ಯಡ್ತಾಡಿ: ಸಮಾಜದಲ್ಲಿ ಸಂಘಟನೆಗಳ ಅರ್ಥಪೂರ್ಣ ಕಾರ್ಯಗಳ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ. ಈ ದಿಸೆಯಲ್ಲಿ ಯುವವಾಹಿನಿಯು ಮುಖ್ಯ ಧ್ಯೇಯಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ್ ಪೂಜಾರಿ ಹೇಳಿದರು. ಅವರು ಯುವವಾಹಿನಿ (ರಿ) ಯಡ್ತಾಡಿ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನರೇಂದ್ರ ಕುಮಾರ ಕೋಟ, ಅಂತರಾಷ್ಟ್ರೀಯ ಕ್ರೀಡಾಪಟು ಸುರೇಶ ಪೂಜಾರಿ ಸಾಸ್ತನ, ಅಮೃತ್ ಸಮ್ಮಾನ ಗೌರವ ಭಾಜನರಾದ ಅಶೋಕ ಸಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ. ಕೆ. ಪೂಜಾರಿ ಪ್ರತಿಜ್ಞಾವಿಧಿ ಬೋಧಿಸಿದರು.
ಯುವವಾಹಿನಿ ಯಡ್ತಾಡಿ ಘಟಕದ ಸ್ಥಾಪಕ ಕಾರ್ಯದರ್ಶಿ ದಿ.ವೈ.ಕೃಷ್ಣ ಪೂಜಾರಿ ದತ್ತಿನಿಧಿ ಪುರಸ್ಕಾರವನ್ನು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಡ್ತಾಡಿ ಘಟಕದ ಅಧ್ಯಕ್ಷರಾದ ರಮೇಶ ಪೂಜಾರಿ ವಹಿಸಿಕೊಂಡಿದ್ದರು.
ನಿಯೋಜಿತ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಬಾರಕೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಜಿತ್ ಕುಮಾರ್ ವಾರ್ಷಿಕ ವರದಿ ಮಂಡಿಸಿ, ಮಾಜಿ ಅಧ್ಯಕ್ಷರಾದ ಶಂಕರ ಪೂಜಾರಿ ಪ್ರಸ್ತಾವನೆಗೈದರು, ಸಮೀಕ್ಷಾ ಪ್ರಾರ್ಥನೆ ಮಾಡಿದರು, ಮಂಜುನಾಥ ಪೂಜಾರಿ ಸ್ವಾಗತಿಸಿ, ಪ್ರತಿಮಾ ರಮೇಶ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಶರತ ಕುಮಾರ್ ವಂದಿಸಿದರು.