ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು

ವಿಶುಕುಮಾರ್ ಪ್ರಶಸ್ತಿ-2013 – ನವೀನ್ ಚಂದ್ರಪಾಲ್

ವಿಶುಕುಮಾರ್ ಪ್ರಶಸ್ತಿ-2013 – ನವೀನ್ ಚಂದ್ರಪಾಲ್

ಲೋಹಿಯಾ, ಜಯಪ್ರಕಾಶ ನಾರಾಯಣ್ ರಂತಹ ಪ್ರಬಲ ಸಮಾಜವಾದಿಗಳ ಚಿಂತನೆಯನ್ನು ದಟ್ಟವಾಗಿ ಮೈಗೂಡಿಸಿಕೊಂಡ – ಗಾಂಧಿ ಯುಗದ ಧೀಮಂತ ಪತ್ರಿಕೋದ್ಯಮಿ ‘ಸಂಗಾತಿ’ಯ ನವೀನ್‍ಚಂದ್ರಪಾಲ್ ತನ್ನ 86ರ ಹರೆಯದ – ಇಂದಿನ ದಿನಗಳ ಪರ್ಯಂತ ತನ್ನ ಸ್ವತಂತ್ರ ನಿಲುವನ್ನು ಅಚಲವಾಗಿ ಕಾಯ್ದುಕೊಂಡಿರುವ ಅಪರೂಪದ ವ್ಯಕ್ತಿತ್ವದವರು. ಮಹಾರಾಷ್ಟ್ರ, ಗುಜರಾತ್ ಮುಂತಾದೆಡೆ ರಾಷ್ಟ್ರಮಟ್ಟದ ಹಲವು ಆಂಗ್ಲ ಪತ್ರಿಕೆಗಳಲ್ಲಿ ದುಡಿದರೂ ‘ಸಂಗಾತಿ’ ಕನ್ನಡ ವಾರಪತ್ರಿಕೆಯನ್ನು ಅಪೂರ್ವ ರೀತಿಯಲ್ಲಿ ಸ್ವಾತಂತ್ರ್ಯೋತ್ತರ ದಿನಗಳಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಹೊರಡಿಸಿ ಜನತಂತ್ರವನ್ನು ಎತ್ತಿ ಹಿಡಿದ ಸಾಹಸಿಗರು.

ಸಿರಿ ಬೆಳೆಯ ಮೊಳಕೆ:
ಅವರು ಜನಿಸಿದ್ದು ಮಂಗಳೂರಿನ ಉರ್ವದಲ್ಲಿ ದಿನಾಂಕ 7-10-1927ರಂದು. ತಾಯಿ ಶಾರದಾ ಬಾಯಿ; ತಂದೆ ಮರ್ದ ಸಾಲಿಯಾನ್. ಬಾಲ್ಯದಿಂದಲೇ ರಾಷ್ಟ್ರೀಯತೆಯತ್ತ ಸೆಳೆತ. ಅವರಿಗೆ ಕನ್ನಡ ದೇಶ ಭಾಷಾಭಿಮಾನವನ್ನು ಹಚ್ಚಿದವರು ಎಲೋಶಿಯಸ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಪಂಡಿತ ಸೇಡಿಯಾಪು ಕೃಷ್ಣಭಟ್ಟರು. ಅವರ ನೈಜ ಜಾತ್ಯಾತೀತ ಧೋರಣೆ, ಗುಣಕ್ಕಷ್ಟೇ ಮೆಚ್ಚುವ ನಿಲುವು ನವೀನ್‍ಚಂದ್ರರ ಮೇಲೆ ದಟ್ಟ ಪ್ರಭಾವ ಬೀರಿತು. ಮುಂದೆ ಕಾಲೇಜಿನಲ್ಲಿ ಕನ್ನಡದ ಮತ್ತೋರ್ವ ದಿಗ್ಗಜ ಮುಳಿಯ ತಿಮ್ಮಪ್ಪಯ್ಯರ ಬೋಧನೆ.

