ಸಿಂಚನ ವಿಶೇಷಾಂಕ : 2017

ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಉಲ್ಲಾಸ

ಗ್ರಾಮೀಣ ಬದುಕು ಎಂದಾಗ ನೆನಪಿಗೆ ಬರುವುದು ಅಲ್ಲಿಯ ಜನರ ಕಸುಬು, ಆಚರಣೆ, ಪ್ರಾಥಮಿಕ ಸಂಬಂಧ, ಆಡಂಬರವಿಲ್ಲದ ಬದುಕು, ಅಲ್ಪತೃಪ್ತ ಸ್ವಾವಲಂಬಿ ಜೀವನ, ವಸ್ತು ವಿನಿಮಯ ಪದ್ಧತಿಯ ಸ್ವಲ್ಪ ಇರುವಿಕೆ, ಸಾಕುಪ್ರಾಣಿಗಳ ಒಡನಾಟ ಹೀಗೆ ಹತ್ತಾರು ದೃಷ್ಟಾಂತಗಳು. ಆರ್ಥಿಕ ಅಭಿವೃದ್ಧಿಯ ವೇಗ ವರ್ಧನೆಯ ಗುರಿ ಹಿಂದೆ ಬಿದ್ದಿರುವ ನಾವು ನಿಜವಾದ ಬದುಕಿನ ಉಲ್ಲಾಸವನ್ನೇ ಕಳೆದುಕೊಳ್ಳುತ್ತಿದ್ಧೇವೆ. ಬದುಕಿನ ಮೂಲ ಸೆಲೆಯನ್ನೇ ಮುರಿದು ಕೃತಕ ಬದುಕನ್ನು ಕಟ್ಟಿಕೊಂಡಿದ್ದೇವೆ. ಕೇವಲ ಕೈಗಾರಿಕಾಭಿವೃದ್ಧಿ, ಆಧುನಿಕ ಕೃಷಿ ಅಭಿವೃದ್ಧಿ, ವಿದ್ಯುತ್‍ಶಕ್ತಿ ಉತ್ಪಾದನಾ ಉದ್ದೇಶವನ್ನೇ ಮುಂದಿಟ್ಟುಕೊಂಡು ಮಳೆಗಾಲವನ್ನು ನಿರೀಕ್ಷಿಸುವ ಈ ಕಾಲದಲ್ಲಿ, ಮಳೆಗಾಲದ ಸುಂದರ ಸೊಬಗನ್ನು ಆಸ್ವಾಧಿಸುವ, ಮಳೆ ನೀರನ್ನು ಭೂಮಿಯ ಮೇಲಿನ ಇತರ ಪ್ರಾಣಿ, ಪಕ್ಷಿಗಳಿಗೆ ಆಸರೆ ಎಂಬಂತೆ ತಿಳಿದ ಮನಸ್ಸುಗಳ ಕೊರತೆಯಿದೆ. ನಮ್ಮ ಹಿರಿಯರು ಪ್ರಾಣಿ-ಪಕ್ಷಿ, ಮನುಷ್ಯ ಎಲ್ಲರಿಗೂ ಉಪಕಾರ ಆಗಲಿ ಎಂದು ನೂರಾರು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಹಲಸಿನ ಮರ, ಮಾವಿನ ಮರ, ಆಲದ ಮರಗಳನ್ನು ಈಗಾಗಲೇ ಕಡಿದು ಪ್ರಕೃತಿಗೆ ಮಾರಕವಾಗಿರುವ ಮ್ಯೂಂಜಿಯಂ, ಅಕೇಶಿಯಾ, ಗಾಳಿ, ನೀಲಗಿರಿಗಳಂತಹ ಮರಗಳನ್ನು ನೆಟ್ಟು ಪರಿಸರದ ಸ್ವಾಸ್ಥ್ಯವೇ ಕೆಡುವಂತೆ ಮಾಡಿದ್ದೇವೆ. ಗ್ರಾಮೀಣ ಬದುಕಿನ ಸುಂದರ ಚಿತ್ರಣಗಳನ್ನು ಕಲ್ಪಿಸಿಕೊಳ್ಳಬೇಕೇ ವಿನಾಃ ಕಾಣಲಿಕ್ಕೆ ಸಿಗದ ಸ್ಥಿತಿಗೆ ನಾವು ತಲುಪಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ನಾವು ಬದುಕಿನ ಉಲ್ಲಾಸ ಕಳೆದುಕೊಂಡಿದ್ದೇವೆ ಎಂಬ ಬಗ್ಗೆ ಚರ್ಚಿಸಬೇಕಾಗಿದೆ.
