತ್ತಿ ಬೆಟ್ಟದ ತುದಿಗೆ ತಲುಪಿದೆವು. (ಬೆಟ್ಟ ಹತ್ತಲು ರೋಪ್ ಕಾರ್ (ತೊಟ್ಟಿಲು) ವ್ಯವಸ್ಥೆಯೂ ಇದೆ. ಬಹು ಪುರಾತನ ಮತ್ತು ಸಂಪೂರ್ಣ ಶಿಲಾಮಯ ದೇವಾಲಯ ನೋಡಲು ಆಕರ್ಷಕವಾಗಿದ್ದು ಗರ್ಭಗುಡಿಯ ಗೋಪುರ ಚಿನ್ನದ ಹೊದಿಕೆಯನ್ನು ಹೊಂದಿದೆ. ಬೆಳಿಗ್ಗೆ 7.30 ಸುಮಾರಿಗೆ ಗರ್ಭಗುಡಿಯಲ್ಲಿ ಸ್ವಾಮಿಯ (ಅರುಲ್ ಮಿಗು ಧಂಡಾಯುತಪಾಣಿ ಸ್ವಾಮಿ ತಿರುಕೋವಿಲ್) ಅಲಂಕೃತ ಮೂರ್ತಿಯನ್ನು ನೋಡಿ ಧನ್ಯರಾಗಿ ಹೊರಬಂದೆವು.

ಬೆಟ್ಟದಿಂದ ಕಾಲ್ನಡಿಗೆಯಲ್ಲಿ ಕೆಳಗಿಳಿದು ಬಂದ ನಾವು ವಸತಿ ಗೃಹ ತಲುಪಿ ಬೆಳಗಿನ ಉಪಹಾರವನ್ನು ಸ್ವೀಕರಿಸಿ ಮುಂದಿನ ಪ್ರಯಾಣಕ್ಕೆ ಅಣಿಯಾದೆವು.

ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪಳನಿಯಿಂದ ಹೊರಟ ನಾವು ತಮಿಳುನಾಡಿನ ಪ್ರಸಿದ್ಧ ನಿಸರ್ಗಧಾಮವಾದ ಕೊಡೈಕೆನಾಲ್‌ನತ್ತ ಪ್ರಯಾಣಿಸಿದೆವು. ಪಳನಿಯಿಂದ ಸುಮಾರು 65 ಕಿ.ಮೀ. ದೂರದ ಕೊಡೈಕೆನಾಲ್‌ಗೆ ತೆರಳಲು ಸುಮಾರು 55 ಕಿ.ಮೀ. ಪರ್ವತದ ಏರುದಾರಿ/ಇಳಿದಾರಿಯನ್ನು ಕ್ರಮಿಸಬೇಕು. ಮಾತ್ರವಲ್ಲದೆ ತೀವ್ರತರವಾದ ಹಿಮ್ಮುಖ ತಿರುವುಗಳು. ನಿಸರ್ಗ ರಮಣೀಯವಾದ ಕಣಿವೆ ನೋಟವನ್ನು ಸವಿಯುತ್ತ ಸಾಗಿದಾಗ ವೇಳೆ ಸರಿದದ್ದೇ ತಿಳಿಯಲಿಲ್ಲ. ನಡುವೆ ಒಂದೆಡೆ ಸುಮಾರು 150 ಅಡಿ ಎತ್ತರದಿಂದ ಧುಮುಕುವ ಕಿರು ಜಲಪಾತ ನೋಡ ಸಿಗುತ್ತದೆ. ’ಸಿಲ್ವರ್ ಪಾರ್ಕ್’ ಎಂಬ ಈ ಸ್ಥಳದಲ್ಲಿ ಇಳಿದು ನಿಸರ್ಗ ಸೌಂದರ್ಯವನ್ನು ಸವಿದು, ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತೆಗೆದು ಗಿರಿಧಾಮದತ್ತ ಮುಂದುವರಿದೆವು. ಸುಮಾರು 1.45 ರ ವೇಳೆಗೆ ನಮ್ಮ ಪೂರ್ವ ನಿಗದಿತ ’ಗೋಲ್ಡನ್ ಪಾರ್ಕ್’ ವಸತಿ ಗೃಹ ತಲಪಿ ನಮ್ಮ ಬ್ಯಾಗುಗಳೊಂದಿಗೆ ರೂಮಿಗೆ ತೆರಳಿದೆವು. ಆ ಹೊತ್ತಿಗಾಗಲೇ ನಮ್ಮ ಅಡಿಗೆ ತಂಡ ಅಲ್ಲಿ ತಲುಪಿ ನಮಗೆ ಬಿಸಿ ಬಿಸಿ ಊಟದೊಂದಿಗೆ ಸ್ವಾಗತಿಸಿದರು.

ಕೊಡೈಕೆನಾಲ್ ಭಾರತದ ಪ್ರಸಿದ್ಧ ಗಿರಿಧಾಮ. ಪಳನಿ ಬೆಟ್ಟಗಳ ನಡುವೆ (ಪಶ್ಚಿಮ ಘಟ್ಟಗಳ ಕವಲು) ಕಂಗೊಳಿಸುವ ಈ ಗಿರಿಧಾಮ ದಟ್ಟ ಅರಣ್ಯಗಳಿಂದಲೂ, ಕಾಫಿ ತೋಟಗಳಿಂದಲೂ ಆವೃತವಾಗಿದೆ. ಸಮುದ್ರ ಮಟ್ಟದಿಂದ 7,000 ಅಡಿ ಎತ್ತರದಲ್ಲಿದೆ. ಬೇಸಿಗೆಯಲ್ಲಿಯೇ ಇಲ್ಲಿನ ಉಷ್ಣಾಂಶ 12 ರಿಂದ 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಚಳಿಗಾಲದಲ್ಲಿ 8 ರಿಂದ 18 ಡಿಗ್ರಿಗಳ ನಡುವೆ ಇರುತ್ತದೆ.

