ಆತ್ಮೀಯರೇ
ಒಂದು ದಶಕದ ಹಿಂದಿನ ದಿನಗಳು ನನಗೆ ನೆನಪಾಗುತ್ತಿದೆ, ಅದು ಡಾನ್‍ಬಾಸ್ಕೋ ಮಿನಿ ಹಾಲ್‍ನ ಮೂಲೆಯ ಕುರ್ಚಿ ಮೇಲೆ ಕುಳಿತ್ತಿರುತ್ತಿದ್ದ ನಾನು ಯುವವಾಹಿನಿಯ ಸಭೆಯಲ್ಲಿ ನಡೆಯುವ ಕಲಾಪಗಳನ್ನು ಮೂಕ ವಿಸ್ಮಿತನಾಗಿ ವೀಕ್ಷಿಸುತ್ತಿದ್ದೆ. ಯಾರಾದರೂ ನನ್ನಲ್ಲಿ ವೇದಿಕೆಯ ಮುಂದೆ ಮಾತನಾಡಲು ಕೇಳುತ್ತಾರೋ ಎಂದು ಅಂಜಿ ಸಭೆಯಿಂದ ಎಷ್ಟೊ ಬಾರಿ ಅರ್ಧದಿಂದ ಎದ್ದು ನಡೆದಿದೆ. ಯಾವುದೇ ಜವಬ್ದಾರಿಕೊಟ್ಟರೂ ಮತ್ತೆ ಎರಡು ದಿನ ನನಗೆ ನಿದ್ದೆಯೇ ಬೀಳುತ್ತಿರಲಿಲ್ಲ. ಇದೆಲ್ಲ ಮರೆಯಾಗಿ ಕೇವಲ ಹತ್ತು ವರುಷ ಕಳೆಯಿತು. ಹತ್ತು ವರುಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಂದು ಹಿಂದಿನ ಸಾಲಿನಲ್ಲಿದ್ದ ನಾನಿಂದು ಮುಂದಿನ ಸಾಲಿಗೆ ಬಂದಿದ್ದೇನೆ ಅಲ್ಲದೆ ನಾನೇ ಸಭೆಯನ್ನು ನಡೆಸುವ ಅಧಿಕಾರ ಪಡೆದುಕೊಂಡಿದ್ದೇನೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಸಾಕಷ್ಟು ಬಾರಿ ಯೋಚಿಸಿದ್ದೇನೆ. ಯುವವಾಹಿನಿ ನನ್ನನ್ನು ಮಾತ್ರವಲ್ಲ ನನ್ನಂತೆ ಇರುವ ಸಾಕಷ್ಟು ಮಂದಿಯನ್ನು ಬೆಳೆಸಿದೆ. ಸಮಾಜದಿಂದ ಸಮಾಜಕ್ಕಾಗಿ ನಮ್ಮವರೇ ನಡೆಸುತ್ತಿರುವ ಯುವವಾಹಿನಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ ಈ ಕಾರಣದಿಂದ ಇಲ್ಲಿ ತಳಮಟ್ಟದವರಿಗೂ ಅವಕಾಶ ಲಭಿಸಿತ್ತಿದೆ. ಐಡಿಯಲ್ ಎನ್ನುವ ನನ್ನ ಉದ್ಯಮವೇ ನನಗೆ ಪ್ರಪಂಚವಾಗಿತ್ತು, ಅಲ್ಲಿಂದ ನನ್ನನ್ನು ಸಂಘಟನೆಗೆ ತಂದರು, ಈ ಸಂಘಟನೆಯಲ್ಲಿ ಜವಬ್ದಾರಿ ಕೊಟ್ಟರು, ಕೆಲಸ ಮಾಡಲು ಪ್ರೇರೆಪಿಸಿದರು, ಅಧ್ಯಕ್ಷ ಪಟ್ಟ ಕೊಟ್ಟರು, ಸಭೆಗಳಲ್ಲಿ ಮಾತೇ ಆಡದೇ ಇರುತ್ತಿದ್ದ ನನ್ನಲ್ಲಿ ಭಾಷಣವನ್ನೇ ಮಾಡಿಸಿದರು, ಇಂದು ಇದರಲ್ಲೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಒಂದಕ್ಷರ ಲೇಖನ ಬರೆಯದೇ ಇದ್ದ ನನ್ನಲ್ಲಿ ಅಧ್ಯಕ್ಷರ ಮಾತಿನ ಮೂಲಕ ಬರವಣಿಗೆಯನ್ನು ಹೊರ ತಂದಿದ್ದಿರಿ ಇಂತಹ ಅವಕಾಶ ಯುವವಾಹಿನಿಯಲ್ಲಿ ಅಲ್ಲದೆ ಮತ್ತೊಂದು ಸಂಘಟನೆಯಲ್ಲಿ ನಿರೀಕ್ಷಿಸಲು ಅಸಾಧ್ಯ.
