ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಹೀಗೆನ್ನುತ್ತಾರೆ ಬಲ್ಲವರು, ವಿದ್ಯೆ ಪಡೆದು ಸ್ವತಂತ್ರರಾದಾಗ ನಮ್ಮ ಬದುಕಿನ ನಡೆ ಜ್ಞಾನದ ಹಾದಿಯಾಗುತ್ತದೆ ಎಂದಿದ್ದಾರೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ಬಡತನದ ಬೇಗುದಿಯಲ್ಲಿ ಬೆಂದವರಿಗೆ ಅನ್ನ ನೀರು, ವಸ್ತ್ರ ವಸತಿ ಏನನ್ನು ನೀಡಿದರೂ ಅವೆಲ್ಲ ಕ್ಷಣಿಕ ಮಾತ್ರ ಮತ್ತೆ ನಾಳೆ ಹೊಸತಿಗೆ ಅವರು ಕೈ ಚಾಚುತ್ತಾರೆ ಆದರೆ ವಿದ್ಯೆ ಹಾಗಲ್ಲ ಅದು ಬತ್ತದ ಒಸರು. ವಿದ್ಯೆಯನ್ನು ಒಮ್ಮೆ ದಾನ ಮಾಡಿದರೆ ಅದು ಜೀವನ ಪರ್ಯಂತ ನಮ್ಮ ಜೊತೆಗಿರುತ್ತದೆ ಎನ್ನುವುದನ್ನು ಮನಗಂಡಿರುವ ಯುವವಾಹಿನಿ ಸಂಸ್ಥೆ ವಿದ್ಯೆಯನ್ನು ತನ್ನ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡು ಕಳೆದ ೧೯ ವರುಷಗಳಿಂದ ವಿದ್ಯೆಗೆ ಆರ್ಥಿಕ ನೆರವು, ಮಾಹಿತಿಯ ನೆರವು, ಬೌದ್ಧಿಕ ನೆರವು ಮುಂತಾದ ಕಾರ್ಯಕ್ರಮಗಳನ್ನು ವಿದ್ಯಾನಿಧಿಯ ಮೂಲಕ ಮಾಡುತ್ತಾ ಬಂದಿದೆ. ಇದಕ್ಕಾಗಿ ಯುವವಾಹಿನಿ ವಿದ್ಯಾ ನಿಧಿಯನ್ನು ಸ್ಥಾಪಿಸಿ ಸಮಾಜದ ದಾನಿಗಳನ್ನು ಸಂಪರ್ಕಿಸಿ ಬಡ ವಿದ್ಯಾರ್ಥಿಗಳ ಬದುಕಿಗೆ ಆಸರೆ ನೀಡಿ ಎಂದು ವಿನಂತಿಸಿ ಅವರಿಂದ ಒಂದಷ್ಟು ಮೊತ್ತವನ್ನು ಪಡೆದು ಅದನ್ನೇ ಒಟ್ಟುಗೂಡಿಸಿ ಬಂಡವಾಳ ಮಾಡಿ ವಿದ್ಯಾ ನಿಧಿಯನ್ನು ಮುಂದುವರಿಸುತ್ತಿದೆ. ದಾನ ನೀಡಿದವರಿಗೂ ನೋವಾಗಬಾರದು ಹಾಗೆಯೇ ಅದನ್ನು ಪಡೆಯುವವರೂ ಕೊರಗಬಾರದು, ನಮ್ಮ ಸೇವೆ ನಿಸ್ವಾರ್ಥವಾಗಿ ಅರ್ಹರಿಗೆ ತಲುಪ ಬೇಕು ಎನ್ನುವ ಕಾರಣಕ್ಕೆ ವಿದ್ಯಾನಿಧಿ ಸಮಿತಿ ಪ್ರತಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಅವರ ಮನೆ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಅವರು ವಿದ್ಯಾರ್ಥಿ ವೇತನ ಪಡೆಯಲು ಅರ್ಹರು ಎಣಿಸಿದರೆ ಮಾತ್ರ ವಿದ್ಯಾರ್ಥಿ ವೇತನ ವಿತರಿಸುವ ಕೆಲಸ ಮಾಡುತ್ತಿದೆ. ಮಾತ್ರವಲ್ಲದೆ ಇದರ ಜೊತೆ ನುರಿತ ಜ್ಞಾನಿಗಳಿಂದ ಪ್ರೇರಣಾ ಶಿಬಿರವನ್ನು ನಡೆಸುತ್ತಾ ಬಂದಿದೆ. ನಮ್ಮ ಕೆಲಸಕ್ಕೆ ಎಲ್ಲೂ ಸೋಲಾಗಿಲ್ಲ, ಅಪಸ್ವರದ ಮಾತುಗಳು ಬಂದಿಲ್ಲ, ಕೇಳಿದಾಗ ಇಲ್ಲ ಎಂದವರಿಲ್ಲ ಎನ್ನುವುದು ನಮ್ಮ ಕೆಲಸಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದೆ.