ಸರೋವರ, ಸುಂದರ ಹೂಗಿಡಗಳ ಬ್ರಿಯಾಂಟ್ ಉದ್ಯಾನ, ಹಸಿರು ಕಣಿವೆ, ಸುಂದರ ಜಲಪಾತಗಳು, ಗ್ರಹವೀಕ್ಷಣಾಲಯ, ದೂರದರ್ಶಕ ಭವನಗಳು, ಮ್ಯೂಸಿಯಂ ಮೊದಲಾದುವು ಇಲ್ಲಿ ಅಗತ್ಯ ನೋಡಬೇಕಾದ ತಾಣಗಳು.

ಮಧ್ಯಾಹ್ನ ಊಟದ ಬಳಿಕ ಹತ್ತಿರವೇ ಇರುವ ಸರೋವರ (Kodaicanal lake)ನ್ನು ನೋಡಲು ತೆರಳಿದೆವು. ಈ ಸರೋವರವು ವಿಶಾಲವಾಗಿದ್ದು ವೈವಿಧ್ಯಮಯ ಬೋಟಿಂಗ್ ವ್ಯವಸ್ಥೆ ಇದ್ದು ಹೆಚ್ಚಿನವರು ಬೋಟಿಂಗ್ ಸವಿಯನ್ನು ಸವಿದರು. ಕೆಲವರು ಸೈಕಲ್ ಸವಾರಿಯ ಮಜಾವನ್ನೂ ಅನುಭವಿಸಿದರು.

ಅಲ್ಲಿಂದ ಮರಳಿ ಬಂದು ಸಾಯಂಕಾಲದ ಲಘು ಉಪಹಾರದ ಬಳಿಕ ಪ್ರವಾಸಿಗಳೆಲ್ಲ ಸೇರಿ ವಿವಿಧ ಮನರಂಜನ ಆಟಗಳಲ್ಲಿ ತೊಡಗಿದರು. ಹೌಸಿ ಹೌಸಿ, ಲೂಡೋ, ಕಾರ್ಡ್ಸ್‌ಗಳು ಹೊರಬಂದವು. ನಂತರ ನಡೆದ ಮನರಂಜನ ಕಾರ್ಯಕ್ರಮದಲ್ಲಿ ಕಿರುಪ್ರಹಸನ, ತುಳುಜಾನಪದ ಶೈಲಿಯ ಹಾಡಿಗೆ ನೃತ್ಯ, ಜಾನಪದ ಹಾಡುಗಳು ಪ್ರಸ್ತುತಗೊಂಡವು.

ಯುವವಾಹಿನಿ ಸಂಘಟನೆಯ ಬಗ್ಗೆ ಪ್ರವಾಸಿಗಳಿಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಯಿತು. ರಾತಿ 9 ರ ವೇಳೆಗೆ ರುಚಿಕರವಾದ ಕೋಳಿ ಮಾಂಸದ ಅಡುಗೆ ಸಿದ್ಧಗೊಂಡಿತ್ತು. ಎಲ್ಲರೂ ಭೋಜನ ಸವಿದು ಅವರವರ ಕೋಣೆ ಸೇರಿಕೊಂಡರು. ಹಿತವಾದ ಚಳಿ, ಸುಖಕರವಾದ ನಿದ್ದೆಗೆ ಪೂರಕವಾಗಿದ್ದು ಮಧುಚಂದ್ರ ಜೋಡಿಗಳಿಗೆ ಸ್ವರ್ಗವಾಗಿತ್ತು!

ಮೇ 27ರ ಬೆಳಿಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನು ತೀರಿಸಿ ಬಿಸಿ ಬಿಸಿ ಕಾಫಿ/ಚಹಾ ಸೇವಿಸಿ ಪ್ರಸಿದ್ಧ Pillar rock ನೋಡಲು ತೆರಳಿದೆವು. ನಿಸರ್ಗ ರಮಣೀಯವಾದ ಕಣಿವೆ ದೃಶ್ಯಗಳೊಂದಿಗೆ ಎತ್ತರವಾದ ಸ್ಥಂಭದಂತೆ ತಲೆ ಎತ್ತಿ ನಿಂತ ಬಂಡೆ (Pillar rock )ಯನ್ನು ವೀಕ್ಷಿಸಿದೆವು. ಕಣಿವೆಯ ದೃಶ್ಯಗಳನ್ನು ಸೆರೆ ಹಿಡಿಯುವುದರೊಂದಿಗೆ ಕಣಿವೆಯ ಹಿನ್ನಲೆಯಲ್ಲಿ ವಿವಿಧ ಭಂಗಿಗಳಲ್ಲಿ ಛಾಯಾಚಿತ್ರ, ವೀಡಿಯೋ ದಾಖಲಾತಿ ನಡೆಯಿತು. ನವದಂಪತಿಗಳಂತೂ ಹೀರೋ ಹೀರೋಯಿನ್‌ಗಳಂತೆ ಸಂಭ್ರಮಿಸಿದರು.

