ಚಿಂತಕರೊಬ್ಬರ ಆಶಯವಿದೆ, ಸಾಧ್ಯವಾದಷ್ಟು ಓಡು, ಓಡಲು ಸಾದ್ಯವಾಗದೇ ಹೋದರೆ ನಡಿ, ನಡೆಯಲು ಆಗದೇ ಇದ್ದರೆ ತೆವಳಿಕೊಂಡಾದರೂ ಸಾಗು, ಆದರೆ ನಿಲ್ಲಬೇಡ ಎಲ್ಲೂ, ಹೌದು ಹರಿಯುವ ನದಿಯಾಗಲಿ, ಬೆಳೆಯುವ ಸಿರಿಯಾಗಲಿ ನಡೆಯುವ ಮನುಜನೇ ಆಗಲಿ ಎಲ್ಲಿ ತನ್ನ ನಡಿಗೆಯನ್ನು ನಿಲ್ಲಿಸುತ್ತವೆಯೋ ಅಲ್ಲಿ ಜಡತ್ವ ಅಡರಿಕೊಳ್ಳುತ್ತದೆ. ಎಲ್ಲಿಯವರೆಗೆ ನದಿಗೆ ಕ್ರಿಯಾಶೀಲ ಹರಿವು ಇರುತ್ತದೋ, ಎಲ್ಲಿ ಬೆಳೆಯುವ ಸಿರಿಯಲ್ಲಿ ಸೂರ್ಯ ರಶ್ಮಿಯತ್ತ ಮುಖ ಮಾಡುವ ಚಿಂತನೆ ಇರುತ್ತದೋ, ಎಲ್ಲಿಯವರೆಗೆ ಮನುಜನಲ್ಲಿ ದುಡಿಯುವ ಸಕ್ರೀಯವಾಗುವ ಹಂಬಲವಿರುತ್ತದೋ ಅಲ್ಲಿಯ ತನಕ ಆತ ತನ್ನ ಬೆಲೆಯನ್ನು ಉಳಿಸಿಕೊಳ್ಳುತ್ತಾನೆ. ಇಲ್ಲವಾದರೆ ಚಲಾವಣೆ ಇಲ್ಲದ ಹೆಣದಂತಾಗುತ್ತಾನೆ. ಮೌಲ್ಯ ಇದ್ದರೂ, ಬೆಲೆ ಇಲ್ಲದಂತಾಗುತ್ತದೆ.
ಆದರೆ ಯುವವಾಹಿನಿ ಇದಕ್ಕೆ ಹೊರತಾಗಿದೆ. ಇದು ಮೌಢ್ಯ, ಸಾಮಾಜಿಕ ಪಿಡುಗು, ಬಡತನ, ಅನಕ್ಷರತೆಯನ್ನು ಹೊಡೆದುರಳಿಸಲು ಹೋರಾಡುವ ಸೇನಾನಿಗಳ ಪಡೆ. ಇಲ್ಲಿ ನಮಗೆ ವಿಶ್ರಾಂತಿ ಎನ್ನುವುದು ಇಲ್ಲ, ವಿಶ್ರಾಂತಿ ಬಯಸಿದರೆ ವೈರಿ ವಿಜೃಂಭಿಸುತ್ತಾನೆ, ಗುರಿಯಿಂದ ದೃಷ್ಟಿ ತಪ್ಪಿಸಿದರೆ ಶತ್ರು ಮುನ್ನುಗುತ್ತಾನೆ, ಆಗದು ಎಂದರೆ ಹಿಂದಿರುಗಿದರೆ ಗೆಲುವನ್ನು ಬಲಿಕೊಟ್ಟಂತೆ ಸರಿ. ಹಾಗಾಗಿ ಯುವವಾಹಿನಿಯ ಘಟಕದ ಸಾಮಾನ್ಯ ಸದಸ್ಯನಿಂದ ಕೇಂದ್ರ ಸಮಿತಿಯ ಪದಾಧಿಕಾರಿಗಳ ವರೆಗೂ ಎಲ್ಲರದ್ದೂ ಬಿಡುವಿಲ್ಲದ ಫುಲ್ ಟೈಮ್ ದುಡಿಮೆ. ನಮ್ಮ ದುಡಿಮೆಯಲ್ಲಿ ನಮಗೆ ಸಂಬಳ ಇಲ್ಲ, ರಜೆ ಇಲ್ಲ, ಸಮಯದ ಗಡಿ ರೇಖೆ ಇಲ್ಲ, ಇರುವುದೊಂದೇ ಉದಾತ್ತ ಚಿಂತನೆ. ಅದು ನಮ್ಮ ಕಾರ್ಯಕರ್ತರಲ್ಲಿದೆ ಎನ್ನುವುದನ್ನು ನಾ ಎರಡು ವರುಷದಲ್ಲಿ ಅರ್ಥೈಸಿಕೊಂಡಿದ್ದೇನೆ. ಕಳೆದ ವರುಷದ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಈ ವರುಷ ಯುವಸಿಂಚನ ಪತ್ರಿಕೆ ಸಂಪಾದಕನಾಗಿ ಘಟಕ ಘಟಕಗಳ ಒಳ ಹೊರ ಚಿತ್ರಣವನ್ನು ತಿಳಿದುಕೊಂಡಿದ್ದೇನೆ. ಎಲ್ಲರದ್ದೂ ಸಂತೃಪ್ತ ದುಡಿಮೆ. ಯಾಕೆ ಮಾಡಬೇಕು?, ನನಗೇನು ಸಿಗುತ್ತದೆ? ಎಲ್ಲವನ್ನೂ ನಾನೇ ಮಾಡಬೇಕೆ? ಇಂತಹ ಯಾವೊಂದು ಉದ್ಗಾರವೂ ಇಲ್ಲದೆ ನಮ್ಮದು ಎನ್ನುವ ಸತ್‍ಚಿಂತನೆಯಿಂದ 34 ಘಟಕಗಳೂ ದುಡಿಯುತ್ತಿರುವ ಕಾರಣದಿಂದ ಯುವ ಸಿಂಚನ ದಿನೇ ದಿನೇ ತನ್ನ ಗಾತ್ರವನ್ನು ಹಿಗ್ಗಿಸುತ್ತಿದೆ.
ಒಮ್ಮೆ ದೇವರಲ್ಲಿಗೆ ಹೋಗುವ ವಿಚಾರವಾಗಿ ದಾಸರುಗಳ ನಡುವೆ ತೀವ್ರ ಚರ್ಚೆ ನಡೆಯುತ್ತಿದ್ದಂತೆ, ಯಾರು ದೇವರ ಬಳಿ ಹೋಗುತ್ತೀರಿ ಎನ್ನುವ ಪ್ರಶ್ನೆ ಎದುರಾಯಿತು. ಆಗ ಅಲ್ಲಿದ್ದ ಕನಕದಾಸರು ಹೇಳಿದರಂತೆ ನಮ್ಮೊಳಗೆ `ನಾನು’ ಹೋದರೆ ಹೋದೇನು ಎಂದು. ಎಲ್ಲರೂ ಸಿಡಿಮಿಡಿಗೊಂಡರು. ಆದರೆ ಅದರ ಒಳಾರ್ಥ ಇದ್ದದ್ದು ನಮ್ಮೊಳಗೆ ನಾನು ಎನ್ನುವ ಅಹಂಕಾರ ಇದ್ದು ಅದು ಹೋದರೆ ಎಲ್ಲರೂ ಹೊಗಬಹುದೆಂದು. ಇಂದು ನಾವೂ ನಾನು ನನ್ನಿಂದ ಎನ್ನುವ ಅಹಂಕಾರದ ಪೊರೆಯನ್ನು ಕಳಚಿಕೊಂಡು ದುಡಿಯಬೇಕಾಗಿದೆ. ಇಂದು ಸಿಕ್ಕ ಅವಕಾಶ ನನ್ನದು ಅದು ನಿನ್ನೆ ಇನ್ನಾರದ್ದೋ ಬಳಿ ಇತ್ತು ಇಂದು ನನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ, ಹಾಗಿರುವಾಗ ನಾವೆಲ್ಲಾ ನನ್ನಿಂದ…. ನನ್ನಿಂದ….. ಎಂದುಕೊಂಡರೇ ಸಮಾಜದಲ್ಲಿ ಹೆಸರಿದ್ದು ಅಸ್ಥಿತ್ವವೇ ಇಲ್ಲದ ಸಂಘಟನೆಗಳಂತಾಗಬಹುದು ನಮ್ಮ ಯುವವಾಹಿನಿ. ಇಂದು ಯುವವಾಹಿನಿ ಎಲ್ಲರಲ್ಲೂ ಅಮರ ಚೇತನದಂತೆ ಇದೆ ಎಂದಾದರೆ ಅದಕ್ಕೆಮುಖ್ಯ ಕಾರಣ ನಮ್ಮಲ್ಲಿರುವ `ನಾವು’ ಅದನ್ನು ಮುಂದೆಯೂ ಉಳಿಸೋಣ.