ಮೊನ್ನೆ ಮೊನ್ನೆಯವರೆಗೆ ಮಂಗಳೂರು ಘಟಕವಷ್ಟೆ ನನ್ನ ಸೀಮಿತ ಕ್ಷೇತ್ರವಾಗಿತ್ತು, ಆದರೆ ಅಧ್ಯಕ್ಷನ ಪೀಠದಲ್ಲಿ ಕುಳಿತಾಗ ಯಡ್ತಾಡಿಯಿಂದ ಸುಳ್ಯದವರೆಗೆ ಹರಡಿರುವ ಯುವವಾಹಿನಿಯ ಪ್ರತಿಯೊಂದು ಘಟಕವೂ ನನಗೆ ಸಮಾನವಾಗಿ ಕಾಣುತ್ತಿದೆ, ಅಲ್ಲಲ್ಲಿ ಹರಡಿರುವ ಯುವವಾಹಿನಿಯ ಬಂಧುಗಳು ನನ್ನ ಕುಟುಂಬದಂತೆ ಕಾಣುತ್ತಿದ್ದಾರೆ, ಸಾಕಷ್ಟು ಬಾರಿ ಹೆಂಡತಿ ಜೊತೆ ಹೇಳಿದ್ದೆ ಇಂದು ನಮ್ಮ ಕುಟುಂಬ ವಿಸ್ತಾರಗೊಂಡಿದೆ, ಬಂಧುಗಳ ಸಂಖ್ಯೆ ದ್ವಿಗುಣಗೊಂಡಿದೆ, ನಾವು ಇವರಿಗಾಗಿ, ಇವರ ಮೂಲಕ ಸಮಾಜಕ್ಕಾಗಿ ಏನಾದರೂ ಮಾಡೋಣ ಎಂದು, ಆಗೆಲ್ಲ ನನ್ನಾಕೆ ಸೂಸುತ್ತಿದ್ದ ಮುಗುಳ್ನಗು ನನ್ನಲ್ಲಿ ಹೊಸ ಚೈತನ್ಯ ತುಂಬಿದೆ. ಬಿಡುವಿಲ್ಲದಂತೆ ರಿಂಗಿಣಿಸುವ ನನ್ನ ಮೊಬೈಲ್ ನಿಮ್ಮ ಪ್ರೀತಿಯನ್ನು ಸಾಬೀತು ಪಡಿಸಿದೆ, ಪ್ರತಿಯೊಂದು ಘಟಕವೂ ನನ್ನ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದೆ, ಮಾಜಿ ಅಧ್ಯಕ್ಷರುಗಳು ಪ್ರತಿಗಳಿಗೆಯೂ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಾರೆ, ನನ್ನ ಕಾರ್ಯಾಕಾರಿ ಸಮಿತಿ ನನ್ನ ಜೊತೆಗೆನೆ ದಿನ ಕಳೆಯುತ್ತಿದೆ, ಇದೆಲ್ಲವನ್ನು ಕಂಡಾಗ ಯುವವಾಹಿನಿಯಲ್ಲಿ ನನ್ನ ಕೆಲಸ ಸುಲಭ ಅಂದುಕೊಂಡಿದ್ದೇನೆ.