ನಂತರ ಇನ್ನೊಂದು ರುದ್ರ ರಮಣೀಯ ಕಣಿವೆ ನೋಟ (Sucide Point ಎಂದು ಕುಖ್ಯಾತಿಯ) ’ಗ್ರೀನ್‌ವ್ಯಾಲಿ ವ್ಯೂ’ ನೋಡಿ ಆನಂದಿಸಿದೆವು. ಬಳಿಕ ಮತ್ತೆ ವಸತಿ ಗೃಹ ತಲುಪಿ ಬೆಳಗ್ಗಿನ ಉಪಹಾರ ಸ್ವೀಕರಿಸಿ ಇನ್ನೊಂದು ಸುಂದರ ನಿಸರ್ಗಧಾಮ ಕೇರಳದ ಮುನ್ನಾರ್‌ನತ್ತ ಪ್ರಯಾಣ ಬೆಳೆಸಿದೆವು. ಸುಮಾರು 50 ಕಿ.ಮೀ. ಇಳಿಜಾರು ರಸ್ತೆ, 50 ಕಿ.ಮೀ. ಸಮತಟ್ಟು ರಸ್ತೆ, ಮತ್ತೆ 60 ಕಿ.ಮೀ. ಏರಿಳಿತದ ರಸ್ತೆಯನ್ನು ಕ್ರಮಿಸಿ ಮುನ್ನಾರ್ ತಲುಪಬೇಕು. ನಡುವೆ ರಸ್ತೆಯಲ್ಲಿ ಬೆಟ್ಟದ ಕಡಿದಾದ ರಮಣೀಯ ಸ್ಥಳದಲ್ಲಿ ಮಧ್ಯಾಹ್ನದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಿಸರ್ಗದ ರಮಣೀಯ ದೃಶ್ಯವನ್ನು ಹೃನ್ಮನಗಳಲ್ಲಿ ತುಂಬಿಸಿಕೊಳ್ಳುತ್ತಾ ಬಿಸಿ ಬಿಸಿ ’ಪಲಾವ್’ ಸವಿಯುತ್ತಿದ್ದಂತೆ ತಣ್ಣನೆಯ ಮೋಡಗಳು ಬಂದು ಮುತ್ತಿಕ್ಕತೊಡಗಿದವು. ಒಂದರೆ ಕ್ಷಣ ಎಲ್ಲರೂ ಮೋಡಗಳ ನಡುವೆ ಕಳೆದು ಹೋಗಿ ಒಬ್ಬರಿಗೊಬ್ಬರು ಕಾಣದಾದರು. ಮರುಕ್ಷಣವೇ ಮಳೆ ಹನಿ ಬೀಳತೊಡಗಿ ಎಲ್ಲರೂ ಲಘುಬಗನೇ ಬಸ್ಸಿಗೆ ಹತ್ತುವಂತಾಯಿತು. ಕೆಲವರಂತು ತಪ್ಪಿಸಿಕೊಳ್ಳಲಾರದೆ ತೊಪ್ಪೆಯಾಗಿದ್ದರು. ಮುಂದೆ ಪ್ರಯಾಣ ಮುಂದುವರಿಸಿ ತಮಿಳುನಾಡು ಕೇರಳ ಗಡಿಭಾಗ (ಬೆಟ್ಟದ ತುದಿಯಲ್ಲಿ)ದ ಮೂಲಕ ಕೇರಳ ಪ್ರವೇಶಿಸಿದೆವು. ಬೆಟ್ಟ, ಕಣಿವೆ, ಇಳಿಜಾರು, ಕಾಡು-ಮೇಡು, ಹಚ್ಚ ಹಸಿರು ಕಣ್ಣಿಗೆ ತಂಪಾಗಿದ್ದು ಪ್ರಯಾಣದ ಆಯಾಸವನ್ನು ಮರೆಸುವಂತಿತ್ತು. ಕೇರಳದ ಭಾಗದಲ್ಲಿ ಅಲ್ಲಲ್ಲಿ ಚಹಾತೋಟಗಳು ನಯನ ಮನೋಹರವಾಗಿದ್ದವು. ಮುಂದೆ ರಸ್ತೆ ಸ್ವಲ್ಪ ಕಿರಿದಾಗತೊಡಗಿದ್ದು ಒಮ್ಮೆಗೆ ಒಂದೇ ಘನವಾಹನ ಸಾಗಬಹುದಾಗಿತ್ತು. ರಸ್ತೆಯ ಒಂದೆಡೆ ಬಸ್ಸು ನಿಲ್ಲಿಸಿ ಸಂಜೆಯ ಲಘು ಉಪಾಹಾರ ಸ್ವೀಕರಿಸಿದೆವು. ಮುಂದೆ ರಸ್ತೆಯುದ್ದಕ್ಕೂ ವಿಶಾಲವಾದ ಚಹಾತೋಟಗಳನ್ನು ವೀಕ್ಷಿಸುತ್ತಾ ಸಾಗಿ ಸಂಜೆ ೬ ಗಂಟೆಯ ವೇಳೆಗೆ ಮುನ್ನಾರ್‌ನ ನಮ್ಮ ವಸತಿ ಗೃಹ ತಲುಪಿದೆವು.