ಕೃಷಿ ಸಂಬಂಧಿ ಚಟುವಟಿಕೆಗಳು: ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ರೈತರ ಕೃಷಿ ಸಂಬಂಧಿ ಚಟುವಟಿಕೆಗಳು, ಅವುಗಳ ಮೇಲೆ ನೆಲೆ ನಿಂತ ಆಚರಣೆಗಳು ಮತ್ತು ನಂಬಿಕೆಗಳಲ್ಲಿ ತುಂಬಾ ಸಾಮ್ಯತೆಯಿದೆ. ಮಳೆಗಾಲ ಪ್ರಾರಂಭವಾಗುವ ಸುಮಾರು ಒಂದು ತಿಂಗಳ ಹಿಂದೆಯೇ ಬೇಸಾಯದ ವಿಧಿ ವಿಧಾನಗಳು ಪ್ರಾರಂಭಗೊಳ್ಳುತ್ತವೆ. ಯುಗಾದಿ ಹಬ್ಬದ ದಿನದಂದು ಬೆಳಗ್ಗೆ ಐದು ಗಂಟೆ ಹೊತ್ತಿಗೆ ಗದ್ದೆಯೊಂದರಲ್ಲಿ ಗೊಬ್ಬರ ಮತ್ತು ಹೊಟ್ಟುಗಳ ಕಿರು ರಾಶಿಗಳನ್ನು ಸರಿಯಾಗಿ 9ರ ಸಂಖ್ಯೆಯಲ್ಲಿ ಹಾಕಲಾಗುತ್ತದೆ. ನಂತರ ಹೊಟ್ಟುಗಳಿಗೆ ಮಡಲಿನ ಸೂಡಿಯಲ್ಲಿ ಬೆಂಕಿ ಹಚ್ಚುವ ಕ್ರಮವಿದೆ. ಹೀಗೆ ಬೆಂಕಿ ಹಚ್ಚಿ ಬಂದವರು ಮನೆಗೆ ಬಂದು ಕೈಕಾಲು ಮುಖ ತೊಳೆದು ಸಿಹಿತಿಂಡಿ ತಿನ್ನುತ್ತಾರೆ. ನಂತರ ಯುಗಾದಿ ದಿನದಿಂದ 10ನೇ ದಿನಕ್ಕೆ ಗದ್ದೆಯ ಮೂಲೆಯಲ್ಲಿ ಮಣ್ಣಿನ ರಾಶಿ ಹಾಕಿ, ಬೆಳಿಗ್ಗೆ ಹೊತ್ತಲ್ಲಿ ಬೀಜಕ್ಕೆ ತೆಗೆದಿರಿಸಿದ ಭತ್ತದ ಮೂರು ಮುಷ್ಠಿ ತೆಗೆದು ಮಣ್ಣಿನಲ್ಲಿ ಮೊಳಕೆಗೆ ಇಡುತ್ತಾರೆ. ಅವುಗಳಿಗೆ ನೀರು ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಮಾಡುವ ಕ್ರಮವಿದೆ. ಗದ್ದೆಯೇ ಇಲ್ಲದ ಈಗಿನ ಹಳ್ಳಿಗಳಲ್ಲಿ ಇಂತಹ ಉಲ್ಲಾಸಮಯ ಆಚರಣೆ ವಿಚಿತ್ರ ಆಗಿ ತೋರಬಹುದು. ಇಲ್ಲಿ ನಂಬಿಕೆಗಿಂತಲೂ ಪಾಲ್ಗೊಳ್ಳುವಿಕೆ ಮುಖ್ಯ. ಪಾಲ್ಗೊಳ್ಳುವಿಕೆಯೇ ಬದುಕಿನ ಚೈತನ್ಯ. ಗದ್ದೆಯಂಚಿನ ಕಸ ಕಡ್ಡಿಗಳನ್ನು ಸವರಿ ಒಣಗಿಸಿ ಒಟ್ಟು ಮಾಡಿದ ಮೇಲೆ ಸುಡುಮಣ್ಣು ಮಾಡುತ್ತಾರೆ. ಇದು ಗದ್ದೆಯ ಮಣ್ಣಿನ ಪುನಃಶ್ಚೇತನ ಮಾಡುವ ಕ್ರಮ. ಇಂತಹ ಮಣ್ಣಿನ ಸತ್ವದಲ್ಲಿ ಬೀಜ ಬೇಗ ಮೊಳಕೆ ಬರುತ್ತದೆ. ಮೇ ತಿಂಗಳ ಅಂತ್ಯಕ್ಕೆ ಆಕಾಶದೆಡೆಗೆ ಮಳೆಗಾಗಿ ಕಾಯುವ ಮಂದಿಯ ಕಣ್ಣಲ್ಲಿ ಒಂದು ರೀತಿಯ ಆತಂಕವಿದ್ದರೂ ಮಳೆ ಬಂದೇ ಬರುತ್ತದೆಂಬ ಆಸೆಯಿರುತ್ತದೆ. ಮೊದಲ ಮಳೆಯ ಮಣ್ಣಿನ ಪರಿಮಳದ ಆನಂದ ವರ್ಣಿಸಲಾಗದ ಅನುಭವ. ಮರುದಿನವೇ ನೆಲ ಉಳುಮೆ, ಎತ್ತುಗಳ ಮೈಯುಜ್ಜುವುದು, ಕೆಲವರು ಕೋಟಾ ಪೈರಿಗೆ ಹೋಗಿ ಹೊಸ ಕೋಣಗಳನ್ನು ತಂದು ಮೈಗೆ ಎಣ್ಣೆ ಉಜ್ಜಿ, ಕೊಂಬನ್ನು ಕೀಸಿ ಚೆಂದಗೊಳಿಸಿ ಹುರುಳಿ ತಿನ್ನಿಸಿ ಅವುಗಳಿಗೆ ಉಳುಮೆ ತರಬೇತಿ ಕೊಡುವ ಕೆಲಸದಲ್ಲಿ ಆನಂದವನ್ನು ಕಾಣುತ್ತಿದ್ದರು. ಬಿತ್ತನೆ ಮಾಡಿದ ಮೇಲೆ ಪಾರಿವಾಳ, ಹೊಲಸಿನ ಹಕ್ಕಿಗಳು ಬೀಜ ಹೆಕ್ಕದಂತೆ ಕಾಯುವುದು, ರಾತ್ರಿ ಲಗ್ಗೆಯಿಡುವ ಮೊಲಗಳಿಗೆ ಬಲೆ ಒಡ್ಡುವುದು, ಹುಳ ಬೀಳದಂತೆ ಔಷಧಿ ಹಾಕುವುದು, ಪೇಟೆಗೆ ಹೋದಾಗ ನಾಟಿಗೆ ಬೇಕಾದ ಭತ್ತದ ಗಿಡ (ಅಗೆ)ದ ಮಾತಾಡುವುದು. ಯಾರ್ಯಾರ ಗದ್ದೆಯಲ್ಲಿ ಯಾವ್ಯಾವ ಭತ್ತದ ತಳಿ ಬಿತ್ತನೆ ಮಾಡಿದ್ದಾರೆ ಕೇಳುವುದು. ಭತ್ತದ ಹಳೆತಳಿಗಳಾದ ಹುಂಡ, ದಬ್ಬಣಸಾಲೆ, ಐ.ಆರ್.8, ಎಮ್.ಟಿ., ಜಯ, ಪಲ್ಗುಣ, ಕೊತ್ತಂಬರಿ ನೆಲ್ಲು, ಗಿರಸಲೆ ಮತ್ತವುಗಳ ಮೇಲ್ತನದ ಬಗ್ಗೆ ಮಾತಾಡುವುದು ನಡೆಯುತ್ತಲೇ ಇರುತ್ತದೆ. ಕಾರ್ತಿಕ ಮತ್ತು ಆಷಾಢ ತಿಂಗಳುಗಳ ಮಧ್ಯ ಭರದಿಂದ ಸಾಗುವ ಭತ್ತದ ನಾಟಿಗೆ ತಯಾರು ಮಾಡುವ ಸಂಭ್ರಮ, ಹೆಣ್ಣಾಳುಗಳಿಗೆ ಸಂತೆಗೆ ಹೋಗಿ ಗೊರಬು ತರುವುದು, ಗಂಡಾಳುಗಳಿಗೆ ಕಂಬಳಿ ತರುವುದು, ಗೊರಬಿಗೆ ಧೂಪದ ಮರದ ಎಲೆಯಿಂದ ಹೊದಿಕೆ, ಕಂಬಳಿಗಳಿಗೆ ಕರೆ ಕಟ್ಟುವುದು, ಕಂಬಳಿ ನೀರಿನಲ್ಲಿ ನೆನೆಸಿ ಗಂಜಿ ತೆಗೆದು ಒಣಗಿಸುವುದು, ಎಲ್ಲಾ ತಯಾರಿ ಮುಗಿಯುವ ಹೊತ್ತಿಗೆ ಭತ್ತದ ನಾಟಿ ಶುರುವಾಗುತ್ತದೆ. ಕಾಸರಕ ಮರದ ಹೊಂಟಿಕೋಲನ್ನು ಎತ್ತೆತ್ತಿ ಬೀಸಿದಂತೆ ಆಡಿಸುತ್ತ ‘ಕೋಂಗಿ’ ಹಾಕಿ ಉಳುಮೆ ಮಾಡುವವನ ಸಂಭ್ರಮಕ್ಕೆ ಮೇರೆಯಿಲ್ಲ. ನೊಗ ತಪ್ಪಿಸಿ ಹಾರಿಸಿಕೊಂಡು ಹೋಗುವ ಹೊಸ ಎತ್ತುಗಳ ಪಜೀತಿ. ಅವುಗಳ ಬಾಲ ತಿರುಪಿ ಏಳಿಸುವುದು. ಸಂಜೆ ಅವುಗಳಿಗೆ ಅಕ್ಕಚ್ಚು ತಂದು ಅಕ್ಕಿ ತೌಡಿನೊಂದಿಗೆ ಬೇಯಿಸಿ ಹಾಕುವುದು. ಹೀಗೆ ಕೃಷಿಯ ಹತ್ತಾರು ಕೆಲಸಗಳು ಜೀವನಕ್ಕೆ ಚೈತನ್ಯ ನೀಡುತ್ತವೆ. ಕೃಷಿ ಉಪಕರಣಗಳಾದ ನೊಗ, ನೇಗಿಲು, ಹಾರೆ, ಪಿಕಾಸು, ಗೊಬ್ಬರ ತೊಡಕು, ಅಗೆ ಹೊರುವ ಮೂರು ಕಾಲಿನ ಆಸರೆ, ಹಡಿಮಂಚ ಮುಂತಾದವುಗಳ ತಯಾರಿ ಹಳ್ಳಿಯಲ್ಲೇ ಆಗುತ್ತಿದ್ದರಿಂದ ಒಂದು ಸ್ವಾವಲಂಬಿ ಸಂತಸದ ವಾತಾವರಣ ಕಾಣುತ್ತಿತ್ತು. ಉದ್ವೇಗ ರಹಿತ ಶ್ರಮ ವಿಭಜನೆಯಿತ್ತು. ಮೊದಲ ಭತ್ತದ ನಾಟಿ ದಿನದ ಆಚರಣೆಗೆ ಕುಂದಾಪುರ ತಾಲೂಕಿನ ಕೆಲವೆಡೆ “ಗಣಪತಿ ನಟ್ಟಿ” ಎನ್ನುವುದುಂಟು. ಆ ದಿನದ ನೆಟ್ಟಿ ಕೆಲಸ ಮುಗಿದ ಮೇಲೆ ಅವರೆಕಾಳು ಬೇಯಿಸಿ ಒಗ್ಗರಣೆ ಹಾಕಿ ತಿನ್ನುವುದು. ಹುರುಳಿಯ ಹುಗ್ಗಿ ಮಾಡಿ ತಿನ್ನುವುದು, ಹಲಸಿನ ಹಣ್ಣನ್ನು ತಿನ್ನುವುದು. ಹೀಗೆ ಏನಾದರೊಂದು ಸಾಮೂಹಿಕವಾಗಿ ತಿಂದು ಸಂಭ್ರಮಿಸುವ ಪದ್ಧತಿಯಿತ್ತು. ಇಲ್ಲಿ ಸಿಗುವ ನೈಜ ಆನಂದ ಯಾವ ಆಧುನಿಕ ಮನೋರಂಜನೆಗಳಲ್ಲೂ ಅನುಭವಿಸಲಾಗದು ಎಂದರೆ ತಪ್ಪಾಗಲಾರದು.
ಮಳೆಗಾಲದ ನಾಟಿ ಮುಗಿದ ಮೇಲೆ ಆಷಾಢ ಹಬ್ಬದ ಸಂಭ್ರಮ. ಮಾರಿ ಹಬ್ಬ. ಗದ್ದೆ ಕಳೆ ತೆಗೆಯುವುದು, ಕಾಡಿನಲ್ಲಿ ಸಿಗುವ ಸುವರ್ಣ ಗಡ್ಡೆ ತರಹದ ‘ಕೇನೆ’ ಗಡ್ಡೆ ಅಗೆದು ತಂದು ಅಕ್ಕಿಹಿಟ್ಟಿನೊಂದಿಗೆ ಉಂಡೆ ಮಾಡಿ ಬೇಯಿಸಿ ತಿನ್ನುವುದು. ಮಳೆಗಾಲದ ಉಳುಮೆಯಲ್ಲಿ ತನ್ನೊಂದಿಗೆ ದುಡಿದ ಎತ್ತು-ಹೋರಿಗಳಿಗೆ ‘ಎರ್ತ’ ಕೊಡುವುದು. ಹೋರಿಗಳನ್ನು ಪಳಗಿಸಲು “ಶೀಲ” ಮಾಡುವುದು. ಚಾಟ್ ಹಾಕುವುದು (ಇಂತಹ ಹಿಂಸಾತ್ಮಕ ಪಳಗಿಸುವಿಕೆ ಈಗ ಇಲ್ಲ) ಅನೇಕ ತರಹದ ಸಂಭ್ರಮದ ಚಟುವಟಿಕೆಗಳು ನಡೆಯುತ್ತಿರುತ್ತದೆ. ‘ಎರ್ತ’ ಕೊಡುವುದು ಎಂದರೆ ಎತ್ತು-ಹೋರಿಗಳಿಗೆ ಕೆಲವು ಮರದ ಚಕ್ಕೆಗಳ ರಸ ತೆಗೆದು ಪುಷ್ಕಳ ಭೋಜನ ತಯಾರಿಸಿ ನೀಡುವ ಕ್ರಮ. ಚಿಕ್ಕ ಮಕ್ಕಳಾಗಿದ್ದಾಗ ನಮಗೆ ಆ ದಿನ ಸಂಭ್ರಮವೋ ಸಂಭ್ರಮ. ತಿನ್ನುವುದು ಹೋರಿ-ಎತ್ತುಗಳಾದರೂ ಸಂಭ್ರಮದ ಖುಷಿ ನಮಗೆಲ್ಲ ಆಗುತ್ತಿತ್ತು. ಆಷಾಢ ಮುಗಿದು ಶ್ರಾವಣ ಬರುತ್ತಿದ್ದಂತೆ ಮನೆ ಮುಂದಿನ ಅಂಗಳದ ಮಧ್ಯದ ‘ಮೇಟಿ’ ಕಂಬಿಗೆ ಅರಳನ್ನು ಹಾಕಿ ಪೂಜೆ ಮಾಡುವ ಕ್ರಮ ಇದೆ. ಮೇಟಿ ಕಂಬಿನ ಬುಡದಲ್ಲಿ ಸೆಗಣಿಯಿಂದ ಸಾರಿಸಿ, ಸೇಡಿ ಹುಡಿಯ ರಂಗೋಲಿ ಹಾಕಿ ಬಾಳೆ ಎಲೆ ಮೇಲೆ ‘ಅರಳನ್ನು’ ಹುಯಿದು ಪೂಜೆ ಮಾಡಲಾಗುತ್ತದೆ. ಇಂತಹ ಕಂಬಗಳನ್ನು ಬೇಗ ಕುಂಭಾಗದ ಗಟ್ಟಿ ಜಾತಿಯ ‘ಮುಳ್ಳುಪ್ಯಾರೆ’ ಅಥವಾ ‘ಬಿಲ್‍ಕಂಬಿ’ ಮುರದಿಂದ ಮಾಡಲಾಗುತ್ತದೆ.