ಕಳೆದ ಹತ್ತೊಂಬತ್ತು ವರುಷದಿಂದ ನಡೆಯುತ್ತಾ ಬಂದಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮತ್ತು ಪ್ರೇರಣಾ ಶಿಬಿರ ಈ ವರುಷವೂ ಮುಂದುವರಿದಿದೆ. ದಿನಾಂಕ 31-7-2011 ರಂದು 2011-12 ನೇ ಸಾಲಿನ ಪ್ರಥಮ ಹಂತದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರೇರಣಾ ಶಿಬಿರವು ಯುವವಾಹಿನಿಯ ಕೇಂದ್ರ ಸಮಿತಿಯ ಕಚೇರಿಯಲ್ಲಿ ಜರಗಿತು.
ಅಂದು ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಬಿ.ಕೆ.ಸಂದೀಪ್, ಉದ್ಯಮಿ,ಕೂಳೂರು, ಡಾ|| ಹೃಷಿಕೇಶ್ ಅಮೀನ್ (ನೇತ್ರ ತಜ್ಞರು, ಮಂಗಳೂರು), ಶ್ರೀ ಶೇಖರ್ ಕೆ. ಕರ್ಕೇರ, ಉದ್ಯಮಿ ಪಡುಬಿದ್ರಿ, ಶ್ರೀ ವೈ ಸುಧೀರ್ ಕುಮಾರ್, ಉದ್ಯಮಿ ಪಡುಬಿದ್ರಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಗೋಪಾಲ ಸುವರ್ಣ, ಉದ್ಯಮಿ ಮಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸಿದರು. ತದ ನಂತರ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಶ್ರೀ.ಕೆ.ರಾಜೇಂದ್ರ ಭಟ್ (ರಾಷ್ಟ್ರೀಯ ತರಬೇತುದಾರರು, ಜೇಸೀ ಸಂಸ್ಥೆ) ಇವರು ನಡೆಸಿಕೊಟ್ಟರು.
ಎರಡನೇ ಹಂತದ ಕಾರ್ಯಕ್ರಮವು 25-12-2011 ರಂದು ಶ್ರೀ ರವಿ ಕುಮಾರ್ ಮಜಲು ಉದ್ಯಮಿ ಮಂಗಳೂರು, ಶ್ರೀ ಪಾರ್ಶ್ವನಾಥ್ (ಉಪನಿರ್ದೇಶಕರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ದ.ಕ) ಇವರು ಮುಖ್ಯ ಅತಿಥಿಗಳಾಗಿ, ಶ್ರೀ ಎ.ಕೃಷ್ಣಪ್ಪ ಪೂಜಾರಿ, ಪ್ರಾಂಶುಪಾಲರು (ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ) ಇವರು ತರಬೇತುದಾರರಾಗಿ ಭಾಗವಹಿಸಿದ್ದರು.
2011-12 ರ ಸಾಲಿನಲ್ಲಿ 48 ವಿದ್ಯಾರ್ಥಿಗಳಿಗೆ ರೂ. 1,30,000 ಹಾಗೂ 2012-13 ರ ಸಾಲಿನಲ್ಲಿ 65 ವಿದ್ಯಾರ್ಥಿ ಗಳಿಗೆ ರೂ. 1,60,000/- ಮೊತ್ತವನ್ನು ವಿತರಿಸಲಾಯಿತು. ಕಳೆದ 19 ವರುಷದಲ್ಲಿ ನಮ್ಮ ಸೇವೆ ಹರಿಯುತ್ತಿರುವ ನೀರಿನಂತೆ ಹರಿಯುತ್ತಲೇ ಬಂದಿದೆ. ಯುವವಾಹಿನಿಯ ವಿದ್ಯಾನಿಧಿಯಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಇಂದು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರೂ ನಮ್ಮ ವಿದ್ಯಾನಿಧಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ಇದು ನಮಗೆ ಸಂತೋಷ ತರುತ್ತಿರುವ ವಿಚಾರ. ನಮಗೊಂದು ತೃಪ್ತಿಯಿದೆ ನಮ್ಮ ಸೇವೆ ಅರ್ಹರಿಗೆ ತಲುಪಿದೆ ಮತ್ತು ಅದು ಫಲಪ್ರದವಾಗಿದೆ ಎಂದು. ಈ ಆಶಯ ಮುಂದೆಯೂ ಇರಲಿ ಎಂದು ಆಶಿಸುತ್ತೇವೆ.
ಕಳೆದ 19 ವರುಷಗಳಿಂದ ವಿತರಿಸಲಾದ ವಿದ್ಯಾರ್ಥಿ ವೇತನದ ವಿವರ ಈ ರೀತಿ ಇದೆ.