ಮುನ್ನಾರ್ ಒಂದು ಅತ್ಯಂತ ಸುಂದರವಾದ ಗಿರಿಧಾಮ. ಇತ್ತೀಚೆಗೆ ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಎಲ್ಲೆಲ್ಲೂ ನೋಡಿದರೂ ಚಹಾ ತೋಟಗಳೇ ತುಂಬಿಕೊಂಡಿದೆ. ಅಸ್ಸಾಂ, ಡಾರ್ಜಿಲಿಂಗ್‌ನ ಬಳಿಕ ದೇಶದ ಅತ್ಯಂತ ದೊಡ್ಡ ಚಹಾ ಬೆಳೆಯುವ ಕೇಂದ್ರವೆಂದು ಹೇಳಲ್ಪಟ್ಟಿದೆ. ತಂಪಾದ ಹವೆ ಇಲ್ಲಿನ ವಿಶೇಷ. ನಾವು ಇಲ್ಲಿಗೆ ತಲುಪಿದಾಗ ಮಳೆಯು ನಮ್ಮನ್ನು ಸ್ವಾಗತಿಸಿತು. ಮೂರು ನದಿಗಳ ಸಂಗಮಸ್ಥಳ ಮುನ್ನಾರ್‌ನಲ್ಲಿ ನಾವು ಸನ್ ವ್ಯೂವ್ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಇದು ಸ್ವಲ್ಪ ಹಿಂದಿನ ಕಾಟೇಜ್ ಮಾದರಿಯದ್ದಾಗಿತ್ತು. ಇಲ್ಲಿ ರಾತ್ರಿ ’ಕ್ಯಾಂಪ್ ಫಯರ್’ ವ್ಯವಸ್ಥೆ ಮಾಡಲಾಗಿದ್ದು ಪ್ರವಾಸಿಗಳೆಲ್ಲ ವಿವಿಧ ತಂಡಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕ ಇಲ್ಲಿನ ತಂಪು ಹವೆಯನ್ನು ಆಸ್ವಾದಿಸಿದರು. ಬಳಿಕ ಭೋಜನ ಸವಿದು ಎಲ್ಲರೂ ನಿದ್ದೆಗೆ ಶರಣಾದರು.

ಮರುದಿನ ಮೇ 28, ಬೆಳಿಗ್ಗೆ ಬೇಗನೆ ಎದ್ದು ನಾವು ಕೆಲವರು ವಾಕಿಂಗ್ ಮಾಡುವ ಮೂಲಕ ನಿಸರ್ಗದ ಬೆಳಗಿನ ಸೌಂದರ್ಯವನ್ನು ಆಸ್ವಾದಿಸಿದೆವು. ಬೆಳಿಗ್ಗೆ ೬.೩೦ರ ವೇಳೆಗೆ ಚಹಾ/ಕಾಫಿ ಸಿದ್ಧವಾಗಿದ್ದು ಅದನ್ನು ಸ್ವೀಕರಿಸಿ ಎರ್‌ವಿ ಕುಲಂ ರಾಷ್ಟ್ರೀಯ ಉದ್ಯಾನಕ್ಕೆ ತೆರಳಿದೆವು. ಕೇರಳದ ಅತ್ಯಂತ ಎತ್ತರದ ರಾಜಮಲೈ ಬೆಟ್ಟದಲ್ಲಿ ಈ ಉದ್ಯಾನವನ ನಿರ್ಮಿಸಲಾಗಿದ್ದು Neelgiri Thar ಎಂಬ ಒಂದು ಜಾತಿಯ ಪ್ರಾಣಿ ಪ್ರಬೇದ (ಆಡಿನಂತಹುದು) ಇಲ್ಲಿ ವಾಸಿಸುತ್ತದೆ. ಭಾರತದಲ್ಲಿ ಇನ್ನೆಲ್ಲೂ ಈ ಪ್ರಾಣಿಗಳು ಕಾಣಸಿಗುವುದಿಲ್ಲವಂತೆ. ವಿನಾಶದಂಚಿನಲ್ಲಿರುವ ಪ್ರಾಣಿಯೆಂದು ಅವುಗಳಿಗೆ ರಕ್ಷಣೆಗಾಗಿ ಸರಕಾರ ಇದನ್ನು ರಕ್ಷಿತಾರಣ್ಯವನ್ನಾಗಿಸಿದೆ. ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಇವುಗಳು ಮರಿ ಹಾಕುವುದರಿಂದ ಕಾಣಸಿಗುವುದು ಅಪರೂಪ. ಇವುಗಳ ವೀಕ್ಷಣೆಗೆ ಮತ್ತು ರಾಜಮಲೈ ಬೆಟ್ಟ ದರ್ಶನಕ್ಕೆ ಇಲಾಖೆ (ವನ್ಯಜೀವಿ) ತನ್ನದೇ ವಾಹನ ವ್ಯವಸ್ಥೆ ಮಾಡಿದ್ದು ದಿನಂಪ್ರತಿ ಸಾವಿರಾರು ಪ್ರವಾಸಿಗರು ಬಂದು ದರ್ಶನ ಮಾಡಿ ಹೋಗುತ್ತಾರೆ. ಇದಕ್ಕಾಗಿ ಇಲಾಖೆ ನಿಗದಿತ ಶುಲ್ಕವನ್ನು ವಸೂಲಿ ಮಾಡುತ್ತದೆ. ನಮ್ಮ ಅದೃಷ್ಟಕ್ಕೆ ಎರಡು ಥಾರ್‌ಗಳು ಮಾರ್ಗದಲ್ಲಿಯೇ ನಮ್ಮನ್ನು ಸ್ವಾಗತಿಸಿದವು. ಆನಂತರ ಮಾರ್ಗದ ಇಕ್ಕೆಲಗಳಲ್ಲಿ ಹಲವು ಥಾರ್‌ಗಳು ಕಾಣಸಿಕ್ಕಿದವು. ನಿರುಪದ್ರವಿ ಪ್ರಾಣಿಗಳಾಗಿದ್ದು ಜನರ ಭೇಟಿ ಅಭ್ಯಾಸವಾಗಿದ್ದು ಮುಟ್ಟಲೂ ಸಾಧ್ಯವಾಗುತ್ತದೆ. ಬೆಟ್ಟದ ಸ್ವಲ್ಪ ಭಾಗವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಿ ತುದಿಗೆ ತಲುಪಿದಾಗ ಆಗುವ ಆನಂದಕ್ಕೆ ಪಾರವೇ ಇಲ್ಲ. ಸುತ್ತಮುತ್ತಲ ಗಿರಿ ಶಿಖರಗಳಲ್ಲಿ ಎಲ್ಲಿ ನೋಡಿದರಲ್ಲಿ ಚಹಾ ತೋಟವೇ ಕಾಣಿಸುತ್ತದೆ. ಒಪ್ಪ ಓರಣವಾಗಿ, ಸಮಾನಾಂತರ ಎತ್ತರವಿರುವ ಚಹಾಗಿಡಗಳಿಂದ ಬೆಟ್ಟಗಳೆಲ್ಲ ಸಿಂಗರಿಸಿಕೊಂಡಂತೆ ಕಾಣುತ್ತವೆ. ಈ ರಮಣೀಯ ದೃಶ್ಯವನ್ನು ವರ್ಣಿಸಲು ನನಗಂತೂ ಆಗದು.

ರಾಜಮಲೈ ’ಎರ್‍ವಿಕುಳಂ’ ರಾಷ್ಟ್ರೀಯ ಉದ್ಯಾನದ ಬಳಿಕ ನಮ್ಮ ಭೇಟಿ ಮಟ್ಟು ಪಟ್ಟಿ ಡ್ಯಾಂ ಮತ್ತು ಎಕೋ ಪಾಂಟ್. ಸುಂದರ ಪ್ರಕೃತಿ, ಗುಡ್ಡಬೆಟ್ಟಗಳು, ಎಲ್ಲಿ ನೋಡಿದರಲ್ಲಿ ಚಹಾ ತೋಟಗಳು, ಕಿರಿದಾದ ರಸ್ತೆ, ಅಪಾಯಕಾರಿ ತಿರುವುಗಳು, ತಂಪು ಹವೆ-ಒಟ್ಟಿನಲ್ಲಿ ಚೇತೋಹಾರಿಯಾಗಿತ್ತು. ಮಧ್ಯಾಹ್ನ ತುಸು ವಿಳಂಬವಾಗಿ ವಸತಿ ಗೃಹ ತಲುಪಿ ಭೋಜನ ಸ್ವೀಕರಿಸಿದೆವು.

ಅಪರಾಹ್ನ 3.30 ಕ್ಕೆ ಕೊಚ್ಚಿನ್‌ನತ್ತ ನಮ್ಮ ಪ್ರಯಾಣ ಆರಂಭವಾಯಿತು. ದಾರಿಯಲ್ಲಿ Sಠಿiಛಿes ಉಚಿಡಿಜeಟಿಗೆ ಭೇಟಿ ನೀಡಿ ಆಯುರ್ವೇದ ಗಿಡಮೂಲಿಕೆಗಳ ಪರಿಚಯ ಮಾಡಿಕೊಂಡೆವು. ಹೆಚ್ಚಿನವರು ವಿವಿಧ ಗಿಡಮೂಲಿಕಾ ಔಷಧಿ, ಎಣ್ಣೆ ಇತ್ಯಾದಿಗಳನ್ನು ಖರೀದಿಸಿ ಬ್ಯಾಗಿಗೆ ತುಂಬಿಕೊಂಡರು. ಸುಮಾರು 135 ಕಿ.ಮೀ. ದೂರ ಪ್ರಯಾಣಿಸಿ ಕೊಚ್ಚಿನ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಹೊಟೇಲ್ ’ಅಟ್ಲಾಸ್’ ತಲುಪಿ ಭೋಜನ ಸ್ವೀಕರಿಸಿ ವಿರಮಿಸಿದೆವು.

ಮೇ 29 ರ ಬೆಳಿಗ್ಗೆ ಉಪಾಹಾರ ಸ್ವೀಕರಿಸಿದ ನಾವು ಅದಿರಪಳ್ಳಿ ಡ್ಯಾಂ (ಈಗ ಬಾಹುಬಲಿ ಚಲನಚಿತ್ರ ಖ್ಯಾತಿ) ನೋಡಲು ತೆರಳಿದೆವು. ದಟ್ಟ ರಕ್ಷಿತಾರಣ್ಯದ ನಡುವೆ ಆ ಬೇಸಿಗೆಯಲ್ಲೂ ಧುಮುಕುವ ಜಲಪಾತ ನೋಡಿ, ಮಳೆಗಾಲದಲ್ಲಿ ಇದರ ಅಬ್ಬರವನ್ನು ನೆನೆದು ಬೆರಗಾದೆವು. ಅಲ್ಲಿಂದ ಹೊರಟ ನಾವು ಜಗದ್ಗುರು ಶಂಕರಾಚಾರ್ಯರ ಜನ್ಮ ಸ್ಥಾನದತ್ತ ಪ್ರಯಾಣಿಸಿದೆವು. ಮಧ್ಯಾಹ್ನ 12.30ಕ್ಕೆ ಕಾಲಡಿ ತಲುಪಿದೆವು.