ಯುವವಾಹಿನಿ ಎಂದರೆ ಶಿಸ್ತು ಮತ್ತು ಪ್ರಬುಧ್ಧತೆಯ ಪ್ರತೀಕ ಎನ್ನುವುದು ಜನರ ಅಭಿಪ್ರಾಯ ಇದನ್ನು ನಮ್ಮ 30ನೇ ವಾರ್ಷಿಕ ಸಮಾವೇಶ ಮತ್ತೊಮ್ಮೆ ಸಾಬೀತು ಪಡಿಸಿದೆ. ಕಳೆದ ಅಗಸ್ಟ್ 6ರಂದು ನಡೆದಿರುವ ಯುವವಾಹಿನಿಯ ಸಮಾವೇಶ ಹೊಸ ಇತಿಹಾಸವನ್ನು ಬರೆದಿದೆ. ಯುವವಾಹಿನಿ ಉಪ್ಪಿನಂಗಡಿ ಘಟಕದ ಅಚ್ಚುಕಟ್ಟಾದ ಆತಿಥ್ಯ ನೋಡುಗರ ಮೈ ಮನಸ್ಸು ಉಲ್ಲಾಸಗೊಳಿಸಿದೆ. ಸಮಾವೇಶಕ್ಕೆ ಬಂದಿದ್ದ ಯುವವಾಹಿನಿಯ ಹಿತೈಷಿಗಳು ಸಮಾವೇಶದ ವ್ಯವಸ್ಥೆ , ಅಚ್ಚುಕಟ್ಟುತನ , ಶಿಸ್ತನ್ನು ಗಮನಿಸಿ ಯುವವಾಹಿನಿ ಮಾದರಿ ಸಂಘಟನೆ ಎಂದಿದ್ದಾರೆ. ಅಲ್ಲದೆ ಸೇವೆ ಮತ್ತು ಅಂತರಂಗವನ್ನು ಪರಿಶುದ್ಧಗೊಳಿಸುವ ಶಾಲೆ ಎಂದು ಯುವವಾಹಿನಿಯನ್ನು ಬಣ್ಣಿಸಿದ್ದಾರೆ. ಇದಕ್ಕಿಂತ ಬೇರೇನು ಬೇಕಾಗಿದೆ. ಹೀಗಾಗಿ ಅಧ್ಬುತವಾದ ಸಮಾವೇಶವನ್ನು ಸಂಘಟಿಸಿದ ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್ , ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಮತ್ತು ಉಪ್ಪಿನಂಗಡಿ ಘಟಕದ ಅದ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಇವರನ್ನು ಅಭಿನಂದಿಸುತ್ತೇನೆ.
ಬಂಧುಗಳೇ ಈ ವರುಷ ಸಾಕಷ್ಟು ಕನಸು ಕಟ್ಟಿಕೊಂಡಿಲ್ಲ, ಆದರೆ ಇರುವ ಕೆಲ ಕನಸುಗಳು ಸಾಕಾರಗೊಳ್ಳದೆ ವಿರಮಿಸಲ್ಲ, ನೂರಾರು ಯೋಜನೆ ನಮ್ಮಲ್ಲಿಲ್ಲ ಆದರೆ ಇರುವ ಯೋಜನೆ ಸಾರ್ಥಕ್ಯವಾದುದು ಎನ್ನುವುದು ನನ್ನ ಆಲೋಚನೆ, ಮೊದಲಾಗಿ ಯುವವಾಹಿನಿಯ ಕೆಲಸ ಕಾರ್ಯ ಗಳನ್ನು ಜನ ಮಾನಸಕ್ಕೆ ತಲುಪಿಸಬಲ್ಲ ನಮ್ಮ ಸಂಸ್ಥೆಯ ಮುಖವಾಣಿ ಯುವಸಿಂಚನವನ್ನು ಒಪ್ಪವಾಗಿ ಮೂಡಿಸಬೇಕು, ಯುವ ಸಿಂಚನಕ್ಕೆ ಹೊಸ ವಿನ್ಯಾಸವನ್ನು ನೀಡಬೇಕು ಎನ್ನುವುದು ನಮ್ಮ ಚಿಂತನೆ, ಈ ನಮ್ಮ ಕನಸಿಗೆ ಜೀವ ತುಂಬುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಯಶಸ್ಸುಗೊಳಿಸಿದವರು