ಶ್ರಾವಣ ಮುಗಿದು, ಕನ್ಯಾ ಮಾಸ ಬರುತ್ತಿದ್ದಂತೆ ಗದ್ದೆಯಲ್ಲಿ ಭತ್ತದ ಫಸಲು ಹೊರ ಬರಲು ಪ್ರಾರಂಭವಾಗುತ್ತದೆ. ಮೊದಲು ‘ಹೊಡೆಯಿಂದ’ (ಭತ್ತದ ಗಿಡದ ಗರ್ಭ) ಜಿಗಿಯುವ ಕದಿರಿಗೆ ‘ಚೂಂಚು’ (ಒಂದು ಗಂಟು) ಹಾಕಿ ಕೈ ಮುಗಿಯುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಭತ್ತದ ಗದ್ದೆಯಲ್ಲಿ ಪೈರುಗಳ ನಡುವೆ ಹೊರ ಜಿಗಿದ ಕದಿರುಗಳ ಎಳೆ ಎಳೆಯ ಬಿಡಿ ಭತ್ತದ ತಲೆಯಲ್ಲಿ ಗಾಳಿಗೆ ತಕತಕ ಕುಣಿವ ಬಿಳಿ ಹೂಗಳು ಕಣ್ಣಿಗೆ ನೀಡುವ ಆನಂದ ಬಣ್ಣಿಸಲಸಾಧ್ಯ.
ದಸರಾದಿಂದ ಪ್ರಾರಂಭವಾಗುವ ಕೃಷಿ ಹಬ್ಬಗಳ ಆಚರಣೆ ದೀಪಾವಳಿ ತನಕ ಉಲ್ಲಾಸಭರಿತವಾಗಿ ನಡೆಯುತ್ತದೆ. ಹೊಸ ಅಕ್ಕಿ ಊಟ ಮಾಡುವ ಮುಂಚೆ ‘ಹೊಸ್ತು’ ಆಚರಣೆ ಮನೆ ಮಂದಿಗೆಲ್ಲಾ ಮುದ ನೀಡುವ ಒಂದು ಕೃಷಿ ವಿಧಿ. ಮಬ್ಬುಗಪ್ಪಿನಲ್ಲಿ ಬೇರೆಯವರ ಮನೆ ಗದ್ದೆಯ ಭತ್ತದ ಸಸಿಗಳನ್ನು ತಂದು ತಮ್ಮ ಗದ್ದೆಯಲ್ಲಿಟ್ಟು ಪೂಜೆ ಮಾಡಿ, ಮುಳ್ಳುಸೌತೆ, ತೆಂಗಿನ ಸಾಂತ, ಮಾವಿನ ಮತ್ತು ಹಲಸಿನ ಎಲೆ, ಹಲ್ಕತ್ತಿಗಳನ್ನು ಹರಿವಾಣದಲ್ಲಿಟ್ಟು ತಲೆಗೆ ಮುಂಡಾಸು ಕಟ್ಟಿಕೊಂಡು ಮನೆಯ ಯಜಮಾನ ಮನೆ ಒಳಗೆ ಜಾಗಂಟೆ ಶಬ್ದದೊಂದಿಗೆ ತಂದು ಪೂಜೆ ಮಾಡುತ್ತಾನೆ. ಆಮೇಲೆ ಮನೆಯ ಎಲ್ಲಾ ಉಪಕರಣಗಳಿಗೆ ಕದಿರು ಕಟ್ಟಿ ವಿಧ ವಿಧದ ತರಕಾರಿಗಳಿಂದ ತಯಾರಿಸಿದ ಮೇಲೋಗರದೊಂದಿಗೆ ಮನೆ ಮಂದಿ ಎಲ್ಲಾ ಕುಳಿತು “ಹೊಸ್ತು” ಊಟ ಮಾಡುತ್ತಾರೆ. ಮನೆಯ ಕಿರಿಯರು ಹಿರಿಯರಿಗೆ “ನಾನು ಹೊಸ್ತು ಊಟ ಮಾಡುತ್ತೇನೆ” ಎಂದು ಹೇಳಿ ಊಟ ಮಾಡುವ ಜಗತ್ತಿನ ಅತ್ಯಂತ ಅದ್ಭುತ ಮೌಲ್ಯಯುತ ಸಂಪ್ರದಾಯ “ಹೊಸ್ತು” ಆಚರಣೆಯಲ್ಲಿದೆ. ಫಸಲು ಬೆಳೆದು ಕಟಾವಿಗೆ ಬರುವಾಗ ಮಳೆಗಾಲ ಮುಗಿಯುತ್ತಾ ಬರುತ್ತದೆ. ಮೊದಲ ಸಲ ಪೈರನ್ನು ಮನೆ ಒಳಗೆ ತಂದು ಭತ್ತ ಬೇರ್ಪಡಿಸಿ, ಭತ್ತವನ್ನು ಮನೆಯಲ್ಲೇ ಬೇಯಿಸಿ ಒಣಗಿಸಿ, ಅಕ್ಕಿ ಮಾಡಿ ಊಟ ಮಾಡುವ ‘ಹೊಸ ಅಕ್ಕಿ ಬಾಗುವ’ ಕ್ರಮವೊಂದಿದೆ. ಹೊಸ ಅಕ್ಕಿ ಅನ್ನದ ಪರಿಮಳ ಘಮಘಮಿಸುತ್ತದೆ. ಎಲ್ಲಾ ಗದ್ದೆಗಳ ಪೈರು ಒಣಗಿದ ಮೇಲೆ ಹಲ್ಲುಕತ್ತಿಯಲ್ಲಿ ಕೊಯ್ದು ಒಣಗಿಸಿ ಅಂಗಳಕ್ಕೆ ತಂದು ಭತ್ತ ಬೇರ್ಪಡಿಸಲಾಗುತ್ತದೆ. ಹೀಗೆ ಹೊಸ ಪೈರನ್ನು ಗದ್ದೆಯಿಂದ ಮನೆ ಅಂಗಳಕ್ಕೆ ಹೊತ್ತು ತರುವಾಗ ಅಂಗಳದಲ್ಲಿ ಹಾಕಿದ ಬೂದಿಯ ‘ಹೊಲಿಟ್ಟು’ ರಂಗೋಲಿ ದಾಟಿಕೊಂಡು ಬರಬೇಕು. ಮೇಟಿಕಂಬಕ್ಕೆ ನಾರಿನ ಬಳ್ಳಿಯಿಂದ ಕಟ್ಟಲಾದ ಹಡಿಮಂಚದ ನಾಲ್ಕು ಕಾಲುಗಳಿಗೆ ಕೆಲವು ತುಂಬೆಗಿಡದ ಎಲೆ, ನುಕ್ಕೆ ಗಿಡದ ಎಲೆ ಮತ್ತು ಕಬ್ಬಿಣದ ತುಂಡೊಂದನ್ನು ಕಟ್ಟುವ ಕ್ರಮವಿದೆ. ಹಡಿ ಮಂಚದ ಕೆಳಗೆಡೆ ಮುಳ್ಳು ಸೌತೆಕಾಯಿ ಮತ್ತು ಹಲ್ಲುಕತ್ತಿಯನ್ನು ಒತ್ತೊತ್ತಿಗೆ ನೆಲಕ್ಕೆ ಬೋರಲಾಗಿ ಇಡಲಾಗುತ್ತದೆ. ಗಂಡಸರು “ಹೊಲಿ ಹೆಚ್ಚು ಬಾ, ಹೊಲಿ ಹೆಚ್ಚು ಬಾ, ಹೊಲಿಯೇ ಹೆಚ್ಚು ಹೆಚ್ಚು ಬಾ” ಎಂದು ಕೂಗುತ್ತಾ ಭತ್ತವನ್ನು ಬೇರ್ಪಡಿಸುತ್ತಾರೆ. ಹುಲ್ಲುಕುತ್ತರಿ ಮಾಡುವುದು. ಭತ್ತದ ಹೊಟ್ಟು ತೆಗೆಯುವುದು, ಭತ್ತ ಗೋಣಿ ಚೀಲಕ್ಕೆ ತುಂಬಿಸುವುದು. ಮನೆ ಒಳಗೆ ಭತ್ತದ ರಾಶಿ (ಹೊಲಿ ರಾಶಿ) ಹಾಕಿ ಪೂಜೆ ಮಾಡುವುದು ಇಂತಹ ಎಲ್ಲಾ ಚಟುವಟಿಕೆಯಲ್ಲಿ ನಮ್ಮ ಸಂಭ್ರಮವನ್ನು ಕಾಣುತ್ತೇವೆ. ಇದು ಆಯಾಸವಿಲ್ಲದ, ಹಾನಿಕರವಲ್ಲದ, ಉಲ್ಲಾಸಭರಿತ ನೈಜ ಸಂಭ್ರಮ, ಹೊಟ್ಟೆಯ ಹಸಿವನ್ನು ತಣಿಸುವ ಸಂಭ್ರಮ. ಅನ್ನದಾತನ ಸಂಭ್ರಮ. ಸರಕಾರದಿಂದ ಉಚಿತ ಅಕ್ಕಿ ಪಡೆದು ಸರಕಾರದ ಯೋಜನೆಯನ್ನು ಹೊಗಳುವ ಮುಂಚೆ ಫಲಾನುಭವಿಗಳು ಅನ್ನದಾತನ ಸಂಭ್ರಮವನ್ನೊಮ್ಮೆ ಸ್ಮರಿಸಬೇಕು. ಹೊಟ್ಟೆ ತುಂಬಿದ ಮೇಲೆ ಕಸದ ತೊಟ್ಟಿಗೆ ಅನ್ನ ಚೆಲ್ಲುವವರು ಅನ್ನದಾತನ ಬೆವರಿನ ಸಂಭ್ರಮವನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅನ್ನದಾತನು ಪ್ರಾಣದಾತನೂ ಹೌದು.
ಮುಂದೆ ಬರುವ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಕೃಷಿಕರು ಭತ್ತದ ರಾಶಿಯನ್ನು, ಗೊಬ್ಬರಗುಂಡಿಯನ್ನು, ಗದ್ದೆಯನ್ನು, ಹುಲ್ಲು ಕುತ್ತರಿಯನ್ನು, ಗೋವುಗಳನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ. ಧನ್ಯತಾ ಭಾವವನ್ನು ಪ್ರಕಟಿಸಿ ಪುಳಕಿತರಾಗುತ್ತಾರೆ. ಗ್ರಾಮೀಣ ಕೃಷಿ ಚಟುವಟಿಕೆ, ಕೃಷಿ ಸಂಬಂಧಿ ಹಬ್ಬ-ಆಚರಣೆಗಳು, ಕೃಷಿ ಭೂಮಿಯ ಉಪಯೋಗ, ಕೃಷಿ ಪರಿಕರಗಳು ನೈಜ ಮೌಲ್ಯವನ್ನು ಜನರಲ್ಲಿ ವ್ಯಕ್ತಪಡಿಸುವಂತೆ ಮಾಡಿರುವುದಲ್ಲದೆ ಗ್ರಾಮೀಣ ಬದುಕಿನಲ್ಲಿ ಜೀವಂತಿಕೆಯನ್ನೂ ಉದ್ದೀಪನಗೊಳಿಸಿವೆ.