ಕಾಲಡಿ ಆದಿಶಂಕರಾಚಾರ್ಯರು ಹುಟ್ಟಿದ ಊರು, ಪೂರ್ಣಾನದಿಯ ದಂಡೆಯ ಮೇಲಿರುವ ಕ್ಷೇತ್ರವಾಗಿದೆ. ನದಿಗೆ ಎದುರಾಗಿ ಎರಡು ಮಂದಿರಗಳಿವೆ. ಶಾರದಾದೇವಿ ಹಾಗೂ ಶಂಕರಾಚಾರ್ಯರ ಗುಡಿಗಳು. ಶಾರದಾದೇವಿ ಮಂದಿರಕ್ಕೆ ಸಮೀಪದಲ್ಲಿ ಶಂಕರರ ತಾಯಿಯ ಸಮಾಧಿ ಇದೆ. ಕಾಲಡಿ ಪ್ರಶಾಂತವಾದ ಸ್ಥಳವಾಗಿದ್ದು ನದಿದಡದ ಮೇಲೆ ಒಂದು ಮಠವಿದೆ. ಮಠದ ಸುತ್ತಲ ಗೋಡೆಗಳ ಮೇಲೆ ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆಯನ್ನು ತಿಳಿಸುವ ಅನೇಕ ಚಿತ್ರಗಳಿವೆ. ಕಾಲಡಿಯಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ ಶ್ರೀಕೃಷ್ಣನ ವಿಗ್ರಹವಿರುವ ಗುಡಿಯೂ ಇದೆ.

ಕಾಲಡಿಯಿಂದ ನೇರವಾಗಿ ನಾವು ಹೊಟೇಲ್ ’ಅಟ್ಲಾಸ್’ಗೆ ತೆರಳಿ ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದೆವು. ಬಳಿಕ ಸುಮಾರು 2.30 ರ ವೇಳೆಗೆ ಅಲ್ಲಿಂದ ಹೊರಟು ಕೊಚ್ಚಿನ್‌ನತ್ತ ಪ್ರಯಾಣಿಸಿದೆವು. ಕೊಚ್ಚಿನ್‌ನ ಬೃಹತ್ ಬಂದರನ್ನು ದೂರದಿಂದಲೇ ಕಣ್ತುಂಬಿಸಿಕೊಂಡು ಸಮುದ್ರದ ಹಿನ್ನೀರಿನಲ್ಲಿ ದೋಣಿ ವಿಹಾರ ಮತ್ತು ನಗರ ಸೌಂದರ್ಯ ವೀಕ್ಷಣೆಗೆ ಹೊರಟೆವು. ದಾರಿಯ ಇಕ್ಕೆಲಗಳಲ್ಲಿ ಸಿಗುವ ಮನೆಗಳು, ಚರ್ಚುಗಳು, ದೇವಾಲಯಗಳು, ಜನರ ಓಡಾಟಕ್ಕೆ ಉಪಯೋಗಿಸುವ ಚಿಕ್ಕ ಚಿಕ್ಕ ಖಾಸಗಿ ದೋಣಿಗಳು, ಅವುಗಳನ್ನು ನಡೆಸುವ ಮಕ್ಕಳು, ಹೆಂಗಸರು, ಮುದುಕರಾದಿಯಾಗಿ ಜನರ ಜೀವನ ಪದ್ಧತಿಯನ್ನು ನೋಡುತ್ತಾ ಸಾಗಿದೆವು. ನಮ್ಮ ದೋಣಿಯ ಮೇಲಂತಸ್ತಿನಲ್ಲಿಯೂ ಕುಳಿತು ವೀಕ್ಷಣೆಗೆ ಅವಕಾಶವಿದ್ದು ಇದೊಂದು ವಿಶೇಷ ಅನುಭವ. ದಾರಿ ಮಧ್ಯೆ ಒಂದೆಡೆ ದೋಣಿ ನಿಲ್ಲಿಸಿ ದೋಣಿಯಿಂದ ಇಳಿದು ಹತ್ತಿರದ ಚಿಕ್ಕ ಊರಿನ ಬೇಕರಿಯಲ್ಲಿ ಚಹಾ ಮತ್ತು ತಿನಿಸುಗಳನ್ನ ಸ್ವೀಕರಿಸಿದೆವು. ಅಲ್ಲಿಂದ ಪ್ರಯಾಣ ಮುಂದುವರಿಸಿ ಮತ್ತೆ ಹೊರಟಲ್ಲಿಗೆ ಹಿಂದಿರುಗಿದೆವು. ಈ ನಡುವೆ ದೋಣಿಯಲ್ಲೇ ವಿವಿಧ ವಿನೋದಾವಳಿಗಳನ್ನು ನಡೆಸಲಾಯಿತು. ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕವಾಗಿ ಫ್ಯಾಶನ್ ಶೋ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಯಿತು. ದೋಣಿಯಿಂದಿಳಿದು ಮರಳಿ ವಸತಿ ಗೃಹಕ್ಕೆ ತೆರಳಿ ರಾತ್ರಿಯ ಭೋಜನಕ್ಕೆ ತಯಾರಿ ನಡೆಸಿದೆವು. ಅಂದು ನಾವೆಲ್ಲರೂ ಒಟ್ಟಿಗಿರುವ ಕೊನೆಯ ದಿನವಾದುದರಿಂದ ವಿಶೇಷ ಮಾಂಸಾಹಾರಿ ಭೋಜನ ತಯಾರಿಸಲಾಗಿತ್ತು. ಕೋಳಿ ಮತ್ತು ಮೀನಿನ ಅಡುಗೆಯಲ್ಲಿ ನಮ್ಮ ಪ್ರವಾಸಿ ತಂಡದ ಹೆಂಗಸರು ಮತ್ತು ಗಂಡಸರು ಸೇರಿ ಅಡುಗೆ ತಯಾರಿಗೊಳಿಸಿದರು. ಈ ನಡುವೆ ಸಮಾರೋಪದ ಅಂಗವಾಗಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಸ್ಪರ್ಧೆಗಳಲ್ಲಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರವಾಸಿಗಳಲ್ಲಿ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಪ್ರವಾಸದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರು ಅಂದೇ ಮಂಗಳೂರಿನಿಂದ ಬಂದು ಪಾಲ್ಗೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರಾತ್ರಿ ಕೋಳಿ ಮೀನಿನ ಭರ್ಜರಿ ಭೋಜನ ಸವಿದು ಎಲ್ಲರೂ ರೂಮಿಗೆ ತೆರಳಿ ನಿದ್ದೆಗೆ ಶರಣಾದೆವು.

ಮೇ 30 ರಂದು ಪ್ರವಾಸದ ಕೊನೆಯ ದಿನ. ಬೆಳಗ್ಗಿನ ಉಪಹಾರ ಸ್ವೀಕರಿಸಿ ಅಲೆಪ್ಪಿ (Aluwaye)ಯತ್ತ ಹೊರಟೆವು. ಸುಮಾರು  90 ಕಿ.ಮೀ. ಕ್ರಮಿಸಿ ಬೆಳಿಗ್ಗೆ 10.30 ರ ಸುಮಾರಿಗೆ ಅಲೆಪ್ಪಿ ತಲುಪಿ ಹಿನ್ನೀರಿನ ದೋಣಿ ವಿಹಾರಕ್ಕೆ ಅಣಿಯಾದೆವು.

ಕೇರಳದಲ್ಲಿ ಆಚರಿಸಲಾಗುವ ಓಣಂ ಹಬ್ಬ ಭಾರತದಲ್ಲಿಯೇ ಪ್ರಸಿದ್ಧಿಯಾದ ವೈಶಿಷ್ಟ್ಯ ಪೂರ್ಣ ಹಬ್ಬ. ಆಗಸ್ಟ್ ಸಪ್ಟೆಂಬರ್‌ಗಳಲ್ಲಿ ನಾಲ್ಕು ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾಬಲಿಯನ್ನು (ನಮ್ಮ ಬಲಿಯೇಂದ್ರ) ಸ್ವಾಗತಿಸಲು ಆಚರಿಸುವ ಓಣಂ ಹಬ್ಬದ ಎರಡನೆಯ ದಿನ ತಿರು ಓಣಂ. ಅಂದು ಮಹಾಬಲಿ ತನ್ನ ಸಾಮ್ರಾಜ್ಯವನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಇದೆ. ಅವನನ್ನು ಸ್ವಾಗತಿಸಲು ಕೇರಳ ಎಚ್ಚೆತ್ತಿರುತ್ತದೆ. ಓಣಂ ಹಬ್ಬದ ಹೆಗ್ಗುರುತು ’ವಲ್ಲಂಕಾಳಿ’ ದೋಣಿ ಪಂದ್ಯ. ಇದನ್ನು ಅರಣ ಮೂಲ, ಅಲೆಪ್ಪಿ ಮತ್ತು ಕೊಟ್ಟಾಯಂಗಳಲ್ಲಿ ಕಾಣಬಹುದು. ಸಂಗೀತ ಗಾಯನಗಳ ನಡುವೆ ಹಾವಿನ ಮುಖವಿರುವ ದೋಣಿಗಳು ಓಡುವುದನ್ನು ನೋಡಲು ಎರಡು ಕಣ್ಣು ಸಾಲದು. ದೋಣಿಗಳಿಗೆ ರೇಷ್ಮೆ ಛತ್ರಿಗಳನ್ನು ಹಾಕುವುದೂ ಉಂಟು. ಈ ಎಲ್ಲಾ ವೈಭವಗಳನ್ನು ನಾವು ಟಿ.ವಿ. ಮಾಧ್ಯಮದಲ್ಲಷ್ಟೇ ನೋಡಿದ್ದು. ಇದೀಗ ಅದು ನಡೆಯುವ ನದಿ, ಆರಂಭಗೊಳ್ಳುವ ಮತ್ತು ಅಂತ್ಯಗೊಳ್ಳುವ ಸ್ಥಳಗಳು ಮತ್ತು ಹಾವು ದೋಣಿಯ ಮಾದರಿಯನ್ನು ನೋಡಿ ದೃಶ್ಯಗಳನ್ನು ಕಲ್ಪಿಸಿಕೊಂಡೆವು. ಇಲ್ಲಿಯ ಇನ್ನೊಂದು ಆಕರ್ಷಣೆ ದೋಣಿ ಮನೆಗಳು (ಹೌಸ್ ಬೋಟ್ಸ್). ಸಾಮಾನ್ಯದಿಂದ ಭಾರೀ ಗಾತ್ರದ ವರೇಗಿನ, ಜನಸಾಮಾನ್ಯರ ಮತ್ತು ಐಷಾರಾಮಿಗಳ ವಾಸಕ್ಕೆ (ಪ್ರವಾಸಿಗಳ) ಬೇಕಾದಂತೆ ವೈವಿಧ್ಯಮಯವಾಗಿ ನಿರ್ಮಾಣ ಗೊಳಿಸಲಾಗಿದೆ. ಜನರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವಿವಿಧ ದೋಣಿ ಮನೆಗಳಲ್ಲಿ ಅಥವಾ ದೋಣಿ ಬಂಗಲೆಗಳಲ್ಲಿ ಇದ್ದುಕೊಂಡು ನದಿಯಲ್ಲಿ ಪ್ರಯಾಣಿಸುತ್ತಾ ಪ್ರವಾಸದ ಮಜಾ ಅನುಭವಿಸುತ್ತಾರೆ. ನಾವೂ ಸೈಟ್ ಸೀಯಿಂಗ್ ಬೋಟೊಂದನ್ನು ಗೊತ್ತುಪಡಿಸಿ ನದಿ, ಸಮುದ್ರದ ಹಿನ್ನೀರುಗಳಲ್ಲಿ ಸಂಚರಿಸಿ ವಿವಿಧ ರೀತಿಯ ಹೌಸ್‌ಬೋಟುಗಳು ಇತರ ಸಂಚಾರಿ ದೋಣಿಗಳು (ಸಾರ್ವಜನಿಕ ಸಂಚಾರಿ ದೋಣಿಗಳು ಇವೆ, ನಮ್ಮ ಸಿಟಿ ಬಸ್‌ಗಳಂತೆ), ನದಿ ತೀರದ ಮನೆಗಳು, ಊರು, ಅಲ್ಲಿಯ ಜನ ಜೀವನ, ಗುಡಿ, ಮಂದಿರ, ಚರ್ಚ್, ಮಸೀದಿ, ದೇವಾಲಯಗಳು, ಅಂಗಡಿಗಳು, ಮಸಾಜ್ ಕೇಂದ್ರಗಳನ್ನೆಲ್ಲಾ ನೋಡುತ್ತಾ ಸಾಗಿ ಒಂದು ಹೊಸ ವಿಸ್ಮಯ ಲೋಕವನ್ನು ಕಂಡು ಮರಳಿ ಬಂದೆವು. ಸಮುದ್ರ ಮಟ್ಟದಿಂದ ತಗ್ಗಿನಲ್ಲಿರುವ ಕೃಷಿ ಗದ್ದೆಗಳನ್ನು ಕಂಡು ಅಚ್ಚರಿಪಟ್ಟೆವು.