ಪ್ರೌಢಶಾಲೆಯಲ್ಲಿ ನವೀನ್‍ಚಂದ್ರರೇ ಶಾಲಾ ಹಸ್ತ ಪತ್ರಿಕೆಯ ಸಂಪಾದಕ. ಕಾಲೇಜು ಅಧ್ಯಯನದ ವೇಳೆಗೆ ಸಾಹಿತ್ಯಾಭಿರುಚಿ ಮತ್ತಷ್ಟು ಮಾಗಿತು. ರಾಷ್ಟ್ರಾಭಿಮಾನ, ಸ್ವತಂತ್ರ ಅಭಿವ್ಯಕ್ತಿ ಬರವಣಿಗೆ ಮೊದಲಾಯಿತು.

‘ಸಂಗಾತಿ’ ಸಾರಥ್ಯ:
1947ರಲ್ಲಿ ರಾಷ್ಟ್ರ ಸ್ವತಂತ್ರಗೊಂಡಿತು. ಪ್ರಜಾರಾಜ್ಯ ಬಂದಿತು. ಆಗಷ್ಟೇ ಕಾಲೇಜು ಶಿಕ್ಷಣ ಮುಗಿಸಿ ಹೊರಬಂದ ನವೀನ್‍ಚಂದ್ರಪಾಲ್ 21ರ ಹರೆಯದ ಚಿಗುರು ಮೀಸೆಯ ತರುಣ. ಸ್ವಾತಂತ್ರ್ಯ ಪೂರ್ವದಲ್ಲಿ ದೊರೆಗಳನ್ನು ಓಲೈಸುತ್ತಿದ್ದ ಪತ್ರಿಕೆಗಳು ಸ್ವತಂತ್ರ ಭಾರತದಲ್ಲೂ ಪ್ರಜಾಪ್ರತಿನಿಧಿಗಳನ್ನು ಹಾಡಿ ಹೊಗಳುವುದನ್ನು ಕಂಡು ರೊಚ್ಚಿಗೆದ್ದು ಮೂಲತ: ಕಾಂಗ್ರೆಸಿಗರಾಗಿದ್ದ ಪಾಲ್ 1948ರಲ್ಲಿ ಮಂಗಳೂರಿನಲ್ಲಿ ‘ಸಂಗಾತಿ’ ವಾರಪತ್ರಿಕೆ ಹೊರಡಿಸಿದರು. ಅಧಿಕಾರಶಾಹಿ, ದರ್ಪ, ಪಕ್ಷಪಾತ, ಭೃಷ್ಟತೆಗಳ ವಿರುದ್ಧ ಸಾಮಾಜಿಕ ಜಾಗೃತಿಯ ಲೇಖನಗಳನ್ನು ನಿರ್ಭಿಡೆಯಾಗಿ ಬರೆದರು. ಪೇಟೆ, ಹಳ್ಳಿಗಳ ಮೂಲೆ ಮೂಲೆಗಳಿಗೆ ಸಂಚರಿಸಿ, ಜನಸಾಮಾನ್ಯರ ಆಶೋತ್ತರ, ಬೇಕು ಬೇಡಗಳ ಬಗ್ಗೆ ತಲಸ್ಪರ್ಶಿಯಾಗಿ ಅರಿತು ವರದಿ ಮಾಡಿದರು. ರಾಜಕಾರಣಿಗಳನ್ನು ಕುಟುಕುವ, ಎಚ್ಚರಿಸುವ ಅವರ ನೇರ ಹಾಗೂ ಫಲಾಪೇಕ್ಷೆ ರಹಿತ ಹರಿತ ಬರಹಗಳು ಸಮಾಜದಲ್ಲಿ ಸಂಚಲನ ಉಂಟು ಮಾಡಿದವು. ಸಮಾನ ಮನಸ್ಕ ಸಾಹಿತಿ, ಪ್ರತಿಭಾನ್ವಿತರನೇಕರು ಪಾಲ್‍ರೊಂದಿಗೆ ಕೈಜೋಡಿಸಿದರು, ಹೆಗಲಿಗೆ ಹೆಗಲಿತ್ತರು. ಮಹಾರಾಷ್ಟ್ರ ಮುಂತಾಗಿ ಹೊರನಾಡಿನಲ್ಲೂ ಬಾತ್ಮಿದಾರ, ಅಂಕಣಕಾರರು ಸೇರಿಕೊಂಡರು.

