ಸದಾ ಹಸನ್ಮುಖಿ, ಕ್ರಿಯಾ ಶೀಲ ನಡಿಗೆ, ಮೆಲು ಮಾತು, ಹಿತವಾದ ನುಡಿ, ಬಿಳಿ ಪಂಚೆ, ಬಿಳಿ ಅಂಗಿ ಇವಷ್ಟೇ ಅವರ ಆಸ್ತಿ. ಆದರೆ ಸಾಹಿತ್ಯದಲ್ಲಿ ಅವರದ್ದು ದೈತ್ಯ ಪ್ರತಿಭೆ.
ತಿಮ್ಮಪ್ಪ ಪೂಜಾರಿಯವರು ಮೂಲತಃ ಜೆಪ್ಪಿನಮೊಗರು ನಿವಾಸಿ. ಈ ನಾಡು ಕಂಡ ಅಪರೂಪದ ಸಾಹಿತಿ, ತುಳು ಭಾಷೆಯಲ್ಲಿ ಎರಡು ಕೃತಿಗಳನ್ನು ಪ್ರಕಟಿಸಿದ್ದು ಇನ್ನೆರಡು ಕೃತಿಗಳನ್ನು ಪ್ರಕಟಣೆಗೆ ಸಿದ್ಧ ಪಡಿಸಿರುವ ತಿಮ್ಮಪ್ಪ ಪೂಜಾರಿಯವರು ತುಳು ಭಾಷೆಯಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿದ್ದಾರೆ. ಗ್ರಾಮ್ಯವಾದ ಮತ್ತು ಅಷ್ಟೇ ಸರಳವಾದ ಭಾಷಾ ಪ್ರಯೋಗದ ಮೂಲಕ ಕೃತಿ ರಚಿಸುವ ಮೂಲಕ ಸಾಮಾನ್ಯರೂ ಕೂಡಾ ತುಳುವನ್ನು ಪ್ರೀತಿಸುವಂತೆ ಮಾಡಿದ ಹಿರಿಮೆ ಇವರದ್ದು.ಆಂಗ್ಲಭಾಷೆಯಲ್ಲಿ ಪ್ರಸಿದ್ಧಿಯಾದ ಸಾಕಷ್ಟು ಕೃತಿಗಳನ್ನು ಇವರು ತುಳುವಿಗೆ ಅನುವಾದಿಸಿಕೊಂಡಿದ್ದಾರೆ. ಕನ್ನಡದಲ್ಲಿಯೂ ಪ್ರಬುದ್ಧ ಲೇಖನಗಳನ್ನು ಬರೆಯುತ್ತಿದ್ದಾರೆ. ಪ್ರಚಾರವನ್ನೇ ಬಯಸದೇ ಬರಹವನ್ನು ಪ್ರೀತಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬಂದಿರುವ ಇವರು ತನ್ನ ಕೆಲಸ ಸಾಧನೆ ಎಂದು ಅಂದುಕೊಂಡವರೇ ಅಲ್ಲ. ಶ್ವೇತ ವಸ್ತ್ರ ಧರಿಸಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇವರು ತನ್ನನ್ನು ಹೆಚ್ಚು ಪ್ರಚಾರಕ್ಕೆ ಒಗ್ಗಿಸಿಕೊಂಡವರೇ ಅಲ್ಲ. ‘ಗಾದೆದ ಅಡಿಟ್ ದೆಂಗ್ದಿ ಕಥೆಕುಲು’ ಮತ್ತು ‘ಕೂಕುಲು’ ಎನ್ನುವ ಎರಡು ಪುಸ್ತುಕ ತಿಮ್ಮಪ್ಪ ಪೂಜಾರಿಯವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿದ್ದವು. ಇದಲ್ಲದೆ ಇವರು ಬರೆದಿರುವ ‘ಅಮರ್ ಬೊಳ್ಳಿಲು’ ಎನ್ನುವ ರೂಪಕ ಬೇರೆ ಬೇರೆ ಕಲಾತಂಡಗಳ ಮೂಲಕ 60 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.ಆಕಾಶವಾಣಿಗಾಗಿ ಹಲವಾರು ಕಥೆ, ಕವನ, ನಾಟಕ ರಚಿಸಿರುವ ಶ್ರೀಯತರು. ಪಾಡ್ದನ ಸಂಗ್ರಹದಲ್ಲೂ ಹೆಸರು ಮಾಡಿದವರು.ತುಳು ಸಾಹಿತ್ಯ ಸೇವೆ ಮಾಡುತ್ತಿರುವ ‘ಕುರಲ್ ಇಷ್ಟೆರ್ ಕುಡ್ಲ’ ಇದರ ಸದಸ್ಯರಾಗಿ, ಅಧ್ಯಕ್ಷರಾಗಿ ದುಡಿದಿರುವ ಇವರು ತುಳು ಕೂಟ ಕುಡ್ಲ ಇದರ ಸಕ್ರಿಯ ಸದಸ್ಯರು. ಅಲ್ಲದೆ ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಪ್ರಕಾರದಲ್ಲಿ ಮೂಲ ತುಳು ಭಾಷೆಯನ್ನು ಬಳಸಿಕೊಂಡು ಭಾಷಾ ಉಳಿವಿಗಾಗಿಯೂ ಕೆಲಸ ಮಾಡುತ್ತಿರುವ ಶ್ರೀಯುತರು ತನ್ನ ಪ್ರತಿಭೆಯ ಮೂಲಕ ಹಣ ಮಾಡ ಬೇಕು ಎಂದು ಬಯಸಿದವರಲ್ಲ, ದೇವರಿತ್ತ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಣೆ ಎನ್ನುವ ಧ್ಯೇಯವನ್ನು ಹೊಂದಿರುವ ಶ್ರೀಯುತರು ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಜಪ್ಪಿನಮೊಗರು ಇಲ್ಲಿ ನಿತ್ಯ ಸೇವೆಯ ಅರ್ಚಕ ರಾಗಿರುವ ತಿಮ್ಮಪ್ಪ ಪೂಜಾರಿ ಇವರು ಅದರ ಕಾರ್ಯಕಾರೀ ಸಮಿತಿ ಸದಸ್ಯರು. ಅಲ್ಲದೆ ಅಪಾರ ದೈವ ಭಕ್ತಿಯನ್ನು ಹೊಂದಿರುವವರು. ಇವರ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿರುವ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ.
ಶ್ರೀಯುತರ ಸಾಹಿತ್ಯ ಪ್ರತಿಭೆ ಇನ್ನಷ್ಟು ಬೆಳಗಲಿ, ಅವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರ ಬರುವಂತಾಗಲಿ ಎಂದು ಆಶಿಸುತ್ತಾ ಯುವವಾಹಿನಿಯು ಅವರ ಜೀವಮಾನದ ಸಾಧನೆ ಯನ್ನು ಗುರುತಿಸಿ, ತನ್ನ 27 ನೇ ವಾರ್ಷಿಕ ಸಮಾವೇಶದಂದು ‘ಸಾಧನ ಶ್ರೇಷ್ಠ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.