ಗೋ-ಸಂಪತ್ತು ಮತ್ತು ಉಲ್ಲಾಸಮಯ ಬದುಕು: ಗ್ರಾಮೀಣ ಕೃಷಿ ಬದುಕಿನ ಇನ್ನೊಂದು ಮುಖವೇ ಗೋ ಸಂಪತ್ತು. ಗ್ರಾಮೀಣ ಸಮುದಾಯದಲ್ಲಿ ಮನೆ ಕಟ್ಟುವಾಗ ಗೋವುಗಳಿಗೆ ಬೇಕಾದ ‘ಹಟ್ಟಿ’ ಕಟ್ಟುವುದಕ್ಕೂ ಸಮಾನ ಆದ್ಯತೆ ನೀಡಲಾಗಿದೆ. ಹಟ್ಟಿ ಕಟ್ಟುವಾಗ ವಿಶಾಲವಾದ ಜಾಗ. ಅವುಗಳಿಗೆ ಆಹಾರ ನೀಡುವ ಮರದ ಮರ್ಗಿ, ಹುಲ್ಲು ದಾಸ್ತಾನಿಡಲು ಅಟ್ಟಣಿಗೆ, ಅಕ್ಕಚ್ಚು ಬೇಯಿಸಲು ಪ್ರತ್ಯೇಕ ಕೋಣೆ. ಹಟ್ಟಿಯಿಂದ ತೆಗೆದ ಗಂಜಳ-ಗೊಬ್ಬರ ಗುಂಡಿ ಇವುಗಳಿಗೆಲ್ಲಾ ಪ್ರಾಮುಖ್ಯತೆ ನೀಡಲಾಗುತ್ತದೆ. ನಮ್ಮ ಹಳ್ಳಿಯ ರೈತರು ಊರೂರುಗಳಿಗೆ, ಗದ್ದೆ ಗದ್ದೆಗಳಿಗೆ, ದನಕರುಗಳಿಗೆ, ಎತ್ತು ಹೋರಿಗಳಿಗೆ ಹೆಸರನ್ನಿಟ್ಟು ಅವುಗಳಿಗೆ ಒಂದು ಮಾನವೀಯ ವ್ಯಕ್ತಿತ್ವ ಆರೋಪಿಸಿ ಪುರಸ್ಕರಿಸುವ ಉನ್ನತ ಗುಣ ಹೊಂದಿದ್ದಾರೆ. ಪ್ರತಿಯೊಂದು ದನ, ಎತು, ಹೋರಿಗಳಿಗೂ ಹೆಸರಿಟ್ಟು ಕರೆಯುವುದು ವಾಡಿಕೆ. ಮನೆಯ ಸದಸ್ಯನಂತೆ ಹಸು, ಎತ್ತು, ಎಮ್ಮೆಗಳನ್ನು ನೋಡಿಕೊಳ್ಳಲಾಗುತ್ತದೆ. ಅಂತಹ ಸಮಾಜದಲ್ಲಿ ಗೋಹತ್ಯೆಯನ್ನು ನಿಲ್ಲಿಸಿದರೆ ಮಾನವ ಹತ್ಯೆಯನ್ನು ನಿಲ್ಲಿಸಿದಷ್ಟೇ ಪುಣ್ಯ ಸಿಗುತ್ತದೆ. ಹಟ್ಟಿಗಳಲ್ಲಿ ಎತ್ತು-ಹೋರಿಗಳ ಕೊರಳ ಗಗ್ಗರು ಧ್ವನಿ, ಅವುಗಳು ಮೆಲುಕು ಹಾಕುವಾಗ ಬರುವ ಉಲ್ಲಾಸಭರಿತ ಪರಿಮಳ, ಅಂಬಾ ಎನ್ನುವ ಕೂಗುಗಳು, ಕರುವಿನ ಕುಣಿತ, ಹಾಲು ಕರೆಯುವಾಗ ಪಸರಿಸುವ ‘ಚೊರ್ರ್ ಚೊರ್ರ್’ ಧ್ವನಿ ಮತ್ತು ಪರಿಮಳ, ಮನೆ ಒಳಗೆ ಹಾಲು ಕಾಯಿಸಿದಾಗ ಹೊರ ಹೊಮ್ಮವ ಪರಿಮಳ, ಮೊಸರನ್ನು ಕಡಗೋಲಿನಿಂದ ಕಡೆವ ಮಂಥನದ ಲಯಬದ್ಧತೆ. ಮಜ್ಜಿಗೆಯ ಮೇಲೆ ಬಿಳಿ ಮೋಡಗಳಂತೆ ತೇಲುವ ಬೆಣ್ಣೆಯನ್ನು ಉಂಡೆ ಮಾಡಿ ಸಿಕ್ಕದ ಪಾತ್ರೆಯ ನೀರಿನೊಳಿಡುವ ಜಾಗರೂಕ ಸನ್ನೆ. ಇಡೀ ಮನೆಯೊಳಗೆ ಪ್ರಾಣಶಕ್ತಿಯನ್ನು ಸಂಚಯಿಸುತ್ತದೆ. ಇಂತಹ ದೈವ ಸಾಕ್ಷಾತ್ಕಾರದ ಆನಂದ ಬೇರೆಲ್ಲೂ ಸಿಗಲಿಲ್ಲ. ಅರ್ಥಶಾಸ್ತ್ರದ ಪ್ರತಿಪಾದನೆಯ ಪ್ರಕಾರ ಉತ್ಪಾದನೆ ಹೆಚ್ಚು ಸುಖ ಕೊಡುತ್ತದೆ. ಆದರೆ ಕೃಷಿ ಸಂಬಂಧಿ ಗೋ ಸಂಪತ್ತು ವರ್ಧನೆಯು ಉತ್ಪಾದನೆ ಮಾತ್ರವಲ್ಲ ಉತ್ಪಾದನಾ ವಿಧಾನ ಕೂಡ ಸುಖ ನೀಡುತ್ತದೆಂಬುದನ್ನು ರೈತರು ಸಾಬೀತುಪಡಿಸಿದ್ದಾರೆ. ಹಾಗಾಗಿ ಉತ್ಪಾದನೆಯಿಂದ ಬರುವ ಉತ್ಪನ್ನಕ್ಕಿಂತ ಉತ್ಪಾದನಾ ಪ್ರಕ್ರಿಯೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡರೆ ದ್ವಿಮುಖ ಲಾಭ ದೊರಕುತ್ತದೆ. ಭಗದ್ಗೀತೆಯಲ್ಲೂ ಇದನ್ನೇ ವರ್ಣಿಸಲಾಗಿದೆ. ನಿನ್ನ ಕೆಲಸದಲ್ಲಿ ನಿನ್ನನ್ನ ತೊಡಗಿಸಿಕೊಳ್ಳುವುದು ಮತ್ತು ಆ ಮೂಲಕ ಸುಖ ಪಡುವುದಕ್ಕೆ ಮಹತ್ವ ನೀಡಿದರೆ ಮುಂಬರುವ ಫಲ ಇನ್ನೂ ಹೆಚ್ಚಿನ ಸಂತಸ ನೀಡುತ್ತದೆ. ಇದನ್ನು ನಮ್ಮ ರೈತರು ಗ್ರಾಮೀಣ ಬದುಕಿನಲ್ಲಿ ಸಾಧಿಸಿ ತೋರಿಸಿದ್ದಾರೆ. ಗೋವುಗಳಿಂದ ಸಿಗುವ ಹಾಲು, ತುಪ್ಪ, ಸೆಗಣಿ, ಗೋಮೂತ್ರ ಎಲ್ಲವೂ ಗ್ರಾಮೀಣ ಬದುಕನ್ನು ಶ್ರೀಮಂತಗೊಳಿಸಿದೆ. ಮನೆ ಅಂಗಳಕ್ಕೆ ಸೆಗಣಿ ಹಾಕಿ ಸಾರಿಸಿದರೆ ಒಂದು ವಾರದ ತನಕ ಅತ್ಯಂತ ಲವಲವಿಕೆಯ ವಾತಾವರಣವಿರುತ್ತದೆ. ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಪೂರಕವಾಗಿರುವ ಗೋಬರ್ ಗ್ಯಾಸ್ ಪ್ಲಾಂಟ್‍ಗಳು ಗೋಸಂಪತ್ತಿನ ಬಹುಮುಖ ಲಾಭವನ್ನು ತಿಳಿಸುತ್ತದೆ.
ಗ್ರಾಮೀಣ ಕ್ರೀಡೆಗಳು ಮನೋರಂಜನೆಗಳು ಮತ್ತು ಆಚರಣೆಗಳು:
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹುಟ್ಟಿಕೊಂಡಿರುವ ಕೆಲವು ಕ್ರೀಡೆಗಳಿವೆ. ಸಾಮೂಹಿಕವಾಗಿ ಭಾಗವಹಿಸುವ ಕಂಬಳ, ಕೋಳಿ ಅಂಕ ಹಾಗೂ ವೈಯಕ್ತಿಕವಾಗಿ ಪಾಲ್ಗೊಳ್ಳುವ ಚೆನ್ನೆಮಣಿ, ಕಬಡ್ಡಿ, ಲಗೋರಿ, ಚೀಣಿ-ದಾಂಡು, ಟೊಂಕಾಲು, ಗುಡ್ನಾಟ (ಕೈ ಮೇಲೆ 4 ಕಲ್ಲುಗಳನ್ನು ಹಿಡಿದು ಹಾರಿಸುವ ಆಟ), ಹೊಳೆ ನೀರಿನ ಮೇಲೆ ಚಪ್ಪಟೆ ಕಲ್ಲಿನಿಂದ ಎಸೆವ “ಚೊಂದ ಕಪ್ಪೆ” ಆಟ, ಚೆಂಡಾಟ, ಕಳ್ಳ-ಪೊಲೀಸು, ಹೀಗೆ ಮನಸ್ಸನ್ನು ಪುನಃಶ್ಚೇತನಗೊಳಿಸುವ ಅಥವಾ ರಂಜಿಸಿಕೊಳ್ಳುವ ಹಲವು ಆಟಗಳಿವೆ. ಕೆಲವು ಆಟಗಳು ಮಕ್ಕಳಿಗೆ ಮಾತ್ರ ಸೀಮಿತ ಆಗಿದ್ದರೂ, ಇಂದಿನ ಮಕ್ಕಳಿಗೆ ಅವುಗಳ ಪರಿಚಯವಿಲ್ಲದೆ ಸೈಬರ್ ಕೆಫೆಗಳಿಗೆ ಹೋಗಿ ವೀಡಿಯೋ ಗೇಮ್‍ನಲ್ಲಿ ತೇಲಾಡುವ ಸ್ಥಿತಿ ಬಂದೊದಗಿದೆ.
ಮನೋರಂಜನೆಗಳಾದ ಯಕ್ಷಗಾನ, ನಾಟಕ, ಹರಿಕಥೆ, ಭಜನೆ, ಕೋಲಾಟ, ಓಕುಳಿ, ಶಿವರಾತ್ರಿ ದಿನದ ‘ದಿಮ್ಸಾಲ್ ಹಬ್ಬ’, ಹೂವಿನ ಕೋಲು, ಸಾವಿರ ಹಣ್ಣಿನ ವಸಂತ, ತುಲಸಿಕಟ್ಟೆ ಪೂಜೆ, ಹೊಸ್ತಿಲ ಪೂಜೆ ಮುಂತಾದ ಕ್ರೀಡೆ ಮತ್ತು ಆಚರಣೆಗಳಲ್ಲಿ ಗ್ರಾಮೀಣ ಜನರು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಮನಸ್ಸನ್ನು ಚೈತನ್ಯಗೊಳಿಸಿಕೊಳ್ಳುವ ಅವಕಾಶವಿತ್ತು.
