ಕೊಣಾಜೆ : ಪ್ರಸ್ತುತ ಕಾಲದಲ್ಲಿ ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರು ಆಗಬೇಕೆಂದು ಬಯಸುವವರೇ ಹೆಚ್ಚು. ಆದರೆ ಶಿಕ್ಷಕರಾಗಬೇಕೆನ್ನುವವರು ಬಹಳ ಕಡಿಮೆ. ಎಲ್ಲಾ ವೃತ್ತಿಯ ಮೂಲ ಬೇರು ಆಗಿರುವ ಶಿಕ್ಷಕ ವೃತ್ತಿಯೇ ಅತ್ಯಂತ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ವೃತ್ತಿಯ ಬಗ್ಗೆಯೂ ಹೆಚ್ಚು ಒಲವು ಅಗತ್ಯ ಎಂದು ನಿವೃತ್ತ ಶಿಕ್ಷಕರಾದ ಗಂಗಾಧರ ಪೂಜಾರಿ ಅವರು ಹೇಳಿದರು.
ಅವರು ಕೊಣಾಜೆ ಗ್ರಾಮ ಚಾವಡಿಯ ಯುವವಾಹಿನಿ (ರಿ) ಘಟಕದ ವತಿಯಿಂದ ಗುರುವಾರ 05-09-2024 ರಂದು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಯೇ ಮೊದಲ ಪಾಠ ಶಾಲೆ. ಹಿಂದೆ ಕೂಡು ಕುಟುಂಬದಲ್ಲಿ ಹಿರಿಯರಿಂದ ಕಿರಿಯರಿಗೆ ಜೀವನದ ಶಿಕ್ಷಣದ ಅನುಭವ ಸಿಗುತ್ತಿದ್ದು, ಆದರೆ ಇಂದು ವಿಭಕ್ತ ಕುಟುಂಬದಿಂದ ಇಂತಹ ಅನುಭವ ದೂರವಾಗಿದೆ. ಯಾವುದೇ ಗುರಿಯನ್ನು ತಲುಪಬೇಕಾದರೆ ಗುರುವಿನ ಮಾರ್ಗದರ್ಶನ ಅತೀ ಅಗತ್ಯ ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರು ರವೀಂದ್ರ ಬಂಗೇರ ಮುಖ್ಯ ಅತಿಥಿಯಾಗಿ ಮಾತನಾಡಿ, ಗುರುಗಳ ಮಾರ್ಗದರ್ಶನವಿಲ್ಲದೆ ನಾವು ಮುನ್ನಡೆಯಲು ಸಾಧ್ಯವಿಲ್ಲ. ಇಂತಹ ಗುರು ವೃತ್ತಿಯಲ್ಲಿರುವವರನ್ನು ಯುವವಾಹಿನಿ ಘಟಕವು ಗ್ರಾಮಚಾವಡಿಯಲ್ಲಿ ಅಭಿನಂದಿಸುವ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾಮಚಾವಡಿ ಯುವವಾಹಿನಿ ಘಟಕದ ಅಧ್ಯಕ್ಷರು ಹರೀಶ್ ಪೂಜಾರಿ ಯುವವಾಹಿನಿ ಘಟಕದ ವತಿಯಿಂದ ಶಿಕ್ಷಕರನ್ನು ಗೌರವಿಸಲಾಗಿದೆ. ಮುಂದಿನ ದಿನಗಳಲ್ಲಿ ಘಟಕದ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಸುವರ್ಣ , ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರು ನಾಗೇಶ್ ಅಮೀನ್ ಮುಲ್ಲಕಾಡು, ಸಮಾಜ ಸೇವಾ ನಿರ್ದೇಶಕಿ ಬಬಿತಾ ಯಾದವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಸುನೀತಾ, ಸುರೇಖಾ ಹರೀಶ್ ಪೂಜಾರಿ, ಅನಿತಾ ಜಯಂತ್, ಡಾ.ಸಂಜಿತ್ ಎಸ್ ಅಂಚನ್ , ಸೌಮ್ಯ, ದಯಾವತಿ, ರೋಹಿತ್ ಪೂಜಾರಿ, ಗುರುರಾಜ್ ಪರಂಡೆ, ಅವರನ್ನು ಯುವವಾಹಿನಿ ಗ್ರಾಮಚಾವಡಿ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಾಜ ಸೇವಾ ನಿರ್ದೇಶಕಿ ಬಬಿತಾ ಸ್ವಾಗತಿಸಿದರು.
ಸಂಘಟನಾ ಕಾರ್ಯದರ್ಶಿ ಸುರೇಶ್ ಪೂಜಾರಿ ವಂದಿಸಿದರು.
ಅಜಿತ್ ಹಾಗೂ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.