ಪತ್ರಿಕೆ ಸಂಪಾದಕರಾದ ಶುಭ ರಾಜೇಂದ್ರ ಅವರು. ಕಳೆದ ಹಲವು ದಿನದಿಂದ ಅವರ ಶ್ರಮ ಅದು ಮರೆಯಲಾರದ್ದು, ಈ ಕಾರಣದಿಂದ ಯುವ ಸಿಂಚನ ಇಂದು ಇಷ್ಟು ಅಂದವಾಗಿ ಮೂಡಿ ಬಂದಿದೆ. ಇದಕ್ಕಾಗಿ ಸಂಪಾದಕರನ್ನು ಅಭಿನಂದಿಸುತ್ತೇನೆ. ಅಲ್ಲದೆ ಸಿಂಚನವನ್ನು ಅಚ್ಚುಕಟ್ಟಾಗಿ ಸಕಾಲದಲ್ಲಿ ಮುದ್ರಿಸಿಕೊಟ್ಟ ದಿನಕರ್ ಡಿ’ ಬಂಗೇರಾ ಅವರಿಗೂ ಕೃತಜ್ಞತೆಗಳು. ಯುವವಾಹಿನಿಯ ಎಲ್ಲಾ ಸದಸ್ಯರನ್ನೂ ಒಂದು ಸೂರಿನಲ್ಲಿ ಕಟ್ಟಿಡುವ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದೇವೆ. ಯುವವಾಹಿನಿಯ ಸದಸ್ಯತನವನ್ನು ಕಡ್ಡಾಯಗೊಳಿಸಿ ಎಲ್ಲಾ ಸದಸ್ಯರ ವಿವರ ಸಾಪ್ಟ್ ವೇರ್ ಮೂಲಕ ಅಪ್‍ಡೇಟ್ ಮಾಡಿಡುವ ಹೊಸ ತಂತ್ರಜ್ಞಾನ ರೂಪಿಸಿದ್ದೇವೆ, ನಮ್ಮ ಕಾರ್ಯದರ್ಶಿ ರಾಜೇಶ್ ಬಂಟ್ವಾಳ ಅವರು ಬಿಡುವಿಲ್ಲದಂತೆ ಇದರಲ್ಲಿ ದುಡಿಯುತ್ತಿದ್ದಾರೆ, ನಮ್ಮ ಕೋರಿಕೆಗೆ ಎಲ್ಲಾ ಘಟಕಗಳೂ ಪೂರಕವಾಗಿ ಸ್ಪಂದಿಸಿ ವಾರದೊಳಗೆ ಮಾಹಿತಿ ರವಾನಿಸಿದ್ದಾರೆ. ಇದೆಲ್ಲ ಕಂಡಾಗ ನೀವೆಲ್ಲ ಜೊತೆಗಿದ್ದೀರಿ ಎನ್ನುವ ಭರವಸೆ ಮೂಡುತ್ತಿದೆ. ಅದೇ ರೀತಿ ಮುಂದಿನ ವರುಷ ಯುವವಾಹಿನಿ ಮೂವತ್ತೊಂದು ಸಂವತ್ಸರವನ್ನು ಪೂರ್ತಿಗೊಳಿಸುತ್ತದೆ ಅಷ್ಟರಲ್ಲಿ ಯುವವಾಹಿನಿಗೆ 31 ಘಟಕ ಸೇರ್ಪಡೆಯಾಗಬೇಕು ಎನ್ನುವುದು ನನ್ನ ಇಚ್ಚೆ. ಇದಕ್ಕಾಗಿ ತಾಲೂಕು ಸಂಘಟನಾ ಕಾರ್ಯದರ್ಶಿಗಳು ಸೂಕ್ತ ಸ್ಪಂದನ ನೀಡಿದ್ದಾರೆ. ಅಲ್ಲದೆ ಇರುವ ಎಲ್ಲಾ ಘಟಕವೂ ಸಕ್ರೀಯವಾಗಿ ಜೊತೆಜೊತೆಯಾಗಿ ಸಾಗೋಣ ಎನ್ನುವ ಚಿಂತನೆಯೂ ಇದೆ. ಅದೆಲ್ಲ ನಿಮ್ಮಿಂದ ಸಾಕಾರವಾಗುತ್ತದೆ ಎಂದು ನಂಬಿದ್ದೇನೆ. ನಮ್ಮ ಕೆಲಸ ಏನೇ ಇದ್ದರೂ ಅದು ಯುವವಾಹಿನಿಗಾಗಿ, ಯುವವಾಹಿನಿ ಕಾರ್ಯ ಏನೇ ಇದ್ದರೂ ಅದು ಸಮಾಜಕ್ಕಾಗಿ. ಹೆಚ್ಚಿನ ವಿಷಯ ಇದ್ದರೆ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ.