ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕೂಡಾ ತನ್ನ ಆಸಕ್ತಿಯ ಕ್ಷೇತ್ರ ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 4 ಚಿನ್ನದ ಪದಕ ಸಹಿತ 7 ಪ್ರಶಸ್ತಿಗಳನ್ನು ಗಳಿಸಿ ಸಾಧನೆಗೆ ಇದಿರಿಲ್ಲ ಎಂಬಂತಹ ವಿಶೇಷ ಸ್ಥಾನಮಾನ ಗಳಿಸಿದ ಖ್ಯಾತ ಸಾಮಾಜಿಕ ಧುರೀಣ ಶ್ರೀ ಹರಿಕೃಷ್ಣ ಬಂಟ್ವಾಳ್, ಶಶಿಕಲಾ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ನಿತ್ಯಪ್ರಕಾಶ್ ಎಚ್. ಎಸ್. ಬಂಟ್ವಾಳ್ರವರನ್ನು ಯುವ ಸಾಧನಾ ಪುರಸ್ಕಾರಕ್ಕೆ ಆಯ್ಕೆ ಮಾಡಲು ಯುವವಾಹಿನಿ ಸಂಸ್ಥೆ ಅತ್ಯಂತ ಹೆಮ್ಮೆ ಪಡುತ್ತದೆ.
ಓರ್ವ ಹವ್ಯಾಸಿ ವಿಶೇಷ ಛಾಯಾಗ್ರಹಣ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿ ಇವರು ಗಳಿಸಿದ್ದು ಬರೋಬ್ಬರಿ 22 ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು. 2015 ರಲ್ಲಿ 40ಕ್ಕೂ ಹೆಚ್ಚು ದೇಶಗಳ ಶ್ರೇಷ್ಠ ಛಾಯಾಗ್ರಾಹಕರು ಸ್ಪರ್ಧಿಸಿದ ಕಣದಲ್ಲಿ ರಜತ ಪದಕ (ಪಶ್ಚಿಮ ಬಂಗಾಳದಲ್ಲಿ) ಅದೇ ವರ್ಷ ನವೆಂಬರ್ನಲ್ಲಿ 45 ದೇಶಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಗೋಲ್ಡನ್ ಸರ್ಕ್ಯೂಟ್ ನಡೆಸಿದ ಪ್ರವಾಸಿ ಛಾಯಾಗ್ರಹಣ ವಿಭಾಗದಲ್ಲಿ ಪ್ರತಿಷ್ಠಿತ ಚಿನ್ನದ ಪದಕ ಗಳಿಸಿರುವುದು ನಮ್ಮ ಸಮುದಾಯ ಮಾತ್ರವಲ್ಲ ಇಡೀ ದೇಶವೇ ಅಭಿಮಾನ ಪಡತಕ್ಕ ಸಾಧನೆಯಾಗಿದೆ.
ವಿದ್ಯಾರ್ಥಿ ಜೀವನದಲ್ಲಿ 2015-16 ರಲ್ಲಿ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾಗಿ, ಸರ್ವ ಕಾಲೇಜು ಸ್ನಾತಕೋತ್ತರ ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜ್ಯಮಟ್ಟದಲ್ಲಿ 4 ಪ್ರಥಮ ಸಹಿತ 7 ಪ್ರಶಸ್ತಿ, ರಾಷ್ಟ್ರ ಮಟ್ಟದಲ್ಲಿ 7 ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 4 ಪ್ರಥಮ ಸಹಿತ 7 ಪ್ರಶಸ್ತಿ ಛಾಯಾಗ್ರಹಣ ಕ್ಷೇತ್ರದಲ್ಲಿ ಗಳಿಸಿದ ಶ್ರೀ ಬಂಟ್ವಾಳ್ರವರು ಹವ್ಯಾಸಿ ಉರಗತಜ್ಞ, ಶ್ರೇಷ್ಠ ಕ್ರಿಕೆಟಿಗ, ವನ್ಯಜೀವಿ ಮತ್ತು ಪ್ರಕೃತಿ ದೃಶ್ಯ ಛಾಯಾಗ್ರಹಣದ ಮಹೋನ್ನತ ಸಾಧಕ.
ಸಮಾಜ ವಿಕಾಸದ ಕನಸಿನ ಯುವವಾಹಿನಿಯ ಯುವ ಸಾಧನಾ ಪುರಸ್ಕಾರಕ್ಕೆ ಪಾತ್ರರಾದ ಶ್ರೀ ನಿತ್ಯಪ್ರಕಾಶ್ ಬಂಟ್ವಾಳ್ರವರ ಸಾಧನೆ ಇನ್ನೂ ಮಿಂಚಿ ನಿತ್ಯ ಪ್ರಕಾಶಿಸಲಿ ಎಂಬುದು ನಮ್ಮೆಲ್ಲರ ಹೆಮ್ಮೆಯ ಹಾರೈಕೆ.
good job all the best to nithya prakash and yuvavahini.jai sri ram