ವಿಶಿಷ್ಟ ದಾಖಲೆಗಳ ‘ಸಂಗಾತಿ’
ಮೊದಲು ಉರ್ವದ ಸ್ವಂತ ಮನೆಯಲ್ಲೇ ತಯಾರಾಗುತ್ತಿದ್ದ ‘ಸಂಗಾತಿ’ ಪತ್ರಿಕೆ 8 ಪುಟಗಳೊಂದಿಗೆ ಆ ಕಾಲದಲ್ಲೇ ಅತ್ಯಧಿಕ ಎಂದರೆ ಬೇರಾವ ದೊಡ್ಡ ಸ್ಥಳೀಯ ಪತ್ರಿಕೆಗಳಿಗಾಗದ 5000 ಪ್ರತಿಗಳ ಮುದ್ರಣವಾಗುತ್ತಿತ್ತು ಎಂದರೆ ಅದರ ಜನಪ್ರಿಯತೆಯ ಅರಿವಾದೀತು. ಮುದ್ರಿಸಿದ ಪತ್ರಿಕೆಯ ಪ್ರತಿಗಳನ್ನು ಸ್ಥಳೀಯವಾಗಿ ಏಕವ್ಯಕ್ತಿ ಸಾಹಸವೆಂಬಂತೆ ಪಾಲ್‍ರು ತಾನೇ ಸೈಕಲಿನಲ್ಲಿ ಹೊತ್ತೊಯ್ದು ಅಂಗಡಿ, ಬೀದಿ ಬೀದಿಗಳಿಗೆ ವಿತರಿಸುತ್ತಿದ್ದುದುಂಟು. ಇತರ ಊರುಗಳಿಗೆ ಸಾರಿಗೆ ವಾಹನ, ಅಂಚೆ ವ್ಯವಸ್ಥೆ ಬಳಸಲಾಗುತ್ತಿತ್ತು. ಗೆಳೆಯರ ನೆರವೂ ಇತ್ತು.

ಹೀಗೆ ಉರ್ವದ ಮನೆಯಿಂದ ಆರಂಭಗೊಂಡ ಪತ್ರಿಕೆ ಮುಂದಕ್ಕೆ ಬಂದರಿನ ಅಝೀಝುದ್ದೀನ್ ರಸ್ತೆಯಲ್ಲಿ ಕೇಂದ್ರ ಹೊಂದಿತು. ಬಳಿಕ ಶರವು ದೇವಸ್ಥಾನ ಬಳಿ ಸಿದ್ಧಾರ್ಥ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕಚೇರಿ ಹೊಂದಿತು. ಅನೇಕ ಉದಯೋನ್ಮುಖರು ‘ಸಂಗಾತಿ’ಗೆ ಬರೆಯತೊಡಗಿ ಪ್ರಬುದ್ಧರಾದರು. ಅಮ್ಮೆಂಬಳ ಬಾಳಪ್ಪ, ಮ. ರಾಜೀವ, ಸೇವ ನಮಿರಾಜ ಮಲ್ಲ, ವಿಶುಕುಮಾರ್, ಪೊಳಲಿ ಬಾಲಕೃಷ್ಣ ಶೆಟ್ಟಿ ಮುಂತಾದವರೂ ‘ಸಂಗಾತಿ’ಯ ಲೇಖಕ, ಅಂಕಣಕಾರರಾಗಿದ್ದರು. ಮುಂಬಯಿಯಂತಹ ಪ್ರದೇಶಗಳಿಂದ ಶಂಕರ ಹೆಜ್ಮಾಡಿ, ಸೋಮನಾಥ ಕರ್ಕೇರ, ಮೋಹನರಾವ್ ಮುಂತಾದವರು ವರದಿ, ಲೇಖನ ಕಳುಹಿಸುತ್ತಿದ್ದರು. ಮುಂಬಯಿಯ ಮತ್ತೋರ್ವ ಖ್ಯಾತ ಲೇಖಕ ಶಿಮುಂಜೆ ಪರಾರಿ ತಮ್ಮ ಪ್ರಥಮ ಕತೆ ಪ್ರಕಟವಾದುದು ‘ಸಂಗಾತಿ’ಯಲ್ಲಿ ಎಂಬುದನ್ನು ಹೆಮ್ಮೆಯಿಂದ ನೆನಪಿಸಿಕೊಂಡಿದ್ದಾರೆ. ಕನ್ನಡದೊಂದಿಗೆ ತುಳು ಭಾಷಾಭಿಮಾನ ದತ್ತಲೂ, ‘ಸಂಗಾತಿ’ಗಿದ್ದ ಕಾಳಜಿಯ ಉದಾಹರಣೆಯೆಂದರೆ ಕನ್ನಡ ಪತ್ರಿಕೆಯೊಂದು ತುಳು ಅಂಕಣ ಪ್ರಕಟಣೆ ಆರಂಭವಾದುದು ‘ಸಂಗಾತಿ’ಯಲ್ಲಿ. ಪ್ರತಿ ಸಂಚಿಕೆಯಲ್ಲಿ ‘ಕಲಿ ಗಂಗಸರ ಪರಡೆ, ತುಳು ಪಾತೆರ್ನೆನ್ ಬುಡಡೆ’ ಎಂಬ ನುಡಿಬಿಂದು ಪ್ರಕಟವಾಗುತ್ತಿತ್ತು ಎಂದು ಅಂದು ಪತ್ರಿಕೆಯನ್ನು ಓದುತ್ತಲಿದ್ದ ಆರ್.ಕೆ. ಬಂಗೇರ ನೆನಪಿಸುತ್ತಾರೆ.