ದೋಣಿಯಿಂದಿಳಿದ ನಾವು ಕೇರಳದ ಪಾರಂಪರಿಕ ಶೈಲಿಯ ಒಂದು ವಸತಿ ಗೃಹ ’ಪಡಿಪುರಂ’ನಲ್ಲಿ ನಮ್ಮ ಅಡುಗೆ ತಂಡ ತಯಾರಿಸಿ ತಂದಿದ್ದ ಭೋಜನವನ್ನು ಸವಿದೆವು. ಅಲ್ಲಿಂದ ಮರಳಿ ಕೊಚ್ಚಿನ್ ಕಡೆಗೆ ಪ್ರಯಾಣಿಸಿ ಸಾಯಂಕಾಲ 3.50ರ ವೇಳೆಗೆ ಕೊಚ್ಚಿನ್‌ನ ಲುಲುಮಾಲ್ (Lulu Mall)ನಲ್ಲಿ ಶಾಪಿಂಗ್‌ಗೆ ತೊಡಗಿದೆವು. ಕೆಲವರು ಖರೀದಿಗೆ ತೊಡಗಿದರೆ ಇನ್ನೂ ಕೆಲವರು ವಿವಿಧ ಮನೋರಂಜನಾ ಆಟಗಳಲ್ಲಿ ತೊಡಗಿದ್ದರು. ಏಷ್ಯಾದಲ್ಲೇ ಅತ್ಯಂತ ದೊಡ್ಡದೆಂಬ ಪ್ರತೀತಿ ಇರುವ ಇದನ್ನು ಸುತ್ತುವುದೇ ಒಂದು ಅಪೂರ್ವ ಅನುಭವ. ಎಲ್ಲಾ ನೋಡಿ, ಖರೀದಿ ಮಾಡಿ ಸಂಜೆ 6.30 ಕ್ಕೆ ಲುಲುಮಾಲ್‌ನಿಂದ ಹೊರಬಿದ್ದೆವು. ಸಂಜೆಯ ಲಘು ಉಪಹಾರವನ್ನು ಸ್ವೀಕರಿಸಿ ನಮ್ಮ ವಸತಿ ಗೃಹದತ್ತ ಹೊರಟೆವು. ವಸತಿ ಗೃಹದಲ್ಲಿ ಸಾಮಾನು, ಸರಂಜಾಮುಗಳನ್ನೆಲ್ಲ ಪ್ಯಾಕ್ ಮಾಡಿ ಊರಿಗೆ ಹೊರಡುವ ತಯಾರಿ ನಡೆಸಿದೆವು. ರಾತ್ರಿ ಭೋಜನವನ್ನು ಸವಿದು ಅಡುಗೆಯವರನ್ನು ಬೀಳ್ಕೊಟ್ಟು ಎರ್ನಾಕುಲಂ ರೈಲು ನಿಲ್ದಾಣದತ್ತ ಪ್ರಯಾಣಿಸಿದೆವು. ಅನಿರೀಕ್ಷಿತ ಜೋರು ಮಳೆ ನಮ್ಮನ್ನು ಬೀಳ್ಕೊಳ್ಳಲು ಅಳುತ್ತಿರುವಂತಿತ್ತು.

ಸುಮಾರು 11.40 ವೇಳೆಗೆ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟು ನಿಗದಿತ ಆಸನ (Berth) ಪಡೆದು ನಿದ್ದೆಗೆ ಜಾರಿದೆವು. ಮರುದಿನ ಬೆಳಿಗ್ಗೆ 8.15ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಿದ ರೈಲಿನಿಂದ ಇಳಿದು ಭಾರವಾದ ಮನಸ್ಸು ಮತ್ತು ಸಾಮಾನು ಸರಂಜಾಮಗಳೊಂದಿಗೆ ನಮ್ಮ ನಮ್ಮ ಮನೆಗಳತ್ತ ತೆರಳಿದೆವು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!