ಇಂದು ನನ್ನ ಕೈಯಲಿದ್ದ ಯುವ ಸಿಂಚನ ನಾಳೆ ಇನ್ನೊಬ್ಬರ ಕೈಗೆ ಸೇರಬಹುದು. ಅತ್ತಿತ್ತ ಉರುಳುವಷ್ಟರಲ್ಲಿ ನನ್ನ ಅವಧಿ ಮುಗಿದಿದೆ. ಹೇಗಾಯಿತು? ಏನಾಯಿತು? ಎನ್ನುವುದನ್ನು ಯೋಚಿಸಲೂ ಅವಕಾಶ ಇಲ್ಲದಷ್ಟು ವೇಗವಾಗಿ ಸಮಯ ಕಳೆದಿದೆ. ಈ ಅವಧಿಯಲ್ಲಿ ಅಪೂರ್ವವಾದ ಸಂಚಿಕೆಗಳನ್ನು ನಿಮ್ಮ ಕೈಗಿತ್ತಿದ್ದೇನೆ. ಅದೆಷ್ಟೋ ಮಂದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಅದೆಲ್ಲವೂ ನಿಮಗೆ ಸಮರ್ಪಿತ. ಏಕೆಂದರೆ ನಮಗೆ ಬೇಕಾಗಿರುವ ಎಲ್ಲಾ ವಿಷಯ, ವಿಚಾರ, ಸುದ್ದಿಗಳನ್ನು ನೀಡಿದವರು ನೀವು, ಜೋಡಿಸಿ ಮುದ್ರಿಸಿದವರು ದಿನಕರ್ ಅದನ್ನು ಕಲೆ ಹಾಕಿ ಹೊಸ ರೂಪ ನೀಡುವ ಕೆಲಸ ನಾನು ಮಾಡಿದ್ದೇನೆ. ಹಾಗಾಗಿ ಮೆಚ್ಚುಗೆಳೆಲ್ಲವೂ ಯುವವಾಹಿನಿಯ ಪ್ರತಿಯೊಬ್ಬ ಸದಸ್ಯನಿಗೂ ಸಲ್ಲಬೇಕು. ಮಗು ನಡೆಯುವಾಗ ಮೆಟ್ಟಿಲನ್ನು ಎಡವಿ ಬಿದ್ದರೆ ಮೆಟ್ಟಿಲಿಗೆ ಬೈಯ್ಯಬೇಡಿ ಮಗುವಿಗೆ ತಿಳಿಹೇಳಿ ನಾಳೆ ಅದು ಮೆಟ್ಟಿಲ ಬಳಿ ಬರುವಾಗ ಅದನ್ನು ದಾಟಿಕೊಳ್ಳುತ್ತದೆ, ಅತೆಂಯೇ ನಮ್ಮವರೂ ತಪ್ಪಿದರೆ ಅಮ್ಮನಂತೆ ತಿದ್ದಿ, ಗುರುವಿನಂತೆ ದಾರಿ ತೋರಿ. ಆಗ ನಮ್ಮ ಉದ್ದೇಶದ ಗುರಿಯನ್ನು ಬಲು ಬೇಗನೇ ತಲುಪಲು ಸಾಧ್ಯ.
ಯುವಸಿಂಚನದ ಎಲ್ಲಾ ಕೆಲಸಕಾರ್ಯದ ಹಿಂದೆ ಸಹಕಾರ ನೀಡುತ್ತಿರುವ ಸಂಪಾದಕೀಯ ಮಂಡಳಿ ಸದಸ್ಯರು, ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು, ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿಯವರಿಗೆ ಮನದಾಳದ ವಂದನೆಗಳು.
ಸುದ್ದಿ ನದಿಯಂತೆ ಹರಿದು ಬರುತ್ತಿದ್ದ ಕಾರಣ ದಿನೇ ದಿನೇ ಪುಟಗಳ ಸಂಖ್ಯೆ ಹೆಚ್ಚಳ ಮಾಡುತ್ತಾ ಇಂದು ಈ ಹಂತಕ್ಕೆ ಯುವಸಿಂಚನ ನಿಂತಿದೆ, ಇನ್ನಷ್ಟು ಉಳಿದು ಹೋದರೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುವ ಅದಕ್ಕೆ ಬೇಜಾರು ಬೇಡ. ನಾವೆಲ್ಲ ಒಂದೇ ದೋಣಿಯ ಪಯಣಿಗರು, ಇಂದು ಸೂರ್ಯ ಮುಳುಗಿದರೇನಂತೆ ಮತ್ತೆ ನಾಳೆ ಸೂರ್ಯೋದಯ ಇದೆಯಲ್ಲವೇ? ನಾಳಿನ ದಿನವನ್ನೂ ಹೊಸತನದಿಂದ ಕಳೆಯೋಣ ಎನ್ನುವುದು ನನ್ನ ಆಶಯ.
—ರಾಜೇಶ್ ಸುವರ್ಣ