ವಾಣಿಜ್ಯಪತಿಗಳು, ಧನಿಕರು, ರಾಜಕಾರಣಿಗಳು ನಡೆಸುವ ಶೋಷಣೆ, ನ್ಯಾಯಬಾಹಿರ ಕೃತ್ಯಗಳನ್ನು ‘ಸಂಗಾತಿ’ ನಿರ್ದಾಕ್ಷಿಣ್ಯವಾಗಿ ಬಯಲಿಗೆಳೆಯುತ್ತಿತ್ತು. ಮುಂಬಯಿಯಲ್ಲಿ ಅರುಣ್ ಶೌರಿ ಎಪ್ಪತ್ತರ ದಶಕದ ಬಳಿಕ ‘ತನಿಖಾ ಪತ್ರಿಕೋದ್ಯಮ’ ಎಂಬ ಪ್ರಕಾರವನ್ನು ಆವಿಷ್ಕಾರಗೊಳಿಸಿದರೆನ್ನಲಾಗುತ್ತಿದೆ. ಆದರೆ ವಾಸ್ತವವಾಗಿ ಅದಕ್ಕಿಂತಲೂ ಬಹಳ ಮೊದಲೇ ‘ಸಂಗಾತಿ’ ಪತ್ರಿಕೆ investigate journalism  ನ್ನು ಆರಂಭಿಸಿದ್ದುದು ದಾಖಲೆಯಾಗಿಲ್ಲ ಅಷ್ಟೇ.

ಲೋಹಿಯಾ ವಿಚಾರಧಾರೆಗೆ ತನ್ನನ್ನು ಸಮರ್ಪಿಸಿಕೊಂಡ ನವೀನ್‍ಚಂದ್ರಪಾಲ್ ಕಾಂಗ್ರೆಸ್ ಪಕ್ಷದಿಂದ ದೂರ ಸರಿದು ಪ್ರಜಾಸೋಷಲಿಸ್ಟರಾದರು; ಕರಾವಳಿಯಲ್ಲಿ ಬಹಳಷ್ಟು ಜನರ ಮನೆ ಮಾತಾದರು. 1957ರಲ್ಲಿ ತತ್ವ ಸಿದ್ಧಾಂತದ ಪ್ರಾಯೋಗಿಕತೆ ಗಾಗಿ ಚುನಾವಣೆಗೂ ನಿಂತರು. ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೆರಳೆಣಿಕೆಯ ಮತಗಳ ಅಂತರದಿಂದ ಸೋತರೂ ಸಮಾಜ ವಾದವನ್ನು ಕರಾವಳಿಯಲ್ಲಿ ಹರಡುವುದಕ್ಕೆ ಕಾರಣಕರ್ತರಾದರು.