ಇಂತಹ ಲವಲವಿಕೆಯಿಂದ ಕೂಡಿದ ಗ್ರಾಮೀಣ ಬದುಕಿನಲ್ಲಿ ಸಮಸ್ಯೆಗಳು ಇರಲಿಲ್ಲ ಎಂದರ್ಥವಲ್ಲ. ಜಾತಿ ಪದ್ಧತಿಯ ತೊಡಕುಗಳು, ಭೂಮಾಲೀಕ ಪದ್ಧತಿಯ ಪಿಡುಗುಗಳು, ಆರೋಗ್ಯ ತೊಂದರೆಗಳು, ಮೂಢನಂಬಿಕೆಗಳು, ವೈದ್ಯಕೀಯ ಸೌಲಭ್ಯದ ಕೊರತೆ, ಆರ್ಥಿಕ ಬಡತನ ಎಲ್ಲವೂ ಇತ್ತು. ಈ ಸಮಸ್ಯೆಗಳು ಮೊದಲೂ ಇತ್ತು. ಈಗಲೂ ಇದೆ. ಆದರೆ ಜೀವನದ ದೃಷ್ಟಿಕೋನ ಬೇರೆ ಇದೆ. ಜೀವನದ ಮೌಲ್ಯಗಳು ಬೇರೆ ಬೇರೆಯಾಗಿವೆ. ಕಟ್ಟಡ, ಕೈಗಾರಿಕೆ, ಬೃಹತ್ ಪ್ರಮಾಣದ ಸಾರಿಗೆ ವ್ಯವಸ್ಥೆ, ಕೃತಕ ಮಾನವೀಯ ಸಂಬಂಧ, ತೀವ್ರ ಶ್ರಮ ವಿಭಜನೆ-ಆಧಾರಿತ ಉತ್ಪಾದನಾ ವಿಧಾನ, ಸಮಗ್ರ ರಾಷ್ಟ್ರೀಯ ಉತ್ಪಾದನೆಯ ಗುರಿ, ಹೆಚ್ಚು ಹೆಚ್ಚು ನಿರ್ಯಾತ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳುವಿಕೆ, ಶೋಕಿ ಜೀವನ, ಯಂತ್ರಗಳನ್ನವಲಂಬಿಸಿದ ಬದುಕು, ಮಾರುಕಟ್ಟೆ ಆಧಾರಿತ ಉದ್ಯೋಗ, ಫಲದ ಅಪೇಕ್ಷೆಯ ದಾನ, ಅನುಕರಣಾ ಅನುಭೋಗ ಪ್ರವೃತ್ತಿ ಇವುಗಳು ಈಗಿನ ಸಮಾಜದ ಬದುಕನ್ನೇ ಹೈರಾಣಗೊಳಿಸಿವೆ. ನೈಸರ್ಗಿಕವಾಗಿ ಸಿಗುವ ಆಹಾರಗಳು ಇಂದು ವಿಕೃತಗೊಂಡಿದೆ.
ಒಟ್ಟಿನಲ್ಲಿ ಹೇಳುವುದಾದರೆ ಗ್ರಾಮೀಣ ಬದುಕಿನ ಉಲ್ಲಾಸ ಇಂದು ಮಾಯವಾಗಿದೆ. ಜನರ ಅಪರಿಮಿತ ಆಸೆಗಳು, ಹೊಸ ಮಾರುಕಟ್ಟೆಯನ್ನು ಹುಡುಕಿ ಬರುತ್ತಿರುವ ವಿದೇಶಿ ಕಂಪೆನಿಗಳು, ಸುಲಭವಾಗಿ ಹಣ ಸಂಪಾದಿಸುವ ಬಗ್ಗೆ ಯುವಜನರಲ್ಲಿ ಉಂಟಾಗಿರುವ ಉತ್ಕಟ ಇಚ್ಛೆಗಳು, ಹಿರಿಯರು ಮತ್ತು ದೇವರ ಬಗ್ಗೆ ಕುಸಿತಗೊಳ್ಳುತ್ತಿರುವ ನಿಲುವುಗಳು. ಯಥೇಚ್ಛವಾಗಿ ಪರಿಸರದ ಸಂಪತ್ತನ್ನು ಬಳಸುವುದರೊಂದಿಗೆ ನಾವು ಉಂಟುಮಾಡುತ್ತಿರುವ ಪರಿಸರ ಹಾನಿ ಮುಂತಾದವುಗಳು ಇಡೀ ದೇಶದ ಸ್ವಾಸ್ಥ್ಯ ಹಾಳು ಮಾಡಿದ್ದಲ್ಲದೇ ಗ್ರಾಮೀಣ ಬದುಕಿನ ಸಂತಸದ ಮೇಲೆ ಸಿಡಿಲಿನಂತೆ ಎರಗಿದೆ. ಗ್ರಾಮೀಣ ಬದುಕನ್ನು ಉಲ್ಲಾಸಮಯಗೊಳಿಸಲು ಹಲವು ಪರಿಹಾರೋಪಾಯಗಳಿದ್ದರೂ ಸಹ ಮನುಷ್ಯ ತನ್ನ ಪ್ರಜ್ಞೆಯನ್ನು ಉಪಯೋಗಿಸಿ ನಿಜವಾದ ಆರ್ಥಿಕ ಅಭಿವೃದ್ಧಿ ಎಂದರೇನೆಂದು ತಿಳಿದುಕೊಳ್ಳುವ ತನಕ ಪರಿಹಾರೋಪಾಯಗಳು ಫಲ ನೀಡಲಾರವು. ಸಮಗ್ರ ರಾಷ್ಟ್ರೀಯ ಯೋಗಕ್ಷೇಮಾಭಿವೃದ್ಧಿಯ ಗುರಿ ನಮ್ಮದಾಗಿದ್ದರೆ ಮಾತ್ರ ಗ್ರಾಮೀಣ ಅಭಿವೃದ್ಧಿ ಆಗಲು ಸಾಧ್ಯವಿದೆ. ಸ್ಮಾರ್ಟ್ ಸಿಟಿಗೆ ತಯಾರು ಮಾಡಿದ ಮಾದರಿಯಂತೆ ಸ್ಮಾರ್ಟ್ ಹಳ್ಳಿಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಸ್ಮಾರ್ಟ್ ಹಳ್ಳಿಗಳ ಮಾದರಿ ತಯಾರಿಸುವಾಗ ಹಳ್ಳಿ ಜೀವನದ ಮೌಲ್ಯಗಳ ಬಗ್ಗೆ, ಗೋವು ಸಂವರ್ಧನೆಯ ಬಗ್ಗೆ, ಸಾಂಪ್ರದಾಯಿಕ ಪರಿಸರ ಸ್ನೇಹಿ ಕೃಷಿಯ ಬಗ್ಗೆ, ನಲ್ಲಿಗಳಲ್ಲಿ ಸದಾ ಗಾಳಿ ಮಾತ್ರ ಬರದೆ ನೀರು ಬರುವ ಬಗ್ಗೆ, ಅಚ್ಚುಕಟ್ಟಾದ ಸರ್ವ ಋತು ಬಳಕೆಯ ರಸ್ತೆಯ ಬಗ್ಗೆ, ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.
ಎಂ. ಚೆನ್ನ ಪೂಜಾರಿ ಎಂ.ಎ.
ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ
ವಿಜಯಾ ಕಾಲೇಜು, ಮುಲ್ಕಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!