ಯಕ್ಷಲೋಕದಲ್ಲಿ ಗಾನ ಸುರಭಿ ಎಂದೇ ಕರೆಸಿಕೊಂಡು ತನ್ನ ಕಂಠ ಮಾಧುರ್ಯಕ್ಕೆ ಅಸಂಖ್ಯಾತ ಅಭಿಮಾನಿ ಬಳಗವನ್ನು ಹುಟ್ಟು ಹಾಕಿಕೊಂಡಿರುವ ರವಿಚಂದ್ರ ಕನ್ನಡಿಕಟ್ಟೆ ಈ ನಾಡುಕಂಡ ಅಪ್ರತಿಮ ಭಾಗವತ.ತೆಂಕು ತಿಟ್ಟಿನ ಯಕ್ಷಲೋಕದಲ್ಲಿ ನಕ್ಷತ್ರಪುಂಜದಂತೆ ಮಿನುಗುವ ರವಿಚಂದ್ರ ಕನ್ನಡಿಕಟ್ಟೆ ಮೂಲತಃ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಪಜೆಮಾರು ನಿವಾಸಿ ಧರ್ಮಣ್ಣ ಪೂಜಾರಿ ಮತ್ತು ಸುಶೀಲಾ ದಂಪತಿಗಳ ಪುತ್ರ. 1980ನೇ ಇಸವಿಯ ಅಕ್ಟೋಬರ್ 10ರಂದು ಜನಿಸಿದ ಕನ್ನಡಿಕಟ್ಟೆ ಎಸ್‍ಎಸ್‍ಎಲ್‍ಸಿಗೆ ತನ್ನ ಶಿಕ್ಷಣ ಮೊಟಕುಗೊಳಿಸಿ ಬಳಿಕ ಯಕ್ಷರಂಗದತ್ತ ಮುಖ ಮಾಡಿ ಹೊರಟವರು. ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷ ಲಲಿತ ಕೇಂದ್ರದಲ್ಲಿ ಯಕ್ಷ ನಾಟ್ಯಭ್ಯಾಸಕ್ಕೆ ಸೇರಿ ಅಲ್ಲಿ ನೃತ್ಯಗಾರಿಕೆ ಕಲಿತರು. ಬಳಿಕ ಇದೇ ಅವಧಿಯಲ್ಲಿ ಲೀಲಾವತಿ ಬೈಪಡಿತ್ತಾಯ ಅವರಿಂದ ಹಾಡುಗಾರಿಕೆ ಯೋಗ್ಯರು ಎಂಬ ಪ್ರಶಂಸೆ ಪಡೆದುಕೊಂಡವರು. ನಾಟ್ಯಾಭ್ಯಾಸದ ಬಳಿಕ ಸುರತ್ಕಲ್ ಮೇಳಕ್ಕೆ ಸೇರ್ಪಡೆಗೊಂಡರು. ಈ ಅವಧಿಯಲ್ಲಿ ಪದ್ಯಾಣ ಗಣಪತಿ ಭಟ್ ಅವರು ಸಂಗೀತಗಾರ ಭಾಗವತರುಗಳಿಗೆ ಭಾಗವತಿಕೆ ಕಲಿಸುತ್ತಿದ್ದಾಗ ಕನ್ನಡಿಕಟ್ಟೆ ಅವರು ಭಾಗವತಿಕೆ ಕಡೆಗೆ ಆಸಕ್ತಿ ತೋರಿದರು. ಮಳೆಗಾಲದ ಅವಧಿಯಲ್ಲಿ ಪದ್ಯಾಣರ ಮನೆಯಲ್ಲಿ ಭಾಗವತಿಕೆ ಕಲಿತರು, ಎರಡು ವರುಷಗಳ ಕಾಲ ಸುರತ್ಕಲ್ ಮೇಳದಲ್ಲಿ ಸೇವೆ ಸಲ್ಲಿಸಿದ ರವಿಚಂದ್ರ ಅವರು ಬಳಿಕ ಪದ್ಯಾಣರ ಜೊತೆ ಸೇರಿ ಸುಮಾರು 10 ವರುಷ ಮಂಗಳಾದೇವಿ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದರು. ಅದಾದ ಬಳಿಕ ಹೊಸ ನಗರ ಮೇಳದಲ್ಲಿ ಸೇವೆ ಸಲ್ಲಿಸಿದರು. ತನ್ನ ಸ್ವರ ಮಾಧುರ್ಯದಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹುಟ್ಟಿಹಾಕಿಕೊಂಡಿದ್ದ ರವಿಚಂದ್ರರ ಗಾನ ಸವಿಯಲು ದೂರದೂರಿನಿಂದಲೂ ಯಕ್ಷಾಭಿಮಾನಿಗಳು ಬರುತ್ತಿದ್ದರು. ಇವತ್ತು ಭಾಗವತರು ಯಾರಂತೆ? ಎಂದು ಮೊದಲೇ ಕೇಳಿ ರವಿಚಂದ್ರ ಕನ್ನಡಿಕಟ್ಟೆಯಾದರೆ ಸಮಯಕ್ಕೆ ಮೊದಲೇ ಬಂದು ಸೇರುವ ಸಾವಿರಾರು ಅಭಿಮಾನಿಗಳನ್ನು ಕನ್ನಡಿಕಟ್ಟೆ ಹೊಂದಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿದ ಯಕ್ಷ ಕಲಾರಾಧಕರು ಇವರಿಗೆ ಗಾನ ಸುರಭಿ ಎನ್ನುವ ಬಿರುದು ನೀಡಿದ್ದರು. ಅಲ್ಲದೆ ‘ರಸರಾಗ ಸಾರ್ವಭೌಮ’ ಎನ್ನುವ ಬಿರುದನ್ನೂ ದಯಪಾಲಿಸಿದ್ದರು.
ಯಕ್ಷಗಾನ ಮಾತ್ರವಲ್ಲದೆ, ಯಕ್ಷ ನಾಟ್ಯ ವೈಭವ, ಯಕ್ಷಗಾನ ತಾಳಮದ್ದಲೆ ಮುಂತಾದವುಗಳಲ್ಲೂ ಕನ್ನಡಿಕಟ್ಟೆಯವರದ್ದು ಎತ್ತಿದ ಕೈ. ಸುದೀರ್ಘವಾದ ಯಕ್ಷ ಪಯಣದಲ್ಲಿ ಅಳಿಯದ ಛಾಪು ಮೂಡಿಸಿರುವ ಕನ್ನಡಿಕಟ್ಟೆಯವರಿಗೆ ಉಜ್ವಲ ಭವಿಷ್ಯವನ್ನು ಬ್ರಹ್ಮಶ್ರೀ ನಾರಾಯಣಗುರುಗಳು ದಯಪಾಲಿಸಲಿ ಎಂದು ಯುವವಾಹಿನಿ ಶುಭ ಹಾರೈಸುತ್ತಾ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ತಮಗೆ ‘ಯುವವಾಹಿನಿ ಯುವ ಸಾಧನಾ ಪುರಸ್ಕಾರ ನೀಡಿ ಗೌರವಿಸಲು ಸಂತೋಷವಾಗುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ,ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು
Congratulations
This is the best job done by yuvavahini and keep doing this always. All the best.