ವರ್ಷ | ವಿದ್ಯಾರ್ಥಿಗಳು | ಮೊತ್ತ (ರೂ.) |
1993-2005 | 428 | 1,88,100-00 |
2005-2006 | 8 | 25,000-00 |
2006-2007 | 38 | 1,00,000-00 |
2007-2008 | 71 | 2,00,000-00 |
2008-2009 | 64 | 1,30,000-00 |
2009-2010 | 59 | 1,50,000-00 |
2010-2011 | 40 | 80,000-00 |
2011-2012 | 48 | 1,30,000-00 |
2012-2013 | 65 | 1,60,000-00 |
ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಅಲ್ಲದೆ ನಮ್ಮ ಈ ಧ್ಯೇಯವನ್ನು ಯುವವಾಹಿನಿಯ ಹೆಚ್ಚಿನ ಎಲ್ಲ ಘಟಕಗಳೂ ತಮ್ಮಿಂದಾದಷ್ಟು ಮಟ್ಟಿಗೆ ನಡೆಸುತ್ತಾ ಬಂದಿದೆ. ಅವೆಲ್ಲವೂ ಘಟಕದ ಮುಂದಾಳತ್ವದಲ್ಲಿ ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ನಡೆದಿದೆ. ಇದಲ್ಲದೆ ಯುವವಾಹಿನಿಯ ಇತರ ಘಟಕಗಳಿಂದಲೂ ಪುಸ್ತಕ ವಿತರಣೆ, ಪ್ರೇರಣಾಶಿಬಿರ ಹಾಗೂ ಮಾಹಿತಿ ಶಿಬಿರಗಳು ನಡೆದಿವೆ.
ಈ ವರ್ಷದ ವಿದ್ಯಾನಿಧಿ ಸಮಿತಿಯಲ್ಲಿ ಶ್ರೀ ಕಿಶೋರ್ ಕೆ. ಬಿಜೈ ಅಧ್ಯಕ್ಷರಾಗಿ, ಡಾ| ಸದಾನಂದ ಕುಂದರ್ ಸಂಚಾಲಕರಾಗಿ, ಶ್ರೀ ಹರೀಂದ್ರ ಸುವರ್ಣ ಮೂಲ್ಕಿ, ಶ್ರೀ ಗಂಗಾಧರ ಪೂಜಾರಿ ಸುರತ್ಕಲ್, ಶ್ರೀ ಭಾಸ್ಕರ ಸುವರ್ಣ ಉಡುಪಿ ಸದಸ್ಯರಾಗಿ ಶ್ರೀ ಪ್ರೇಮ್‌ನಾಥ್ ಕೆ. ಬಂಟ್ವಾಳ ಆಂತರಿಕ ಲೆಕ್ಕ ಪರಿಶೋಧಕರಾಗಿದ್ದಾರೆ.
ನಮ್ಮ ಕನಸ್ಸು ನಿಂತ ನೀರಲ್ಲ, ವರುಷದ ಗಡಿ ರೇಖೆ ಹಾಕಿ ನಡೆಯುವುದೂ ಇಲ್ಲ ಅದೆನೀದ್ದರೂ ಹರಿಯುವ ನದಿ. ಆದರೆ ಮುಂದೆಯೂ ತಮ್ಮಂತಹ ಸಹೃದಯಿ ಹಿತಚಿಂತಕರ ಸಲಹೆ, ಮಾರ್ಗದರ್ಶನ ಮತ್ತು ಸಹಕಾರದಿಂದ ಸಮಾಜದ ಅಭಿವೃದ್ಧಿಯಲ್ಲಿ ಯುವವಾಹಿನಿಯು ದುಡಿಯುವುದೆಂಬ ಆಶಯದೊಂದಿಗೆ, ವಿದ್ಯಾನಿಧಿಗೆ ಸಹಕರಿಸಿದ ಪ್ರತಿಯೋರ್ವ ದಾನಿಗಳಿಗೆ, ಸಲಹೆಗಾರರಿಗೆ, ಮಾಜಿ ಅಧ್ಯಕ್ಷರುಗಳಿಗೆ, ಸದಸ್ಯರುಗಳಿಗೆ, ವಿವಿಧ ಘಟಕಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದೆಯೂ ತಮ್ಮ ಸಹಕಾರ ಇರಲೆಂದು ಆಶಿಸುತ್ತಾ ವರದಿಯನ್ನು ಮುಗಿಸುತ್ತೇನೆ.
ನಿಮಗೆಲ್ಲಾ ಸಪ್ರೇಮ ವಂದನೆಗಳು
– ತಾರಾನಾಥ ಯಚ್.ಬಿ.
ಕಾರ್ಯದರ್ಶಿ, ವಿದ್ಯಾನಿಧಿ ಸಮಿತಿ