ಮುಂಬಯಿಯ ದುಡಿಮೆ, ಉನ್ನತ ಶಿಕ್ಷಣ:
1948ರಿಂದ 1964ರ ವರೆಗೆ ‘ಸಂಗಾತಿ’ ನಿರಂತರ ಪ್ರಕಟವಾಗಿ ಮುಂದೆ ಆರ್ಥಿಕ ಸಂಕಷ್ಟದಿಂದ ನಿಂತಿತು. ನವೀನ್‍ಚಂದ್ರರು ಮುಂಬಯಿ ಸೇರಿದರು. Times express  ಮುಂತಾದ ಆಂಗ್ಲ ಪತ್ರಿಕೆಗಳಲ್ಲಿ ದುಡಿದರು. ಮುಂಬಯಿಯ ಸರಕಾರಿ ಲಾ ಕಾಲೇಜಿಗೆ ಸೇರಿ ಅಧ್ಯಯನ ಮಾಡಿದರು. ಭಾರತೀಯ ವಿದ್ಯಾಭವನವು ಪತ್ರಿಕೋದ್ಯಮ ಡಿಪ್ಲೊಮಾ ತರಗತಿ ಆರಂಭಿಸಿದಾಗ ಪ್ರಥಮ ತಂಡದ ವಿದ್ಯಾರ್ಥಿಯಾದರು. ಎರಡು ವರ್ಷಗಳ ಕೋರ್ಸನ್ನು 1966ರಲ್ಲಿ ಯಶಸ್ವಿಯಾಗಿ ಪೂರೈಸಿ ಚಿನ್ನದ ಪದಕದೊಂದಿಗೆ, ಕುಲಪತಿ ಮುನ್ಶಿಯವರ Best student of the year ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಬಾಬು ಜಗಜೀವನರಾಂ ಅವರ ಹಸ್ತದಿಂದ ಪಡೆದರು.

ಎಕ್ಸ್‍ಪ್ರೆಸ್ ಬಳಗದ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಬರೋಡಾದಲ್ಲಿ ತನ್ನ ಸಹಪಾಠಿ ಹಿರಿಯ ರಾಜಕೀಯ ನೇತಾರ ಜಾರ್ಜ್ ಫೆರ್ನಾಂಡಿಸ್ ಪತ್ರಿಕೆ ಹೊರಡಿಸಬೇಕೆಂದಾಗ ಅಲ್ಲಿಗೆ ಹೋಗಿ ‘ಇಟಿಟighಣ’ ಪತ್ರಿಕೆಯನ್ನು ಹೊರಡಿಸಿದವರೂ ಪಾಲ್‍ರವರೇ.

ಮರಳಿ ಮಣ್ಣಿಗೆ….
ಇಷ್ಟೆಲ್ಲ ಉನ್ನತಿಗೇರಿಯೂ, ಅವರಿಗೆ ‘ಸಂಗಾತಿ’ಯದೇ ಸೆಳೆತ. ಊರಿಗೆ ಬಂದು 1980ರಲ್ಲಿ ಮಂಗಳೂರಿನಿಂದ ಮತ್ತೆ ‘ಸಂಗಾತಿ’ ಪ್ರಕಟಣೆ ಆರಂಭಿಸಿ 8 ವರ್ಷ ನಡೆಸಿ, ನಿಲ್ಲಿಸಬೇಕಾಯಿತು. ಹೀಗೆ ಒಟ್ಟು 24 ವರ್ಷ ಕಾಲ ನಡೆಸಿದ ನೆಚ್ಚಿನ ‘ಸಂಗಾತಿ’ ಪತ್ರಿಕೆ ಅವರಿಗೆ ಆತ್ಮತೃಪ್ತಿಯನ್ನೂ, ಧನ್ಯತಾಭಾವವನ್ನೂ ನೀಡಿತು. ‘ಇಂಡಿಯನ್ ಎಕ್ಸ್‍ಪ್ರೆಸ್’ ಸಹಿತವಾಗಿ ಆರೇಳು ಇಂಗ್ಲೀಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರೂ ನನ್ನ ಪತ್ರಿಕಾ ಧರ್ಮದ ನಿರೂಪಣೆ ಸಾಧ್ಯವಾದುದು ‘ಸಂಗಾತಿ’ಯಿಂದ ಮಾತ್ರ ಎನ್ನುವುದು ಅವರ ಅಭಿಪ್ರಾಯ. ‘ಪತ್ರಿಕೋದ್ಯಮವಲ್ಲದೆ ಬೇರಾವ ವೃತ್ತಿಯನ್ನೂ ಕೈಗೊಳ್ಳಲಾರೆ’ ಎಂದು ಬಾಲ್ಯದಿಂದಲೂ ತಳೆದಿದ್ದ ದೃಢ ನಿಲುವನ್ನು ಅವರು ಮುಂದಿನ ಆರು ದಶಕಗಳ ಉದ್ದಕ್ಕೂ ಉಳಿಸಿಕೊಂಡರು.

ಮುಂಬಯಿಯ ಹಿರಿಯ ಕಲಾ ಸಾಹಿತ್ಯ ವಲಯದ ನೆಲೆ ಬಾಂದ್ರಾದ ಕಲಾನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಪಾಲ್ ಈಗ ಮಂಗಳೂರು ವಾಸ್‍ಲೇನ್‍ನಲ್ಲಿ ‘ಸಂಗಾತಿ’ ಎನ್ನುವ ಹೆಸರಿನದೇ ಮನೆಯಲ್ಲಿ ಸಂಸಾರ ದೊಂದಿಗೆ ವಿಶ್ರಾಂತ ಬದುಕಿನಲ್ಲಿರುವವರು. ಅವರ ಧರ್ಮಪತ್ನಿ ಹೇಮಾವತಿ ಪಾಲ್ ಮುಂಬಯಿಯ ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲರಾಗಿದ್ದುದಲ್ಲದೆ ಐದು ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಯಾಗಿದ್ದ ದಕ್ಷ ಮಹಿಳೆ. ಇಬ್ಬರು ಮಕ್ಕಳು. ಮಗಳು ಪ್ರೇರಣಾ ಸುರತ್ಕಲ್‍ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವೀಧರೆಯಾಗಿ ಈಗ ಪತಿ, ಮಕ್ಕಳೊಂದಿಗೆ ದಕ್ಷಿಣ ಆಫ್ರಿಕಾದಲ್ಲಿದ್ದರೆ, ಪುತ್ರ ಚಿರಾಯು ಮಂಗಳೂರಿನಲ್ಲಿ ಉದ್ಯೋಗಿ, ಸಂಸಾರಿ. ತಂದೆ, ತಾಯಿ ಮಗನ ಜೊತೆಯಲ್ಲಿದ್ದಾರೆ.

86ರ ವಯಸ್ಸಿನಲ್ಲೂ ಅಂದಿನದೇ ಸುಂದರ ಗೌರವರ್ಣ, ತೇಜಸ್ಸಿನೊಂದಿಗೆ ಲವಲವಿಕೆಯಿಂದಿರುವ ನವೀನ್‍ಚಂದ್ರಪಾಲ್ ಪ್ರಖರ ಚಿಂತನೆಯುಳ್ಳವರು. ಪತ್ರಿಕಾರಂಗದ ಬಗ್ಗೆ ಮಾತನಾಡುವಾಗ ಒಂದಷ್ಟು ವಿಷಾದದಿಂದ ‘ಅಂದು ಪತ್ರಿಕೋದ್ಯಮ ಅದೊಂದು ಮಿಶನ್ ಚಳುವಳಿ ಆಗಿತ್ತು. ಆದರೆ ಈಗ ಅದು ಉದ್ಯಮವಾಗಿದೆ. ಸ್ಥಾಪಿತ ಹಿತಾಸಕ್ತಿ, ಲಾಭ ಸಂಪಾದನೆಯ ದೃಷ್ಟಿಕೋನಕ್ಕೆ ಮೀಸಲಾಗಿದೆ’ ಎಂದು ಖೇದ ವ್ಯಕ್ತಪಡಿಸುತ್ತಾರೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುವ ‘Study circle ನಮ್ಮಲ್ಲಿ ಹುಟ್ಟಿಕೊಳ್ಳಬೇಕು’ ಎನ್ನುವ ಈ ಧೀಮಂತ ಪತ್ರಕರ್ತ ಇನ್ನಷ್ಟು ಕಾಲ ಆರೋಗ್ಯವಂತರಾಗಿ ಬಾಳಲಿ.

ಈ ಲೇಖನಕ್ಕೆ ಪೂರಕ ಮಾಹಿತಿಗಳನ್ನು 1996ರಲ್ಲಿ ಶ್ರೀ ಬಿ.ಎಸ್. ಕುರ್ಕಾಲರ ‘ಇದ್ದವರು-ಇರುವವರು’ (2007) ಸಂಕಲನದಲ್ಲಿ ಪ್ರಕಟಿತ ಪರಿಚಯ ಲೇಖನದಿಂದ ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗಿದೆ.

– ಮುದ್ದು ಮೂಡುಬೆಳ್ಳೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!